ಬುಧವಾರ, ಸೆಪ್ಟೆಂಬರ್ 22, 2021
21 °C
ರಾಷ್ಟ್ರೀಯ ಮಟ್ಟದ ಯೋಗಪಟು, ಹಲವು ಪಂದ್ಯಾವಳಿಯಲ್ಲಿ ಗೆಲುವಿನ ಮಾಲೆ

ದಿವ್ಯ ಎಂಬ ಯೋಗ ಸಾಧಕಿ

ರವಿ.ಎನ್‌ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನನರ: ಯೋಗ ಎಂದಾಗ ತಕ್ಷಣ ನೆನಪಿಗೆ ಬರುವುದು ಕ್ಲಿಷ್ಗಕರ ಆಸನಗಳು. ಆರಂಭದಲ್ಲಿ ಅಭ್ಯಾಸ ಮಾಡುವ ಆಸನಗಳು ಸುಲಭ ಎಂದು ಕಂಡು ಬಂದರೂ ನಂತರ ಅದು ಕ್ಲಿಷ್ಟವಾಗುತ್ತಾ ಹೋಗುತ್ತದೆ. ಮನಸ್ಸು ಮಾಡಿದರೆ ಹೆಣ್ಣುಮಕ್ಕಳೂ ಯೋಗದಲ್ಲಿ ಪರಿಣತಿ ಸಾಧಿಸಬಹುದು ಎಂಬುದು ನಿರೂಪಿಸಿದ್ದಾರೆ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಅಂತಿಮ ವರ್ಷದ ಎಂಕಾಂ ವಿದ್ಯಾರ್ಥಿನಿ ಡಿ.ಆರ್.ದಿವ್ಯ. 

ಯೋಗದಲ್ಲೇ ಸಾಧನೆ ಮಾಡುತ್ತಿರುವ ದಿವ್ಯ ಅವರು ಈಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯ, ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಹಲವು ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿದ ಕೀರ್ತಿ ಗಳಿಸಿದ್ದಾರೆ.

ಆರು ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿರುವ ದಿವ್ಯ ಅವರಿಗೆ ಯೋಗದಲ್ಲಿ ಆಸಕ್ತಿ ಮೂಡಿದ್ದು ಪಿಯುಸಿಯಲ್ಲಿ ಇರುವಾಗ. ಉಪನ್ಯಾಸಕರು ಅವರನ್ನು ಯೋಗ ಕಲಿಕೆಗೆ ಪ್ರೇರೇಪಿಸಿದರು. 

2013ರಲ್ಲಿ ಮೈಸೂರಿನ ಮಹಾಜನ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದರು. ಆ ನಂತರ ಬಳಿಕ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡು 3ನೇ ಸ್ಥಾನ ಗಳಿಸಿದರು. ಈಗ 2018–19ನೇ ಸಾಲಿನಲ್ಲಿ ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅಸೋಷಿಯೇಷನ್‌ ಆಫ್‌ ಇಂಡಿಯಾದಿಂದ ನಡೆದ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 

2013ರಲ್ಲಿ ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ಸ್ಪರ್ಧೆ, ಪಿಯುಸಿ 2ನೇ ವರ್ಷ 2014ರಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿ 4ನೇ ಸ್ಥಾನ. ಪದವಿಯಲ್ಲಿ 3 ವರ್ಷ ಮೈಸೂರು ವಿ.ವಿ ನಡೆಸಿದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.  2014–15 ಹಾಗೂ 2016–17ನೇ ಸಾಲಿನಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯ, 2016–17ರಲ್ಲಿ ಜಿಂದಾಲ್‌ನಲ್ಲಿ ನಡೆದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.

‘ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರುವ ಹಾದಿಯಲ್ಲಿ ಮುನ್ನಗ್ಗಬೇಕು. ಯೋಗ, ಪುರುಷರಿಗಿಂತಲೂ ಹೆಚ್ಚು ಮಹಿಳೆಯರಿಗೆ ಅಗತ್ಯವಿದೆ. ಆರೋಗ್ಯ, ಏಕಾಗ್ರತೆಗೆ ಯೋಗ ಮಾಡಬೇಕು. ಪ್ರತಿ ದಿನ 1 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಸ್ಪರ್ಧೆಗೆ 15ರಿಂದ 20 ದಿನಗಳಿರುವಾಗ ಹೆಚ್ಚುವರಿ ಅಭ್ಯಾಸ ನಡೆಸುತ್ತೇನೆ’ ಎಂದು ದಿವ್ಯ ಹೇಳಿದರು.

‘ಕ್ರೀಡಾ ಕೋಟಾದಡಿ ಉನ್ನತ ಪದವಿ ಸೇರಲು ಯೋಗ ಸಹಕಾರಿಯಾಯಿತು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ವಿರಳ. ಹೆಚ್ಚಿವರು ಓದಿನಲ್ಲೇ ನಿರತರಾಗುತ್ತಾರೆ. ಕ್ರೀಡೆಗಳಲ್ಲಿ ಭಾಗವಹಿಸುವುದಿಲ್ಲ. ಮನೆಯಲ್ಲಿ ಮದುವೆ ಮಾಡುತ್ತಾರೆ. ಮುಂದೆ ನಾನು ಏನು ಸಾಧನೆ ಮಾಡಿದರೂ ವ್ಯರ್ಥ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಮುಂದಿನ ಭವಿಷ್ಯ ಹೀಗೆಯೇ ಆಗುತ್ತದೆ ಎಂದು ಹೇಳುವುದು ಕಷ್ಟ. ಆದ್ದರಿಂದ ಉನ್ನತ ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಇರುವ ಹೆಣ್ಣು ಮಕ್ಕಳ ಸಾಧನೆಗೆ ಪೋಷಕರು ಉತ್ತೇಜನ ನೀಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಸ್ಥಾನ ಮೀಸಲಿಡಬೇಕು

‘ಸರ್ಕಾರದ ಇಲಾಖೆಗಳಾದ ರೈಲ್ವೆ, ಅಂಚೆ ಕಚೇರಿಗಳಲ್ಲಿ ಕ್ರೀಡಾ ಕೋಟಾದಡಿ ಹೆಚ್ಚಿನ ಸೀಟು ಮೀಸಲಿಡಲು ಸರ್ಕಾರ ಮುಂದಾಗಬೇಕು. ಅರ್ಜಿಗಳ ಅನುಗುಣವಾಗಿ ಅವಕಾಶ ನೀಡಬೇಕು. ಈಗ ಬೇರೆಲ್ಲಾ ಕ್ರೀಡೆಗಳಿಗೂ ಫೆಡರೇಷನ್‌ಗಳಿವೆ. ಅದರದ್ದೇ ಆದ ಸಂಸ್ಥೆಗಳಿವೆ. ಆದರೆ ಯೋಗಕ್ಕೆ ಬೇರೆ ಕ್ರೀಡೆಗಳಿಗಿರುವ ರೀತಿಯ ವ್ಯವಸ್ಥೆ ಇಲ್ಲ. ಯೋಗ ಪಟುಗಳಿಗೆ ಹೆಚ್ಚು ಉತ್ತೇಜನ ಸಿಗುವಂತಾಗಬೇಕು’ ಎನ್ನುತ್ತಾರೆ ದಿವ್ಯ.

ಹೆದರದೇ ಸಾಧನೆ ಮಾಡಿ: ‘ಹೆಣ್ಣು ಮಕ್ಕಳು ಹಿಂಜರಿಕೆಯಿಲ್ಲದೆ ಸಾಧನೆ ತೋರಬೇಕು. ಭವಿಷ್ಯದಲ್ಲಿ ಕಲಿಕೆ ತುಂಬಾ ಇರುತ್ತದೆ. ಸಾಧನೆಯಡೆ ಹೆಜ್ಜೆ ಇಡಬೇಕು. ಪೋಷಕರು ಕೂಡ ನಮಗೆ ಉತ್ತೇಜನ ನೀಡಬೇಕು. ಹೆಣ್ಣು ಮಕ್ಕಳು ಪೋಷಕರ ನಂಬಿಕೆಗೆ ಚ್ಯುತಿಬಾರದಂತೆ ಎಚ್ಚರವಹಿಸಿ ಸಾಧನೆಯ ಗುರಿ ಮುಟ್ಟಬೇಕು’ ಎನ್ನುವುದು ಅವರ ಸಲಹೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು