ಕೆರೆ ಭರ್ತಿಗೆ ವಿಶೇಷ ಗಮನ ಕೊಡಿ; ಮೇಟಿ

7
ವಿಜಯಪುರ ಜಿಲ್ಲಾ ಪಂಚಾಯ್ತಿಯ ನವೆಂಬರ್ ತಿಂಗಳ ಕೆಡಿಪಿ ಸಭೆ

ಕೆರೆ ಭರ್ತಿಗೆ ವಿಶೇಷ ಗಮನ ಕೊಡಿ; ಮೇಟಿ

Published:
Updated:
Deccan Herald

ವಿಜಯಪುರ: ‘ಜಿಲ್ಲೆಯಲ್ಲಿರುವ ಕೆರೆಗಳನ್ನು ಭರ್ತಿ ಮಾಡುವ ಮೂಲಕ ಅಂತರಜಲ ಹೆಚ್ಚಳಕ್ಕೆ ಹಾಗೂ ಜನ–ಜಾನುವಾರುಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಿ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ 2018-19ನೇ ಸಾಲಿನ ನವೆಂಬರ್ ತಿಂಗಳ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಕೆರೆ ತುಂಬುವ ಯೋಜನೆಯಡಿ ಜಿಲ್ಲೆಗೆ ಅನುದಾನ ಸಹ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಕೆರೆಗಳನ್ನು ಭರ್ತಿ ಮಾಡುವ ಕುರಿತು ಸೂಕ್ತ ಗಮನ ನೀಡಬೇಕು’ ಎಂದು ಅಧ್ಯಕ್ಷೆ ಆದೇಶಿಸಿದರು.

ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿಯಿದೆ. ಹೆಚ್ಚುವರಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಗಮನ ನೀಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಕಾಮಗಾರಿ ಹಾಗೂ ಖರ್ಚು–ವೆಚ್ಚಗಳ ವರದಿ ಸಲ್ಲಿಸಬೇಕು. ವಿವಿಧ ಸಹಕಾರ ಬ್ಯಾಂಕ್‌ಗಳ ಮೂಲಕ ರೈತರಿಗೆ ಸಾಲ ನೀಡುವಲ್ಲಿ ಯಾವುದೇ ರೀತಿಯ ಕಿರುಕುಳ ಮತ್ತು ಬೇಜವಾಬ್ದಾರಿತನದಿಂದ ನಡೆಯದಂತೆ ಎಚ್ಚರಿಕೆ ನೀಡಿದ ಮೇಟಿ, ಸಕಾಲಕ್ಕೆ ಸಾಲ -ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಯಿಂದ 3493 ಮೇವಿನ ಮಿನಿ ಕಿಟ್‌ಗಳನ್ನು ವಿತರಿಸಿದ್ದು, ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ಜಿಲ್ಲೆ 6ನೇ ಸ್ಥಾನಕ್ಕೆ ಬಂದಿರುವುದಕ್ಕೆ ಪಶು ಸಂಗೋಪನಾ ಉಪ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.

ಅಂಗವಿಕಲರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ದೊರೆಯುವಂತೆ ನೋಡಿಕೊಳ್ಳಬೇಕು. ಮಾತೃಪೂರ್ಣ ಯೋಜನೆ, ಮಾತೃವಂದನಾ ಯೋಜನೆ ಹಾಗೂ ಈಚೆಗೆ ನೂತನವಾಗಿ ಜಾರಿಗೊಂಡಿರುವಂತಹ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಗರ್ಭಿಣಿ, ಬಾಣಂತಿಯರಿಗೆ ಸೌಲಭ್ಯ ಸಕಾಲಕ್ಕೆ ದೊರೆಯುವಂತೆ ನೋಡಿಕೊಳ್ಳಬೇಕು.

ಪ್ರತಿ ಅಂಗನವಾಡಿ ಕೇಂದ್ರಗಳ ಕಾರ್ಯ ನಿರ್ವಹಣೆ ಮತ್ತು ಅಂಗನವಾಡಿ ಕಾರ್ಯಕರ್ತರ ಕಾರ್ಯ ನಿರ್ವಹಣೆ ಬಗ್ಗೆ ನಿಗಾ ವಹಿಸಬೇಕು. ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಅನುದಾನ ವ್ಯರ್ಥವಾಗದಂತೆ ಕ್ರಮಕೈಗೊಳ್ಳಬೇಕು. ಅನುದಾನ ಲ್ಯಾಪ್ಸ್ ಆದಲ್ಲಿ ಆಯಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈಗಾಗಲೇ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ನಿರಂತರ ಪರಿಶೀಲನೆಯನ್ನು ಸಹ ತಾವು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಕೈಗೊಳ್ಳುವುದಾಗಿ ತಿಳಿಸಿದರು.

ಕೆರೆ ತುಂಬಲು ₹ 20 ಲಕ್ಷ; ಸಿಇಒ

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್‌ ಕಿಶೋರ್ ಸುರಳಕರ್ ಮಾತನಾಡಿ, ‘ಜಿಲ್ಲೆಯಲ್ಲಿ ಕಾಲುವೆ ನೀರು ಮೂಲಕ ಕೆರೆ ತುಂಬುವ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಕಾಲುವೆ ವ್ಯಾಪ್ತಿಯ 1ರಿಂದ 2 ಕಿ.ಮೀ. ಅಂತರದಲ್ಲಿರುವ ಕೆರೆಗಳನ್ನು ಭರ್ತಿ ಮಾಡಬೇಕು.

ಈ ಕುರಿತಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮೂಲಕ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಈ ಯೋಜನೆಗೆ ಸಂಬಂಧಪಟ್ಟಂತೆ ನೀಲನಕ್ಷೆ ಸಿದ್ಧಪಡಿಸಲು ಎನ್ಆರ್‌ಡಿಎಂಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತಿದ್ದು, ಕಾಲುವೆ ಜಾಲದ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ತಲಾ ₹ 20 ಲಕ್ಷ ವೆಚ್ಚದಲ್ಲಿ ನೀರು ತುಂಬಿಸಲು ಅವಕಾಶವಿದ್ದು, ಈ ಕುರಿತಂತೆ ಸೂಕ್ತ ಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ’ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕಲ್ಪಿಸುತ್ತಿರುವ ಬಗ್ಗೆ ಹಾಗೂ ಈವರೆಗೆ ಆರ್‌ಟಿಜಿಎಸ್ ಮೂಲಕ ಶಿಷ್ಯವೇತನ ಸಂದಾಯವಾಗದೆ ಇರುವ ಬಗ್ಗೆ ಆಯಾ ತಾಲ್ಲೂಕು ಅಧಿಕಾರಿಗಳಿಗೆ ಸೂಚಿಸಬೇಕು. ಆಯಾ ವಿದ್ಯಾರ್ಥಿಗಳಿಗೆ ತಾಲ್ಲೂಕುವಾರು ಶಿಷ್ಯವೇತನ, ಈ ಹಿಂದೆ ಜಮೆಯಾಗದಿರುವಂತಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಜಮೆ ಮಾಡಿ ಪರಿಶೀಲನಾ ವರದಿಯನ್ನು ಮುಂದಿನ ಏಳು ದಿನಗಳಲ್ಲಿ ಸಲ್ಲಿಸಬೇಕು. ಇದರಲ್ಲಿ ಲೋಪ ಎಸಗುವ ತಾಲ್ಲೂಕು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಸಿಇಒ ಸೂಚಿಸಿದರು.

ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ, ಫಲಿತಾಂಶ ಹೆಚ್ಚಳಕ್ಕೆ ಗಮನ ನೀಡಬೇಕು. ಅವಶ್ಯಕತೆ ಇರುವ ಕಡೆ ನಿಯಮಾವಳಿಯನ್ವಯ ಶಿಕ್ಷಕರನ್ನು ನೇಮಿಸಬೇಕು. ಅಕ್ಷರ ದಾಸೋಹ ಯೋಜನೆಯಡಿ ಸರಬರಾಜಾಗುತ್ತಿರುವ ಬೇಳೆ ಕಾಳುಗಳ ಗುಣಮಟ್ಟತೆ ಪರಿಶೀಲಿಸಲಾಗುತ್ತಿದ್ದು, ಕಾಳುಗಳ ದಾಸ್ತಾನು, ತೂಕ ಪ್ರಮಾಣ ಪ್ರತಿ ಶಾಲಾವಾರು ಹಾಗೂ ಉಗ್ರಾಣಗಳಲ್ಲಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಮುಖ್ಯ ಯೋಜನಾಧಿಕಾರಿ ಕುಂಬಾರ ಸ್ವಾಗತಿಸಿದರು. ಉಪ ಕಾರ್ಯದರ್ಶಿ ಅಮರೇಶ ನಾಯಕ, ಕೃಷಿ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಕೊಡಬಾಗಿ ಸೇರಿದಂತೆ ಜಿಲ್ಲಾ ಪಂಚಾಯ್ತಿಯ ವಿವಿಧ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !