ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಕೆಂಡ್‌ ಟ್ರಿಪ್‌ಗೆ ಇಲ್ಲಿದೆ ಟಿಪ್ಸ್‌: ಮೋಜಿಗಾಗಿನ ಸೂಕ್ತ ಸ್ಥಳಗಳು

Last Updated 30 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಎರಡು ಮೂರು ತಿಂಗಳಿನಿಂದ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದೆ. ಪ್ರವಾಸಿ ತಾಣಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಈ ಸಂಭ್ರಮಕ್ಕೆ ವಾರಾಂತ್ಯ, ದಸರಾ ರಜೆಯೂ ಜೊತೆಯಾಗಿದೆ. ಬೆಂಗಳೂರಿನಿಂದ ಯಾವ ತಾಣಗಳಿಗೆ ಪ್ರಯಾಣ ಮಾಡಬೇಕು ಅಂತ ಪ್ಲಾನ್‌ ಮಾಡಿದ್ದೀರಾ? ಈ ಬಗ್ಗೆ ಗೊಂದಲದಲ್ಲಿದ್ದರೆ ಇಲ್ಲಿದೆ ನೋಡಿ ಮಾಹಿತಿ.‌

***

ಟಿ.ಕೆ ಫಾಲ್ಸ್
ಟಿ.ಕೆ ಫಾಲ್ಸ್‌ ಅಂದರೆ, ತೊಟ್ಟಿಕಲ್ಲು ಜಲಪಾತ. ಸ್ವರ್ಣಮುಖಿ ನದಿ ನೀರಿನಿಂದ ಉಂಟಾಗಿರುವ ಜಲಪಾತ.ಸುಮಾರು 50ರಿಂದ 60 ಅಡಿ ಎತ್ತರದಿಂದ ಬಂಡೆಯ ಒಂದು ತುದಿಯಿಂದ ನೀರು ಧುಮ್ಮಿಕ್ಕುತ್ತದೆ. ಬೆಂಗಳೂರಿನಿಂದ ಕೇವಲ 35 ಕಿ.ಮೀ. ದೂರ ಇದೆ. ಕನಕಪುರ ರೋಡ್‌ನಲ್ಲಿ ಹೋಗಬೇಕು, ಕಗ್ಗಲಿಪುರ ಹತ್ತಿರ. ಬನ್ನೇರುಘಟ್ಟದ ಕಾಡಿನ ಪ್ರದೇಶದಲ್ಲಿರುವುದರಿಂದ ಇದನ್ನು ಸ್ವರ್ಣಮುಖಿ ಜಲಪಾತ ಎಂದೂ ಕರೆಯುತ್ತಾರೆ.

ಕನಕಪುರ ಮಾರ್ಗದಲ್ಲಿ ಕಗ್ಗಲೀಪುರದಿಂದ ಎಡಕ್ಕೆ ಬನ್ನೇರುಘಟ್ಟಕ್ಕೆ ಹೋಗುವ ಹಾದಿಯಲ್ಲಿ ಹೋದಾಗ ಬ್ಯಾಲದಮರದೊಡ್ಡಿ ಎಂಬ ಪುಟ್ಟ ಗ್ರಾಮ ಸಿಗುತ್ತದೆ. ಅಲ್ಲಿಂದ ಕಲ್ಲುಮಣ್ಣಿನ ಹಾದಿಯಲ್ಲಿ 1 ಕಿ.ಮೀ ಸಾಗಿದರೆ ತೊಟ್ಟಿಕಲ್ಲು ಮುನೇಶ್ವರ ಸ್ವಾಮಿ ದೇವಸ್ಥಾನ ಸಿಗುತ್ತದೆ.

ಮಳೆಗಾಲದಲ್ಲಿ ಇಲ್ಲಿ ಜಲಪಾತ ಸೃಷ್ಟಿಯಾಗುತ್ತದೆ. ಮೊನ್ನೆ ಮಳೆಯಾಗಿರುವುದರಿಂದ ಜಲಪಾತ ಸೃಷ್ಟಿಯಾಗಿತ್ತು. ಈಗಲೂ ನೀರು ಹರಿಯುತ್ತಿದೆ. ಈ ಜಾಗಕ್ಕೆ ಹೋದವರು ಜಲಪಾತ ನೋಡಿಕೊಂಡು, ನೀರಿನಲ್ಲಿ ಆಟವಾಡಿಕೊಂಡು, ಚಾರಣವನ್ನೂ ಕೈಗೊಳ್ಳಬಹುದು. ಇಲ್ಲಿಗೆ ಹೋಗುವಾಗ ತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತ.ಬೆಂಗಳೂರಿನಿಂದ ಕನಕಪುರಕ್ಕೆ ಹೋಗುವ ಬಸ್‌ಗಳು ಕಗ್ಗಲಿ ಪುರದಲ್ಲಿ ಸ್ಟಾಪ್ ಕೊಡುತ್ತಾರೆ. ಅಲ್ಲಿಂದ ಜಲಪಾತ 1 ಕಿ.ಮೀ.

ಜಾನಪದ ಲೋಕ
ಜಾನಪದ ಲೋಕವುಬೆಂಗಳೂರು ಸುತ್ತಮುತ್ತ ಇರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಜನಪದ ಸಂಸ್ಕೃತಿಯ ತಾಣ. ಜಾನಪದ ತಜ್ಞ ಎಚ್‌.ಎಲ್‌.ನಾಗೇಗೌಡರ ಕನಸಿನ ಕೂಸು ಈ ತಾಣ. ಜಾನಪದ ಲೋಕದಲ್ಲಿ ನೋಡಬಹುದಾದ ವಿಶಿಷ್ಟ ಸ್ಥಳವೆಂದರೆ ಲೋಕಮಾತಾ ಮಂದಿರ. ಇಲ್ಗಿ ಬಗೆ ಬಗೆಯ ಚಿತ್ತಾರ, ಚಿತ್ರಪುಟಗಳು, ಗಿರಿಜನರು ಮತ್ತು ಗ್ರಾಮೀಣರ ಬಳಕೆಯ ವಿಶಿಷ್ಟ ವಸ್ತುಗಳಿವೆ. ಕನಾ‍ಟಕದ ಜನಪದ ಕಲೆಗಳ ಭೂಪಟ, ಛಾಯಾ ಚಿತ್ರಗಳಿವೆ. ಇಲ್ಲಿರುವ ‘ಚಿತ್ರ ಕುಟೀರ‘ದಲ್ಲಿ ಹಲವಾರು ಛಾಯಾಚಿತ್ರಗಳು ಪ್ರದರ್ಶಿತಗೊಂಡಿವೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಈ ರಮಣೀಯ ಸ್ಥಳವು ಬೆಂಗಳೂರಿನಿಂದ 52 ಕಿ.ಮೀ ಇದ್ದು, ಇಲ್ಲಿಗೆ ಬೈಕ್ ಮತ್ತು ಕಾರಿನಲ್ಲಿ ತೆರಳಲು ಸುಮಾರು 2 ಗಂಟೆ ಬೇಕಾಗಲಿದೆ. ಮಂಗಳವಾರ ರಜೆ ಇರಲಿದ್ದು, ಉಳಿದ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಲಿದೆ.

ಸಾವನದುರ್ಗ
ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಮಾಗಡಿ ತಾಲ್ಲೂಕಿನ ಸಾವನದುರ್ಗ ಅರಣ್ಯಪ್ರದೇಶ ಹಚ್ಚ ಹಸಿರಾಗಿದೆ. ಬೆಂಗಳೂರಿನಿಂದ 50 ಕಿ,ಮೀ ದೂರದಲ್ಲಿರುವ ಈ ತಾಣದಲ್ಲಿ ಸುಮಾರು 15 ಕಿ.ಮೀ ಸುತ್ತಳತೆಯ ಏಕಶಿಲಾ ಬೆಟ್ಟವಿದೆ. ಈ ಬೆಟ್ಟದ ಮೇಲೆ ಕೆಂಪೇಗೌಡರ ಕಾಲದ ಕೋಟೆ ಇದೆ. ದೇವಾಲಯಗಳಿವೆ. ಬೆಟ್ಟದ ಮೇಲೆ ಲಕ್ಷ್ಮೀನರಸಿಂಹಸ್ವಾಮಿ, ವೀರಭದ್ರಸ್ವಾಮಿ ದೇವಸ್ಥಾನಗಳಿವೆ. ಕೆಂಪೇಗೌಡರ ಹೆಸರಿನಲ್ಲಿ ವನ್ಯಜೀವಿ ಧಾಮ ಹಾಗೂ ಜಿಂಕೆ ಪಾರ್ಕ್ ಇಲ್ಲಿವೆ. ಸಾವನದುರ್ಗ ಚಲನಚಿತ್ರ ಹೊರಾಂಗಣಕ್ಕೆ ಹೇಳಿ ಮಾಡಿಸಿದ ತಾಣ. ಇಲ್ಲಿ ಹಲವಾರು ಕನ್ನಡ ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ.

ಮೇಕೆದಾಟು
ಮೇಕೆದಾಟು ರಾಜ್ಯದ ಪ್ರಮುಖ ಪ್ರವಾಸಿ ತಾಣ. ಕನಕಪುರದಿಂದ 16 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದಲ್ಲಿ (4 ಕಿ.ಮೀ ಹಿಂದೆ) ಕಾವೇರಿ ಮತ್ತು ಅರ್ಕಾವತಿ ನದಿಗಳು ಸಮಾಗಮವಾಗುತ್ತವೆ. ನಂತರ ಮೇಕೆದಾಟು ಬಳಿ ಇಕ್ಕಟ್ಟಾದ ಕಲ್ಲುಗಳ ನಡುವೆ ರಭಸವಾಗಿ ಹರಿದು ಮುಂದೆ ಸಾಗುತ್ತವೆ. ನೀರು ಹರಿಯುವ ರಭಸಕ್ಕೆ ಮೇಕೆದಾಟು ಪ್ರದೇಶದಲ್ಲಿನ ಕಲ್ಲುಗಳು ವಿವಿಧ ಆಕೃತಿಗಳನ್ನು ಪಡೆದುಕೊಂಡಿದೆ. ಬೆಂಗಳೂರಿನಿಂದ ಸಂಗಮ ತಾಣಕ್ಕೆ ಬಸ್ ಸೌಲಭ್ಯವಿದೆ.

ಚುಂಚಿ ಫಾಲ್ಸ್
ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಕಾರಣ ಚುಂಚಿ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಹಿಡಿದಿಡುವುದರಲ್ಲಿ ಅನುಮಾನವೇ ಇಲ್ಲ.

ಮೋಜು-ಮಸ್ತಿ ಮಾಡಲು ನೀರಿನಲ್ಲಿ ಇಳಿದು, ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ಘಟನೆಗಳು ನಡೆದಿರುವ ಕಾರಣ, ನೀರಿನ ಹತ್ತಿರಕ್ಕೆ ಹೋಗಲು ಬಿಡಲ್ಲ ಎನ್ನಲಾಗುತ್ತಿದೆ. ಆದರೆ, ಸ್ಥಳೀಯ ಮಾರ್ಗದರ್ಶಕರಿಗೆ ಶುಲ್ಕ ಪಾವತಿಸಿದರೆ, ಅವರು ನೀರಿನ ತೀರಾ ಹತ್ತಿರಕ್ಕೆ ಕರೆದುಕೊಂಡು ಹೋಗಿ ನೀರಿನ ಸೌಂದರ್ಯವನ್ನು ಸವಿಯಲು ಅವಕಾಶ ಕಲ್ಪಿಸಲಾಗುತ್ತದೆ ಎನ್ನಲಾಗುತ್ತದೆ.

ಬೆಂಗಳೂರಿನಿಂದ ಇದು 90 ಕಿ.ಮೀ ದೂರವಿದ್ದು, ಕನಕಪುರದಿಂದಲೇ 30 ಕಿ.ಮೀ ಆಗುತ್ತದೆ. ವಾಹನದ ಸೌಲಭ್ಯವಿಲ್ಲದವರಿಗೆ, ಚುಂಚಿ ಫಾಲ್ಸ್ ಹತ್ತಿರಕ್ಕೆ ಹೋಗುವ ಬಸ್ಸುಗಳು ಸಹ ಲಭ್ಯವಿವೆ.

ಮುತ್ತತ್ತಿ
ಕಾವೇರಿ ದಟ್ಟ ಅರಣ್ಯವಲಯದಲ್ಲಿರುವ ಈ ಸ್ಥಳವು ಮಂಡ್ಯದ ಮಳವಳ್ಳಿಯ ಬಳಿಯಿದೆ. ಈ ಸ್ಥಳವು ಪೌರಾಣಿಕ ರಾಮಾಯಣದ ಶ್ರೀರಾಮನ ಪತ್ನಿ ಸೀತೆ ಕಳೆದುಕೊಂಡಿದ್ದ ಮೂಗುತಿಯನ್ನು ಆಂಜನೇಯ ಇದೇ ಸ್ಥಳದಲ್ಲಿ ಹುಡುಕಿದ್ದ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಆಂಜನೇಯನ ದೇವಸ್ಥಾನವೂ ಇದೆ. ಇದೇ ಕಾರಣಕ್ಕೆ ಹಲವು ಹಿಂದೂಗಳು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇದರ ಹೊರತಾಗಿ, ಸ್ವಾಭಾವಿಕ ನದಿಯ ಚಲನೆ, ಮರಗಿಡಗಳು ಸೇರಿದಂತೆ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಸಹ ಹಲವು ಪ್ರಕೃತಿಪ್ರಿಯರು ಮತ್ತು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಳಿ ಈ ಸ್ಥಳ ಇದೆಯಾದರೂ, ಕನಕಪುರಕ್ಕೂ ಇದು ಹತ್ತಿರವೇ ಇದ್ದು, ಬೆಂಗಳೂರಿನಿಂದ ಸುಮಾರು 100 ಕಿ.ಮೀ ಇದೆ. ಕಾರಿನಲ್ಲಿ ಹೋದರೆ 3 ಗಂಟೆ ಆಗಲಿದೆ.

ಕಣ್ವ ಜಲಾಶಯ
ಕಣ್ವ ಜಲಾಶಯ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಣ್ವ ಗ್ರಾಮದಲ್ಲಿದೆ. ಬೆಂಗಳೂರು ನಗರದಿಂದ ಇದು ಸುಮಾರು 65 ಕಿ.ಮೀ ಆಸುಪಾಸಿನಲ್ಲಿದೆ. ರಾಮನಗರದಿಂದ ಮುಂದೆ ಸಾಗಿ ಮೈಸೂರು ಹೆದ್ದಾರಿ ಹಿಡಿದು 10 ಕಿ.ಮೀ ಹೋದರೆ ನಿಮಗೆ ಕಣ್ವಾ ಜಲಾಶಯ ಸಿಗುತ್ತದೆ.

ಇಲ್ಲಿಂದ ಸೂರ್ಯಾಸ್ತ ವೀಕ್ಷಣೆ, ಲ್ಯಾಂಡ್‌ ಸ್ಕೇಪ್‌ ಫೋಟೊಗ್ರಫಿ ಮಾಡುವುದಕ್ಕೆಅದ್ಭುತ ತಾಣ. ಇನ್ನು ಹಕ್ಕಿಗಳ ಚಿಲಿಪಿಲಿ, ಮೀನುಗಾರಿಕೆಗೂ ಹೇಳಿ ಮಾಡಿಸಿದ ತಾಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT