ಬುಧವಾರ, ಮಾರ್ಚ್ 29, 2023
31 °C

ಹಿಮಾಲಯದ ಹೂವಿನ ಕಣಿವೆಯಲ್ಲಿ...

ಎಸ್. ನಟರಾಜ ಬೂದಾಳು Updated:

ಅಕ್ಷರ ಗಾತ್ರ : | |

Prajavani

ಹಿಮಾಲಯದ ಹೂವಿನ ಕಣಿವೆಗೆ ಹೋಗಿ ಬರಬೇಕೆಂಬ ಬಹುದಿನಗಳ ಆಸೆ ಈಡೇರುವ ಸಮಯ ಬಂದಿತ್ತು. 2021 ಆಗಸ್ಟ್ 7ರಂದು ನಾನು ಲತಾ ಮತ್ತು ನನ್ನ ತಮ್ಮ ದೇವರಾಜ ಬೆಂಗಳೂರಿನಿಂದ ಡೆಹ್ರಾಡೂನ್‍ಗೆ ವಿಮಾನದಲ್ಲಿ ಹೊರಡುವ ಮೂಲಕ ನಮ್ಮ ಚಾರಣಪ್ರವಾಸ ಆರಂಭವಾಯಿತು. ಮೌಂಟನ್ ಮಂಜು ಮತ್ತು ಗೆಳೆಯರು ನಡೆಸುವ ‘ಕರ್ನಾಟಕ ಹೈಕ್ಸ್’ (ಮೊಬೈಲ್‌: 9901996099) ಎಂಬ ಚಾರಣಸಂಸ್ಥೆ ಹೂವಿನಕಣಿವೆ ಮತ್ತು ಸುತ್ತಲಿನ ಜಾಗಗಳಿಗೆ ಚಾರಣದ ವ್ಯವಸ್ಥೆ ಮಾಡಿತ್ತು.

ನಮ್ಮ ಗುಂಪಿನ ಒಟ್ಟು ಸದಸ್ಯರ ಸಂಖ್ಯೆ ಇಪ್ಪತ್ತು. ಉತ್ಸಾಹದಿಂದ ಸದಾ ಪುಟಿಯುತ್ತಿರುವ ವಿಘ್ನೇಶ್‍ ಭಟ್‌ ನಮ್ಮ ಟ್ರೆಕ್ ಲೀಡರ್. ಯಥಾಪ್ರಕಾರ ಹೆಣ್ಣುಮಕ್ಕಳದ್ದೇ ಯಜಮಾನಿಕೆ. ನಮ್ಮ ಜೊತೆಗೆ ಸ್ಥಳೀಕ ಚಾರಣ ಪರಿಣತರಾದ ರಾಣಾ ಮತ್ತು ರಾವತ್ ಡೆಹ್ರಾಡೂನ್‍ನಲ್ಲಿ ಸೇರಿಕೊಂಡರು. ಮೊದಲ ದಿನ ಹೃಷಿಕೇಶದಲ್ಲಿ ತಂಗುವ ಏರ್ಪಾಟಾಗಿತ್ತು. ಹೃಷಿಕೇಶ ಆಶ್ರಮಗಳಿಂದ ಕಿಕ್ಕಿರಿದ ನಗರ. ಸಾಮಾನ್ಯರಿಗಿಂತ ಸನ್ಯಾಸಿಗಳೇ ಜಾಸ್ತಿ. ಅಲಕಾನಂದಾ, ಮಂದಾಕಿನಿ, ಭಾಗೀರಥಿ ನದಿಗಳನ್ನು ಒಟ್ಟಾಗಿಸಿಕೊಂಡು ಗಂಗಾನದಿಯನ್ನು ಸ್ವಾಗತಿಸುವ ಸಮತಟ್ಟು ನೆಲ.

ಮಳೆಗಾಲವಾದ್ದರಿಂದ ಹಿಮಾಲಯದ ಕೆನೆಮಣ್ಣನ್ನು ಕಡೆಯುತ್ತಾ ಧಡಗುಟ್ಟಿಕೊಂಡು ಗಂಗಾನದಿ ಹರಿಯುತ್ತದೆ. ಹರಿಯುತ್ತದೆ ಎನ್ನುವುದಕ್ಕಿಂತ ನುಗ್ಗುತ್ತದೆ ಎನ್ನುವುದೇ ಸರಿ. ನದಿಯ ಎರಡೂ ದಡಗಳಲ್ಲಿ ಆಶ್ರಮಗಳ ಸಾಲು ಸಾಲು. ಎರಡೂ ಕಡೆಗಳನ್ನು ಜೋಡಿಸಲು ಜೋಲಿ ಕಟ್ಟಿದ ಹಾಗೆ ಎರಡು ತೂಗು ಸೇತುವೆಗಳನ್ನು ಕಟ್ಟಿದ್ದಾರೆ. ಇದೊಂದು ಸನಾತನ ನಗರ. ಪರಂಪರೆಯ ನೆನಪು ಮತ್ತು ಕೊಳಕುಗಳು ಎಲ್ಲ ಕಡೆ ಮೆತ್ತಿಕೊಂಡೇ ಇವೆ. ಹರಿದ್ವಾರ, ವಾರಾಣಸಿಗಳಂತೆ ಈಗೀಗ ಇಲ್ಲಿಯೂ ಸಂಜೆ ಗಂಗಾ ಆರತಿ ಮಾಡುತ್ತಾರೆ. ಇದು ಭಕ್ತಿಗಿಂತ ಹೆಚ್ಚು ಫಿಲ್ಮಿಯಾಗಿರುತ್ತದೆ. ತಿಥಿ ಆಚರಣೆಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳೆರಡನ್ನೂ ಸೇರಿಸಿ ದೇವಭೂಮಿ ಎನ್ನುತ್ತಾರೆ.

ಸಿಹಿ ಮತ್ತು ಚಾಟ್‍ಗಳು ಇಲ್ಲಿನ ವಿಶೇಷ. ಉತ್ತರ ಭಾರತದ ಹಾಲು, ಮೊಸರಿನ ಬನಿಯೇ ಬೇರೆ. ಹಾಗಾಗಿ ಇಲ್ಲಿನ ರುಚಿಗೆ ಸರಿಗಟ್ಟುವ ಚಾಟ್‍ಗಳನ್ನು ಬೇರೆ ಜಾಗಗಳಲ್ಲಿ ನಿರೀಕ್ಷಿಸಲಾಗದು. ಹೃಷಿಕೇಶದಲ್ಲಿನ ಛೋಟಿವಾಲ ಎಂಬ ಹಾಲು ಮೊಸರಿನ ಮತ್ತು ಸಿಹಿತಿಂಡಿಗಳ ಹೋಟೆಲ್ ಪ್ರಸಿದ್ಧವಾದುದು. ಇಲ್ಲಿನ ಮೊಸರಿನ ಲಸ್ಸಿಗೆ ಬೇಡಿಕೆ ಜಾಸ್ತಿ. ಮತ್ತೊಂದು ವಿಶೇಷವೆಂದರೆ ಈ ಹೋಟೆಲಿನ ಬಾಗಿಲಿನಲ್ಲಿ ಬ್ರಾಹ್ಮಣ ವೇಷಧಾರಿಯೊಬ್ಬನು ಗೊಂಬೆಯಂತೆ ಅಲುಗದೆ ಕುಳಿತಿರುತ್ತಾನೆ. ತನ್ನ ಜುಟ್ಟನ್ನು ಯಾವಾಗಲೂ ಆಂಟೆನಾದಂತೆ ನೆಟ್ಟಗೆ ಇರುವ ಹಾಗೆ ನೋಡಿಕೊಳ್ಳುತ್ತಾನೆ! ಪ್ರವಾಸಿಗರು ಅವನ ಜೊತೆಗೆ ಫೋಟೊ ತೆಗೆಸಿಕೊಂಡು ಆಮೇಲೆ ಹೋಟೆಲ್ ಒಳಕ್ಕೆ ಹೋಗುತ್ತಾರೆ.

ಟೆಂಪೊ ಟ್ರಾವೆಲರ್‌ನಲ್ಲಿ ಗೋವಿಂದಘಾಟ್ ಎಂಬಲ್ಲಿಗೆ ನಮ್ಮ ಪ್ರಯಾಣ ಆರಂಭವಾಯಿತು. ಸುಮಾರು 270 ಕಿಲೊ ಮೀಟರುಗಳ ಹಿಮಾಲಯದ ಪ್ರಯಾಣ. ದೇವಪ್ರಯಾಗ, ರುದ್ರಪ್ರಯಾಗ, ಕರ್ಣಪ್ರಯಾಗಗಳನ್ನು ದಾಟಿ ಹೋಗಬೇಕಿತ್ತು. ಎರಡು ಮೂರು ದಿನಗಳಿಂದ ಮಳೆ ಸುರಿದು ಹಿಮಾಲಯದ ಬೆಟ್ಟಗಳು ಯಾವ ಕ್ಷಣದಲ್ಲಿಯಾದರೂ ರಸ್ತೆಗೆ ಜರುಗಲು ಸಿದ್ಧವಾಗಿದ್ದವು. ಇಲ್ಲಿಯ ಬೆಟ್ಟಗಳು ಮತ್ತು ರಸ್ತೆಗಳ ನಡುವೆ ಒಂದು ರೀತಿಯ ಸಿಟ್ಟುಸೆಡವಿನ ಸಂಬಂಧವಿದೆ! ಬೆಟ್ಟಗಳನ್ನು ಕೊರೆದು ಮಾಡಿರುವ ರಸ್ತೆಗಳು ಕಳ್ಳಗಿಂಡಿಗಳಂತೆ ಬೆಟ್ಟಗಳನ್ನು ಬಗೆದುಕೊಂಡು ಮುಂದಕ್ಕೆ ಹೋಗುತ್ತವೆ. ಆ ಸಿಟ್ಟಿಗೆ ಆ ಬೃಹತ್ ಬೆಟ್ಟಗಳು ಲದ್ದಿ ಹಾಕಿದಂತೆ ತಮ್ಮ ಒಂದು ಭಾಗವನ್ನು ರಸ್ತೆಗೆ ಜರುಗಿಸಿ ತೆಪ್ಪಗೆ ಕೂತುಬಿಡುತ್ತವೆ. ರಸ್ತೆಯ ಮೇಲೆ ಬೀಳುವ ಈ ಬೆಟ್ಟದ ಪಿಸಿಗೆಯನ್ನು ತೆಗೆದುಹಾಕಲು, ಪಕ್ಕಕ್ಕೆ ತಳ್ಳಲು ಅಲ್ಲಲ್ಲಿ ಬೃಹತ್ ಗಾತ್ರದ ಯಂತ್ರಗಳನ್ನು ನಿಲ್ಲಿಸಿರುತ್ತಾರೆ. ಬೆಟ್ಟಗಳಿಂದ ಜಾರಿದ ಮಣ್ಣುಬಂಡೆಗಳನ್ನು ತೆಗೆದುಹಾಕಲು ದಿನಗಟ್ಟಲೆ ಬೇಕಾಗುತ್ತದೆ. ಅಲ್ಲಿಯವರೆಗೆ ಆಕಡೆ ಈಕಡೆ ಅನೇಕ ಮೈಲುಗಳ ವಾಹನ ಸಾಲುಗಟ್ಟುವುದು ಅನಿವಾರ್ಯ.

ಸ್ವಲ್ಪ ದೂರ ಹೋದಮೇಲೆ ನಮ್ಮ ಹೆದ್ದಾರಿ ಇದೇ ಕಾರಣಕ್ಕೆ ಬಂದ್ ಆಗಿರುವುದು ಗೊತ್ತಾಯಿತು. ನಮ್ಮ ಚಾಲಕ ಸುಮಾರು 130 ಕಿ.ಮೀ.ಗಳ ಹೆಚ್ಚಿನ ಸುತ್ತು ಬಳಸಿನ ದಾರಿಯನ್ನು ಅನಿವಾರ್ಯವಾಗಿ ಹಿಡಿದರು. ಐದಾರು ಗಂಟೆ ಸುತ್ತಿ ಮತ್ತೆ ಹೆದ್ದಾರಿ ಸೇರಿಕೊಂಡೆವು. ಇನ್ನೇನು ಗೋವಿಂದಘಾಟ್ ಸೇರಲು ಒಂದೆರಡು ಗಂಟೆಗಳು ಸಾಕು, ರಾತ್ರಿ ಉಣ್ಣುವ ಹೊತ್ತಿಗೆ ಅಲ್ಲಿಗೆ ಸೇರುತ್ತೇವೆ ಎಂದುಕೊಳ್ಳುವಷ್ಟರಲ್ಲಿ ಮುಂದೆ ಹೋಗದಂತೆ ಬೆಟ್ಟವೊಂದು ರಸ್ತೆಗೆ ಕಾಲುಚಾಚಿತ್ತು.

ಕೆಲವು ಸ್ಥಳೀಕರು ಅದು ಜರುಗಿದ ಪರಿಯ ಬಗ್ಗೆ ಮಾತನಾಡುತ್ತಿದ್ದರು. ಇನ್ನೊಂದೆರಡು ಗಂಟೆಗಳಲ್ಲಿ ದಾರಿ ತೆರೆಯುತ್ತದೆ ಎಂಬ ನಿರ್ಧಾರವನ್ನು ಅವರವರೇ ಮಾಡಿಕೊಂಡರು.

ನಾವು ಕೂಡ ಖುಲ್ ಜಾ ಸಿಂಸಿಂ ಎನ್ನುತ್ತ ಒಂದು ಗಂಟೆ ಕಾಯ್ದರೂ ಅಲ್ಲಿ ಯಾವ ಚಟುವಟಿಕೆಯೂ ನಡೆದಂತೆ ಕಾಣಲಿಲ್ಲ. ಇಷ್ಟೇ ಅಲ್ಲ ಇದನ್ನು ದಾಟಿದ ಮೇಲೆ ಇನ್ನೆರಡು ಕಡೆ ದಾರಿ ಬಂದ್ ಆಗಿದೆ ಎಂಬ ಸಂಗತಿ ಗೊತ್ತಾಯಿತು. ಹಿಂದೆ ಬರುತ್ತಿದ್ದ ವಾಹನಗಳು ಅಷ್ಟೇ ವೇಗವಾಗಿ ಹಿಂದಕ್ಕೆ ಹೋಗಿ ಹತ್ತಿರದಲ್ಲಿದ್ದ ಚಮೋಲಿ ಎಂಬ ಪಟ್ಟಣದಲ್ಲಿನ ಹೋಟಲ್‍ಗಳಿಗೆ ಲಗ್ಗೆ ಹಾಕಿದ್ದವು. ನಮ್ಮ ಟ್ರೆಕ್ ನಾಯಕ ವಿಘ್ನೇಶ್‌ ತನ್ನ ಸ್ನೇಹಸಂಬಂಧಗಳನ್ನು ಬಳಸಿ ನಮಗೂ ಒಂದು ಹೋಟೆಲ್ ಒದಗಿಸಿದ. ಉಂಡು ಮಲಗುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆಯಾಗಿತ್ತು. ನಮ್ಮ ಪ್ರವಾಸದ ಒಂದು ದಿನದ ಅವಧಿ ಹೆಚ್ಚುವರಿಯಾಗಿ ಬಳಕೆಯಾಗಿತ್ತು.

ಬೆಳಗ್ಗೆ ಎಂಟುಗಂಟೆಗೆ ರಸ್ತೆ ತೆರೆದಿದೆ ಎಂಬ ಮಾಹಿತಿ ಬಂತು. ತಕ್ಷಣ ಹೊರಟು ಬೆಟ್ಟ ಜಾರಿದ್ದ ಜಾಗಗಳನ್ನು ಉದ್ದಕ್ಕೂ ನೋಡುತ್ತ ಹೋಗುತ್ತಿರುವಾಗ ಬೃಹತ್ ಪೈನ್ ಮರವೊಂದು ನಮ್ಮ ದಾರಿಗೆ ಅಡ್ಡ ಮಲಗಿತು. ಥೇಟ್ ಬೆಟ್ಟವೇ ಹಾಕಿದ ಚೆಕ್ ಪೋಸ್ಟ್ ಥರಾ ಕಾಣಿಸುತ್ತಿತ್ತು. ಅಲ್ಲೇ ಒಂದು ಸೈನ್ಯದ ಕ್ಯಾಂಪ್ ಇದ್ದುದರಿಂದ ಜೆಸಿಬಿಯೊಂದು ಬಂದು ಆ ಬೃಹತ್ ಮರವನ್ನು ಪಕ್ಕಕ್ಕೆ ಸರಿಸಿತು. ಅಂತೂ ಗೋವಿಂದಘಾಟ್‍ಗೆ ಮಧ್ಯಾಹ್ನ ಹನ್ನೆರಡು ಗಂಟೆಗೆ ತಲುಪಿದೆವು. ನಮ್ಮ ವಾಸ್ತವ್ಯಕ್ಕಾಗಿ ನಿಗದಿಯಾಗಿದ್ದ ಗಂಗಾ ಹೋಮ್‌ಸ್ಟೇ ತಲುಪಿದಾಗ ಎಲ್ಲರಿಗೂ ಹಸಿವಾಗಿತ್ತು. ಅದೊಂದು ಅದ್ಭುತವಾದ ಆವರಣ. ಪಕ್ಕದಲ್ಲಿ ಅಲಕನಂದಾ ನದಿ ಭೋರ್ಗರೆಯುತ್ತ ಹರಿಯುತ್ತದೆ. ಅದರ ದಡದ ಎತ್ತರದ ಜಾಗದಲ್ಲಿ ಕಟ್ಟಿರುವ ಈ ಪುಟ್ಟ ಹೋಟೆಲ್‍ನ ಮಾಲೀಕ ಶರ್ಮಾ ಮತ್ತು ಅವನ ಶ್ರೀಮತಿ ತಾವೇ ಸ್ವತಃ ಕೆಲಸಗಾರರಾಗಿ, ಅಡುಗೆಯವರಾಗಿ ದುಡಿಯುತ್ತಾರೆ. ಸುತ್ತಲಿನ ಜಾಗದಲ್ಲಿ ಹಲವಾರು ತರಕಾರಿಗಳನ್ನು ಬೆಳೆದಿದ್ದಾರೆ. ಅವನ್ನೇ ಅಡುಗೆಗೆ ಬಳಸುತ್ತಾರೆ.

ನಾಲ್ಕು ವರ್ಷಗಳ ಹಿಂದೆ ನಮ್ಮ ಹುಡುಗರು ಕೊಟ್ಟಿದ್ದ ರಾಗಿಯನ್ನು ಬೀಜಮಾಡಿಕೊಂಡು ಮತ್ತೆ ಮತ್ತೆ ರಾಗಿ ಬೆಳೆದಿದ್ದಾರೆ. ಕರ್ನಾಟಕದಿಂದ ಬಂದವರಿಗೆ ರಾಗಿರೊಟ್ಟಿ ಮಾಡಿಕೊಡುತ್ತಾರೆ. ಸುಂದರ ಹೂಗಳ ಪ್ರವೇಶದ್ವಾರವಿದೆ. ಒಂದೆರಡು ದಿನಗಳು ತಣ್ಣಗೆ ಕಾಲ ಕಳೆಯಬೇಕಾದ ಜಾಗ. ಊಟದ ಸವಿಯಂತೂ ನೆನಪಿಸಿಕೊಳ್ಳುವ ಹಾಗಿತ್ತು. ಅವರಿಂದ ಗೊತ್ತಾದ ಮತ್ತೊಂದು ಸಂಗತಿ ಎಂದರೆ ಅವರ ಮೊದಲಿನ ಹೋಮ್‌ಸ್ಟೇ ಸೈಟ್ ಸಮೇತ ಕೊಚ್ಚಿ ಹೋಯಿತಂತೆ! ತೀರಾ ಇತ್ತೀಚೆಗೆ ಇದನ್ನು ಕಟ್ಟಿಕೊಂಡಿದ್ದಾರೆ.

ಮಾರನೆಯ ಬೆಳಗ್ಗೆ ನಮ್ಮ ಚಾರಣ ಶುರುವಾಯಿತು. ಹದಿನಾಲ್ಕು ಕಿಲೋಮೀಟರ್ ಚಾರಣಮಾಡಿ ಘಾಂಗೇರಿಯಾ ಎಂಬ ಬೇಸ್ ಕ್ಯಾಂಪ್ ತಲುಪುವುದು ಅವತ್ತಿನ ಕಾರ್ಯಕ್ರಮ. ಕೆಲವರಿಗೆ ಕೈತಪ್ಪಿ ಹೋಗಿರುವ ಒಂದು ದಿನವನ್ನು ಹೇಗಾದರೂ ಮಾಡಿ ಮರುಸಂಪಾದಿಸುವ ಆಸೆ. ಹಾಗಾಗಿ ಇವತ್ತೇ ಘಾಂಗೇರಿಯಾ ತಲುಪಿ ಸಾಧ್ಯವಾದರೆ ಹೂವಿನ ಕಣಿವೆಗೂ ಹೋಗಿಬರೋಣ ಎಂಬ ಠರಾವನ್ನು ಮಂಡಿಸಿದರು. ಎಲ್ಲರೂ ಉಘೇ ಉಘೇ ಎಂದರು. ನಮ್ಮ ಟ್ರೆಕ್ ನಾಯಕರು ಮಾತ್ರ ಒಳಗೊಳಗೇ ನಗುತ್ತಿದ್ದರು. ಆಗಲಿ ಹೋಗೋಣ ಬಿಡಿ ಎಂದರು. ನಾಲ್ಕು ಕಿಲೋಮೀಟರ್ ದೂರದ ಪುಲ್ನಾ ಎಂಬ ಹಳ್ಳಿಯವರೆಗೆ ಜೀಪ್ ಪ್ರಯಾಣವೆಂದೂ ಅಲ್ಲಿಂದ ಮುಂದಕ್ಕೆ ಹತ್ತು ಕಿಲೋಮೀಟರ್ ಚಾರಣವೆಂದೂ ತೀರ್ಮಾನವಾಗಿ ಅದರಂತೆ ಜೀಪಿನಲ್ಲಿ ಪುಲ್ನಾ ತಲುಪಿ ಚಾರಣ ಆರಂಭಿಸಿದೆವು. ಚಾರಣದ ಆರಂಭದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ಏಳು ಸಾವಿರ ಅಡಿಗಳು. ಆರಂಭದ ಒಂದೆರಡು ಕಿಲೋಮೀಟರುಗಳು ಹೆಚ್ಚೂ ಕಡಿಮೆ ಸಮತಟ್ಟಾದ ದಾರಿ. ನಂತರ ಶುರುವಾಯಿತು ನೋಡಿ. ಒಮ್ಮೆಗೇ ಸುಮಾರು ಹತ್ತುಸಾವಿರ ಅಡಿಗಳಿಗೆ ಏರುವ ಕಡಿದಾದ ದಾರಿ. ಹನ್ನೊಂದು ಗಂಟೆಗೆ ಘಾಂಗೇರಿಯಾ ತಲುಪಿಬಿಡೋಣ ಎಂದು ಹೊರಟ ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ ಒಂದೂವರೆ ಗಂಟೆ! ಎಲ್ಲರೂ ಬಸವಳಿದು ಹೋಗಿದ್ದರು. ಯಾರ ಬಾಯಿಂದಲೂ ಹೂವಿನ ಕಣಿವೆಯ ಮಾತೇ ಬರಲಿಲ್ಲ. ಉಂಡು ರೂಂ ಸೇರಿಕೊಂಡೆವು. ಅಲ್ಲಿಯ ಹೋಟೆಲ್ ರೂಂಗಳು ತಣ್ಣಗೆ ಕೊರೆಯುತ್ತಿದ್ದವು.

ಮರುದಿನ ಬೆಳಿಗ್ಗೆ ಏಳು ಗಂಟೆಗೆ ನಮ್ಮ ಹೂವಿನಕಣಿವೆಯ ಚಾರಣ ಆರಂಭವಾಯಿತು. ಉತ್ತರಾಖಂಡ ರಾಜ್ಯದ ಚಮೋಲಿಯ ಭ್ಯುಂದರ್ ಕಣಿವೆಯಲ್ಲಿರುವ ಈ ಹೂವಿನಸಂಪತ್ತು ಇರುವ ಆವರಣವನ್ನು 1980ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಗಿದ್ದು, ಪ್ರವೇಶಿಸುವವರಿಗೆ 150 ರೂಪಾಯಿ ಪ್ರವೇಶಧನವಿದೆ. ಪ್ರವೇಶಧನ ಸಂಗ್ರಹಿಸುವುದನ್ನು ಬಿಟ್ಟರೆ ಈ ಪ್ರಾಧಿಕಾರದಿಂದ ಮತ್ಯಾವ ಘನಂದಾರಿ ಕೆಲಸಗಳೂ ಆಗುತ್ತಿಲ್ಲ. ಆರಂಭದಿಂದಲೇ ಕಡಿದಾದ ಏರನ್ನು ಏರುತ್ತಾ ಸಮುದ್ರಮಟ್ಟದಿಂದ ಸುಮಾರು 12,400 ಅಡಿಯಲ್ಲಿರುವ ಕಣಿವೆಯನ್ನು ಸೇರಬೇಕು. ಉದ್ದಕ್ಕೂ ಕಣಿವೆಯ ಆಸುಪಾಸಿನ ಪರ್ವತ ಶಿಖರಗಳಲ್ಲಿರುವ ನೀರ್ಗಲ್ಲುಗಳು ಕರಗಿ ಪುಷ್ಪಾವತಿ ನದಿಯಾಗಿ ಹರಿಯುತ್ತವೆ. ಅದರ ವೇಗವನ್ನು ಕಣ್ತುಂಬಿಕೊಂಡೆವು.

ಕಣಿವೆ ಸೇರಲು ಸುಮಾರು ನಾಲ್ಕು ಕಿಲೋಮೀಟರ್‌ಗಳಷ್ಟು ಕಡಿದಾದ ದಾರಿ ಸವೆಸಬೇಕು. ಇಲ್ಲಿ ಕುದುರೆ ಇತ್ಯಾದಿಗಳ ನೆರವಿಲ್ಲ. ಬುಟ್ಟಿಯಲ್ಲಿ ಹೊತ್ತು ಸಾಗಿಸುವ ವ್ಯವಸ್ಥೆ ಇದೆ. ಸಾಗುವ ದಾರಿಯ ಇಕ್ಕೆಲಗಳಲ್ಲಿ ರಾಶಿರಾಶಿ ಹೂಗಳು ಅರಳಿರುತ್ತವೆ. ಉದ್ದಕ್ಕೂ ರಾಗಾ, ಪೈನ್ ಮತ್ತು ಸ್ಥಳೀಯ ಜಾತಿಯ ನೇಪಲ್ ಮರಗಳು ಸಿಗುತ್ತವೆ. ರಾಗಾ ಮರಗಳು ಹಿಮಾಲಯದ ಒಂದು ಹಂತದಲ್ಲಿ ಕಾಣಸಿಗುತ್ತವೆ. ಇವುಗಳ ತೆಳ್ಳನೆಯ ತೊಗಟೆಯನ್ನು ಭೋಜಪತ್ರ ಎನ್ನುತ್ತಾರೆ. ಕಾಗದದ ಶೋಧನೆಗೆ ಮುನ್ನ ಈ ಭೋಜಪತ್ರವನ್ನು ಕಾಗದದ ಹಾಗೆ ಬಳಸಲಾಗುತ್ತಿತ್ತು. ಬರಹಗಾರನಾದುದರಿಂದ ನನಗೆ ಬೇಕಾಗುತ್ತದೆ ಎಂದು ರಾಣ ಮತ್ತು ರಾವತ್ ಅನೇಕ ಭೋಜಪತ್ರಗಳನ್ನು ತಂದುಕೊಟ್ಟರು!

ಐದು ಗಂಟೆಗಳ ಚಾರಣದ ನಂತರ ಹೂವಿನಕಣಿವೆಯನ್ನು ಪ್ರವೇಶಿಸಿದೆವು. ಸುಮಾರು ಮೂವತ್ತನಾಲ್ಕು ಚದರ ಮೈಲುಗಳ ಈ ಕಣಿವೆಯಲ್ಲಿ ಅನೇಕ ಜಾತಿಯ ಆರ್ಕಿಡ್‍ಗಳು, ನೂರಾರು ಥರದ ಹೂಗಳು ಒಟ್ಟಿಗೇ ಅರಳುತ್ತವೆ. ಜುಲೈ ಮತ್ತು ಆಗಸ್ಟ್ ತಿಂಗಳುಗಳು ಹೂಗಳನ್ನು ನೋಡಲು ಸುಸಮಯ. ಇದನ್ನು ಕುರಿಗಾಹಿಗಳು ಮೊದಲಿಗೆ ನಂದನವನ, ಹೂವಿನಕಣಿವೆ ಎಂದೆಲ್ಲ ಕರೆಯುತ್ತಿದ್ದರಂತೆ. ಆಗೆಲ್ಲ ಇದು ನೋಡಲು ಬರುವ ಜಾಗವಾಗಿರಲಿಲ್ಲ; ಬದಲಿಗೆ ಕುರಿಮೇಕೆಗಳಿಗೆ ಸೊಂಪಾದ ಮೇವಿನ ಜಾಗವಾಗಿತ್ತು. ಹತ್ತು ದಿನಗಳ ಅವಧಿಗೊಮ್ಮೆ ಈ ಆವರಣ ಹೊಸದಾಗುತ್ತದೆ! ಈಗ ಅರಳಿರುವ ಹೂಗಳು ಇನ್ನು ಹತ್ತು ದಿನಗಳ ನಂತರ ಕಾಣಸಿಗುವುದಿಲ್ಲ; ಆಗ ಕಾಣಸಿಗುವ ಎಲ್ಲ ಹೂಗಳೂ ಈಗ ಇರುವುದಿಲ್ಲ. ಇದರ ಬಹುತ್ವವನ್ನು ಕಾಣಲು ಅನೇಕ ಸಲ ಬರಬೇಕು. ಜಗತ್ತಿನ ಸುಂದರ ತಾಣಗಳಲ್ಲಿ ಇದೂ ಒಂದು. ಬಹುಪಾಲು ಎಲ್ಲವೂ ಸಣ್ಣ ಸಣ್ಣ ಹೂಗಳು. ಬ್ರಹ್ಮಕಮಲವೊಂದೇ ಹಿಮಾಲಯದಲ್ಲಿ ಅರಳುವ ದೊಡ್ಡಗಾತ್ರದ ಹೂ. ಅದು ಹೇಮಕುಂಡ್‍ನಲ್ಲಿ ಹೆಚ್ಚು ಕಾಣಸಿಗುತ್ತದೆ.

ಹೂಕಣಿವೆ ಪ್ರವೇಶಿಸಿದ ನಾವೆಲ್ಲ ಅಲ್ಲಲ್ಲಿ ಕೂತು ನಿಂತು ಮತ್ತೂ ಮುಂದೆ ಹೋಗುವ ಉತ್ಸಾಹದಲ್ಲಿದ್ದೆವು. ಮುಂದೆ ಒಂದು ಜಾಗದಲ್ಲಿ ಬಹಳ ಹೂಗಳು ಅರಳಿವೆ ಎಂಬ ಮಾಹಿತಿ ಬಂತು. ಆದರೆ ನಮ್ಮ ಗುಂಪಿನ ಮೂವರಿಗೆ ಎತ್ತರದ ಜಾಗಗಳಲ್ಲಿ ಉಂಟಾಗುವ ಅನಾರೋಗ್ಯದ ತೊಂದರೆ ಕಾಣಿಸಿಕೊಂಡದ್ದರಿಂದ ಅವರನ್ನು ಸಾಧ್ಯವಾದಷ್ಟು ಬೇಗ ಕೆಳಗೆ ಕರೆತರುವ ಅಗತ್ಯವಿತ್ತು. ಆದರೂ ಸಾಕಾಗುವಷ್ಟು ಹೊತ್ತು ಹೂವಿನ ಕಣಿವೆಯಲ್ಲಿ ಕಳೆದೆವು. ಎತ್ತರದ ಜಾಗವಾಗಿರುವುದರಿಂದ ಆಮ್ಲಜನಕದ ಕೊರತೆ ಇರುವ ಕಾರಣಕ್ಕೆ ಅನೇಕ ರೀತಿಯ ಅನುಭವಗಳು ಆಗುತ್ತವೆ. ತೆಳುವಾದ ಹೂವಿನ ಘಮಲು ಹರಡಿರುತ್ತದೆ. ಮನಸ್ಸೆಲ್ಲ ತಣಿದುಹೋಗಿ ನಿಸರ್ಗದೆದುರಿಗೆ ಸುಮ್ಮನೆ ವಿರಮಿಸುತ್ತದೆ.

ಸುಮಾರು 530 ವಿವಿಧ ರೀತಿಯ ಹೂಗಳ ಈ ಕಣಿವೆಯ ಪ್ರಮುಖ ಹೂಗಳೆಂದರೆ: ಪ್ರಿಮುಲ, ಆಂಡ್ರೋಸೇಸಸ್, ಸ್ಯಾಕ್ರಿಫೇಜಸ್, ಸೆಡಮ್ಸ್, ಹಳದಿ ಮತ್ತು ಕೆಂಪು ಪೊಟೆಂಟಿಲ್ಲಾಸ್, ಗ್ಯೂಮ್ಸ್, ಗೆರಾನಿಯಮ್ಸ್, ಆಸ್ಟರ್ಸ್, ಮುಂತಾದ ನೂರಾರು ಜಾತಿಯ ಹೂಗಳ ರಾಶಿ ರಾಶಿ! ನರ್ತಿಸುವ ಹೂಗಳೆಂದು ಕರೆಯುವ ಕ್ಯಾಂಪನೂಲ ಲ್ಯಾಟಿಪೋಲಿಯಾ ಹೂಗಳು ಯಥೇಚ್ಛ ಅರಳಿದ್ದವು. ಮತ್ತೂ ವಿಶೇಷವೆಂದರೆ ಬ್ರಹ್ಮಕಮಲದ ಜಾತಿಗೆ ಸೇರಿದ ಕಪ್ಪುಹೂಗಳು ಗೊಂಡೆ ಬಿಚ್ಚಿದ್ದವು.

ಅಲ್ಲಿ ಹಿಮಾಲಯದ ರಾಣಿ ಎಂದು ಕರೆಯುವ ಬ್ಲೂ ಪ್ಲಾಪಿ (ಪ್ರಿಮುಲ ಮ್ಯಾಕ್ರೋಫಿಲಾ) ಹೂವುಗಳೇ ಜಾಸ್ತಿ. ಆದರೆ ನಾವು ಹೋದ ಕಾಲಕ್ಕೆ ಅದರ ಅರಳುವಿಕೆಯ ಕಾಲ ಮುಗಿದುಹೋಗಿತ್ತು. ಹೇಮಕುಂಡ್‍ನಲ್ಲಿ ಇನ್ನೂ ಇವೆ ಎನ್ನುವ ಮಾಹಿತಿ ಬಂತು. ಅಲ್ಲಿ ಕಂಡ ಅತ್ಯಂತ ಬೇಸರದ ದೃಶ್ಯವೆಂದರೆ ಅಷ್ಟೊಂದು ಕೋಮಲವಾದ ಹೂಗಿಡಗಳನ್ನು ತುಳಿದು ನುಗ್ಗಿ ತಮ್ಮ ಅದೇ ಮುಖಗಳನ್ನು ದಶದಿಕ್ಕಿಗೆ ತಿರುಗಿಸುತ್ತ ಫೋಟೊ ತೆಗೆಸಿಕೊಳ್ಳುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಹಿಗ್ಗಾಮುಗ್ಗ ಹೂಗಿಡಗಳನ್ನು ತುಳಿಯುತ್ತಿರುವುದು. ಹೂಗಳನ್ನು ಕೀಳುತ್ತಿರುವವರನ್ನು ಕಂಡಾಗ ಇವರನ್ನು ಇಲ್ಲಿಗೆ ಬಿಡದಿರುವುದೇ ಮೇಲೆನ್ನಿಸಿತು. ಐದು ಗಂಟೆಯ ಒಳಗೆ ಕೆಳಗೆ ಇಳಿದು ಪ್ರಾಧಿಕಾರದ ಕಚೇರಿಯಲ್ಲಿ ವಾಪಸ್ಸು ಬಂದಿರುವುದನ್ನು ದಾಖಲಿಸಬೇಕಿದ್ದುದರಿಂದ ಅಷ್ಟು ಹೊತ್ತಿಗೆ ಎಲ್ಲರೂ ಕೆಳಗೆ ಬಂದೆವು. ಅಲ್ಲಿಂದ ಕಾಣುವ ಹೇಮಕುಂಡ್ ಸಾಹಿಬ್‍ಗೆ ಮರುದಿನ ಹೋಗಿಬರಲು ಸಮಯದ ಕೊರತೆ ಉಂಟಾದುದರಿಂದ ಅಲ್ಲಿಂದಲೇ ವಂದನೆ ಹೇಳಿದೆವು.

ಮರುದಿನ ವಿಶ್ರಾಂತಿ ಮತ್ತು ಡೆಹ್ರಾಡೂನ್‌ನ ಮಾರುಕಟ್ಟೆಗಳಲ್ಲಿ ಅಡ್ಡಾಡಿ ಅಲ್ಲಿಯ ವಿಶೇಷ ಸವಿತಿಂಡಿಗಳನ್ನು ಸವಿದೆವು. ಎಂಟನೆಯ ದಿನ ಸಂಜೆಯ ವಿಮಾನದಲ್ಲಿ ಬೆಂಗಳೂರಿಗೆ ಬಂದಾಗ ಸಂಜೆ ಏಳು ಗಂಟೆಯಾಗಿತ್ತು. ಮನಸ್ಸಿನ ತುಂಬ ಹೂಗಳೇ ತುಂಬಿಕೊಂಡಿದ್ದವು.

ನಾವು ಕೂಡ ಖುಲ್ ಜಾ ಸಿಂಸಿಂ ಎನ್ನುತ್ತ ಒಂದು ಗಂಟೆ ಕಾಯ್ದರೂ ಅಲ್ಲಿ ಯಾವ ಚಟುವಟಿಕೆಯೂ ನಡೆದಂತೆ ಕಾಣಲಿಲ್ಲ. ಇಷ್ಟೇ ಅಲ್ಲ ಇದನ್ನು ದಾಟಿದ ಮೇಲೆ ಇನ್ನೆರಡು ಕಡೆ ದಾರಿ ಬಂದ್ ಆಗಿದೆ ಎಂಬ ಸಂಗತಿ ಗೊತ್ತಾಯಿತು. ಹಿಂದೆ ಬರುತ್ತಿದ್ದ ವಾಹನಗಳು ಅಷ್ಟೇ ವೇಗವಾಗಿ ಹಿಂದಕ್ಕೆ ಹೋಗಿ ಹತ್ತಿರದಲ್ಲಿದ್ದ ಚಮೋಲಿ ಎಂಬ ಪಟ್ಟಣದಲ್ಲಿನ ಹೋಟೆಲ್‍ಗಳಿಗೆ ಲಗ್ಗೆ ಹಾಕಿದ್ದವು. ನಮ್ಮ ಟ್ರೆಕ್ ನಾಯಕ ವಿಘ್ನೇಶ್‌ ತನ್ನ ಸ್ನೇಹಸಂಬಂಧಗಳನ್ನು ಬಳಸಿ ನಮಗೂ ಒಂದು ಹೋಟೆಲ್ ಒದಗಿಸಿದ. ಉಂಡು ಮಲಗುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆಯಾಗಿತ್ತು. ನಮ್ಮ ಪ್ರವಾಸದ ಒಂದು ದಿನದ ಅವಧಿ ಹೆಚ್ಚುವರಿಯಾಗಿ ಬಳಕೆಯಾಗಿತ್ತು.

ಬೆಳಗ್ಗೆ ಎಂಟು ಗಂಟೆಗೆ ರಸ್ತೆ ತೆರೆದಿದೆ ಎಂಬ ಮಾಹಿತಿ ಬಂತು. ತಕ್ಷಣ ಹೊರಟು ಬೆಟ್ಟ ಜಾರಿದ್ದ ಜಾಗಗಳನ್ನು ಉದ್ದಕ್ಕೂ ನೋಡುತ್ತ ಹೋಗುತ್ತಿರುವಾಗ ಬೃಹತ್ ಪೈನ್ ಮರವೊಂದು ನಮ್ಮ ದಾರಿಗೆ ಅಡ್ಡ ಮಲಗಿತು. ಥೇಟ್ ಬೆಟ್ಟವೇ ಹಾಕಿದ ಚೆಕ್‌ಪೋಸ್ಟ್ ಥರಾ ಕಾಣಿಸುತ್ತಿತ್ತು. ಅಲ್ಲೇ ಒಂದು ಸೈನ್ಯದ ಕ್ಯಾಂಪ್ ಇದ್ದುದರಿಂದ ಜೆಸಿಬಿಯೊಂದು ಬಂದು ಆ ಬೃಹತ್ ಮರವನ್ನು ಪಕ್ಕಕ್ಕೆ ಸರಿಸಿತು. ಅಂತೂ ಗೋವಿಂದಘಾಟ್‍ಗೆ ಮಧ್ಯಾಹ್ನ ಹನ್ನೆರಡು ಗಂಟೆಗೆ ತಲುಪಿದೆವು. ನಮ್ಮ ವಾಸ್ತವ್ಯಕ್ಕಾಗಿ ನಿಗದಿಯಾಗಿದ್ದ ಗಂಗಾ ಹೋಮ್‌ಸ್ಟೇ ತಲುಪಿದಾಗ ಎಲ್ಲರಿಗೂ ಹಸಿವಾಗಿತ್ತು. ಅದೊಂದು ಅದ್ಭುತವಾದ ಆವರಣ. ಪಕ್ಕದಲ್ಲಿ ಅಲಕನಂದಾ ನದಿ ಭೋರ್ಗರೆಯುತ್ತ ಹರಿಯುತ್ತದೆ. ಅದರ ದಡದ ಎತ್ತರದ ಜಾಗದಲ್ಲಿ ಕಟ್ಟಿರುವ ಈ ಪುಟ್ಟ ಹೋಟೆಲ್‍ನ ಮಾಲೀಕ ಶರ್ಮಾ ಮತ್ತು ಅವನ ಶ್ರೀಮತಿ ತಾವೇ ಸ್ವತಃ ಕೆಲಸಗಾರರಾಗಿ, ಅಡುಗೆಯವರಾಗಿ ದುಡಿಯುತ್ತಾರೆ. ಸುತ್ತಲಿನ ಜಾಗದಲ್ಲಿ ಹಲವಾರು ತರಕಾರಿಗಳನ್ನು ಬೆಳೆದಿದ್ದಾರೆ. ಅವನ್ನೇ ಅಡುಗೆಗೆ ಬಳಸುತ್ತಾರೆ.

ನಾಲ್ಕು ವರ್ಷಗಳ ಹಿಂದೆ ನಮ್ಮ ಹುಡುಗರು ಕೊಟ್ಟಿದ್ದ ರಾಗಿಯನ್ನು ಬೀಜ ಮಾಡಿಕೊಂಡು ಮತ್ತೆ ಮತ್ತೆ ರಾಗಿ ಬೆಳೆದಿದ್ದಾರೆ. ಕರ್ನಾಟಕದಿಂದ ಬಂದವರಿಗೆ ರಾಗಿರೊಟ್ಟಿ ಮಾಡಿಕೊಡುತ್ತಾರೆ. ಸುಂದರ ಹೂಗಳ ಪ್ರವೇಶದ್ವಾರವಿದೆ. ಒಂದೆರಡು ದಿನಗಳು ತಣ್ಣಗೆ ಕಾಲ ಕಳೆಯಬೇಕಾದ ಜಾಗ. ಊಟದ ಸವಿಯಂತೂ ನೆನಪಿಸಿಕೊಳ್ಳುವ ಹಾಗಿತ್ತು. ಅವರಿಂದ ಗೊತ್ತಾದ ಮತ್ತೊಂದು ಸಂಗತಿ ಎಂದರೆ ಅವರ ಮೊದಲಿನ ಹೋಮ್‌ಸ್ಟೇ ಸೈಟ್ ಸಮೇತ ಕೊಚ್ಚಿ ಹೋಯಿತಂತೆ! ತೀರಾ ಇತ್ತೀಚೆಗೆ ಇದನ್ನು ಕಟ್ಟಿಕೊಂಡಿದ್ದಾರೆ.

ಮಾರನೆಯ ಬೆಳಗ್ಗೆ ನಮ್ಮ ಚಾರಣ ಶುರುವಾಯಿತು. ಹದಿನಾಲ್ಕು ಕಿ.ಮೀ ಚಾರಣಮಾಡಿ ಘಾಂಗೇರಿಯಾ ಎಂಬ ಬೇಸ್ ಕ್ಯಾಂಪ್ ತಲುಪುವುದು ಅವತ್ತಿನ ಕಾರ್ಯಕ್ರಮ. ಕೆಲವರಿಗೆ ಕೈತಪ್ಪಿ ಹೋಗಿರುವ ಒಂದು ದಿನವನ್ನು ಹೇಗಾದರೂ ಮಾಡಿ ಮರುಸಂಪಾದಿಸುವ ಆಸೆ. ಹಾಗಾಗಿ ಇವತ್ತೇ ಘಾಂಗೇರಿಯಾ ತಲುಪಿ ಸಾಧ್ಯವಾದರೆ ಹೂವಿನ ಕಣಿವೆಗೂ ಹೋಗಿಬರೋಣ ಎಂಬ ಠರಾವನ್ನು ಮಂಡಿಸಿದರು. ಎಲ್ಲರೂ ಉಘೇ ಉಘೇ ಎಂದರು. ನಮ್ಮ ಟ್ರೆಕ್ ನಾಯಕರು ಮಾತ್ರ ಒಳಗೊಳಗೇ ನಗುತ್ತಿದ್ದರು. ಆಗಲಿ ಹೋಗೋಣ ಬಿಡಿ ಎಂದರು. ನಾಲ್ಕು ಕಿಲೋಮೀಟರ್ ದೂರದ ಪುಲ್ನಾ ಎಂಬ ಹಳ್ಳಿಯವರೆಗೆ ಜೀಪ್ ಪ್ರಯಾಣವೆಂದೂ ಅಲ್ಲಿಂದ ಮುಂದಕ್ಕೆ ಹತ್ತು ಕಿ.ಮೀ ಚಾರಣವೆಂದೂ ತೀರ್ಮಾನವಾಗಿ ಅದರಂತೆ ಜೀಪಿನಲ್ಲಿ ಪುಲ್ನಾ ತಲುಪಿ ಚಾರಣ ಆರಂಭಿಸಿದೆವು. ಚಾರಣದ ಆರಂಭದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ಏಳು ಸಾವಿರ ಅಡಿಗಳು. ಆರಂಭದ ಒಂದೆರಡು ಕಿಲೋಮೀಟರುಗಳು ಹೆಚ್ಚೂ ಕಡಿಮೆ ಸಮತಟ್ಟಾದ ದಾರಿ. ನಂತರ ಶುರುವಾಯಿತು ನೋಡಿ. ಒಮ್ಮೆಗೇ ಸುಮಾರು ಹತ್ತುಸಾವಿರ ಅಡಿಗಳಿಗೆ ಏರುವ ಕಡಿದಾದ ದಾರಿ. ಹನ್ನೊಂದು ಗಂಟೆಗೆ ಘಾಂಗೇರಿಯಾ ತಲುಪಿಬಿಡೋಣ ಎಂದು ಹೊರಟ ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ ಒಂದೂವರೆ ಗಂಟೆ! ಎಲ್ಲರೂ ಬಸವಳಿದು ಹೋಗಿದ್ದರು. ಯಾರ ಬಾಯಿಂದಲೂ ಹೂವಿನ ಕಣಿವೆಯ ಮಾತೇ ಬರಲಿಲ್ಲ. ಉಂಡು ರೂಂ ಸೇರಿಕೊಂಡೆವು. ಅಲ್ಲಿಯ ಹೋಟೆಲ್ ರೂಂಗಳು ತಣ್ಣಗೆ ಕೊರೆಯುತ್ತಿದ್ದವು.

ಮರುದಿನ ಬೆಳಿಗ್ಗೆ ಏಳು ಗಂಟೆಗೆ ನಮ್ಮ ಹೂವಿನಕಣಿವೆಯ ಚಾರಣ ಆರಂಭವಾಯಿತು. ಉತ್ತರಾಖಂಡ ರಾಜ್ಯದ ಚಮೋಲಿಯ ಭ್ಯುಂದರ್ ಕಣಿವೆಯಲ್ಲಿರುವ ಈ ಹೂವಿನಸಂಪತ್ತು ಇರುವ ಆವರಣವನ್ನು 1980ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಗಿದ್ದು, ಪ್ರವೇಶಿಸುವವರಿಗೆ 150 ರೂಪಾಯಿ ಪ್ರವೇಶ ದರವಿದೆ. ಪ್ರವೇಶ ದರ ಸಂಗ್ರಹಿಸುವುದನ್ನು ಬಿಟ್ಟರೆ ಈ ಪ್ರಾಧಿಕಾರದಿಂದ ಮತ್ಯಾವ ಘನಂದಾರಿ ಕೆಲಸಗಳೂ ಆಗುತ್ತಿಲ್ಲ. ಆರಂಭದಿಂದಲೇ ಕಡಿದಾದ ಏರನ್ನು ಏರುತ್ತಾ ಸಮುದ್ರಮಟ್ಟದಿಂದ ಸುಮಾರು 12,400 ಅಡಿ ಎತ್ತರದಲ್ಲಿರುವ ಕಣಿವೆಯನ್ನು ಸೇರಬೇಕು. ಉದ್ದಕ್ಕೂ ಕಣಿವೆಯ ಆಸುಪಾಸಿನ ಪರ್ವತ ಶಿಖರಗಳಲ್ಲಿರುವ ನೀರ್ಗಲ್ಲುಗಳು ಕರಗಿ ಪುಷ್ಪಾವತಿ ನದಿಯಾಗಿ ಹರಿಯುತ್ತವೆ. ಅದರ ವೇಗವನ್ನು ಕಣ್ತುಂಬಿಕೊಂಡೆವು.

ಕಣಿವೆ ಸೇರಲು ಸುಮಾರು ನಾಲ್ಕು ಕಿ.ಮೀಗಳಷ್ಟು ಕಡಿದಾದ ದಾರಿ ಸವೆಸಬೇಕು. ಇಲ್ಲಿ ಕುದುರೆ ಇತ್ಯಾದಿಗಳ ನೆರವಿಲ್ಲ. ಬುಟ್ಟಿಯಲ್ಲಿ ಹೊತ್ತು ಸಾಗಿಸುವ ವ್ಯವಸ್ಥೆ ಇದೆ. ಸಾಗುವ ದಾರಿಯ ಇಕ್ಕೆಲಗಳಲ್ಲಿ ರಾಶಿರಾಶಿ ಹೂಗಳು ಅರಳಿರುತ್ತವೆ. ಉದ್ದಕ್ಕೂ ರಾಗಾ, ಪೈನ್ ಮತ್ತು ಸ್ಥಳೀಯ ಜಾತಿಯ ನೇಪಲ್ ಮರಗಳು ಸಿಗುತ್ತವೆ. ರಾಗಾ ಮರಗಳು ಹಿಮಾಲಯದ ಒಂದು ಹಂತದಲ್ಲಿ ಕಾಣಸಿಗುತ್ತವೆ. ಇವುಗಳ ತೆಳ್ಳನೆಯ ತೊಗಟೆಯನ್ನು ಭೋಜಪತ್ರ ಎನ್ನುತ್ತಾರೆ. ಕಾಗದದ ಶೋಧನೆಗೆ ಮುನ್ನ ಈ ಭೋಜಪತ್ರವನ್ನು ಕಾಗದದ ಹಾಗೆ ಬಳಸಲಾಗುತ್ತಿತ್ತು. ಬರಹಗಾರನಾದುದರಿಂದ ನನಗೆ ಬೇಕಾಗುತ್ತದೆ ಎಂದು ರಾಣ ಮತ್ತು ರಾವತ್ ಅನೇಕ ಭೋಜಪತ್ರಗಳನ್ನು ತಂದುಕೊಟ್ಟರು!

ಐದು ಗಂಟೆಗಳ ಚಾರಣದ ನಂತರ ಹೂವಿನಕಣಿವೆಯನ್ನು ಪ್ರವೇಶಿಸಿದೆವು. ಸುಮಾರು ಮೂವತ್ತನಾಲ್ಕು ಚದರ ಮೈಲುಗಳ ಈ ಕಣಿವೆಯಲ್ಲಿ ಅನೇಕ ಜಾತಿಯ ಆರ್ಕಿಡ್‍ಗಳು, ನೂರಾರು ಥರದ ಹೂಗಳು ಒಟ್ಟಿಗೇ ಅರಳುತ್ತವೆ. ಜುಲೈ ಮತ್ತು ಆಗಸ್ಟ್ ತಿಂಗಳುಗಳು ಹೂಗಳನ್ನು ನೋಡಲು ಸುಸಮಯ. ಇದನ್ನು ಕುರಿಗಾಹಿಗಳು ಮೊದಲಿಗೆ ನಂದನವನ, ಹೂವಿನಕಣಿವೆ ಎಂದೆಲ್ಲ ಕರೆಯುತ್ತಿದ್ದರಂತೆ. ಆಗೆಲ್ಲ ಇದು ನೋಡಲು ಬರುವ ಜಾಗವಾಗಿರಲಿಲ್ಲ; ಬದಲಿಗೆ ಕುರಿಮೇಕೆಗಳಿಗೆ ಸೊಂಪಾದ ಮೇವಿನ ಜಾಗವಾಗಿತ್ತು. ಹತ್ತು ದಿನಗಳ ಅವಧಿಗೊಮ್ಮೆ ಈ ಆವರಣ ಹೊಸದಾಗುತ್ತದೆ! ಈಗ ಅರಳಿರುವ ಹೂಗಳು ಇನ್ನು ಹತ್ತು ದಿನಗಳ ನಂತರ ಕಾಣಸಿಗುವುದಿಲ್ಲ; ಆಗ ಕಾಣಸಿಗುವ ಎಲ್ಲ ಹೂಗಳೂ ಈಗ ಇರುವುದಿಲ್ಲ. ಇದರ ಬಹುತ್ವವನ್ನು ಕಾಣಲು ಅನೇಕ ಸಲ ಬರಬೇಕು. ಜಗತ್ತಿನ ಸುಂದರ ತಾಣಗಳಲ್ಲಿ ಇದೂ ಒಂದು. ಬಹುಪಾಲು ಎಲ್ಲವೂ ಸಣ್ಣ ಸಣ್ಣ ಹೂಗಳು. ಬ್ರಹ್ಮಕಮಲವೊಂದೇ ಹಿಮಾಲಯದಲ್ಲಿ ಅರಳುವ ದೊಡ್ಡಗಾತ್ರದ ಹೂ. ಅದು ಹೇಮಕುಂಡ್‍ನಲ್ಲಿ ಹೆಚ್ಚು ಕಾಣಸಿಗುತ್ತದೆ.

ಹೂಕಣಿವೆ ಪ್ರವೇಶಿಸಿದ ನಾವೆಲ್ಲ ಅಲ್ಲಲ್ಲಿ ಕೂತು ನಿಂತು ಮತ್ತೂ ಮುಂದೆ ಹೋಗುವ ಉತ್ಸಾಹದಲ್ಲಿದ್ದೆವು. ಮುಂದೆ ಒಂದು ಜಾಗದಲ್ಲಿ ಬಹಳ ಹೂಗಳು ಅರಳಿವೆ ಎಂಬ ಮಾಹಿತಿ ಬಂತು. ಆದರೆ ನಮ್ಮ ಗುಂಪಿನ ಮೂವರಿಗೆ ಎತ್ತರದ ಜಾಗಗಳಲ್ಲಿ ಉಂಟಾಗುವ ಅನಾರೋಗ್ಯದ ತೊಂದರೆ ಕಾಣಿಸಿಕೊಂಡದ್ದರಿಂದ ಅವರನ್ನು ಸಾಧ್ಯವಾದಷ್ಟು ಬೇಗ ಕೆಳಗೆ ಕರೆತರುವ ಅಗತ್ಯವಿತ್ತು. ಆದರೂ ಸಾಕಾಗುವಷ್ಟು ಹೊತ್ತು ಹೂವಿನ ಕಣಿವೆಯಲ್ಲಿ ಕಳೆದೆವು. ಎತ್ತರದ ಜಾಗವಾಗಿರುವುದರಿಂದ ಆಮ್ಲಜನಕದ ಕೊರತೆ ಇರುವ ಕಾರಣಕ್ಕೆ ಅನೇಕ ರೀತಿಯ ಅನುಭವಗಳು ಆಗುತ್ತವೆ. ತೆಳುವಾದ ಹೂವಿನ ಘಮಲು ಹರಡಿರುತ್ತದೆ. ಮನಸ್ಸೆಲ್ಲ ತಣಿದುಹೋಗಿ ನಿಸರ್ಗದೆದುರಿಗೆ ಸುಮ್ಮನೆ ವಿರಮಿಸುತ್ತದೆ.

ಸುಮಾರು 530 ವಿವಿಧ ರೀತಿಯ ಹೂಗಳ ಈ ಕಣಿವೆಯ ಪ್ರಮುಖ ಹೂಗಳೆಂದರೆ: ಪ್ರಿಮುಲ, ಆಂಡ್ರೋಸೇಸಸ್, ಸ್ಯಾಕ್ರಿಫೇಜಸ್, ಸೆಡಮ್ಸ್, ಹಳದಿ ಮತ್ತು ಕೆಂಪು ಪೊಟೆಂಟಿಲ್ಲಾಸ್, ಗ್ಯೂಮ್ಸ್, ಗೆರಾನಿಯಮ್ಸ್, ಆಸ್ಟರ್ಸ್, ಮುಂತಾದ ನೂರಾರು ಜಾತಿಯ ಹೂಗಳ ರಾಶಿ ರಾಶಿ! ನರ್ತಿಸುವ ಹೂಗಳೆಂದು ಕರೆಯುವ ಕ್ಯಾಂಪನೂಲ ಲ್ಯಾಟಿಪೋಲಿಯಾ ಹೂಗಳು ಯಥೇಚ್ಛ ಅರಳಿದ್ದವು. ಮತ್ತೂ ವಿಶೇಷವೆಂದರೆ ಬ್ರಹ್ಮಕಮಲದ ಜಾತಿಗೆ ಸೇರಿದ ಕಪ್ಪುಹೂಗಳು ಗೊಂಡೆ ಬಿಚ್ಚಿದ್ದವು.

ಅಲ್ಲಿ ಹಿಮಾಲಯದ ರಾಣಿ ಎಂದು ಕರೆಯುವ ಬ್ಲೂ ಪ್ಲಾಪಿ (ಪ್ರಿಮುಲ ಮ್ಯಾಕ್ರೋಫಿಲಾ) ಹೂವುಗಳೇ ಜಾಸ್ತಿ. ಆದರೆ ನಾವು ಹೋದ ಕಾಲಕ್ಕೆ ಅದರ ಅರಳುವಿಕೆಯ ಕಾಲ ಮುಗಿದುಹೋಗಿತ್ತು. ಹೇಮಕುಂಡ್‍ನಲ್ಲಿ ಇನ್ನೂ ಇವೆ ಎನ್ನುವ ಮಾಹಿತಿ ಬಂತು. ಅಲ್ಲಿ ಕಂಡ ಅತ್ಯಂತ ಬೇಸರದ ದೃಶ್ಯವೆಂದರೆ ಅಷ್ಟೊಂದು ಕೋಮಲವಾದ ಹೂಗಿಡಗಳನ್ನು ತುಳಿದು ನುಗ್ಗಿ ತಮ್ಮ ಅದೇ ಮುಖಗಳನ್ನು ದಶದಿಕ್ಕಿಗೆ ತಿರುಗಿಸುತ್ತ ಫೋಟೊ ತೆಗೆಸಿಕೊಳ್ಳುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಹಿಗ್ಗಾಮುಗ್ಗ ಹೂಗಿಡಗಳನ್ನು ತುಳಿಯುತ್ತಿರುವುದು. ಹೂಗಳನ್ನು ಕೀಳುತ್ತಿರುವವರನ್ನು ಕಂಡಾಗ ಇವರನ್ನು ಇಲ್ಲಿಗೆ ಬಿಡದಿರುವುದೇ ಮೇಲೆನ್ನಿಸಿತು. ಐದು ಗಂಟೆಯ ಒಳಗೆ ಕೆಳಗೆ ಇಳಿದು ಪ್ರಾಧಿಕಾರದ ಕಚೇರಿಯಲ್ಲಿ ವಾಪಸ್ಸು ಬಂದಿರುವುದನ್ನು ದಾಖಲಿಸಬೇಕಿದ್ದುದರಿಂದ ಅಷ್ಟು ಹೊತ್ತಿಗೆ ಎಲ್ಲರೂ ಕೆಳಗೆ ಬಂದೆವು. ಅಲ್ಲಿಂದ ಕಾಣುವ ಹೇಮಕುಂಡ್ ಸಾಹಿಬ್‍ಗೆ ಮರುದಿನ ಹೋಗಿಬರಲು ಸಮಯದ ಕೊರತೆ ಉಂಟಾದುದರಿಂದ ಅಲ್ಲಿಂದಲೇ ವಂದನೆ ಹೇಳಿದೆವು.

ಮರುದಿನ ವಿಶ್ರಾಂತಿ ಮತ್ತು ಡೆಹ್ರಾಡೂನ್‌ನ ಮಾರುಕಟ್ಟೆಗಳಲ್ಲಿ ಅಡ್ಡಾಡಿ ಅಲ್ಲಿಯ ವಿಶೇಷ ಸವಿತಿಂಡಿಗಳನ್ನು ಸವಿದೆವು. ಎಂಟನೆಯ ದಿನ ಸಂಜೆಯ ವಿಮಾನದಲ್ಲಿ ಬೆಂಗಳೂರಿಗೆ ಬಂದಾಗ ಸಂಜೆ ಏಳು ಗಂಟೆಯಾಗಿತ್ತು. ಮನಸ್ಸಿನ ತುಂಬ ಹೂಗಳೇ ತುಂಬಿಕೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು