ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರುಡುಗೆಯ ಸಿದ್ಧಪ್ಪನ ವಜ್ರ

Last Updated 25 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಸುತ್ತಲೂ ಹಸಿರು ರಾಶಿ, ಕಣ್ಣು ಹಾಯಿಸಿದಷ್ಟು ಬಹುದೂರದವರೆಗೆ ಕಾಣುವ ಬೆಟ್ಟಗಳ ಸಾಲುಗಳು. ಅವುಗಳ ಮೇಲೆ ಗಾಳಿ ಯಂತ್ರಗಳು, ಹಸಿರನ್ನೇ ಹೊದಿಕೆ ಮಾಡಿಕೊಂಡ ಬೆಟ್ಟದ ತಪ್ಪಲು...

ಇದು ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಸಂರಕ್ಷಿತ ಅರಣ್ಯ ಪ್ರದೇಶದ ವಿವರಣೆ. ಈ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿವೆ. ಚಾರಣದ ಮಾರ್ಗಗಳೂ ಇವೆ. ಅವುಗಳಲ್ಲಿ ಮುಖ್ಯವಾದ ಧಾರ್ಮಿಕ ಪ್ರವಾಸಿ ತಾಣ ಸಿದ್ಧಪ್ಪನ ವಜ್ರ.

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಸಮೀಪದ ಯರೇಹಳ್ಳಿ ಬಳಿ ಸಿದ್ಧಪ್ಪನ ವಜ್ರ ಇದೆ. ಸುತ್ತಲೂ ಸಸ್ಯ ಸಂಪತ್ತಿನ ರಾಶಿ. ನಡುವೆ ಸಿದ್ದೇಶ್ವರ ಮಂದಿರವಿದೆ. ಇದನ್ನು ಗವಿಸಿದ್ದೇಶ್ವರ ಮಂದಿರ ಎಂದೂ ಕರೆಯುತ್ತಾರೆ. 1820-1905 ರವರೆಗೆ ಈ ಸ್ಥಳದಲ್ಲಿ ಅವಧೂತ ಪರಂಪರೆಯ ಗುರುಗಳಾದ ಸಿದ್ಧಪುರುಷ ಕೊಳಾಳು ಕೆಂಚಾವಧೂತರು ತಪಸ್ಸು ಮಾಡುತ್ತಿದ್ದರು ಎಂದು ಸ್ಥಳೀಯ ಹೇಳುತ್ತಾರೆ.

ಗವಿಸಿದ್ದೇಶ್ವರ ಮಂದಿರದ ಹಿಂಭಾಗದಲ್ಲಿ ಪುಟ್ಟ ಝರಿ ಹರಿಯುತ್ತದೆ. ಸಿಹಿ ನೀರಿನ ಝರಿ ಅದು. ಈ ನೀರಿಗೆ ಚರ್ಮ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂಬುದು ಭಕ್ತರ ನಂಬಿಕೆ. ಇದರ ಪಕ್ಕದಲ್ಲಿಯೇ ಗಂಗೆಬಾವಿ ಇದೆ. ಇದು ಪುರಾತನಕಾಲದ್ದು ಎಂದು ಹೇಳಲಾಗುತ್ತದೆ. ಎಂತಹ ಬರಗಾಲದಲ್ಲೂ ಇದು ಬತ್ತಿದ ನಿದರ್ಶನಗಳಿಲ್ಲವಂತೆ.

ಇಲ್ಲಿ ಸಮೀಪದಲ್ಲೇ 150 ರಿಂದ 200 ವರ್ಷಗಳಷ್ಟು ಹಳೆಯದಾದ ಆಲದ ಮರವಿದೆ. ಮೊದಲು, ಈ ಮರದ ಹಿಂಭಾಗದಿಂದಲೇ ಚಾರಣದ ಹಾದಿ ಇತ್ತು. ಈಗ ಮರಗಿಡ, ಮುಳು ಪೊದೆಯಾಗಿ ಮುಚ್ಚಿ ಹೋಗಿದೆ. ಆದರೆ, ಸ್ಥಳೀಯರ ನೆರವು ಪಡೆದರೆ, ಚಾರಣ ಮಾಡಬಹುದು. ಇಲ್ಲಿಂದ ಚಾರಣ ಮಾಡುತ್ತಾ ಗುಡ್ಡವನ್ನೇರಿದರೆ ಜೋಗಿಮಟ್ಟಿ ಅರಣ್ಯದ ಗಿರಿ ಸಾಲುಗಳನ್ನು ನೋಡಬಹುದು. ಗುಡ್ಡ ಮೇಲೇರಿ ನಿಂತರೆ, ಚಳಿಗಾಲದಲ್ಲಿ ವಿಪರೀತ ಚಳಿ ಜತೆಗೆ, ಜೋರಾಗಿ ಗಾಳಿ ಬೀಸುತ್ತದೆ. ಇದೇ ಕಾರಣಕ್ಕೆ ಗಿರಿಗಳ ತುದಿಯಲ್ಲಿ ಗಾಳಿಯಂತ್ರಗಳನ್ನು ಜೋಡಿಸಿದ್ದಾರೆ. ಇಲ್ಲಿ ಅತ್ಯಂತ ಹೆಚ್ಚು ವೇಗದಲ್ಲಿ ಬೀಸುವ ಗಾಳಿಯೂ ದೇಹವನ್ನು ನಡುಗುವಂತೆ ಮಾಡುತ್ತದೆ.

ವನ್ಯಜೀವಿ ತಾಣ

ಈ ಸ್ಥಳ ನೂರಾರು ವನ್ಯಜೀವಿಗಳಿಗೆ ನೆಲೆಯಾಗಿದೆ. ಶುಷ್ಕ ಎಲೆ ಉದುರಿಸುವ ಕುರುಚಲು ಸಸ್ಯ ವರ್ಗವಿರುವ ಈ ಅರಣ್ಯದಲ್ಲಿ ಮತ್ತಿ, ಹೊನ್ನೆ ತೇಗ, ತಡಸಲು, ದಿಂಡುಗ ಶ್ರಿಗಂಧ, ಬೀಟೆ, ಬಿದಿರು ಜಾಲಿ, ನೆಲ್ಲಿ, ಬೋರೆ, ಕವಳೆ, ಸೀಗೆ, ಗಜ್ಜುಗ, ದರ್ಬೆಯಂತಹ ಮರ–ಗಿಡಗಳಿವೆ. ಅಷ್ಟೇ ಅಲ್ಲ, ಚಿರತೆ, ಕರಡಿ, ಜಿಂಕೆ, ಕಾಡುಕುರಿ, ಕತ್ತೆಕಿರುಬ, ಕಾಡುಹಂದಿ, ಮುಳ್ಳುಹಂದಿ, ಚಿಪ್ಪಿನ ಹಂದಿ, ಮುಂಗುಸಿ, ಕಾಡುಬೆಕ್ಕು, ಭಾರಿ ಗಾತ್ರದ ಹೆಬ್ಬಾವುಗಳು, ವಿವಿಧ ಜಾತಿಯ ಹಾವುಗಳಿವೆ. ಹಾದಿ ಬದಿಯಲ್ಲಿ ನವಿಲುಗಳು ಕಾಣಿಸುತ್ತವೆ. ಕಾಡು ಕೋಳಿಗಳು ಸೇರಿದಂತೆ 150ಕ್ಕೂ ಅಧಿಕ ವಿವಿಧ ಜಾತಿಯ ಪಕ್ಷಿಗಳಿವೆ ಇಲ್ಲಿ.

ಮುಂಜಾನೆ ಮತ್ತು ಸಂಜೆಯಲ್ಲಿ ಈ ಜಾಗದಲ್ಲಿ ಅಡ್ಡಾಡುತ್ತಿದ್ದರೆ ವನ್ಯಜೀವಿಗಳ ದರ್ಶನವಾಗುತ್ತದೆ. ಇದು ಬೆಟ್ಟ–ಗುಡ್ಡಗಳಿರುವ ಕಾರಣ, ಚಾರಣಿಗರಿ ಗಂತೂ ಹೇಳಿಮಾಡಿಸಿದ ತಾಣ. ಪಕ್ಷಿ ವೀಕ್ಷಣೆ ಹವ್ಯಾಸವಿರುವವರಿಗೆ ಭರಪೂರ ಹಕ್ಕಿಗಳನ್ನು ಗುರುತಿಸಬಹುದು. ಸಮಯವನ್ನೂ ಕಳೆಯಬಹುದು.

ಸಸ್ಯಶಾಸ್ತ್ರಜ್ಞರು, ಗಿಡಮೂಲಿಕೆ ತಜ್ಞರು, ಸಸ್ಯಗಳನ್ನು ಗುರುತಿಸುವವರಿಗೂ ಈ ಜಾಗ ಬಹಳ ಇಷ್ಟವಾಗುತ್ತದೆ. ಜತೆಗೆ, ಗುಡ್ಡದ ಮೇಲಿಂದ ಸೂರ್ಯೋದಯ ಕಣ್ತುಂಬಿಕೊಳ್ಳಬಹುದು. ಬಿಸಿಲು ಏರಿದಂತೆ, ಗುಡ್ಡಗಳ ಮೇಲೆ ಮೂಡುವ ನೆರಳು–ಬೆಳಕಿನಾಟ ನಯನ ಮನೋಹರ. ಕ್ಯಾಮೆರಾ ಕೈಯಲ್ಲಿದ್ದರೆ, ಅದ್ಭುತ ದೃಶ್ಯಗಳನ್ನು ಕ್ಲಿಕ್ಕಿಸಬಹುದು.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಹಿರಿಯೂರು ತಲುಪಿ, ನಂತರ ಐಮಂಗಲ ಬಳಿ ಎಡಕ್ಕೆ ತಿರುವು ಪಡೆದು 14 ಕಿ.ಮೀ.ದೂರದ ಕೊಳಾಳು ತಲುಪಬೇಕು. ಅಲ್ಲಿಂದ ಮುಂದೆ ಬಲಕ್ಕೆ ‘ಸಿದ್ದಪ್ಪನ ವಜ್ರ’ಕ್ಕೆ ದಾರಿ ಎಂಬ ನಾಮಫಲಕ ಸಿಗುತ್ತದೆ. ಅಲ್ಲಿಂದ ಪುನಃ 4 ಕಿ.ಮೀ.ಸಾಗಬೇಕು. ಗೂಗಲ್ ಮ್ಯಾ‍ಪ್‌ನಲ್ಲಿ ಇದರ ವಿವರಣೆ ಲಭ್ಯವಿದೆ. ಚಿತ್ರದುರ್ಗದಿಂದ ಬರುವವರು ಇಂಗಳದಾಳ್‌, ಕೆನ್ನೆಡಲು ಮಾರ್ಗದಲ್ಲಿ 34 ಕಿ.ಮೀ ಕ್ರಮಿಸಬೇಕು.

ಇಲ್ಲಿಗೆ ಅಷ್ಟಾಗಿ ಬಸ್‌ ವ್ಯವಸ್ಥೆ ಇಲ್ಲ. ಬಾಡಿಗೆ ವಾಹನ / ಸ್ವಂತ ವಾಹನದಲ್ಲಿ ಹೋಗುವುದು ಉತ್ತಮ. ದ್ವಿಚಕ್ರ ವಾಹನ, ಲಘುವಾಹನ ಮಾತ್ರ ಸಾಗಬಹುದಾದ ದಾರಿಯಿದೆ. ಸಂಪೂರ್ಣ ಅರಣ್ಯಪ್ರದೇಶದಲ್ಲಿ ಬೆಟ್ಟ-ಗುಡ್ಡಗಳ ನಡುವೆ ಸಾಗುವಾಗ ಎರಡು ಬೃಹತ್ ಹಳ್ಳಗಳು ಸಿಗುತ್ತವೆ. ಮಳೆಗಾಲದಲ್ಲಿ ಇವು ಮೈದುಂಬಿರುತ್ತವೆ.

ಊಟ–ವಸತಿ ವ್ಯವಸ್ಥೆ

ಇಲ್ಲಿ ಉಳಿಯಲು ಯಾವುದೇ ವ್ಯವಸ್ಥೆ ಇಲ್ಲ. ಕುಡಿಯುವ ನೀರು ಮಾತ್ರ ಸಿಗುತ್ತದೆ. ಹೋಟೆಲ್, ಅಂಗಡಿಗಳೂ ಇಲ್ಲ. ಪ್ರವಾಸಿಗರೇ ಬುತ್ತಿ ಕಟ್ಟಿಕೊಂಡೇ ಹೋಗಬೇಕು.

ಸೂಕ್ತ ಸಮಯ

ಡಿಸೆಂಬರ್ ಮತ್ತು ಜನವರಿ ತಿಂಗಳು ಭೇಟಿಗೆ ಸೂಕ್ತ ಸಮಯ. ಬೆಳಿಗ್ಗೆ 7ಕ್ಕೆ ಹೊರಟು ಸಂಜೆ 5 ರಿಂದ 6 ಗಂಟೆಗೆ ಹಿಂದಿರುಗಬೇಕು. ಸ್ವಂತವಾಹನ/ ಬಾಡಿಗೆ ವಾಹನ ಮಾಡಿಕೊಂಡು ಹೋಗುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT