ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲ್ಫಿ ತಿನ್ನಿ ಕುಫ್ರಿಗೆ ಬನ್ನಿ

ಬಿರು ಬೇಸಿಗೆಯಲ್ಲಿ ತಂಪು ತಂಪು ಕೂಲ್ ಕೂಲ್ ಪ್ರವಾಸ
Last Updated 30 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೆವರಿಳಿಸಿ ಸುಸ್ತು ಮಾಡುವ ಬೇಸಿಗೆಯಲ್ಲಿ ರಪ್ಪನೆ ತಣ್ಣನೆಯ ಗಾಳಿ ಬೀಸಿದರೆ.... ಹಾಯ್ ಎನಿಸುತ್ತದೆ ಜೀವಕ್ಕೆ. ಅಂಥ ಚಿಲ್–ಥ್ರಿಲ್ ಭಾವಕ್ಕೇ ಜನ ತಂಪು ಪ್ರದೇಶಗಳನ್ನು ಅರಸಿ ಹೋಗುವುದು. ಮಕ್ಕಳಿಗೆ ಬೇಸಿಗೆ ರಜೆ ಬಂತೆಂದರೆ ಅವರ ಕಾಟ, ಸೆಕೆಯ ಕಾಟವನ್ನು ತಾಳಲಾರದೆ ಅಲ್ಲಿ ಇಲ್ಲಿ ಸುತ್ತಲೇಬೇಕು. ಆದರೆ, ಸ್ಥಳದ ಆಯ್ಕೆಯ ವಿಚಾರದಲ್ಲಿ ಎಲ್ಲರೂ ಚೂಸಿಯೇ. ಹಿಂದಿನ ಕಾಲದಂತೆ ಈಗಿನ ತಲೆಮಾರು ಹಳೆಯ ಪ್ರಸಿದ್ಧ ಸ್ಥಳಗಳಿಗೆ ಹೋಗುವ ಬದಲು, ಹುಡುಕೀ ಹುಡುಕೀ ಹೊಸ ಹೊಸ ಜಾಗಗಳಿಗೆ ಪ್ರವಾಸಕ್ಕೆಂದು ಹೋಗುತ್ತಾರೆ. ಮುಖವನ್ನು ಕೆಂಪು ಮಾಡುತ್ತಿರುವ ಸುಡು ಬೇಸಿಗೆಯಲ್ಲೂ ಕೂಲ್ ಎನಿಸುವ ಅಂತಹ ಕೆಲ ಪ್ರದೇಶಗಳತ್ತ ಇಣುಕುನೋಟ

***

‘ಓ ಹೋ ಹಿಮಾಲಯ...’

‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ನಾಯಕ, ನಾಯಕಿ ಶಿಮ್ಲಾ ಮನಾಲಿಯಲ್ಲಿ ಹಾಡಿ ಕುಣಿದ ಹಾಡಿದು. ಅದನ್ನು ನೋಡಿದವರ ಕನಸಿನ ಶಿಮ್ಲಾ ಮನಾಲಿ ಕಾಡಿದ್ದರೆ ಅಚ್ಚರಿಯೇನಲ್ಲ. ಬೆಂಗಳೂರಿನಿಂದ ಚಂಡೀಗಡಕ್ಕೆ ರೈಲು ಅಥವಾ ವಿಮಾನದಲ್ಲಿ ಪ್ರಯಾಣಿಸಿದರೆ, ಅಲ್ಲಿಂದ ಶಿಮ್ಲಾ ತಲುಪಬಹುದು. ಶಿಮ್ಲಾದಿಂದ ಮನಾಲಿಯ ಪ್ರಯಾಣ ಕೂಡ ಹಿತಕರವೇ. ಬಿಸಿಯಲ್ಲದ ಹವೆ, ಕಣ್ ಹಾಯಿಸಿದಷ್ಟು ಬೆಟ್ಟ ಗುಡ್ಡಗಳು ಮತ್ತು ಗಿಡ ಮರಗಳು.

ಹಿಮಾಚಲಪ್ರದೇಶದ ಮನಾಲಿಯಿಂದ ಸುಮಾರು 12- 13 ಕಿ.ಮೀ ಹತ್ತಿರದ ಆಕರ್ಷಕ ಹಾಗೂ ರಮಣೀಯ ತಾಣ ಸೋಲಾಂಗ್ ಕಣಿವೆ. ಮನಾಲಿಯಿಂದ ಸೋಲಾಂಗ್ ಕಣಿವೆಗೆ ಹೋಗುವ ಇಕ್ಕೆಲಗಳಲ್ಲೂ ದೇವದಾರು–ಪೈನ್ ಮರಗಳು, ಸೇಬಿನ ತೋಟಗಳು; ಇವೆಲ್ಲವನ್ನೂ ಮೀರಿಸಿದ ಆಕರ್ಷಣೆಯೆಂದರೆ ಸುತ್ತಮುತ್ತ ಕಾಣುವ ಹಿಮ. ಬಿರುಬೇಸಿಗೆಯ ಸಂಜೆಯಲ್ಲೂ ಶಾಲು, ಸ್ವೆಟರ್ ಇಲ್ಲದೆ ಹೊರಬರಲು ಕಷ್ಟವೆನಿಸುವ ಚಳಿ. ಕಳೆದ ತಿಂಗಳು ನಾವು ಅಲ್ಲಿಗೆ ಪ್ರವಾಸ ಹೋಗಿದ್ದೆವು. ಇದ್ದಕ್ಕಿದ್ದಂತೆ ನಾವು ಮಾರ್ಚಿ ಏಪ್ರಿಲ್‌ನಿಂದ ಡಿಸೆಂಬರ್‌ಗೆ ಹಾರಿಬಿಟ್ಟೆವೇನೋ ಎಂಬ ಅನುಮಾನ ಹುಟ್ಟಿಸುವಷ್ಟು ಕುಳುಕುಳು ಚಳಿ.

ಕುದುರೆ ಅಥವಾ ಚಮರಿಮೃಗ ಅಥವಾ ಮೋಟಾರ್ ವಾಹನದಲ್ಲಿ ಸೋಲಾಂಗ್ ಕಣಿವೆಯ ಹಿಮದ ಬೆಟ್ಟವನ್ನು ಹತ್ತಬೇಕು. ಸಾಗರ ತೀರದಲ್ಲಿ ನಿಂತು ನೋಡಿದರೆ ಹೇಗೆ ಕಣ್ಣುದ್ದಕ್ಕೂ ನೀರೇ ಕಾಣುತ್ತದೋ, ಹಾಗೆಯೇ ಇಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಹಿಮವೇ ಹಿಮ. ಹಿಮದ ಗುಡ್ಡ, ಹಿಮ ಕರಗಿ ನೀರಾಗಿ ಹರಿವ ಪುಟ್ಟ ಪುಟ್ಟ ಕಾಲುವೆಗಳು, ಹಿಮದ ಜಾರುಗುಪ್ಪೆಗಳು, ಕೈಯಲ್ಲಿ ಹಿಡಿದು ಪುಡಿಪುಡಿ ಮಾಡಬಹುದಾದ ಹಿಮದ ಗುಡ್ಡೆಗಳು, ಒಬ್ಬರಿಗೊಬ್ಬರು ಹಿಮವನ್ನು ಎರಚಾಡಿ ಆಟವಾಡಬಹುದಾದ ರಮಣೀಯ ಸ್ಥಳ ಸೋಲಾಂಗ್ ವ್ಯಾಲಿ.

ಸ್ಕೀಯಿಂಗ್, ಪ್ಯಾರಾಗ್ಲೈಡಿಂಗ್, ಟ್ರೆಕ್ಕಿಂಗ್, ಕುದುರೆ ಸವಾರಿ, ರಾತ್ರಿ ಟೆಂಟ್‌ ವಾಸ, ಸ್ನೋ ಸ್ಕೂಟರ್ ಸವಾರಿ, ಝಾರ್ಬಿಂಗ್, ಇಳಿಜಾರುಗಳಲ್ಲಿ ಸೈಕಲ್ ಸವಾರಿ, ರೋಪ್ ವೇ ಯಾನ, ಜೀಪ್ ಸಫಾರಿಗೆ ಇದು ಹೆಸರುವಾಸಿ. ಇಲ್ಲಿನ ಪ್ರಮುಖ ಆಹಾರವೆಂದರೆ ಖಟ್ಟಾ, ಬಬ್ರು ಮತ್ತು ಅಕ್ತೋರಿ. ಸಿಹಿಗುಂಬಳದಿಂದ ಮಾಡುವ ಖಟ್ಟಾ ಆ ಸುತ್ತಲ ಪ್ರದೇಶದ ಪ್ರಸಿದ್ಧ ರಸ್ತೆಬದಿಯ ತಿಂಡಿಯೂ ಹೌದು. ಒಣಮಾವಿನ ಪುಡಿಯನ್ನು ಸೇರಿಸಿ ತಯಾರಿಸುವ ಖಟ್ಟಾದ ಪ್ರತೀ ತುಣುಕೂ ನಾಲಗೆಗೆ ಹಿತಕಾರಿ. ಕಚೋರಿಯಂತಹ ಬಬ್ರು ಇಲ್ಲಿನ ಮತ್ತೊಂದು ವಿಶೇಷ ಸ್ನ್ಯಾಕ್ಸ್. ಎಣ್ಣೆಯಲ್ಲಿ ಕರಿದುಮಾಡುವ ಬಬ್ರು ಚಟ್ನಿಯೊಂದಿಗೆ ರುಚಿಕರ. ಅಕ್ತೋರಿ ಒಂದು ರೀತಿಯ ಕೇಕ್ ಎನ್ನಬಹುದು. ಜೇನುತುಪ್ಪವನ್ನು ಮೇಲೆ ಸವರಿಕೊಂಡು ಆನಂದಿಸಬಹುದಾದ ಖಾದ್ಯ ಇದು.

ಹಿಮಾಚಲ ಪ್ರದೇಶದ ಒಂದು ಸಣ್ಣ ಗಿರಿಧಾಮ ಕುಫ್ರಿ. ಕುಫ್ರಿಗೂ ಚಳಿಗೂ ಅವಿನಾಭಾವ ಸಂಬಂಧ. ಕುಫ್ರಿಯಲ್ಲಿ ನಾವು ನೋಡಲೇಬೇಕಾದ ಸ್ಥಳವೆಂದರೆ ಫನ್ ವರ್ಲ್ಡ್. ಸಮುದ್ರ ಮಟ್ಟದಿಂದ ಸುಮಾರು 2800 ಮೀಟರ್ ಎತ್ತರದಲ್ಲಿರುವ ಇದು, ಪ್ರಪಂಚದ ಅತಿ ಎತ್ತರದ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಒಂದಾಗಿದೆ. ಕುಫ್ರಿಯಲ್ಲಿ ಬೆಟ್ಟದ ಮೇಲೆ ಹೋಗಲು ಕುದುರೆ ಬಿಟ್ಟು ಬೇರೆ ಯಾವ ಸಾಧನವೂ ಇಲ್ಲ. ಕರಗಿ ನೀರಾಗಿ ಹರಿಯುವ ಹಿಮ, ಅಲ್ಲಲ್ಲಿ ಕಾಣುತ್ತಲೇ ಸಿಗುವ ಹಿಮದ ಕರಣೆ... ದಕ್ಷಿಣ ಭಾರತದವರಿಗೆ ಕೈಗೇ ಸ್ವರ್ಗ ಸಿಕ್ಕಂತೆ ಭಾಸ.

ಕುಫ್ರಿಯಲ್ಲಿ ಮಾಡಲೇಬೇಕಾದ ಅತ್ಯಂತ ವಿಶಿಷ್ಟವಾದ ಚಟುವಟಿಕೆ ಎಂದರೆ ಯಾಕ್ ರೈಡ್‌. ಚುಮು ಚುಮು ಚಳಿಯಲ್ಲಿ ಚಮರೀಮೃಗದ ಮೇಲಿ ಕುಳಿತು ಕೈಲಿ ಗನ್ ಹಿಡಿದು ತೆಗೆಸಿಕೊಳ್ಳುವ ಫೋಟೊ ಆಜೀವಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಇದರೊಟ್ಟಿಗೆ ಹಿಮಾಚಲದವರಂತೆ ವೇಷಭೂಷಣ ತೊಡುವ ಅವಕಾಶವೂ ಸದಾ ಹಸಿರಾಗಿರುವಂತಹ ನೆನಪಾಗಿರಲಿದೆ.

ಹಿಮಾಚಲದ ಸಾಂಪ್ರದಾಯಿಕ ಆಹಾರವೆಂದರೆ ಬಿಳಿ ಬ್ರೆಡ್ಡು ಮತ್ತು ಕೆಂಪು ಮಾಂಸ. ಧಮ್ ಎನ್ನುವುದು ಅಲ್ಲಿಯವರ ಸಮಾರಂಭಗಳಲ್ಲಿ ಉಣಬಡಿಸುವ ಆಹಾರ. ಪತ್ರೊಡೆ, ಚೀಲೆ, ಬಬ್ರು ಅಲ್ಲಿನ ಸ್ನ್ಯಾಕ್ಸ್‌ಗಳು. ಗೋಧಿ ಎಲೆ ಮತ್ತು ಗೋಧಿ ಹಿಟ್ಟಿನಿಂದ ಮಾಡಿದ ಅಕ್ತೋರಿ ಅಲ್ಲಿ ಆತಿಥ್ಯಕ್ಕೆ ನೀಡುವ ಆಹಾರ.

ಮಾಳ

ಉಡುಪಿಯ ಕಾರ್ಕಳದ ಸಮೀಪವಿರುವ ಮಾಳ ಎಂಬ ತಂಪು ಪ್ರದೇಶಕ್ಕೆ ರೈಲುಮಾರ್ಗವಾಗಿಯೂ, ಬಸ್ಸಿನಿಂದಲೂ, ಖಾಸಗಿ ವಾಹನದ ಮೂಲಕವೂ ತಲುಪಬಹುದು. ಕಾರ್ಕಳದಿಂದ ಟ್ಯಾಕ್ಸಿಯೂ ಲಭ್ಯ. ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ. ದೂರದ ಮಾಳ ಪ್ರಕೃತಿ ಸೊಬಗಿನಿಂದ ಕೂಡಿದ ತಂಪಾಗಿರುವ ಹಳ್ಳಿ.

ದಕ್ಷಿಣ ಕನ್ನಡದ ಬೇಸಿಗೆಯ ಬಿಸಿಯಲ್ಲಿ ತಂಪಾದ ಸ್ಥಳ ಈ ಮಾಳ. ಇಲ್ಲಿನ ಕಾಡಲ್ಲಿ ನಡೆಯುತ್ತ ಹಸಿರು ಸೊಗಸನ್ನು ಅನುಭವಿಸಿಯೇ ತೀರಬೇಕು. ಝುಳು ಝುಳು ಹರಿವ ಜಲಧಾರೆಯ ಸಂಗೀತ ಕರ್ಣಾನಂದಕರ.

ಸಹಸ್ರಾರು ಜೀವರಾಶಿಗಳನ್ನು, ಅನೇಕ ಪುಟ್ಟ ತೊರೆಗಳನ್ನು ಹೊತ್ತ ಮಾಳ ಕಾರ್ಕಳಕ್ಕೊಂದು ಶಿಖರಪ್ರಾಯ ಪ್ರವಾಸಿ ತಾಣ, ಚಾರಣಿಗರ ಸಗ್ಗ. ಹಾದಿಯುದ್ದಕ್ಕೂ ಹಸಿರರಾಶಿಯೇ. ಹಕ್ಕಿ ಪಕ್ಷಿಗಳಿಂಚರಕ್ಕೆ ಕಿವಿಗೊಟ್ಟರೆ ಬೇರೆಯದೇ ಲೋಕಕ್ಕೆ ಅಡಿಯಿಟ್ಟಂತೆನಿಸುತ್ತದೆ. ಮನಸು ಪ್ರಶಾಂತವಾಗುತ್ತದೆ. ಇಡೀ ಮಾಳದ ಹಾದಿ ಕಣ್ಣಿಗೆ ರಸಗವಳ.

ದಾನಗುಂಡಿ ಜಲಪಾತ, ಕುರೆಂಗಲ್ ಜಲಪಾತ, ಪಶ್ಚಿಮಘಟ್ಟದ ಮೇಲ್ಮೈಯಿಂದ ಜಿಗಿಜಿಗಿದು ಮಲೆನಾಡಿಗೆ ಸೇರುತ್ತದೆ. 500-600 ಅಡಿ ಎತ್ತರದಿಂದ ಕುಣಿಯುತ್ತಾ ಬಂಡೆಗಲ್ಲಿಗೆ ರಾಚುವ ದಾನಗುಂಡಿಯ ಜಲಪಾತದ ಆರ್ಭಟ ನೋಡಲು ಮಳೆಗಾಲದಲ್ಲಿ ಇಲ್ಲಿಗೆ ಮತ್ತೊಮ್ಮೆ ಬರಬೇಕು. ನೀರಯಾನದ ಸಂಗೀತಕ್ಕೆ ಕಿವಿಯಾನಿಸುವ ಬಯಕೆ ಮತ್ತೆ ಮತ್ತೆ ಮೈದುಂಬುತ್ತದೆ.

ಜಲಪಾತದ ಆಚೆಗೆ ಕಾಡಜನರೇ ನಿರ್ಮಿಸಿದ ಅಡಿಕೆ ಮರದ ತೂಗು ಸೇತುವೆ ಮೇಲೆ ನಿಂತು ಸುತ್ತಲೂ ನೋಡಲು ಬಲು ರಮ್ಯ. ಮಾಳದಿಂದ ಸುಮಾರು 7 ಕಿಮೀ ದೂರದಲ್ಲಿ ಗಂಗಾಮೂಲ ಎಂಬ ಪವಿತ್ರ ಗುಹಾ ಕ್ಷೇತ್ರವಿದೆ. ತುಂಗಾ ಹಾಗೂ ಭದ್ರಾನದಿಗಳ ಉಗಮ ಸ್ಥಾನವಾದ್ದರಿಂದ ಪವಿತ್ರ ತೀರ್ಥ ಸಂಗಮವನ್ನು ಕಾಣಬಹುದು. ಮಾಳದಲ್ಲಿಯೂ ಹೋಂ ಸ್ಟೇ ಇದೆ. ಪ್ರಸನ್ನವಾದ ಈ ಪ್ರದೇಶದಲ್ಲಿ ರಾತ್ರಿ ತಂಗಿ ನಿಶಾಚರ ಮೃಗಪಕ್ಷಿಗಳ ಧ್ವನಿಯನ್ನು ಆಲಿಸಬಹುದು.

ಬಿಸಿಲಿನೊಂದಿಗೆ ಹೆಜ್ಜೆಹಾಕಿ!

ಮಳೆಗಾಲದಲ್ಲಿ ಮಳೆ ಆನಂದಿಸಲು ಹೋಗುವಂತೆ, ಚಳಿಗಾಲದಲ್ಲಿ ಚಳಿ ಆನಂದಿಸಲು ಹೋಗುವಂತೆ ಬೇಸಿಗೆಯಲ್ಲಿ ಬಿಸಿಲನ್ನು ಆಸ್ವಾದಿಸುವ ಮನಸ್ಸು ನಿಮಗಿದೆಯೇ? ಹಾಗಾದರೆ ಹಂಪಿಗೆ ಬನ್ನಿ. ಎತ್ತ ನೋಡಿದರೂ ಬಂಡೆಗಲ್ಲುಗಳು ಇರುವ, ಆ ಬಂಡೆಗಲ್ಲುಗಳ ನಡುವೆ ಸ್ಮಾರಕಗಳು ಪವಡಿಸಿರುವ ಈ ಊರಿನಲ್ಲಿ ಮಧ್ಯಾಹ್ನದ ಬಿಸಿಲು ಅಕ್ಷರಶಃ ಕೆಂಡವನ್ನೇ ಸುರಿಸುತ್ತದೆ. ಬಂಡೆಗಲ್ಲಿನ ಮೇಲೆ ಬರಿಗಾಲಲ್ಲಿ ನಾಲ್ಕಾರು ಹೆಜ್ಜೆ ಇಟ್ಟರೂ ಸಾಕು, ಬರೆ ಎಳೆದಂತೆ ಚರ್ಮ ಸುಟ್ಟು ಬಣ್ಣ ಬದಲಾಯಿಸುತ್ತದೆ.

ನೆತ್ತಿಯ ಮೇಲಿನಿಂದ ಸೂರ್ಯ ‘ಪರಮಾತ್ಮ’ನಂತೂ ಒಂದೇಸಮನೆ ಕೆಂಡವನ್ನು ಸುರಿಸುತ್ತಾನೆ. ಇಲ್ಲಿನ ದೇವಾಲಯಗಳಲ್ಲಿರುವ ದೇವಾನುದೇವತೆಗಳು ಅದು ಹೇಗೆ ಈ ತಾಪವನ್ನು ಸಹಿಸಿಕೊಂಡಿದ್ದಾರೋ ಏನೋ. ಅಂದಹಾಗೆ, ಇಂತಹ ಬಿಸಿಲಿನಲ್ಲಿ, ಬಿಸಿಗಾಳಿಯಲ್ಲಿ ಮಾತಂಗ ಪರ್ವತವನ್ನೋ ಅಂಜನಾದ್ರಿ ಬೆಟ್ಟವನ್ನೋ ಏರುವ ಮಜವೇ ಬೇರೆ! ಗುಂಡಿಗೆ ಗಟ್ಟಿ ಇದ್ದವರು ಖಂಡಿತ ಈ ಸಾಹಸಕ್ಕೆ ಕೈಹಾಕಬಹುದು. ಅಂಜನಾದ್ರಿ ಬೆಟ್ಟದ ಕಲ್ಲುಸಂದಿಯಿಂದ ತೂರಿಬರುವ ತಣ್ಣನೆಯ ಹವೆಯನ್ನು ಯಾವ ಎ.ಸಿ. ಯಂತ್ರವೂ ಕೊಡುವುದಿಲ್ಲ ಬಿಡಿ.

ಬಿಸಿಲಲ್ಲಿ ಬಂದವರಿಗೆ ಇಲ್ಲಿನ ಪ್ರತೀ ಸ್ಮಾರಕದ ಮುಂದೆಯೂ ಎಳನೀರು, ಮಜ್ಜಿಗೆ, ಜ್ಯೂಸ್‌ನ ಸಮಾರಾಧನೆ. ಬೇಸಿಗೆಯಲ್ಲಿ ತಣ್ಣನೆಯ ಐಸ್ ಕ್ರೀಮ್ ತಿನ್ನುವ ಹಿತವಿದೆಯಲ್ಲಾ, ನೆತ್ತಿ ಸುಡುವಾಗ ತಣ್ಣನೆಯ ನಿಂಬೆ ಪಾನಕ ಕುಡಿವುದಿದೆಯಲ್ಲಾ, ಬಿಸಿಲಲ್ಲಿ ಓಡಿ ಬಂದವರಿಗೆ ತಣ್ಣನೆಯ ಗಾಳಿ ಬೀಸುವುದಿದೆಯಲ್ಲಾ – ಇವೆಲ್ಲ ಕಷ್ಟದ ಬದುಕನ್ನು ಸುಲಭವಾಗಿಸುವ ಮಾರ್ಗಗಳ ಬಿಂಬಗಳು. ಅಂತೆಯೇ ಪ್ರವಾಸ ಕೂಡ. ಅದನ್ನು ಅನುಭವಿಸಿಯೇ ಆನಂದಿಸಬೇಕು.

ಬಿಸಿಲೆ ಘಾಟ್

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಿಂದ 35 ಕಿ.ಮೀ. ದೂರದಲ್ಲಿರುವ ಬಿಸಿಲೆ ಎಂಬ ಘಟ್ಟ ಪ್ರದೇಶವು 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವಾಗಿ ಹರಡಿಕೊಂಡಿದೆ. ಬಿಸಿಲೆಯಿಂದ ಆರಂಭವಾಗಿ ಕುಕ್ಕೆ ಸುಬ್ರಹ್ಮಣ್ಯದ ತನಕ ಹಬ್ಬಿರುವ ಈ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ, ದೊಡ್ಡಬೆಟ್ಟ, ಪುಷ್ಪಗಿರಿ ಮತ್ತು ಕನ್ನಡಿಕಲ್ಲು ಎಂದು ಹೆಸರಿಸಲಾದ ಅನೇಕ ಬೆಟ್ಟಗುಡ್ಡಗಳಿವೆ.

ಅರಣ್ಯ ಎಂದಮೇಲೆ ಕಾಡುಪ್ರಾಣಿಗಳಿಗೇನು ಕೊರತೆ? ಇಲ್ಲಿ ಕಾಡುಹಂದಿ, ಕಡವೆ, ಜಿಂಕೆ, ಆನೆ, ಕಾಡುಕೋಣಗಳನ್ನು ನೋಡಬಹುದು. ಸುತ್ತಲಿನ ಪರಿಸರವನ್ನು ವೀಕ್ಷಿಸಲು ಬಿಸಿಲೆ ವೀಕ್ಷಣಾ ಗೋಪುರವನ್ನೂ ನಿರ್ಮಿಸಲಾಗಿದೆ. ಇಲ್ಲಿಂದ ಸುತ್ತಲಿನ ಬೆಟ್ಟದುಡ್ಡಗಳು ಮತ್ತು ಗಿರಿ ಹೊಳೆ ಬಲು ಸುಂದರವಾಗಿ ಕಾಣುತ್ತದೆ. ಭಾರತದ ಅತ್ಯಂತ ಸುಂದರವಾದ ಮಳೆಕಾಡುಗಳಲ್ಲಿ ಇದೂ ಒಂದು.

ನಿತ್ಯ ಹರಿದ್ವರ್ಣವನವಾದ ಬಿಸಿಲೆ ಘಾಟ್‌ನಲ್ಲಿ ಚಾರಣಕ್ಕೂ ಅವಕಾಶವಿದೆ. ಮಧ್ಯೆ ಮಧ್ಯೆ ಕಲ್ಲು ಬಂಡೆಗಳಿಂದ ಹರಿವ ನೀರಿನ ಝರಿ ಕಣ್ಣಿಗೆ ಹಬ್ಬ. ಇಲ್ಲಿನ ಬಿಸ್ಲೆ ಗುಡ್ಡ ಅಥವಾ ಸನ್ನಿ ಗುಡ್ಡ ಅತ್ಯಂತ ಮನೋಹರವಾದ ಪ್ರವಾಸಿ ತಾಣ.

***

ಗೋಪಿನಾಥಂ ಬೆಟ್ಟ

ಚಿಕ್ಕಬಳ್ಳಾಪುರದ ನಂದಿ ಬೆಟ್ಟದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ದೇವಿಶೆಟ್ಟಿಹಳ್ಳಿ ಸಮೀಪದ ಗೋಪಿನಾಥಂ ಬೆಟ್ಟ ಅತ್ಯಂತ ಪ್ರಶಾಂತ ಮತ್ತು ತಣ್ಣಗಿನ ಚಿಕ್ಕ ಬೆಟ್ಟ. ಝಿಗ್ ಝಾಗ್ ರೀತಿಯಲ್ಲಿ ಇರುವ ಬೆಟ್ಟದ ಹಾದಿಯನ್ನು ನಡೆದೂ ಕ್ರಮಿಸಬಹುದು, ಕಾರಿನಲ್ಲಿಯೂ ಹೋಗಬಹುದು. ಇಲ್ಲಿಂದ ಪಂಚಗಿರಿಗಳಾದ ನಂದಿಗಿರಿ, ಚಂದ್ರಗಿರಿ, ಬ್ರಹ್ಮಗಿರಿ, ಹೇಮಗಿರಿ ಮತ್ತು ಸ್ಕಂದಗಿರಿ ಬೆಟ್ಟಗಳ ನೋಟ ನಯನ ಮನೋಹರ. ಈ ಬೆಟ್ಟದಲ್ಲಿ 600 ವರ್ಷಗಳಷ್ಟು ಹಳೆಯದಾದ ಉದ್ಭವಮೂರ್ತಿ ಎನ್ನಲಾಗುವ ಗೋವರ್ಧನಗಿರಿ ಲಕ್ಷ್ಮೀ ನರಸಿಂಹಸ್ವಾಮಿಯ ದೇಗುಲವಿದೆ. ಮತ್ತೊಂದು ಬದಿಯಲ್ಲಿ ಕೃಷ್ಣ ಗುಹೆ ಕೂಡ ಇದೆ. ಬೆಟ್ಟದ ಮೇಲೆ ಅಲುಗಾಡದೆ ನಿಲ್ಲುವುದೇ ನಿಜಕ್ಕೂ ಒಂದು ಸಾಹಸ. ಹೆಂಗಸರು ತಮ್ಮ ಸೀರೆಯನ್ನು ಭದ್ರವಾಗಿಟ್ಟುಕೊಳ್ಳಲು ದೊಡ್ಡ ಸರ್ಕಸ್ಸನ್ನೇ ನಡೆಸಬೇಕು. ಎಂಥ ನಿಡುಬೇಸಿಗೆಯಲ್ಲೂ ರೊಯ್ಯನೆ ರಭಸದಿಂದ ಬೀಸುವ ತಂಗಾಳಿಯೇ ಗೋಪೀನಾಥಂ ಬೆಟ್ಟದ ವಿಶೇಷ. ಒಂದು ಮದುವೆಗೆಂದು ನಾನು ಗೋಪೀನಾಥಂ ಬೆಟ್ಟಕ್ಕೆ ಹೋಗಿದ್ದಾಗ ನನ್ನ ಸೀರೆಯಲ್ಲಿ ಗಾಳಿ ತುಂಬಿಕೊಂಡು ಮಣಿಪುರಿ ನೃತ್ಯದ ವೇಷಭೂಷಣವನ್ನು ನೆನಪಿಸುವಂತಿತ್ತು. ಬೆಟ್ಟದ ಮೇಲ್ಮೈಯಿಂದ ಸುತ್ತಲಿನ ಹಸಿರು ಪರಿಸರ ಅಗೋಚರ ಆನಂದವನ್ನು ತುಂಬುತ್ತದೆ. ಆಸ್ತಿಕರಿಗಾಗಲಿ, ನಾಸ್ತಿಕರಿಗಾಗಲಿ ಇದೊಂದು ರಮ್ಯ ತಾಣ. ಪ್ಯಾರಾಗ್ಲೈಡಿಂಗ್ ಕೂಡ ಮಾಡಬಹುದಾದ ಅವಕಾಶ ಇಲ್ಲಿದೆ. ಒತ್ತಡದ ನಡುವೆ ಕೆಲಸ ಮಾಡುವವರಿಗೆ ಒಂದು ವೀಕ್‍ಎಂಡ್ ನಿರುಮ್ಮಳವಾಗಿ ಕಾಲಕಳೆಯಬಹುದಾದ ಸ್ಥಳ ಗೋಪೀನಾಥಂ ಬೆಟ್ಟ.

***

ದೇವರಮನೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದೇವರಮನೆ ನಿಜಕ್ಕೂ ದೇವರ ಮನೆಯಂತೆಯೇ ಭಾಸ. ದೇವರಮನೆ ಬೆಟ್ಟ ತನ್ನ ಮೇಲೆಲ್ಲ ಬರಿಯ ಹಸಿರು ಹೊದಿಕೆಯನ್ನೇ ಹೊದ್ದಿದೆ. ಬೇಸಿಗೆ ಕಾಲದಲ್ಲೂ ಹುಲ್ಲುಗಾವಲಿನಂತಿರುವ ದೇವರಮನೆ ನಗರ ಪ್ರದೇಶದ ಜನರಿಗೆ ಸ್ವರ್ಗದಂತೆ ಕಂಡರೆ ಅಚ್ಚರಿ ಪಡಬೇಕಿಲ್ಲ.

ದೇವರಮನೆ ಕಣಿವೆಗಳ ಮಧ್ಯದ ಒಂದು ಹಳ್ಳಿ. ಸುತ್ತ ಪುಟ್ಟಪುಟ್ಟ ಹಸಿರಿನ ಗುಡ್ಡಗಳು, ನಡುವೆ ಕಣಿವೆ. 800 ವರ್ಷಗಳ ಇತಿಹಾಸ ಹೊಂದಿರುವ ಕಾಲಭೈರವೇಶ್ವರ ಸ್ವಾಮಿ ದೇಗುಲವೂ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಸುತ್ತಮುತ್ತಲ ಬಹುತೇಕರಿಗೆ ಈತ ಮನೆದೇವರು. ಆ ಕಾರಣದಿಂದಲೋ ಏನೋ ಇದಕ್ಕೆ ದೇವರಮನೆ ಎಂದು ಹೆಸರು.

ಬೆಟ್ಟದ ಮೇಲೆ ಬೀಸುವ ಹಿಮದ ಗಾಳಿಗೆ ಕಣ್ರೆಪ್ಪೆ ತೇವವಾಗುತ್ತದೆ. ಮುಂಗುರುಳು ನಾಟ್ಯವಾಡುತ್ತದೆ. ಮಧ್ಯಮ ಮಟ್ಟದ ಟ್ರೆಕ್ಕಿಂಗ್ ಮತ್ತು ಛಾಯಾಗ್ರಹಣಕ್ಕೆ ಹೇಳಿಮಾಡಿಸಿದ ಸ್ಥಳ ದೇವರಮನೆ. ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಆಟವಾಡಲು ಅಲ್ಲಿಯೇ ಒಂದು ನದೀಪಾತ್ರವಿದೆ. ಒಂದು ಕೊಳವೂ ಇದೆ. ರಾತ್ರಿಯ ವೇಳೆ ಕಾಡಾನೆಗಳು ನೀರು ಕುಡಿಯಲು ಈ ಕೊಳದ ಬಳಿ ಬರುತ್ತವೆಯಂತೆ.

ದೇವರಮನೆ ಬೆಟ್ಟದ ಆಸುಪಾಸಿನಲ್ಲಿಯೇ ಹೊನ್ನಮ್ಮ ಹಳ್ಳ ಫಾಲ್ಸ್, ಹೆಬ್ಬೆ ಫಾಲ್ಸ್‌ಗಳಿವೆ. ಮೈದಾದಿ ವ್ಯೂ ಪಾಯಿಂಟ್ ನೋಡಲೇಬೇಕಾದ ಸ್ಥಳ. ಅಪ್ಪೆ ಗುಂಡಿ, ಪಾಂಡವರ ಬೆಟ್ಟ, ಝರಿ ಫಾಲ್ಸ್, ಮಗಜಹಳ್ಳಿ ಫಾಲ್ಸ್, ಕೊಡಿಗೆ ಫಾಲ್ಸ್, ದೇವೃಂದ ಪ್ರಸನ್ನರಾಮೇಶ್ವರ ದೇಗುಲ ಇವೆಲ್ಲವುಗಳು ಪ್ರವಾಸಿಗರ ಮೈಮನ ತಣಿಸುತ್ತವೆ. ಫಾಲ್ಸ್‌ಗಳು ಈಗ ಸೊರಗಿದರೂ ಅಲ್ಲಿನ ತಾಣಗಳು ತಂಪನ್ನು ಎರೆಯುತ್ತವೆ.

ಈ ಪ್ರದೇಶದಿಂದ ದಕ್ಷಿಣಕನ್ನಡದ ಕೆಲ ಭಾಗಗಳನ್ನು ವೀಕ್ಷಿಸಬಹುದು. ಬಹುಶಃ ಪ್ರಚಾರದ ಕೊರತೆಯಿಂದ ಹೊರಗಿನವರು ಇಲ್ಲಿಗೆ ಬರುವುದು ತೀರ ಹೆಚ್ಚೇನಲ್ಲ. ಆದರೆ ಚಿಕ್ಕಮಗಳೂರಿನವರು ಆಗಾಗ್ಗೆ ಇಲ್ಲಿಗೆ ಬಂದು ದೇವನ ದರ್ಶನವನ್ನು ಪಡೆಯುತ್ತಾರೆ. ಅಲ್ಲಿಯೇ ಒಂದೆರಡು ದಿನ ತಂಗಲು ಹೋಂ ಸ್ಟೇ ಕೂಡ ಇದೆ. ಹೀಗಾಗಿ ಬಯಸಿದರೆ ರಾತ್ರಿಯಲ್ಲಿ ಗಾಳಿಯ ಕಿರು ಸದ್ದನ್ನು ಆಲಿಸುತ್ತಾ ಮಲಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT