ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಶಿಲ್ಪದ ಅಂದಕ್ಕೆ ಸೋತ ಮನಸು...

Last Updated 9 ಜನವರಿ 2019, 19:31 IST
ಅಕ್ಷರ ಗಾತ್ರ

ಒಡಿಶಾದ ಪುರಿಯ ಕಡಲ ತೀರದಲ್ಲಿ ಓಡಾಡುತ್ತಿದ್ದೆವು. ದೂರದಲ್ಲೊಂದು ಗುಂಪು ಕಾಣಿಸಿತು. ಅತ್ತ ಧಾವಿಸಿ ನೋಡಿದರೆ ಸ್ಥಳೀಯ ಮೀನುಗಾರನೊಬ್ಬ ಆ ದಡದಲ್ಲಿ ಸುಂದರ ಮತ್ಸ್ಯಕನ್ಯೆಯ ಮರಳು ಶಿಲ್ಪ ರಚಿಸಿದ್ದ. ಮೊದಲಬಾರಿಗೆ ಮರಳು ಶಿಲ್ಪ ಕಂಡ ನಾನು ಮೊಬೈಲ್‍ನಲ್ಲಿ ಅದನ್ನು ಕ್ಲಿಕ್ಕಿಸಿದ್ದಕ್ಕೆ ಆತ ಹತ್ತುರೂಪಾಯಿ ಕಕ್ಕಿಸಿಕೊಂಡಿದ್ದು ಬೇರೆ ಮಾತು.

ಸುದರ್ಶನ್ ಪಟ್ನಾಯಕ್ ಎಂಬ ಮರಳುಶಿಲ್ಪದ ಕಲಾ ಮಾಂತ್ರಿಕ ಗಲ್ಲಿ ಗಲ್ಲಿಗಳಲ್ಲೂ ಮರಳು ಶಿಲ್ಪಗಾರರು ಸೃಷ್ಟಿಯಾಗುವಂತೆ ಈ ಕಲೆಯನ್ನು ಉತ್ತೇಜಿಸುತ್ತಿದ್ದಾರೆ. ಹಾಗಾಗಿಯೇ, ಪುರಿಯ ಕಡಲತೀರದಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಹೆಜ್ಜೆ ಹೆಜ್ಜೆಗೂ ಕಲಾವಿದರ ಕೈಯಲ್ಲಿ ಅರಳಿದ ವಿಧ ವಿಧ ಮರಳು ಶಿಲ್ಪಗಳು ಆಕರ್ಷಿಸುತ್ತವೆ. ಏನಾದರೂ, ವಿಶೇಷ ದಿನಗಳಿದ್ದಾಗ ಭೇಟಿನೀಡಿದರೆ, ಆ ಕಾರ್ಯಕ್ರಮಕ್ಕೆ ಹೊಂದುವಂತಹ ಶಿಲ್ಪಗಳೇ ನಿಮ್ಮನ್ನು ಸ್ವಾಗತಿಸಿ, ಅಚ್ಚರಿ ಮೂಡಿಸುತ್ತವೆ.

ನಾವು ಕಡಲತಡಿಯ ಮರಳು ಶಿಲ್ಪಗಳನ್ನು ನೋಡಿಕೊಂಡು ಪುರಿಯಲ್ಲಿರುವ ಮೇಫೆರ್ ಹೋಟೆಲ್‌ ಹಿಂಭಾಗದಲ್ಲಿರುವ ಗೋಲ್ಡನ್‌ ಸ್ಯಾಂಡ್‌ ಇನ್ಸಿಸ್ಟಿಟ್ಯೂಟ್‌ಗೆ ಭೇಟಿ ನೀಡಿದವು. ಇದು ಸುದರ್ಶನ ಪಟ್ನಾಯಕ್ ಸ್ಥಾಪಿಸಿದ ಕೇಂದ್ರ. ಮರಳು ಶಿಲ್ಪ ಕಲಾವಿದರ ತರಬೇತಿ ಸಂಸ್ಥೆಯೂ ಹೌದು. ಈ ಕೇಂದ್ರದೊಳಗೆ ಅಡಿಯಿಡುತ್ತಿದ್ದಂತೆ ಮರಳು ಶಿಲ್ಪದ ತರಬೇತಿ ಪಡೆಯುವ ಕಲಾವಿದರು ಭೇಟಿಯಾದರು. ಈ ವಿದ್ಯಾಲಯದಿಂದ ಪ್ರತಿ ವರ್ಷ ಸುಮಾರು 50 ಕಲಾವಿದರು ತರಬೇತಿ ಪಡೆದು ಹೊರಬರುತ್ತಿದ್ದಾರೆ. ಪ್ರತಿ ದಿನ ಸಂಜೆ 4 ರಿಂದ 6 ರವರೆಗೆ ಇಲ್ಲಿ ಕಲಾವಿದರ ಮರಳು ಕಲಾ ಪ್ರದರ್ಶನ ಕೂಡ ನಡೆಯುತ್ತದೆ.

ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಒಡಿಶಾ ಇಲ್ಲಿನ ಮರಳು ಕಲಾವಿದರನ್ನು ಪ್ರೋತ್ಸಾಹಿಸಿ ಈ ಕಲೆಗೆ ಪ್ರಚಾರ ನೀಡುತ್ತಿದೆ. ಇದಕ್ಕಾಗಿ 2015 ರಿಂದ ಪುರಿ ಕೋನಾರ್ಕ್‌ ಮುಖ್ಯರಸ್ತೆಯಲ್ಲಿರುವ ಚಂದ್ರಭಾಗಾ ತೀರದಲ್ಲಿ ಪ್ರತಿ ಡಿಸೆಂಬರ್‌ನಲ್ಲಿ ಅಂತರಾಷ್ಟ್ರೀಯ ಮರಳು ಶಿಲ್ಪ ಕಲಾ ಹಬ್ಬವನ್ನು ಆಚರಿಸುತ್ತಿದೆ. ಇದರಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಲಾವಿದರು ಭಾಗವಹಿಸುತ್ತಾರೆ. ಕೋನಾರ್ಕ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಖ್ಯಾತಿಯ ಕೊನಾರ್ಕ್‌ ನೃತ್ಯ ಹಬ್ಬದ ಸಮಯದಲ್ಲೇ ಇದನ್ನು ಆಯೋಜಿಸಿ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಡಿಸೆಂಬರ್‌ನಲ್ಲಿ ಪುರಿಗೆ ಭೇಟಿಕೊಡುವ ಯೋಚನೆ ಇದ್ದರೆ, ಈ ಹಬ್ಬಗಳ ದಿನಾಂಕವನ್ನು ತಿಳಿದುಕೊಂಡು, ಪ್ರವಾಸವನ್ನು ನಿಗದಿಡಿಸಿಕೊಳ್ಳಬಹುದು. ಇದರಿಂದ, ಪ್ರವಾಸಿ ತಾಣಗಳನ್ನು ನೋಡುವ ಜತೆಗೆ, ಮರಳು ಶಿಲ್ಪದ ಪ್ರದರ್ಶನ ಮತ್ತು ಕೋನಾರ್ಕ್‌ ಅಂತರರಾಷ್ಟ್ರೀಯ ನೃತ್ಯಪ್ರದರ್ಶನವನ್ನು ವೀಕ್ಷಿಸಬಹುದು. ಮಾತ್ರವಲ್ಲ, ಶುದ್ಧ ಮರಳು ಮತ್ತು ನೀರನ್ನಷಟೇ ಬಳಸಿ ಅದ್ಭುತ ಕಲಾಕೃತಿಗಳನ್ನು ಸೃಷ್ಟಿಸುವ ಕಲಾವಿದರನ್ನು ಭೇಟಿಯಾಗಬಹುದು. ಜತೆಗೆ, ವಿಷಯಾಧಾರಿತವಾಗಿ ರಚನೆಯಾಗುವ ನೂತನ ಶಿಲ್ಪಗಳು, ವಿನ್ಯಾಸಗಳನ್ನು ಕಣ್ತುಂಬಿಕೊಳ್ಳಬಹುದು.

ಪ್ರವಾಸಿಗರಿಗೂ ತರಬೇತಿ

ಪದ್ಮಶ್ರೀ ಪುರಸ್ಕೃತ ಮರಳುಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ್, ಈ ಕಲೆಯನ್ನು ಭಾರತದ ಉದ್ದಗಲಕ್ಕೂ ವಿಸ್ತರಿಸುವ ತವಕದಲ್ಲಿದ್ದಾರೆ. ಈಗಾಗಲೇ ಇಲ್ಲಿ ತರಬೇತಿ ಪಡೆದಿರುವವರು ದಕ್ಷಿಣ ಭಾರತದ ಕಡಲ ತೀರದಲ್ಲಿ ಮರಳು ಶಿಲ್ಪ ರಚನೆಯಲ್ಲಿ ತೊಡಗಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಪಟ್ನಾಯಕ್, ಪುರಿಗೆ ಭೇಟಿನೀಡುವ ಪ್ರವಾಸಿಗರಿಗೆ ಒಂದು ವಾರದ ತರಬೇತಿ ಶಿಬಿರವನ್ನೂ ತಮ್ಮ ಕೇಂದ್ರದಿಂದ ಆಯೋಜಿಸುತ್ತಿದ್ದಾರೆ. ಆಸಕ್ತರು ಸುದರ್ಶನ ಅವರನ್ನು ನೇರವಾಗಿ ಅವರ ಇಮೇಲ್ sudarshansand@gmail.com ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಪುರಿ ತಲುಪುವುದು ಹೇಗೆ ?

ಬೆಂಗಳೂರಿನಿಂದ ಒಡಿಶಾಗೆ ವಿಮಾನ ಮತ್ತು ರೈಲು ಸೌಲಭ್ಯವಿದೆ. ವಿಮಾನದಲ್ಲಿ ಭುವನೇಶ್ವರಕ್ಕೆ ತಲುಪಿ, ಅಲ್ಲಿಂದ 63 ಕಿ.ಮೀ ರಸ್ತೆ ಮೂಲಕ ಪುರಿ ತಲುಪಬಹುದು. ಭುವನೇಶ್ವರ–ಪುರಿಗೆ ರೈಲು ಸಂಪರ್ಕವಿದೆ. ಪ್ರಶಾಂತಿ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು – ಭುವನೇಶ್ವರ ನಡುವೆ ಸಂಚರಿಸುತ್ತದೆ. ಸುಮಾರು 23 ಗಂಟೆ ಪ್ರಯಾಣದ ಅವಧಿ. ನವೆಂಬರ್ ನಿಂದ ಫೆಬ್ರುವರಿ ಈ ತಾಣಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಿದರೆ, ಮರಳು ಶಿಲ್ಪದ ಪ್ರದರ್ಶನ ಮತ್ತು ಕೋನಾರ್ಕ್‌ ನೃತ್ಯ ಪ್ರದರ್ಶನ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT