ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡೆ ಎಂಬ ವಾಚ್ ಟವರ್

Last Updated 3 ಜುಲೈ 2018, 4:47 IST
ಅಕ್ಷರ ಗಾತ್ರ

ಸ್ನೇಹಿತನ ಮದುವೆ ಸಮಾರಂಭ ಮುಗಿಸಿ, ಇನ್ನೇನೂ ಬೈಕ್ ಏರಿ ಹೊಡಬೇಕು. ಅಷ್ಟರಲ್ಲಿ, ಮದುವೆ ದಿಬ್ಬಣದೊಂದಿಗೆ ಬಂದ ಹುಡುಗ ಸಮೀಪದಲ್ಲಿದ್ದ ಎತ್ತರದ ಕಟ್ಟಡವನ್ನೇರಿದ. ಅಲ್ಲಿಂದಲೇ ತನ್ನ ಗೆಳೆಯರನ್ನು ಕೂಗಿ ಕರೆದ. ಹೊಸತೊಂದನ್ನು ಕಂಡಂತೆ ಆತನ ಮೊಗದಲ್ಲಿ ಅಚ್ಚರಿಯ ಭಾವವಿತ್ತು. ಕಟ್ಟಡದ ಬದಿಯ ದೇಗುಲ ಕಟ್ಟೆಯ ಮೇಲೆ ಕೂತಿದ್ದ ಯುವಕರು, ‘ನೂರಾರು ವರ್ಷಗಳಿಂದ ಇರುವ ಕಟ್ಟಡದೊಳಗೆ ಮತ್ತೇನು ಸಿಕ್ಕೀತು’ ಎಂದು ಗುಸುಗುಸು ಮಾತನಾಡುತ್ತ ನಗಾಡಿದರು. ಇದೆಲ್ಲವನ್ನೂ ಗಮನಿಸಿದ ಹಿರಿಯರಾದ ಹುಣಚಪ್ಪಾ ಕುನ್ನೂರ, ‘ಹುಡೆ ಅಂದ್ರೆ ಸುಮ್ಮನೆಯೇನು? ಈ ಹಿಂದೆ ನಮ್ಮ ಹಳ್ಳಿ ಸುರಕ್ಷತೆಯಿಂದ ಉಳಿಯಲು ಈ ಎತ್ತರದ ಕಟ್ಟಡವೂ ಕಾರಣ’ ಎನ್ನುತ್ತ ಮುನ್ನಡೆದರು.

ಅವರ ಮಾತಿನಲ್ಲಿ ಎಂಥದ್ದೋ ಅಡಗಿದೆ ಅನ್ನಿಸಿತು. ಹೆಚ್ಚು ತಡ ಮಾಡಲಿಲ್ಲ. ತಕ್ಷಣವೇ ಬೈಕ್‌ನ್ನು ಬದಿಗಿರಿಸಿ, ಅವರತ್ತ ಓಡಿದೆ. ಅವರೊಂದಿಗೆ ಮಾತಿಗಿಳಿದು, ಹುಡೆಯ ಕತೆಯನ್ನು ಹೆಕ್ಕಲು ಶುರು ಮಾಡಿದೆ. ಒಂದೇ ಕಡೆ ನಿಲ್ಲದ ಅವರು, ಗೊತ್ತಿದ್ದ ವಿಷಯವನ್ನು ತಿಳಿಸುತ್ತ ಇಡೀ ಗ್ರಾಮದ ಸುತ್ತ ಒಂದು ಸುತ್ತು ಹಾಕಿಸಿದರು. ಐತಿಹಾಸಿಕ ಹಿನ್ನೆಲೆಯುಳ್ಳ ಹಲವು ಸೂಕ್ಷ್ಮ ಅಂಶಗಳನ್ನು ತಿಳಿಸಿದರು. ಗ್ರಾಮದ ಸುತ್ತಲಿದ್ದ ಸುಭದ್ರ ಕೋಟೆ, ಅದರೊಳಗೆ ವಾಸವಿದ್ದ ನಿಜಾಮರು, ಪಾಳೇಗಾರರು, ದೇಸಾಯಿ ಮನೆತನದವರ ಬದುಕು ಮತ್ತು ನಂತರದ ದಿನಗಳಲ್ಲಿ ನಡೆದ ಘಟನೆಗಳನ್ನು ವಿವರಿಸಿದರು.

ಇದೆಲ್ಲವೂ ನಡೆದದ್ದು ಕಲಬುರ್ಗಿ ಜಿಲ್ಲೆ ಶಹಾಬಾದ್ ತಾಲ್ಲೂಕಿನ ಮರತೂರು ಎಂಬ ಗ್ರಾಮದಲ್ಲಿ. ಕಲಬುರ್ಗಿಯಿಂದ 15 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಹೇಳಿಕೊಳ್ಳುವಂತಹ ಸಾರಿಗೆ ವ್ಯವಸ್ಥೆಯಿಲ್ಲ. ಗ್ರಾಮಪಂಚಾಯಿತಿ ಕೇಂದ್ರವಾಗಿದ್ದರೂ ಸಕಲ ಸೌಕರ್ಯಗಳನ್ನು ಹೊಂದಿದೆ ಎಂದು ಹೇಳಲು ಆಗುವುದಿಲ್ಲ. ಆದರೆ ಇಡೀ ಗ್ರಾಮದ ಸುತ್ತ ಒಂದು ನೋಟ ಹರಿಸಿದರೆ, ಯಾವುದೇ ಐತಿಹಾಸಿಕ ತಾಣಕ್ಕಿಂತ ಕಡಿಮೆಯಿಲ್ಲ ಎಂದು ಭಾಸವಾಗದೇ ಇರದು. ಕಾರಣ: ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಇರುವ ಹುಡೆಗಳು ಆಸಕ್ತಿದಾಯಕ ಕಥೆಗಳನ್ನು ಹೇಳುತ್ತವೆ.

ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಪ್ರದೇಶದಲ್ಲಿನ ಬಹುತೇಕ ಗ್ರಾಮಗಳಲ್ಲಿ ವೃತ್ತಾಕಾರದ ಕೋಟೆಯಂತೆ ಕಾಣಸಿಗುವ ಹುಡೆಗಳು ಒಂದರ್ಥದಲ್ಲಿ ಐತಿಹಾಸಿಕ ಸಂಕೇತ. ಆಯಾ ಗ್ರಾಮದ ಆಡುಭಾಷೆಗಳಲ್ಲಿ ಅವುಗಳಿಗೆ ಹುಡೇವು, ಹುಡ್ಯಾ, ಹುಡಾ, ವುಡೆ ಎಂಬ ಹೆಸರಿದೆ. ಶತಮಾನಗಳ ಹಿಂದೆ ಬ್ರಿಟಿಷರು, ಪಾಳೇಗಾರರ ಆಳ್ವಿಕೆ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಹುಡೆಗಳು ರಕ್ಷಣಾ ಕೋಟೆಗಳು ಆಗಿದ್ದವು.

ಹಗಲುರಾತ್ರಿ ಸೈನಿಕರು ಅಥವಾ ಕಾವಲುಪಡೆಯವರು ಇದರ ಮೇಲೆ ನಿಂತು ಅದರೊಳಗಿನ ಕಿಂಡಿಗಳ ಮೂಲಕ ಸುತ್ತಲೂ ಕಣ್ಣು ಹಾಯಿಸುತ್ತಿದ್ದರು. ಶತ್ರುಗಳು ದಾಳಿ ಮಾಡುವ, ಅನುಮಾನಾಸ್ಪದ ಚಟುವಟಿಕೆಗಳು ನಡೆಯುವ ಬಗ್ಗೆ ಸುಳಿವು ದೊರೆತ ಕೂಡಲೇ ಅವರು ತಮ್ಮ ಮುಖ್ಯಸ್ಥರಿಗೆ ಸುದ್ದಿ ಮುಟ್ಟಿಸುತ್ತಿದ್ದರು. ಶತ್ರುಗಳನ್ನು ಎದುರಿಸಲು ಸೇನೆ ಸಜ್ಜಾಗುತಿತ್ತು. ಹುಡೆಗಳ ಮೇಲೆ ನಿಂತು ಕಾವಲು ಕಾಯುತ್ತಿದ್ದವರೇ ವರ್ಷಗಳು ಕಳೆದಂತೆ ಹುಡೇದರಾದರು. ಈಗಲೂ ಕೆಲ ಮನೆತನಗಳು ಹುಡೇದ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತವೆ.

ಕೋಟೆಯೊಂದನ್ನು ನಿರ್ಮಿಸಿದರೆ, ಅದರ ನಾಲ್ಕು ದಿಕ್ಕುಗಳಲ್ಲಿ ಎತ್ತರದ ಹುಡೆಗಳನ್ನು ಕಟ್ಟಲಾಗುತಿತ್ತು. ಕಲ್ಲು ಮತ್ತು ಮಣ್ಣಿನಿಂದ ನಿರ್ಮಿತ ಹುಡೆಯೊಳಗೆ ಹೋಗಲು ಒಂದೇ ಬಾಗಿಲು ಮತ್ತು ಮೇಲೆ ಏರಲು ಕೊಂಚ ಎತ್ತರದ ಮೆಟ್ಟಿಲುಗಳು ಇರುತಿತ್ತು. ಇದನ್ನು ಹೊರತುಪಡಿಸಿದರೆ ಯಾರೂ ಎಷ್ಟೇ ಪ್ರಯತ್ನಿಸಿದರೂ ಹುಡೆಯೊಳಗೆ ನುಸುಳಲು ಆಗುತ್ತಿರಲಿಲ್ಲ.

ಇತಿಹಾಸದ ಪುಸ್ತಕಗಳಲ್ಲಿ ಹೆಚ್ಚು ಪ್ರಸ್ತಾಪವಾಗದ ಮತ್ತು ಸಮರ್ಪಕ ದಾಖಲೆಪತ್ರಗಳು ಇರದ ಕಾರಣ ಈ ರಚನೆಗಳ ಕುರಿತಾದ ಮಾಹಿತಿ ಇನ್ನೂ ಅಸ್ಪಷ್ಟವಾಗಿದೆ. ಹುಡೆಯು ರಕ್ಷಣಾ ಕೋಟೆಯಷ್ಟೇ ಆಗಿರಲಿಲ್ಲ, ದವಸ ಧಾನ್ಯ ಶೇಖರಿಸಿಡುವ ತಾಣವೂ ಆಗಿತ್ತು ಎಂಬುದು ಕೆಲವರ ನಂಬಿಕೆ. ಅಷ್ಟೇ ಅಲ್ಲ, ಯುದ್ಧ ನಡೆಯುವ ವೇಳೆ ಬೆಲೆ ಬಾಳುವ ವಸ್ತುಗಳ ಸಹಿತ ವೃದ್ಧರು, ಮಕ್ಕಳು ಮತ್ತು ಮಹಿಳೆಯರನ್ನು ಸುರಕ್ಷಿತವಾಗಿ ಕೂಡಿ ಇಡಲಾಗುತಿತ್ತಂತೆ. ಇದೇ ಮಾದರಿಯ ಗಂಜ್‌ಗಳೆಂದು ಕರೆಯುವ ಕಟ್ಟಡದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಸಿ, ಅಗತ್ಯ ಸಂದರ್ಭಗಳಲ್ಲಿ ಇಡೀ ಗ್ರಾಮಕ್ಕೆ ಪೂರೈಸಲಾಗುತಿತ್ತಂತೆ. ಗ್ರಾಮವನ್ನು ಇಡಿಯಾಗಿ ಸುತ್ತಿಸಿದ ಬಳಿಕ ಹುಣಚಪ್ಪಾ ಕುನ್ನೂರ ಅವರು ತಮ್ಮ ಮನೆ ಎದುರು ಶಿಥಿಲಾವಸ್ಥೆಯಲ್ಲಿರುವ ಹುಡೆಯನ್ನು ತೋರಿಸಿದರು. ‘ಒಂದಾನೊಂದು ಕಾಲದಲ್ಲಿ ತುಂಬಾ ಗಟ್ಟಿಯಾಗಿದ್ದ ಈ ಹುಡೆ ವರ್ಷಗಳು ಕಳೆದಂತೆ ತನ್ನ ಶಕ್ತಿ ಕಳೆದುಕೊಳ್ಳತೊಡಗಿದೆ. ಮಳೆ, ಗಾಳಿಗೆ ಅದರೊಳಗಿನ ಕಲ್ಲು, ಮಣ್ಣು ಉದುರುತ್ತಿದೆ. ಕೋಟೆಯಂತಿದ್ದ ಈ ಕಟ್ಟಡ ಈಗ ಬರೀ ಪಳೆಯಳಿಕೆಯಾಗಿ ಉಳಿದಿದೆ’ ಎಂದು ಬೇಸರಪಟ್ಟರು.

ಈ ಹುಡೆಗಳ ಸಂರಕ್ಷಣೆಗೆ ಏನನ್ನಾದರೂ ಮಾಡಬೇಕು. ಈಗಿನ ಮತ್ತು ಮುಂದಿನ ಪೀಳಿಗೆಯವರಿಗೆ ಇವುಗಳ ಮಹತ್ವ ಅರಿವಿಗೆ ಬರಬೇಕು ಎಂಬ ಕಾಳಜಿ ಅವರ ಮಾತುಗಳಲ್ಲಿ ವ್ಯಕ್ತವಾಯಿತು.

ಒಟ್ಟಾರೆ, ಮದುವೆ ನೆಪದಲ್ಲಿ ಹೀಗೊಂದು ಐತಿಹಾಸಿಕ ಕಟ್ಟಡದ ಕುರಿತು ಕೊಂಚ ತಿಳಿದಂತಾಯಿತು ಎಂದು ಸ್ನೇಹಿತನನ್ನು ಮನಸ್ಸಿನಲ್ಲೇ ಕೃತಜ್ಞತೆ ಹೇಳುತ್ತ ಮರತೂರಿನಿಂದ ಹೊರಟೆ.

ಬತೇರಿ – ಹುಡೆ ನಡುವಿನ ಸಾಮ್ಯತೆ

ಚಿತ್ರದುರ್ಗದ ಬತ್ತೇರಿಗಳಿಗೂ ಉತ್ತರ ಕರ್ನಾಟಕದ ಹುಡೆಗಳಿಗೆ ಸಾಮ್ಯತೆ ಕಂಡುಬರುತ್ತದೆ. ಇವುಗಳ ಆಕಾರ ಮಾತ್ರವಲ್ಲ, ಬಳಸುವ ವಿಚಾರದಲ್ಲಿ ಹೊಂದಾಣಿಕೆ ಕಾಣುತ್ತದೆ. ಇವೆರಡನ್ನೂ ಪ್ರಮುಖವಾಗಿ ಕಾವಲು ಗೋಪುರವಾಗಿಯೇ ಬಳಸುತ್ತಿದ್ದರು. ಆದರೆ, ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಿದ್ದರು ಎನ್ನಿಸುತ್ತದೆ ಎಂದು ಖ್ಯಾತ ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಅಭಿಪ್ರಾಯ ಪಡುತ್ತಾರೆ.

ಚಿತ್ರದುರ್ಗದ ಕೋಟೆಯಲ್ಲಿ ರಣಬತೇರಿ, ಕಹಳೆಬತೇರಿಯಂತೆ ಹಲವು‌ ಹೆಸರಿನ ಬತೇರಿಗಳಿವೆ. ಇವು ಹೊರ ನೋಟಕ್ಕೆ ಹುಡೆಗಳಂತೆ ಕಾಣುತ್ತವೆ. ಆದರೆ, ಅವುಗಳಷ್ಟು ಸುಸ್ಥಿತಿಯಲ್ಲಿ ಇಲ್ಲ. ಹಾಗೆಯೇ ರಚನೆಗಳನ್ನು ಯಾವ ಕಾಲದವು ಎಂದು ಹೇಳುವುದು ಕಷ್ಟ. ಇತಿಹಾಸದ ಸಂಕೇತವಾದ ಬುರುಜು, ಬತೇರಿ, ಹುಡೆಗಳನ್ನು ಬಳಕೆ‌ ಮಾಡದ‌ ಕಾರಣ ಮುಚ್ಚಿ ಹೋಗಿವೆ. ಇಂಥವುಗಳನ್ನು ಉಳಿಸಿಕೊಂಡರೆ‌ ಭವಿಷ್ಯದ ಪೀಳಿಗೆಗೆ ಇತಿಹಾಸ ಪರಿಚಯಿಸಲು ಸಹಾಯವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

‘ಚಳ್ಳಕೆರೆ ತಾಲ್ಲೂಕಿನ ಗಡಿ ಭಾಗದಲ್ಲಿ ಕಡೆವುಡೆ, ನಡುವುಡೆ ಎಂಬ ಊರುಗಳಿವೆ. ಅಲ್ಲಿ ಬತೇರಿಗಳಿದ್ದ ಕಾರಣ‌, ಬತೇರಿಗಳಿಗೆ ವುಡೆ ಎಂದು‌ ಕರೆಯುತ್ತಿದ್ದರಿಂದ ಈ ಹೆಸರು ಬಂದಿರಬಹುದು. ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿಯಲ್ಲಿ ಇಂಥ ವುಡೆ ಇದ್ದಿದ್ದನ್ನು ನೋಡಿದ್ದೆ. ಅದು ಈಗ ಇದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ರಾಜಶೇಖರಪ್ಪ ನೆನಪಿಸಿಕೊಳ್ಳುತ್ತಾರೆ. ಈ ಮಾಹಿತಿಗಳನ್ನು ಗಮನಿಸಿದರೆ, ಈ‌ ಭಾಗದಲ್ಲೂ ಕಾವಲು ಗೋಪುರಗಳಿಗೆ ವುಡೆ (ಹುಡೆ) ಎಂಬ ಹೆಸರಿತ್ತು ಎಂಬುದು ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT