ತೈಪೆಯ ಉತ್ತರ ಭಾಗದ ಹಸಿರು ಗುಡ್ಡಗಳ ನಡುವೆ ನೆಲೆಗೊಂಡಿರುವ ಸಲ್ಫರ್ ವ್ಯಾಲಿ ಕೇವಲ ಬಿಸಿನೀರಿನ ಬುಗ್ಗೆಗಳ ತಾಣವಲ್ಲ. ಅದು ಭೂಮಿಯ ಅಂತರಾಳದಲ್ಲಿ ಕುದಿಯುತ್ತಿರುವ ಜ್ವಾಲಾಮುಖಿಯ ಸದ್ದು ಮತ್ತು ಸಂರಕ್ಷಿತ ನೈಸರ್ಗಿಕ ವೈಭವ. ಅಚಾನಕ್ ನಿರ್ಧಾರದಿಂದ ಆರಂಭವಾದ ಬೆಳಗಿನ ನಡಿಗೆ, ಭೂಮಿಯೇ ಉಸಿರಾಡುತ್ತಿರುವಂತೆ ಭಾಸವಾದ ಅದ್ಭುತ ಅನುಭವವಾಗಿ ರೂಪುಗೊಂಡಿತು.

ತೈವಾನ್ ದೇಶದ ತೈಪೆ ಎಂಬ ಮರುಳು ನಗರಿಯ ಮಡಿಲಿನಲ್ಲಿ ನಾವು ಇಳಿದಾಗ ಸಂಜೆಯ ಹೊತ್ತು ಆಗಲೇ ಕತ್ತಲಿಗೆ ಒಪ್ಪಿಸಿಕೊಂಡಿತ್ತು. ಕಸ್ಟಮ್ಸ್ ಪ್ರಕ್ರಿಯೆಗಳ ಗೋಜಿನಲ್ಲಿ ಸಮಯ ಸರಿದದ್ದೇ ಗೊತ್ತಾಗಲಿಲ್ಲ; ಹೊರಗೆ ಬಂದಾಗ ನಗರವೇ ರಾತ್ರಿಯ ಹೊದಿಕೆಯನ್ನು ಹೊದ್ದುಕೊಂಡಿತ್ತು. ಭೂಮಿಯ ಪೂರ್ವಾರ್ಧ ಗೋಳದ ಈ ದ್ವೀಪದ ಸ್ವಭಾವವೇ ಹಾಗೆ. ಸಂಜೆ ನಾಲ್ಕೂವರೆ ಹೊತ್ತಿಗೇ ಕತ್ತಲೆ ನಿಧಾನವಾಗಿ ನೆಲೆಯಾಗುತ್ತದೆ. ಆ ಬೆಳಕು-ಕತ್ತಲೆಗಳ ಸಂಧಿಸಿದ ಕ್ಷಣದಲ್ಲಿ ನಾವು ಐವರು, ಎರಡು ಮೈಲು ದೂರ ನಡೆಯುತ್ತಾ ಬೈತೂ ಪಟ್ಟಣದ ಇಳಿಸಂಜೆಯ ನಿಶ್ಶಬ್ದ ಸೌಂದರ್ಯವನ್ನು ಸವಿದೆವು.

ಮರುದಿನ ಮುಂಜಾನೆ, ಗೆಳೆಯನ ಕೈಯಲ್ಲಿ ಗೂಗಲ್ ಮ್ಯಾಪ್. ‘ಇಲ್ಲೇ ಹತ್ತಿರ ಯಾವುದೋ ಹಾಟ್ ಸ್ಪ್ರಿಂಗ್ ಇದೆ. ಸ್ವಲ್ಪ ದೂರ ನಡೆದು ಹೋಗೋಣವೇ?’ ಎಂಬ ಪ್ರಶ್ನೆ ಗಾಳಿಯಲ್ಲಿ ತೇಲಿತು. ಯೋಜನೆಗಳಿಲ್ಲದ ಪ್ರವಾಸಕ್ಕೆ ಇಂತಹ ತುರ್ತು ನಿರ್ಧಾರಗಳೇ ಖುಷಿಕೊಡುವುದು. ‘ನಡೀರಿ’ ಎಂದು ಹೆಜ್ಜೆ ಮುಂದಿಟ್ಟೆ. ಸಣ್ಣ ಮಳೆಯಿಂದ ತೇವಗೊಂಡಿದ್ದ ರಸ್ತೆಯು ಗಾಢ ಹಸಿರು ಮರಗಳ ನಡುವೆ ಮೌನವಾಗಿ ವಾಲಿಕೊಂಡಿತ್ತು. ಗುಡ್ಡದ ಮೇಲೆ ಮೂರು ಮೈಲು ಏರು ದಾರಿ. ಒಂದೂ ಕಾಲು ಗಂಟೆ ಹಿಡಿದರೂ ದೇಹಕ್ಕಿಂತ ಮನಸ್ಸೇ ಚುರುಕಾಗಿತ್ತು; ಗಾಳಿಯಲ್ಲಿ ಆರ್ದ್ರತೆ ಕಡಿಮೆ, ದಣಿವು ದೂರವಾಗಿತ್ತು.

ಉಪೋಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು ನಮ್ಮನ್ನು ಅಪ್ಪಿಕೊಂಡವು. ಕರ್ಪೂರದ ಮರಗಳ ಸುಗಂಧ, ಅಕೇಶಿಯ ಎಲೆಗಳ ಸಿರಿವೆರಳು, ನೆಲದ ಮೇಲೆ ಹಾಸಿಕೊಂಡ ಮನಿ ಪ್ಲಾಂಟ್, ನೆರಳಲ್ಲಿ ಬೆಳೆದ ಫರ್ನ್ಗಳ ಕಂಪನ–ಎಲ್ಲವೂ ಒಂದೇ ಸಮಯದಲ್ಲಿ ಕಣ್ಣಿಗೂ ಉಸಿರಿಗೂ ಹಬ್ಬವಾಗಿದ್ದವು. ಏರು ದಾರಿಯ ಕೊನೆಯ ತಿರುವಿನತ್ತ ಸಾಗುತ್ತಿದ್ದಂತೆ, ಅಲ್ಲಿ ನಮ್ಮನ್ನು ಎದುರು ನೋಡುತ್ತಿದ್ದ ಯಾವುದೋ ಅಜ್ಞಾತ ಅನುಭವದ ಸುಳಿವು ಗಾಳಿಯಲ್ಲಿ ಮಬ್ಬಾಗಿ ಹರಡತೊಡಗಿತು…

ಏರು ದಾರಿಯ ಕೊನೆಯ ಭಾಗ ತಲುಪುತ್ತಿದ್ದಂತೆಯೇ ಒಂದು ಫಲಕ ಕಣ್ಣಿಗೆ ಬಿತ್ತು. ಅದರ ಮೇಲೆ ‘ಲಿ ಹುವಾಂಗೂ ಜಿಯೋಥರ್ಮಲ್ ಸೀನಿಕ್ ಏರಿಯಾ‘ (Liuhuanngu Geothermal Scenic Area) ಎಂದು ಬರೆಯಲಾಗಿತ್ತು. ಆ ಹೆಸರನ್ನು ಓದುವಷ್ಟರಲ್ಲಿ ಮೂಗಿಗೆ ಗಂಧಕದ ಘಾಟು ತಟ್ಟಿತು. ಆ ವಾಸನೆಗೆ ಒಂದು ವಿಚಿತ್ರ ಆಕರ್ಷಣೆ ಇತ್ತು. ಸ್ವಲ್ಪ ಅಸಹಜ, ಆದರೆ ಕುತೂಹಲ ಕೆರಳಿಸುವಂತಿತ್ತು. ದಿಢೀರ್ ನಿರ್ಧಾರಿಸಿ ಈ ನಡೆ ಆರಂಭಿಸಿದ್ದ ನಾನು, ಇದನ್ನು ಸಾಮಾನ್ಯ ಬಿಸಿನೀರಿನ ಬುಗ್ಗೆಯೆಂದು ಭಾವಿಸಿದ್ದೆ. ಆದರೆ ಮುಂದಿನ ಫಲಕ ಮತ್ತೊಂದು ಕಥೆ ಹೇಳಿತು.

ಸಲ್ಫರ್ ವ್ಯಾಲಿ ರಿಕ್ರಿಯೇಷನ್ ಏರಿಯಾ (Sulfur Valley Recreation Area) ಇದು ತೈಪೆಯ ಪ್ರಮುಖ ಭೂತಾಪ ಮಾನದ ತಾಣಗಳಲ್ಲಿ ಒಂದೆಂಬ ಅರಿವು ಮೂಡುತ್ತಿದ್ದಂತೆ, ನಮ್ಮ ನಡೆ ಅನ್ವೇಷಣೆಯಾಗಿ ಮಾರ್ಪಟ್ಟಿತು.

ಮುಂಭಾಗದ ಗೇಟನ್ನು ದಾಟಿ ಒಳಗೆ ಹೆಜ್ಜೆ ಇಟ್ಟಾಗ, ಬಿಳಿ ಹೊಗೆಯ ಸಣ್ಣ ಹಾರದಂತೆ ಮೇಲೇಳುತ್ತಿದ್ದ ಆವಿಯ ರಂಧ್ರಗಳು ದೂರದಿಂದಲೇ ಕಾಣುತ್ತಿದ್ದವು. ನೆಲದ ಒಳಗೆ ಮೌನವಾಗಿ ಯಾವುದೋ ಚಟುವಟಿಕೆ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು. ಉತ್ತರ ತೈಪೆಯ ಸೊಂಪಾದ ಯಾಂಗ್ಮಿಂಗ್ಶಾನ್ (Yangmingshan) ಬೆಟ್ಟದ ದಕ್ಷಿಣ ತುದಿಯಲ್ಲಿ ನೆಲೆಗೊಂಡಿರುವ ಈ ಗಂಧಕ ಕಣಿವೆ, ಭೂವಿಜ್ಞಾನ, ಪರಿಸರ ಮತ್ತು ಇತಿಹಾಸಗಳ ಸಂಗಮದಂತೆ ತೋರುತ್ತದೆ.

ಈ ಕಣಿವೆಯ ಅಸ್ತಿತ್ವಕ್ಕೆ ಕಾರಣ ಅದರ ಕೆಳಭಾಗದಲ್ಲಿ ಸಕ್ರಿಯವಾಗಿರುವ ಡಾಟುನ್ ಜ್ವಾಲಾಮುಖಿ ವ್ಯವಸ್ಥೆ. ಭೂಗರ್ಭದ ಆಳದಲ್ಲಿ ಉರಿಯುತ್ತಿರುವ ಮ್ಯಾಗ್ಮಾ, ಮೇಲಿನ ತಳಪದರಗಳಲ್ಲಿರುವ ಅಂತರ್ಜಲವನ್ನು ತೀವ್ರವಾಗಿ ಬಿಸಿ ಮಾಡುತ್ತದೆ. ಆ ಬಿಸಿ ನೀರು, ಭೂಮಿಯ ಸೀಳುಗಳ ಮೂಲಕ ಹೊರಬರಲು ಹವಣಿಸುತ್ತದೆ. ಮೇಲೇಳುವ ಈ ನೀರು ಸುತ್ತಲಿನ ಕಲ್ಲುಗಳಲ್ಲಿ ಅಡಗಿರುವ ಗಂಧಕ, ಸಿಲಿಕಾ ಮತ್ತು ಅನೇಕ ಖನಿಜಗಳನ್ನು ತನ್ನೊಳಗೆ ಕರಗಿಸಿಕೊಳ್ಳುತ್ತದೆ. ಪರಿಣಾಮವಾಗಿ, ಭೂಮಿಯ ಮೇಲ್ಮೈಗೆ ತಲುಪುವಾಗ ಅದು ಕೇವಲ ನೀರಲ್ಲ, ಖನಿಜ ಸಮೃದ್ಧ ಉಷ್ಣದ ಹರಿವು.

ಈ ಉಕ್ಕುವ ಕೊಳಗಳು, ಆವಿ ರಂಧ್ರಗಳು ಮತ್ತು ಹಳದಿ ಬಣ್ಣದ ಗಂಧಕದ ಪದರಗಳು, ಭೂಮಿಯ ಅಂತರಾಳದ ಮೌನ ನಾಟಕವನ್ನು ಹೊರಗೆ ತರುತ್ತವೆ. ಕೆಲವೆಡೆ ತಾಪಮಾನ 90 ಡಿಗ್ರಿ ಸೆಲ್ಸಿಯಸ್ಗೂ ಮೀರಿದೆ. ನೀರಿನ pH ಮೌಲ್ಯ 3–4ರ ನಡುವೆ ಇರುವುದರಿಂದ ಸ್ವಲ್ಪ ಆಮ್ಲೀಯ ಗುಣ ಹೊಂದಿದೆ. ಹೊಗೆಯ ಬಣ್ಣ, ಗಾಳಿಯಲ್ಲಿನ ವಾಸನೆ–ಇವೆಲ್ಲವೂ ಈ ರಾಸಾಯನಿಕ ಕ್ರಿಯೆಗಳ ಸಾಕ್ಷಿಗಳು. ಪ್ರಕೃತಿಯ ಈ ಸೂಕ್ಷ್ಮ ಸಮತೋಲನವೇ ಸಲ್ಫರ್ ಕಣಿವೆಯನ್ನು ಅತ್ಯಂತ ಸಂರಕ್ಷಿತ ಭೂತಾಪಮಾನದ ವ್ಯವಸ್ಥೆಗಳಲ್ಲೊಂದಾಗಿ ಉಳಿಸಿದೆ.

ಗಣಿಗಾರಿಕೆಯಿಂದ ಉದ್ಯಾನವನದವರೆಗೆ

ಈ ಕಣಿವೆ ಕೇವಲ ಪ್ರಕೃತಿಯ ಅದ್ಭುತವಷ್ಟೇ ಅಲ್ಲ; ಇತಿಹಾಸದ ಸಾಕ್ಷಿಯೂ ಹೌದು. ತೈವಾನ್ ಪ್ರದೇಶವನ್ನು ಆಳುತ್ತಿದ್ದ ಕ್ವಿಂಗ್ ರಾಜವಂಶದ ಕೊನೆಯ ದಶಕಗಳಲ್ಲಿ, ಸ್ಥಳೀಯರು ಇಲ್ಲಿ ಗಂಧಕದ ಸಮೃದ್ಧ ನಿಕ್ಷೇಪಗಳನ್ನು ಪತ್ತೆಹಚ್ಚಿದರು. ಆ ಕಾಲದಲ್ಲಿ ಗಂಧಕ ಬೆಂಕಿಕಡ್ಡಿ, ಗನ್ಪೌಡರ್ ಹಾಗೂ ಸಾಂಪ್ರದಾಯಿಕ ಔಷಧಗಳ ತಯಾರಿಕೆಯಲ್ಲಿ ಪ್ರಮುಖ ಖನಿಜವಾಗಿತ್ತು.

1895ರಿಂದ ಆರಂಭವಾದ ಜಪಾನಿನ ವಸಾಹತುಶಾಹಿ ಅವಧಿಯಲ್ಲಿ, ಇಲ್ಲಿನ ಭೂತಾಪಮಾನ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಯಿತು. ಸಲ್ಫರ್ ಸಂಸ್ಕರಣಾ ಘಟಕಗಳು ಸ್ಥಾಪಿತವಾಗಿದವು; ಜೊತೆಗೆ ಬಿಸಿನೀರಿನ ಬುಗ್ಗೆಗಳ ಸಂಸ್ಕೃತಿಯೂ ಪರಿಚಯವಾಯಿತು. ಎರಡನೇ ಮಹಾಯುದ್ಧದ ನಂತರ ಗಣಿಗಾರಿಕೆ ನಿಧಾನವಾಗಿ ಕ್ಷೀಣಿಸಿತು. ಕಾಲಕ್ರಮೇಣ ಈ ಪ್ರದೇಶ ತನ್ನ ಪರಿಸರ ವೈಶಿಷ್ಟ್ಯ ಮತ್ತು ಭೌಗೋಳಿಕ ಪ್ರಾಮುಖ್ಯತೆಯ ಕಾರಣದಿಂದ ಹೊಸ ಗುರುತನ್ನು ಪಡೆದುಕೊಂಡಿತು.

ಇಂದು, ಈ ತಾಣವು ರಾಷ್ಟ್ರೀಯ ಉದ್ಯಾನವನ ಪ್ರಾಧಿಕಾರ ಮತ್ತು ತೈಪೆ ನಗರ ಆಡಳಿತದ ಮೇಲ್ವಿಚಾರಣೆಯಲ್ಲಿ ಸಂರಕ್ಷಿತ ಭೂತಾಪೀಯ ಉದ್ಯಾನವನ (Geothermal Park)ವಾಗಿ ರೂಪುಗೊಂಡಿದೆ. ಒಂದು ಕಾಲದಲ್ಲಿ ಗಣಿಗಾರಿಕೆಯ ಗದ್ದಲ ಕೇಳುತ್ತಿದ್ದ ಜಾಗದಲ್ಲಿ ಈಗ ಪ್ರವಾಸಿಗರ ಕುತೂಹಲದ ನಿಶ್ಶಬ್ದ ಹೆಜ್ಜೆಗಳು ಮಾತ್ರ.

ನೈಸರ್ಗಿಕ ಪರಂಪರೆ ಜೀವಂತ

ಸಲ್ಫರ್ ವ್ಯಾಲಿ ಇಂದು ಪ್ರಕೃತಿ, ವಿಜ್ಞಾನ ಮತ್ತು ಇತಿಹಾಸಗಳ ಒಟ್ಟುಗೂಡಿದ ಅನುಭವವಾಗಿದೆ. ಬಿಳಿ ಆವಿ ಹೊಗೆಯ ನಡುವೆ ನಿಂತಾಗ, ಭೂಮಿಯ ಅಂತರಾಳದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಕಣ್ಣಾರೆ ನೋಡುವ ಅವಕಾಶ ಸಿಗುತ್ತದೆ. ಜ್ವಾಲಾಮುಖಿ, ಖನಿಜ, ಕಾಡು ಮತ್ತು ಮಾನವ ಇತಿಹಾಸ ಇವೆಲ್ಲವೂ ಇಲ್ಲಿ ಒಂದಕ್ಕೊಂದು ಹೆಣೆದುಕೊಂಡಿವೆ.

ನಗರದ ಗದ್ದಲದಿಂದ ಸ್ವಲ್ಪ ದೂರ ಸರಿದು, ಭೂಮಿಯೇ ಉಸಿರಾಡುತ್ತಿರುವ ತಾಣದಲ್ಲಿ ನಿಂತಂತೆ ಅನುಭವಿಸಲು ಬಯಸಿದರೆ, ಈ ಕಣಿವೆ ಅದಕ್ಕೆ ಸೂಕ್ತ ಜಾಗ. ಅದು ಕೇವಲ ಪ್ರವಾಸ ತಾಣವಲ್ಲ; ಪ್ರಕೃತಿಯ ನಾಡಿ ತಟ್ಟುವ ಅನುಭವ. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.