ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ಯಾಪಿಲೋ ಬುದ್ಧ'ನ ಹುಡುಕಾಟದಲ್ಲಿ ಸಿಕ್ಕ ಅಪ್ಸರೆ

Published 16 ಜುಲೈ 2023, 1:25 IST
Last Updated 16 ಜುಲೈ 2023, 1:25 IST
ಅಕ್ಷರ ಗಾತ್ರ

ಕೆಲವೊಮ್ಮೆ ಒಂದರ ಹುಡುಕಾಟದಲ್ಲಿರುವಾಗ ಇನ್ನೇನೋ ಸಿಕ್ಕಿ ಎಲ್ಲಿಗೋ ಒಯ್ಯುತ್ತದೆ. ಆಗ ನನ್ನ ಬಳಿ ಪುಟಗೋಸಿ ಸುಣ್ಣದ ಡಬ್ಬಿಯಂತಹ ಚಿಕ್ಕ ಕ್ಯಾಮರವಿತ್ತು. ಆಗಿನ ಕಾಲಕ್ಕೆ ಅತಿ ಆಸೆ ಪಡುವಂತಹ ಕನಸು ಕಾಣುತ್ತಿದ್ದೆ. ಅದೆಂದರೆ ಚಿಟ್ಟೆಗಳ ಸುಂದರ ಚಿತ್ರ ತೆಗೆಯೋದು. ಆಗ ನನ್ನಕಣ್ಣಿಗೆ ಬಿದ್ದವ ‘ಪ್ಯಾಪಿಲೋ ಬುದ್ಧ’ ಎಂಬ ಚಿಟ್ಟೆ. ಅದರ ಸೌಂದರ್ಯಕ್ಕೆ ಮಾರು ಹೋಗಿಬಿಟ್ಟೆ. ಪಶ್ಚಿಮ ಘಟ್ಟಗಳಿಗೇ ಸೀಮಿತವಾದ ವಿಶಿಷ್ಟ ಚಿಟ್ಟೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ಅದರ ಸುಮನೋಹರ ಸೌಂದರ್ಯ ನನ್ನ ಕಂಗೆಡಿಸಿತು. ಕಡು ಹಸಿರಾದ ಅದರ ಮೈಯನ್ನು ಒಮ್ಮೆ ನೋಡಿದರೆ ಮುಗೀತು, ನೀವು ಹುಚ್ಚರಾಗೋದು ಗ್ಯಾರಂಟಿ. ಈ ಚಿಟ್ಟೆಯ ಸೌಂದರ್ಯವೇ ನನ್ನನ್ನು ಇಲ್ಲಿಯವರೆಗೆ ಎಳೆದು ತಂದಿದ್ದು.

ನಾಗರಹೊಳೆಯ ಕಾಡುಗಳಲ್ಲಿ ಕಾಟಿ ಚಿರತೆಗಳ ಸಂಗಕ್ಕೆ ಬಿದ್ದು ಸುಮ್ಮನೆ ಅಲೆಯುತ್ತಿದ್ದವನಿಗೆ ಸಿಕ್ಕ ನ್ಯಾಚುರಲಿಸ್ಟ್ ಒಬ್ಬರು ಇರ್ಪು ಜಲಧಾರೆಯಲಿ ಇವು ಧಾರಾಳವಾಗಿವೆ ಎಂದ್ದಿದ್ದೆ ತಡ ಕೂಡಲೇ ಕಾರೊಂದನ್ನು ಬುಕ್ ಮಾಡಿ ಹೊರಟೆವು.

ಕುಟ್ಟಂನಲ್ಲಿ ಕಟ್ಟಂ ಚಾಯ್‌ ಕುಡಿದೆವು. ಸೆಪಿಯಾ ಬಣ್ಣದಲ್ಲಿ ಅದ್ದಿ ತೆಗೆದಂತಹ ಊರು ಕುಟ್ಟಂ. ವಿಚಿತ್ರವಾದ ಸೆಳೆತದಿಂದ ನನ್ನ ಕಂಗೆಡಿಸಿತ್ತು. ನಾಗರಹೊಳೆ ದಾಟಿದವರಿಗೆ ಕುಟ್ಟಂ ಎಂಬ ಪುಟ್ಟಹಳ್ಳಿಯ ಬೆಚ್ಚಗಿನ ಸ್ವಾಗತ. ಹೆಚ್ಚಿನವರು ಕೇರಳಿಗರು. ಇಲ್ಲಿ ಕಟ್ಟಂ ಚಾಯ್ ಬಹಳ ಫೇಮಸ್.

ಹದವಾದ ಚಹ ಎಲೆಗಳು ಕೆಟಲಿನಲ್ಲಿ ಕುದಿಯುತ್ತಾ, ಹಬೆಯಾಡುತ್ತಾ ಇತ್ತು ಕಟ್ಟಂ ಚಾಯ್. ಬದುಕೊಂದು ಕೆಟಲಿನಲಿ ಬೇಯುತಿರುವ ಅನುಭವ. 'ಕುಟ್ಟಂ'ನಲ್ಲಿ ಕಟ್ಟಗಿನ ಬಿಸಿ ಬಿಸಿ ಕರಿ ಚಹಾ ಹೀರುವ, ಚಹಾ, ಕಾಫಿತೋಟದ ಕೂಲಿಗಳು ಸಾಕಷ್ಟು.

ನಾವು ಹೋದಾಗಲೂ ಅನೇಕರು ಅಲ್ಲಲ್ಲಿ ಚಹಾ ಹೀರುತಲಿದ್ದರು. ನಾವೂ ಗೂಡಂಗಡಿಗಳಲ್ಲಿ ಸಿಗುವ ಹಬೆಯಾಡುವ ಚಹಾ ಕಣ್ಣು ಹೀರಿದೆವು. ಕ್ಯಾನ್‌ಗ್ರೂ ಗಿಡಮೂಲಿಕೆ ಔಷಧ ನೀಡಿ ಗುಣ ಪಡಿಸುವವರು ಇಲ್ಲಿದ್ದಾರಂತೆ! ಹಾಗೇ ಅವರನ್ನೂ ಒಮ್ಮೆ ಭೇಟಿಯಾಗಬೇಕು. ಅವರ ಮಾತಿಗೆ ಕಿವಿಯಾಗಬೇಕು.

ಲಾಮಾ ನಾಡಿನ ಲಕ್ಷ್ಮಣ ತೀರ್ಥದೆಡೆಗೆ...

ಲಾಮಾಗಳ ಭೂತಾನ್‌ನ ರಾಜಧಾನಿ ಥಿಂಪುವನ್ನು ನೆನಪಿಸುವಂತಿರುವ ದಕ್ಷಿಣ ಕೊಡಗಿನ ಈ ತಾಣ ಎಷ್ಟೊಂದು ರಮಣೀಯ ಅಂತೀರಾ.

ಜಲಧಾರೆಯ ಬಲಕ್ಕೆ ಕೇರಳವಿದ್ದರೆ, ಎಡಕ್ಕೆ ನಾಗರಹೊಳೆ ಅಭಯಾರಣ್ಯ. ಅದೇ ಈ ಜಲಧಾರೆಯ ಮೂಲ. ಕೇರಳಿಗರೇ ಇಲ್ಲಿ ಹೆಚ್ಚು. ಜಲಧಾರೆಗೆ ಹಲವು ಕಿಲೋಮೀಟರ್‌ ಇರುವಾಗಲೇ ಇದು ನಿಮ್ಮನ್ನು ಕೈಬೀಸಿ ಕರೆಯುತ್ತದೆ.

ಇದನ್ನು ನೋಡಲು ಸರಿ ಸುಮಾರು ಕೇರಳದ ತುದಿಯನ್ನು ತಲುಪಬೇಕು. ಮೇಲೆ ಮಂಜು ಸುರಿಸುವ ಗಿರಿಗಳ ನಡುವಿಂದ ತನ್ನ ಜಡೆ ಬಿಟ್ಟಂತೆ ತಣ್ಣಗೆ ಧಮುಕುವ ಲಲನೆ. ಅಲ್ಲಲ್ಲಿ ಬಳುಕುವ ಬಳ್ಳಿ. ನಿಸರ್ಗದ ಗರ್ಭಗುಡಿಯಲ್ಲಿ ಅಡಗಿದ ರತ್ನದ ಮಣಿ. ಸುತ್ತೆಲ್ಲಾ ಗಡಿಬಿಡಿ ಇಲ್ಲದೇ ಹಾರಾಡುವ ಹಕ್ಕಿಗಳು. ಅಲ್ಲಲ್ಲಿ ಕಾಣಸಿಗುವ ಸುಂದರ ಚಿಟ್ಟೆ ಪ್ಯಾಪಿಲಾನ್ ಬುದ್ಧ! ಹೆಸರೇ ಎಷ್ಟೊಂದು ಆಕರ್ಷಕ. ಇನ್ನು ಇದರ ಸಾಕ್ಷಾತ್‌ದರ್ಶನ ಸಿಕ್ಕರಂತೂ ನೀವು ಹುಚ್ಚರಾಗುವಿರಿ! ಈ ಚಿಟ್ಟೆ ಮತ್ತು ಜಲಪಾತ ನೋಡಲೇ ನಾವಿಲ್ಲಿಗೆ ಬಂದಿದ್ದು.

ಮೆಟ್ಟಿಲೇರಿ ಮುಗಿಲಿಗೆ ಕೈ ಚಾಚಿ…

ಇಲ್ಲಿನ ಹರಿವ ತೊರೆಯ ಸೆರಗ ಸೆಳೆಸಿ ಮೇಲೇರಬೇಕು. ಮೇಲೇರಿದಂತೆ ಮಂಜೆಂಬ ಅಮಲು ನಿಮ್ಮನ್ನಾವರಿಸಿ ಬಿಡುತ್ತದೆ. ಕಣ್ಣು, ಕಿವಿಗಳ ಒಳಗೆಲ್ಲಾ ಹಾದು ಕಚಗುಳಿ ಇಡುತ್ತವೆ. ಅದುವೇ ಶ್ರೀಮಂಗಲ ಕಾಡಿನ ನಡುವಿರುವ ಲಕ್ಷಣ ತೀರ್ಥ. ಕಾವೇರಿಯ ಉಪನದಿಯಾಗಿ ಮುಂದೆ ಹರಿಯುವವಳಿವಳು. ಮುಂದೆ ಹುಣಸೂರು, ಮೈಸೂರು ಮಂದಿ ಇದನ್ನು ಕುಲಗೆಡಿಸಿದ್ದಾರೆ.

ಹಸಿರು ತಾಣದಲ್ಲಿ ಚಿಣ್ಣರ ಆಟದ ಚಿತ್ರಿಕೆ
ಹಸಿರು ತಾಣದಲ್ಲಿ ಚಿಣ್ಣರ ಆಟದ ಚಿತ್ರಿಕೆ

ಹುಣಸೂರಿನಲ್ಲೊಮ್ಮೆ ನೋಡಿದ್ದೆ; ನದಿಯೋ ಗಟಾರವೋ ಎಂಬಷ್ಟು ಗಬ್ಬು. ಹಾಳುಗೆಡುಹದೆ ನೆಮ್ಮದಿ ಇಲ್ಲವೇನೋ ನಮ್ಮ ಜನರಿಗೆ.
ಪುಟಾಣಿ ಮೆಟ್ಟಿಲ ಏರಿ ಪುಷ್ಪಗಿರಿಯ ಬುಡವನ್ನೊಮ್ಮೆ ಮುಟ್ಟಿ ಬರಬೇಕು. ಹೂವ ಕಣಿವೆ ತುಂಬಾ ಪುಷ್ಪಪಕಳೆ ಹಾಸಿದಂತಹ ಹಾದಿಯ ಹೊಕ್ಕು ಬರಬೇಕು. ಮರೆಯಲಾರಿರಿ ನೀವು ಎಂದೂ ಇರ್ಪು ಎಂಬ ಚಕೋರಿಯ.

ತರುಲತೆಯ ಹಾದುಬಂಡೆಯಿಂದ ಕುಪ್ಪಳಿಸುತ್ತಾ ಪುಳಕಗೊಳಿಸುವುದು. ಅರಸಿಕನ ಮನದ ಕದ ತೆರೆವ ತಾಣ!

ಪ್ಯಾಪಿಲೋ ಬುದ್ಧರು ಇಲ್ಲೆಲ್ಲ ಸಿಕ್ಕರು
ಪ್ಯಾಪಿಲೋ ಬುದ್ಧರು ಇಲ್ಲೆಲ್ಲ ಸಿಕ್ಕರು

ಇರ್ಪು ನಾಗರಹೊಳೆ ಅಭಯಾರಣ್ಯಕ್ಕೆ ಬಲು ಸನಿಹದಲ್ಲಿದೆ. ಇಲ್ಲಿಂದ ಬ್ರಹ್ಮಗಿರಿ, ಪುಷ್ಪಗಿರಿಗೆ ಚಾರಣ ಕೂಡ ಮಾಡಬಹುದು. ಕೊಡಗಿನ ಕೆಳತುದಿಯಲ್ಲಿರುವುದರಿಂದ ತಲುಪುದೇ ಬಲು ಕಷ್ಟ. ಈ ಜಲಪಾತ ವೀಕ್ಷಣೆಗೆ ಕೊಡಗಿನಿಂದ ಬಂದು ಹೋಗಲು ಒಂದಿಡೀ ದಿನ ಬೇಕಾಗುವುದು. ಈ ಜಲಪಾತದ ಬಳಿ ಈಶ್ವರ ದೇವಾಲಯವಿದೆ. ಪ್ರಕೃತಿ ಅಧ್ಯಯನಕ್ಕೆ ಹಲವು ತಂಡಗಳು ಬಂದು ಹೋಗುತ್ತವೆ. ಹಲವರು ತುಂಬಾ ದಿನ ಇಲ್ಲಿದ್ದು, ಜೀವಜಾಲದ ಅಧ್ಯಯನ ಮಾಡುತ್ತಾರೆ. ಒಟ್ಟಾರೆ ಪ್ರಕೃತಿಪ್ರಿಯರ ಸುಂದರ ತಾಣ ಇರ್ಪು.

ಒಂದೆರಡು ಪ್ಯಾಪಿಲೊ ಬುದ್ಧರ ಜೊತೆ ಜೊತೆಗೆ ಅನೇಕ ಚುಂಬಕ ಚಿಟ್ಟೆಗಳು ಅಲ್ಲಲ್ಲಿ ಕಾಣಸಿಕ್ಕವು. ಜೊತೆಗೊಂದಿಷ್ಟು ನೆನಪುಗಳು. ಸಿಕ್ಕೀತೆ ಮುಂದಿನ ದಾರಿ ನಾಳೆಗಾಗಿ ನಮ್ಮನ್ನುಳಿಸಿ ಎಂಬ ಲಕ್ಷ್ಮಣ ತೀರ್ಥದ ಆರ್ತನಾದ ನಮ್ಮನ್ನು ಇನ್ನೂ ತಾಕದಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT