ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌

Published 10 ಫೆಬ್ರುವರಿ 2024, 23:30 IST
Last Updated 10 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಪ್ರಪಂಚದ ಆರನೇ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌. ಇದು ನಮ್ಮ ಮಲೆನಾಡಿನ ಪುಟ್ಟ ಪಟ್ಟಣದಂತೆ ಕಾಣಿಸುತ್ತದೆ. ಈ ಪುಟಾಣಿ ದೇಶವು ಹತ್ತು ಹಲವು ಅಚ್ಚರಿಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ.

ಜಗತ್ತಿನ ಅತ್ಯಂತ ಚಿಕ್ಕ ದೇಶ ಯಾವುದು ಎಂದರೆ ‘ವ್ಯಾಟಿಕನ್‌ ಸಿಟಿ’ ಎಂದು ತಕ್ಷಣ ಹೇಳುತ್ತೇವೆ. ಆದರೆ ವ್ಯಾಟಿಕನ್ ಸಿಟಿಯನ್ನು ನೋಡಿದರೆ ಅದೊಂದು ಪ್ರತ್ಯೇಕ ದೇಶ ಎಂದು ಭಾವಿಸುವುದು ಕಷ್ಟವಾಗುತ್ತದೆ. ಏಕೆಂದರೆ ಅದು ರೋಮ್ ನಗರದ ಒಂದು ಬಡಾವಣೆಯಂತೆ ನಗರದೊಳಗೇ ಹೊಂದಿಕೊಂಡಿದೆ. ಇದು ಏನೇ ಆಗಲಿ, ರಾಜತಾಂತ್ರಿಕವಾಗಿ ಅದೊಂದು ಪ್ರತ್ಯೇಕ ದೇಶ.

ಹಾಗೆಯೇ ನಮ್ಮ ಯೂರೋಪ್ ಪ್ರವಾಸದಲ್ಲಿ ಪ್ರಪಂಚದ ಆರನೇ ಪುಟ್ಟ ದೇಶ, ಯುರೋಪ್‌ನ ನಾಲ್ಕನೇ ಚಿಕ್ಕ ದೇಶವಾದ ಲಿಕ್‌ಟನ್‌ಸ್ಟೈನ್‌ ನೋಡಲು ಹೋಗಿದ್ದೆವು. ಸುಮಾರು 160 ಚದರ ಕಿಲೋಮೀಟರ್‌ ಹಾಗೂ ಸುಮಾರು 38 ಸಾವಿರ ಜನಸಂಖ್ಯೆಯುಳ್ಳ ಪುಟ್ಟ ದೇಶವನ್ನು ಒಂದು ಗಂಟೆಯಲ್ಲಿಯೇ ಪೂರಾ ಸುತ್ತು ಹಾಕಬಹುದು. ಆಲ್ಪ್ಸ್‌ ಪರ್ವತ ಶ್ರೇಣಿಯಲ್ಲಿ ಆಸ್ಟ್ರಿಯಾ ಹಾಗೂ ಸ್ವಿಡ್ಜರ್ಲೆಂಡ್‌ ಎರಡು ದೇಶಗಳ ಮಡಿಲಲ್ಲಿರುವ ಈ ದೇಶ ಡಬಲ್ ಲ್ಯಾಂಡ್‌ಲಾಕ್ಡ್ ದೇಶ. ಅಂದರೆ, ಸಮುದ್ರತೀರಕ್ಕೆ ಹೋಗಲು ಎರಡು ದೇಶಗಳನ್ನು ದಾಟಿ ಹೋಗಬೇಕು. 17ನೇ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದಿಂದ ಬೇರ್ಪಟ್ಟು ಪ್ರತ್ಯೇಕ ರಾಷ್ಟ್ರವಾಗಿ ಅಂದಿನಿಂದ ‘ಪ್ರಿನ್ಸ್’ ಆಡಳಿತಕ್ಕೊಳಪಟ್ಟಿದೆ. ಚುನಾಯಿತ ಹಾಗೂ ನಾಮನಿರ್ದೇಶಿತ ಜನಪ್ರತಿನಿಧಿಗಳಿರುವ ಪಾರ್ಲಿಮೆಂಟ್ ಇರುತ್ತಾದರೂ ‘ಪ್ರಿನ್ಸ್’ ಈ ದೇಶದ ಸರ್ವಾಧಿಕಾರಿಯಾಗಿರುತ್ತಾರೆ.

ಪ್ರಸ್ತುತ ಹನ್ಸ್ ಆಡಮ್ 2 ಈ ದೇಶದ ಪ್ರಿನ್ಸ್ ಆಗಿದ್ದಾರೆ. ಜರ್ಮನ್ ಇಲ್ಲಿಯ ಮುಖ್ಯಭಾಷೆ. ಈ ಪುಟ್ಟ ದೇಶ ಬಹು ದೊಡ್ಡ ಅಚ್ಚರಿಯ ಸಂಗತಿಗಳನ್ನು ತುಂಬಿಕೊಂಡಿದೆ. 17ನೇ ಶತಮಾನದಲ್ಲಿ ಸ್ಥಾಪಿತವಾಗಿರುವ ಈ ದೇಶ ಇದುವರೆಗೂ ಯಾವ ಯುದ್ಧದಲ್ಲೂ ಭಾಗಿಯಾಗಿಲ್ಲ ಹಾಗೂ ಯುದ್ಧದಿಂದ ಬಾಧಿತವಾಗಿಲ್ಲ. ಏಕೆಂದರೆ ಈ ದೇಶದಲ್ಲಿ ಸೈನ್ಯ ಅಥವಾ ಮಿಲಿಟರಿಯೇ ಇಲ್ಲ! ಪೋಲೀಸರ ಸಂಖ್ಯೆಯೂ ಅತ್ಯಂತ ಕಡಿಮೆ ಇದ್ದು, ಅಪರಾಧ ಮುಕ್ತ ದೇಶವಾಗಿದೆ.

ವಡೂಜ್‌ ನಗರದಲ್ಲಿನ ಸೇಂಟ್‌ ಫ್ಲೋರಿನ್‌ ಚರ್ಚ್‌
ವಡೂಜ್‌ ನಗರದಲ್ಲಿನ ಸೇಂಟ್‌ ಫ್ಲೋರಿನ್‌ ಚರ್ಚ್‌

ತಲಾ ಜಿಡಿಪಿ ಪ್ರಕಾರ ಇದು ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ. ಜನಸಂಖ್ಯೆಗಿಂತ ಇಲ್ಲಿ ನೋಂದಾಯಿತ ಕಂಪನಿಗಳ ಸಂಖ್ಯೆ ಹೆಚ್ಚಾಗಿದೆ. ಕೃತಕ ದಂತಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಶೇಕಡ 20 ಕ್ಕಿಂತ ಅಧಿಕ ಕೃತಕ ದಂತಪಂಕ್ತಿಗಳು ಇಲ್ಲಿ ತಯಾರಾಗುತ್ತವೆ.

ಈ ದೇಶ ಈವರೆಗೂ ಹತ್ತು ಒಲಿಂಪಿಕ್ ಪದಕಗಳನ್ನು ಪಡೆದಿದ್ದು, ಜನಸಂಖ್ಯೆಗೆ ಹೋಲಿಸಿದರೆ ಅತಿ ಹೆಚ್ಚು ತಲಾ ಒಲಿಂಪಿಕ್ ಪದಕ ಪಡೆದ ದೇಶವಾಗಿದೆ. ಈ ದೇಶದಲ್ಲಿ ವಿಮಾನ ನಿಲ್ದಾಣವಿಲ್ಲ. ಆದರೆ ಸ್ವಿಡ್ಜರ್ಲೆಂಡ್‌ ಹಾಗೂ ಆಸ್ಟ್ರಿಯಾ ದೇಶಗಳ ರೈಲುಗಳು ಈ ದೇಶದ ಮೂಲಕ ಹಾದುಹೋಗುತ್ತವೆ. ದೇಶದ ರಾಜಧಾನಿ ವಡೂಜ್‌ನಲ್ಲಿ ಪುಟಾಣಿ ರೈಲು ಇದ್ದು (ನಮ್ಮಲ್ಲಿ ಮಕ್ಕಳ ಪಾರ್ಕ್‌ಗಳಲ್ಲಿರುವಂತೆ) ಒಂದರ್ಧ ಗಂಟೆಯಲ್ಲಿ ಇಡೀ ರಾಜಧಾನಿ ವಡೂಜ್‌ ನಗರವನ್ನು ಸಾವಕಾಶವಾಗಿ ಸುತ್ತು ಹಾಕಿಕೊಂಡು ಬರುತ್ತದೆ. ನಾವೂ ಕೂಡಾ ಈ ರೈಲಿನಲ್ಲಿ ಇಡೀ ದೇಶ ಸುತ್ತುಹಾಕಿ ಆನಂತರ ಇಲ್ಲಿರುವ ಭಾರತೀಯ ಹೋಟೆಲ್ ಒಂದರಲ್ಲಿ ಊಟ ಮಾಡಿದೆವು.

ಇನ್ನೊಂದು ಅತ್ಯಂತ ವಿಲಕ್ಷಣ ಘಟನೆಯೊಂದು ‘ಹೀಗೂ ಉಂಟೇ’ ಎಂದು ಅಚ್ಚರಿ ಮೂಡಿಸುತ್ತದೆ. 2007 ರಲ್ಲಿ ಸ್ವಿಸ್ ಸೈನ್ಯವು ತರಬೇತಿ ಸಮಯದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸುಮಾರು ಒಂದೂವರೆ ಕಿಲೋಮೀಟರ್‌ವರೆಗೂ ಈ ದೇಶದೊಳಗೆ ಬಂದುಬಿಟ್ಟಿತ್ತಂತೆ. ನಂತರ ಗೊತ್ತಿಲ್ಲದೇ ನಡೆದ ಈ ಅಚಾತುರ್ಯಕ್ಕಾಗಿ ಸ್ವಿಸ್ ದೇಶ ಈ ಲಿಕ್‌ಟನ್‌ಸ್ಟೈನ್‌ ದೇಶದ ಕ್ಷಮೆ ಕೋರಿತಂತೆ! ಅದುವರೆಗೂ ಈ ದೇಶದ ಯಾರಿಗೂ ಈ ಸಂಗತಿ ಗೊತ್ತೇ ಇರಲಿಲ್ಲವಂತೆ. ದೇಶ–ದೇಶಗಳ ನಡುವೆ ಗಡಿಗಾಗಿ, ಒಂದೇ ದೇಶದ ರಾಜ್ಯ, ರಾಜ್ಯಗಳ ಗಡಿಗಾಗಿ, ನದಿ ನೀರಿಗಾಗಿ ಯುದ್ಧಗಳೇ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಸಂಗತಿ ಅತ್ಯಂತ ಅಚ್ಚರಿ ಅನಿಸಿತು.

ವಡೂಜ್‌ ನಗರವನ್ನು ಈ ಪುಟಾಣಿ ರೈಲಿನಲ್ಲೇ ಸುತ್ತು ಹಾಕಿ ಬರಬಹುದು...
ವಡೂಜ್‌ ನಗರವನ್ನು ಈ ಪುಟಾಣಿ ರೈಲಿನಲ್ಲೇ ಸುತ್ತು ಹಾಕಿ ಬರಬಹುದು...

ಮುಂದುವರಿದ ದೇಶ ಎನಿಸಿಕೊಂಡರೂ ಇಲ್ಲಿನ ಮಹಿಳೆಯರು ಮತದಾನದ ಹಕ್ಕನ್ನು ಪಡೆದದ್ದು ಯುರೋಪಿನಲ್ಲಿಯೇ ಕಟ್ಟ ಕಡೆಯದಾಗಿ, ಅಂದರೆ 1984 ರಲ್ಲಿ.

ಹಿಮಾಚ್ಛಾದಿತ ಪರ್ವತಗಳು, ಹಚ್ಚ ಹಸುರಿನ ಸೌಂದರ್ಯರಾಶಿಯಿಂದ ತುಂಬಿರುವ ಈ ಅಚ್ಚರಿಯ ಅಚ್ಚುಕಟ್ಟಾದ ಪುಟ್ಟ ಪ್ರಶಾಂತ ದೇಶವನ್ನೊಮ್ಮೆ ನೋಡಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT