ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲಿನ ಮಾಂತ್ರಿಕ ಸಂಜೆ!

ಪ್ರವಾಸದಲ್ಲಿ ಸ್ವಾರಸ್ಯ
Last Updated 14 ಮೇ 2016, 19:37 IST
ಅಕ್ಷರ ಗಾತ್ರ

ಲಂಡನ್‌ ನಗರವನ್ನು ನೋಡುತ್ತ ನೋಡುತ್ತ ನಾವು ಸಮಯದ ಪರಿವೆ ಮರೆತಿದ್ದವು. ಇದರಿಂದಾಗಿ ರಾತ್ರಿಯ ಊಟ ತಪ್ಪಿಸಿಕೊಂಡಿದ್ದೆವು.

ಯುರೋಪ್‌ ಪ್ರವಾಸ ಕೈಗೊಳ್ಳಬೇಕು ಎನ್ನುವುದು ಆಗಾಗ ಕಾಡುತ್ತಲೇ ಇದ್ದ ಹಾಗೂ ಕೈಗೆಟುಕದ ದ್ರಾಕ್ಷಿಯಂತಿದ್ದ ಒಂದು ರಮ್ಯ ಕನಸು. ಈ ಕನಸು ಇತ್ತೀಚೆಗೆ ಕೈಗೂಡಿದಾಗ ಬಹಳ ದಿನ ಹಂಬಲಿಸಿದ್ದು ದೊರೆತಂತೆ ಮನಸ್ಸಿಗೆ ನಿರಾಳವೆನ್ನಿಸಿತು.

ಯುರೋಪ್ ಪ್ರವಾಸ ನಮ್ಮ ಪಾಲಿಗೆ ಸುಲಭದ್ದೇನಾಗಿರಲಿಲ್ಲ. 12 ದಿವಸಗಳಲ್ಲಿ 9 ದೇಶಗಳ 19 ಮಹಾನಗರಗಳನ್ನು ನಾವು ನೋಡಿ ಬರಬೇಕಾಗಿತ್ತು. ನಾವು 45 ಜನ ಖಾಸಗೀ ಪ್ರವಾಸೀ ಸಂಸ್ಥೆಯೊಂದರ ವತಿಯಿಂದ ಪ್ರವಾಸಕ್ಕೆ ಹೊರಟಿದ್ದೆವು. ಆ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿದ್ದರೆ, ಮರುದಿವಸದ ಸಂಜೆ ಲಂಡನ್ನಿನಲ್ಲಿ! ನೆನಪಿಸಿಕೊಂಡಷ್ಟೂ ಮೈಪುಳಕ!

ಪ್ರವಾಸದ ಸಮಯದಲ್ಲಿ ಸಿಹಿ ನೆನಪುಗಳು ಇದ್ದಂತೆಯೇ– ಈಗ ನೆನಪಿಸಿಕೊಂಡರೆ ತಮಾಷೆ ಅನ್ನಿಸುವ ಕಹಿ ಘಟನೆಗಳೂ ಇದ್ದವು. ಅಂಥದ್ದೊಂದು ಕಹಿ ಪ್ರಸಂಗವನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ.

ಮುಂಬೈ ಬಿಟ್ಟ ವಿಮಾನ ದೋಹಾದಲ್ಲಿ ನಮ್ಮನ್ನು ಇಳಿಸಿತಷ್ಟೇ.  ಅಲ್ಲಿ ಒಂದಷ್ಟು ತಾಸು ವಿಶ್ರಾಂತಿ ಪಡೆದು ಮತ್ತೊಂದು ವಿಮಾನ ಹತ್ತಿ ಲಂಡನ್ ತಲುಪಬೇಕಾಗಿತ್ತು, ತಲುಪಿದೆವು. ಲಂಡನ್ನಿಗೆ ಬಂದ ಮೇಲೆ ಒಮ್ಮೆಗೇ ಅನೇಕ ನೆನಪುಗಳು ಒತ್ತುವರಿದವು.

ನಮ್ಮ ದೇಶವನ್ನಾಳಿದ ದೇಶವನ್ನು ನೋಡುವುದು ಒಂದು ವಿಶಿಷ್ಟ ಅನುಭವವನ್ನು ಕೊಡುತ್ತದೆಯಲ್ಲವೇ? ಅಂಥ ವಿಶೇಷ ಅನುಭವವನ್ನೂ ನಾವು ಅನುಭವಿಸುತ್ತಿದ್ದೆವು.

ಅಂದಹಾಗೆ, ಲಂಡನ್ನಿನ ಸಮಯ ಭಾರತೀಯ ಸಮಯಕ್ಕಿಂತ ಐದೂವರೆ ತಾಸು ಹಿಂದೆ. ವಿಮಾನದಲ್ಲಿ ಕುಳಿತಾಗಲೇ ನಮ್ಮ ನಮ್ಮ ವಾಚು–ಮೊಬೈಲ್‌ಗಳಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡಿದ್ದೆವು. ಒಂದರ್ಥದಲ್ಲಿ ಕಾಲವನ್ನು ಹಿಂದಿಕ್ಕುವ ಹುರುಪು ನಮ್ಮದಾಗಿತ್ತು.

ಲಂಡನ್‌ನಲ್ಲಿ ನಾವು ಇಳಿದುಕೊಳ್ಳಬೇಕಾದ ಹೊಟೇಲ್ ತಲುಪಿ ನಮ್ಮ ನಮ್ಮ ರೂಮುಗಳ ಚಾವಿ ತೆಗೆದುಕೊಳ್ಳುವಾಗ ನಮ್ಮ ಟೂರ್ ಮ್ಯಾನೇಜರ್ ಸ್ಪಷ್ಟವಾಗಿ ಹೇಳಿದ್ದರು– ‘ಡಿನ್ನರ್ ವೇಳೆ ರಾತ್ರಿ 8ರಿಂದ 9ರವರೆಗೆ ಮಾತ್ರ. ಒಂಬತ್ತರ ನಂತರ ಬಂದರೆ ವೆಜಿಟೇರಿಯನ್ ವಿಭಾಗ ಬಂದ್ ಆಗಿಬಿಡುತ್ತದೆ.

ರೂಮಿಗೆ ಹೋಗಿ ಫ್ರೆಶ್ ಆಗಿ ಸ್ವಲ್ಪ ರೆಸ್ಟ್ ತೆಗೆದುಕೊಂಡು ಬನ್ನಿ’. ಅವರ ಮಾತಿನಲ್ಲಿ ತಡವಾಗಿ ಬಂದರೆ ಊಟ ತಪ್ಪಿಸಿಕೊಂಡು ಉಪವಾಸ ಇರಬೇಕಾಗುತ್ತದೆ ಎನ್ನುವ ಎಚ್ಚರಿಕೆ ಇರುವಂತಿತ್ತು.

ಕೋಣೆಗೆ ಹೋದ ನಾವು ಫ್ರೆಶ್ ಆದೆವು, ರೆಸ್ಟ್ ತೆಗೆದುಕೊಂಡೆವು. ಕಿಟಕಿಯಿಂದ ನೋಡಿದರೆ ಲಂಡನ್ನಿನ ಸಂಜೆ ಅದ್ಭುತವಾಗಿ ಕಾಣಿಸುತ್ತಿತ್ತು! ಹೀಗೆ ಕಿಟಕಿ ಮೂಲಕ ನಗರವನ್ನು ಆಸ್ವಾದಿಸುತ್ತ ಗಡಿಯಾರದ ಕಡೆ ನೋಡಿಕೊಂಡರೆ, ಆಗಲೇ ಒಂಬತ್ತೂವರೆ ಆಗಿಹೋಗಿದೆ! ರಾತ್ರಿ ಒಂಬತ್ತೂವರೆ ಸಮಯ ಕೂಡ ಅಲ್ಲಿ ಸಂಜೆಯಂತೆ ಇದ್ದುದು ನಮ್ಮ ಲಕ್ಷ್ಯಕ್ಕೇ ಬಂದಿರಲಿಲ್ಲ. ಸ್ವಲ್ಪ ರೆಸ್ಟ್‌ ಇದ್ದುದು ದೀರ್ಘ ರೆಸ್ಟ್ ಆಗಿಬಿಟ್ಟಿತ್ತು.

ಹೊಟ್ಟೆ ಚುರುಗುಟ್ಟುತ್ತಿತ್ತು. ಆದರೆ, ನಮ್ಮ ಮ್ಯಾನೇಜರ್‌ ಹೇಳಿದ ಎಚ್ಚರಿಕೆಯ ಮಾತು ನೆನಪಿಗೆ ಬಂತು. ‘ಅಪವೇಳೆ’ಯಲ್ಲಿ ಹೋಗಿ ‘ಮುಖಭಂಗ’ವಾಗಿ ಹಿಂತಿರುಗುವುದು ಬೇಡ ಅನ್ನಿಸಿತು. ನಾವು ಸಸ್ಯಾಹಾರಿಗಳಾದುದರಿಂದ ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವಂತೆಯೂ ಇರಲಿಲ್ಲ. ಹಾಗೆಂದು ಉಪವಾಸ ಇರಬೇಕಾದ ಅವಶ್ಯಕತೆಯೇನೂ ಇರಲಿಲ್ಲ. ಮನೆಯಿಂದ ಸಾಕಷ್ಟು ತಿನಿಸು – ಕುರುಕಲು ಜೊತೆಗೆ ಒಯ್ದಿದ್ದೆವು.

ಶೇಂಗಾ ಹೋಳಿಗೆ, ಹಚ್ಚಿದ ಅವಲಕ್ಕಿ ತಿಂದು ನೀರು ಕುಡಿದು ‘ಡಿನ್ನರ್’ ಮುಗಿಸಿದೆವು. ಹೀಗೆ ಲಂಡನ್‌ನಲ್ಲಿನ ಒಂದು ರಾತ್ರಿ ನಮ್ಮ ಪಾಲಿಗೆ ತವರಿಗೆ ಊಟವೇ ಒದಗಿಬಂತು.

ಈ ಅನುಭವ ಒಂದು ಪಾಠದ ರೂಪದಲ್ಲಿ ನಮಗೆ ಪರಿಣಮಿಸಿತು. ಸಾಮಾನ್ಯವಾಗಿ ನಮ್ಮಲ್ಲಿನ ಟೈಂ ಟೇಬಲ್‌ಗಳಲ್ಲಿ ಏರುಪೇರು ಆಗುವುದು ಸಾಮಾನ್ಯ. ಆದರೆ ವಿದೇಶಗಳಲ್ಲಿ ಹಾಗಲ್ಲ. ಅಲ್ಲಿ ಸಮಯ ಎಂದರೆ ಸಮಯ ಅಷ್ಟೇ. ಕೆಲವು ನಿಮಿಷಗಳು ಕೂಡ ಆಚೀಚೆ ಆಗದಷ್ಟು ಶಿಸ್ತು ಅಲ್ಲಿನ ಜನರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT