ಗ್ರಂಥಾಲಯ ಕಟ್ಟಡ ಶಿಥಿಲ, ಓದುಗರಲ್ಲಿ ಭಯ

7
ಸಂತೇಮರಹಳ್ಳಿ: ಉದುರುವ ಹೆಂಚು, ಮಳೆ ಬಂದರೆ ಒಳಗಡೆ ನೀರು

ಗ್ರಂಥಾಲಯ ಕಟ್ಟಡ ಶಿಥಿಲ, ಓದುಗರಲ್ಲಿ ಭಯ

Published:
Updated:
Deccan Herald

ಸಂತೇಮರಹಳ್ಳಿ: ಇಲ್ಲಿನ ಕೇಂದ್ರ ಸ್ಥಾನದಲ್ಲಿರುವ ಗ್ರಂಥಾಲಯದ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ಓದುಗರು ಗ್ರಂಥಾಲಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಳೆಯ ಕಟ್ಟಡ ಗ್ರಾಮಪಂಚಾಯಿತಿಯ ನಿರ್ವಹಣೆಯಲ್ಲಿದೆ. ಈ ಹಿಂದೆ ಇದೇ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡ ಹಳೆಯದು ಎಂಬ ಕಾರಣಕ್ಕೆ 10 ವರ್ಷಗಳ ಹಿಂದೆ ಪಂಚಾಯಿತಿ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆಸ್ಪತ್ರೆ ಬಳಿ ಇದ್ದ ಗ್ರಂಥಾಲಯವನ್ನು ಈ ಕಚೇರಿಗೆ ವರ್ಗಾಯಿಸಲಾಗಿತ್ತು.

ಕಟ್ಟಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಚಾವಣಿಯ ಹೆಂಚುಗಳು ಉದುರುತ್ತಿವೆ. ಕಿಟಕಿ ಬಾಗಿಲುಗಳು ಭದ್ರವಿಲ್ಲದೇ ಕಿತ್ತು ಬರುವ ಸ್ಥಿತಿಯಲ್ಲಿವೆ. ಗೋಡೆಗಳು ಶಿಥಿಲಾವಸ್ಥೆ ತಲುಪಿವೆ. ಮಳೆನೀರು ಧಾರಾಕಾರವಾಗಿ ಗೋಡೆಯ ಮೂಲಕ ಹರಿದು, ಗೋಡೆಗಳು ಬಿರುಕು ಬಿಟ್ಟಿವೆ.

ಒಂದು ಮಳೆ ಬಿದ್ದರೆ ಸಾಕು. ಪುಸ್ತಕಗಳು ಹಾಗೂ ಪತ್ರಿಕೆಗಳು ಒದ್ದೆಯಾಗುತ್ತವೆ. ತೇವಗೊಂಡ ಸಾಹಿತ್ಯ ಕೃತಿಗಳು ಹಾಗೂ ದಿನಪತ್ರಿಕೆಗಳನ್ನು ಬಿಸಿಲಿನಲ್ಲಿ ಒಣಗಿಸಿಡಬೇಕಾದ ಪರಿಸ್ಥಿತಿ ಇದೆ. ಬೆಲೆ ಬಾಳುವ ಪುಸ್ತಕಗಳು ಮಳೆಯಲ್ಲಿ ತೋಯ್ದು ಕಸದ ಬುಟ್ಟಿಗೆ ಸೇರುವಂತಾಗಿದೆ. 

ವಿದ್ಯುತ್‌ ವ್ಯವಸ್ಥೆಯೂ ಇಲ್ಲ: ಕಟ್ಟಡ ಶಿಥಿಲವಾಗಿರುವುದರಿಂದ ಗ್ರಂಥಾಲಯಕ್ಕೆ ಸರಿಯಾದ ವಿದ್ಯುತ್‌ ವ್ಯವಸ್ಥೆಯೂ ಇಲ್ಲ. ಪೀಠೋಪಕರಣಗಳೂ ಹಳೆಯದಾಗಿವೆ.

ಕ್ಷೀಣಿಸಿದ ಓದುಗರ ಸಂಖ್ಯೆ: ಕಟ್ಟಡ ಉತ್ತಮವಾಗಿದ್ದಾಗ ಪ್ರತಿದಿನ ನೂರಾರು ಓದುಗರು ಹಾಗೂ ಸಾಹಿತ್ಯಾಸಕ್ತರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಈಗ ಕಟ್ಟಡ ಎಲ್ಲಿ ಕುಸಿಯುವುದೋ ಎಂಬ ಭೀತಿಯಿಂದ ಓದುಗರು ಬರುತ್ತಿಲ್ಲ. ಹಾಗಾಗಿ, ಬೆರಳೆಣಿಕೆಯ ಓದುಗರು ಬರುತ್ತಿದ್ದಾರೆ.

‘ಗ್ರಂಥಾಯದಲ್ಲಿ ಪುಸ್ತಕಗಳು, ಪತ್ರಿಕೆಗಳೇನೋ ಲಭ್ಯವಿವೆ. ಆದರೇ, ನೆಮ್ಮದಿಯಿಂದ ಕುಳಿತು ಓದುವಷ್ಟು ಸುಸ್ಥಿಯಲ್ಲಿ ಕಟ್ಟಡ ಇಲ್ಲ’ ಎಂದು ಓದುಗರು ದೂರುತ್ತಾರೆ.

‘ಗ್ರಂಥಾಲಯದಲ್ಲಿ ಕುಳಿತು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದಲು ಭಯ ಆಗುತ್ತಿದೆ. ಕಟ್ಟಡದ ಹೊರಗಡೆ ತಂದು ದಿನಪತ್ರಿಕೆಗಳನ್ನು ಓದುತ್ತಿದ್ದೇವೆ. ಈ ಭಾಗದಲ್ಲಿ ಪತ್ರಿಕೆಗಳ ಓದುಗರು ಮತ್ತು ಪುಸ್ತಕ ಪ್ರಿಯರ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಸ ಗ್ರಂಥಾಲಯ ಕಟ್ಟಡ ನಿರ್ಮಿಸಬೇಕು’ ಎಂದು ಓದುಗ ಕುಮಾರ್ ಹೇಳುತ್ತಾರೆ.

‘ಕಟ್ಟಡ ಸಂಪೂರ್ಣ ಹಾಳಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ₹ 20 ಲಕ್ಷ ವೆಚ್ಚದಲ್ಲಿ ನೂತನ ಗ್ರಂಥಾಲಯ ನಿರ್ಮಿಸಲು ತಾಲ್ಲೂಕು ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ತಾಲ್ಲೂಕು ಪಂಚಾಯಿತಿ ಈ ಕ್ರಿಯಾ ಯೋಜನೆಯನ್ನು ತಿರಸ್ಕರಿಸಿದೆ. ಕಾರಣ ಗೊತ್ತಿಲ್ಲೆ’ ಎಂದು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಚಂದ್ರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ’

ನರೇಗಾ ಯೋಜನೆಯಲ್ಲಿ ಅಂಗನವಾಡಿ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ನಿರ್ಮಿಸಬಹುದು. ಗ್ರಂಥಾಲಯ ಕಟ್ಟಡ ನಿರ್ಮಿಸಲು ಅವಕಾಶ ಇಲ್ಲ. ಹಾಗಾಗಿ ನರೇಗಾ ಅನುದಾನದ ಕ್ರಿಯಾಯೋಜನೆಯನ್ನು ವಾಪಸ್‌ ಮಾಡಲಾಗಿದೆ. ಬೇರೆ ಅನುದಾನ ಬಳಸಿಕೊಂಡು ಗ್ರಂಥಾಲಯ ಕಟ್ಟಡ ನಿರ್ಮಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !