ಬುಧವಾರ, ಫೆಬ್ರವರಿ 26, 2020
19 °C

LIVE| ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ| ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಹೋರಾಟಗಾರರು 

Published:
Updated:
ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಂತೆ ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು 100 ದಿನಗಳಿಂದ ನಡೆಸುತ್ತಿದ್ದ ಧರಣಿ ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಹೋರಾಟಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಲಾಗಿದ್ದು, ಹೋರಾಟಗಾರರು ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕನ್ನಡ ಕಾರ್ಯಕರ್ತರು ಮೆರವಣಿಗೆ ನಡೆಸಲಿದ್ದಾರೆ.ಈ ಹೋರಾಟಕ್ಕೆ ಹಲವು ಕನ್ನಡಪರ ಸಂಘಟನೆಗಳು, ರಾಜಕೀಯ ಪಕ್ಷಗಳೂ ಬೆಂಬಲ ನೀಡಿವೆ. ಈ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.
 • 01:01 pm

  ಬೀದರ್‌: ಕನ್ನಡ ಸಂಘಟನೆಗಳ ಪ್ರತಿಭಟನೆ

  ಬೀದರ್‌:  ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ನಗರದ  ಜಿಲ್ಲಾಧಿಕಾರಿ ಕಚೇರಿ ಸಮೀಪ ಗುರುವಾರ ಪ್ರತಿಭಟನೆ ನಡೆಸಿದರು.

  ಕರ್ನಾಟಕ ರಕ್ಷಣಾ ವೇದಿಕೆ(ರಿ) ಸ್ವಾಭಿಮಾನ ಸೇನೆ, ಕರ್ನಾಟಕ ವಿಶ್ವನಿರ್ಮಾಣ ಸೇನೆ ಹಾಗೂ ದಲಿತ ಸಮರ ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿದರು. ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

  ಜಿಲ್ಲೆಯಲ್ಲಿ ಯಾವುದೇ ಸಂಘಟನೆ ಬಂದ್‌ಗೆ ಕರೆ ನೀಡಿರಲಿಲ್ಲ.  ಬಸ್ ಹಾಗೂ ಆಟೊ, ಸಂಚಾರ ಎಂದಿನಂತಿದೆ.  ಮಾರುಕಟ್ಟೆ ವಹಿವಾಟು ಸಹಜವಾಗಿದ್ದು, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

 • 11:46 am

  ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಹೋರಾಟಗಾರರು 

  ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿರುವ ಕನ್ನಡ ಪರ ಹೋರಾಟಗಾರರು ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.  

 • 11:03 am

  ಓಲಾ, ಉಬರ್‌ ಕ್ಯಾಬ್‌ ಚಾಲಕರ ಸಂಘದಿಂದ ಬಂದ್‌ಗೆ ಬೆಂಬಲ

  ಓಲಾ, ಉಬರ್‌ ಸೇರಿದಂತೆ ಕ್ಯಾಬ್‌ ಚಾಲಕರ ಸಂಘಟನೆಗಳು ಇಂದಿನ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿವೆ. ಈ ಕುರಿತು ಸಂಘಟನೆ ಮುಖ್ಯಸ್ಥ ತನ್ವೀರ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೇವೆ ಸ್ಥಗಿತಗೊಳಿಸುವಂತೆ ನಮ್ಮ ಚಾಲಕರಿಗೆ ಸೂಚಿಸಿದ್ದೇವೆ. ನಾವು ಬಂದ್‌ಗೆ ಬೆಂಬಲ ನೀಡಿದ್ದೇವೆ. ಸಂಘದ ಅಡಿಯಲ್ಲಿ  ನೊಂದಾಯಿಸಲ್ಪಟ್ಟ 70 ಸಾವಿರ ವಾಹನಗಳು ನಿತ್ಯ ಸಂಚರಿಸುತ್ತವೆ. ಆದರೆ, ಇಂದು ಸೇವೆ ನಿಲ್ಲಿಸುತ್ತಿದ್ದೇವೆ ಎಂದು ತನ್ವೀರ್‌ ಹೇಳಿದ್ದಾರೆ. 

 • 09:54 am

  ಮುನ್ನೆಚ್ಚರಿಕಾ ಕ್ರಮವಾಗಿ 180 ಮಂದಿ ವಶಕ್ಕೆ

  ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೌಡಿಶೀಟರ್ ಗಳು ಸೇರಿ 180 ಮಂದಿಯನ್ನು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಉತ್ತರ ವಿಭಾಗದ ಪೊಲೀಸರು ಗುರುವಾರ ನಸುಕಿನಲ್ಲಿ ವಶಕ್ಕೆ ಪಡೆದಿದ್ದಾರೆ. ನಸುಕಿನಲ್ಲಿ 4 ಗಂಟೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬುಧವಾರ ರಾತ್ರಿ ಪೊಲೀಸ್ ಅಧಿಕಾರಿಗಳು ವಿಶೇಷ ಗಸ್ತು ನಡೆಸಿದ್ದಾರೆ. ಈ ವೇಳೆ, ಹಿಂದೆ ಕಾವೇರಿ ಹೋರಾಟ ಸೇರಿದಂತೆ ಹಲವು ಪ್ರತಿಭಟನೆಗಳಲ್ಲಿ ಭಾಗಿಯಾದವರು ಸೇರಿ ರೌಡಿಶೀಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರ ಪೈಕಿ ಕೆಲವರು ಶಂಕಾಸ್ಪದವಾಗಿ ತಿರುಗಾಡುತ್ತಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದರು.

 • 10:17 am

  ಬಳ್ಳಾರಿಯಲ್ಲಿ ಬೃಹತ್‌ ಮೆರವಣಿಗೆಗೆ ಕನ್ನಡ ಸಂಘಟನೆಗಳು ಸಜ್ಜು

  ವಾಹನಗಳು ಸಂಚರಿಸುತ್ತಿವೆ. ಅಂಗಡಿ, ಹೋಟೆಲುಗಳಲ್ಲಿ ವ್ಯಾಪಾರ ಚಟುವಟಿಕೆ ನಡೆಯುತ್ತಿದೆ. ಕರ್ನಾಟಕ ಸಂಘಟನೆಗಳ ಒಕ್ಕೂಟ ಮತ್ತು ಪ್ರಗತಿಪರ ಹೋರಾಟಗಾರರು ನಗರದ ನಗರೂರು ನಾರಾಯಣರಾವ್ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲು ‌ಸಜ್ಜಾಗಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

 • 10:15 am

  ಹಾವೇರಿಯಲ್ಲಿ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ +

  ಹಾವೇರಿ: ಡಾ.ಸರೋಜಿನಿ ಮಹಿಷಿ ವರದಿ  ಆಗ್ರಹಿಸಿ ವಿವಿಧಪರ ಸಂಘಟನೆಗಳು ಕರ್ನಾಟಕ ಬಂದಗೆ ಕರೆ ನೀಡಿವೆ.  ಆದರೆ  ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ . ಜಿಲ್ಲೆಯಾದ್ಯಂತ ಎಂದಿನಂತೆ ನಗರದಲ್ಲಿ ಬಸ್, ಆಟೊ ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತೀವೆ. ಎಂದಿನಂತೆ ಜನಜೀವನವಿದ್ದು ಅಂಗಡಿ ಮುಂಗಟ್ಟುಗಳು ತೆರೆದಿವೆ.

      ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜು ಎಂದಿನಂತೆ ಕಾರ್ಯ ನಿರ್ವಹಿಸಲಿವೆ‌. ಅಲ್ಲದೆ ವಿದ್ಯಾರ್ಥಿಗಳ ಪೂರ್ವತಯಾರಿ ಪರೀಕ್ಷೆಗಳು ಸಹ ನಡೆಯುತ್ತಿವೆ. 

  ಈ ಮಧ್ಯೆ ಹಾವೇರಿ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಿವೆ‌‌‌‌.

 • 10:02 am
 • 09:53 am
 • 09:51 am

  ರಾಯಚೂರು: ಬಂದ್‌ಗೆ ಪ್ರತಿಕ್ರಿಯೆ ಇಲ್ಲ

  ರಾಯಚೂರು: ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಕೆರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪೊಲೀಸರು ಜನದಟ್ಟಣೆಯ ಕೇಂದ್ರಗಳಲ್ಲಿ ಬಂದೋಬಸ್ತ್ ಮಾಡಿದ್ದು, ಮಧ್ಯಾಹ್ನ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ. ಜನಜೀವನ ಎಂದಿನಂತಿದೆ. ಶಾಲಾ, ಕಾಲೇಜುಗಳು ಕಾರ್ಯಾರಂಭಿಸಿವೆ. ವ್ಯಾಪಾರ, ಸರ್ಕಾರಿ ಬಸ್ ಹಾಗೂ ಇತರೆಲ್ಲ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿಲ್ಲ.

 • 09:50 am

  ಬಂದ್ ಆತಂಕದಲ್ಲಿ ಮುಂಚಿತವಾಗಿಯೇ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು

  ದೇವನಹಳ್ಳಿ: ಬಂದ್ ಆತಂಕದಿಂದ ಕೆಂಪೇಗೌಡ ಅಂತರರಾಷ್ಟ್ರೀಯ. ವಿಮಾನ ನಿಲ್ದಾಣದಲ್ಲಿ ದಟ್ಟಣೆ ಉಂಟಾಗಿದೆ. ಬೆಳಗ್ಗೆ ಮಾತ್ರವಲ್ಲದೆ ಮಧ್ಯಾಹ್ನದ ಬಳಿಕ ಹೊರರಾಜ್ಯ ಮತ್ತು ದೂರದ ಪ್ರದೇಶಗಳಿಗೆ ತೆರಳುವ  ಪ್ರಯಾಣಿಕರು ಬಂದು ಸೇರಿದ್ದು ಹೆಚ್ಚಿನ ಜನದಟ್ಟಣೆ ಕಂಡುಬಂತು.
  ಟಿಕೆಟ್ ಇದ್ದವರನ್ನು ಮಾತ್ರ ಸದ್ಯ ವಿಮಾನನಿಲ್ದಾಣದ ಒಳಕ್ಕೆ ಬಿಡಲಾಗುತ್ತಿದೆ.

 • 09:39 am

  ತಿರುಪತಿ–ಮಂಗಳೂರು ಬಸ್‌ಗೆ ಕಲ್ಲು

  ತಿರುಪತಿ–ಮಂಗಳೂರು ಬಸ್‌ಗೆ ಫರಂಗಿಪೇಟೆಯಲ್ಲಿ ಕಲ್ಲು ತೂರಲಾಗಿದೆ. 

 • 09:38 am

  ಕನ್ನಡಪರ ಹೋರಾಟಗಾರ ಪ್ರವೀಣ್‌ ಶೆಟ್ಟಿಗೆ ಗೃಹ ಬಂಧನ

 • 09:37 am

  ಕೊಡಗಿನಲ್ಲಿ ಪರಿಣಾಮ ಬೀರದ ಬಂದ್

  ಮಡಿಕೇರಿ: ಕೊಡಗಿನಲ್ಲಿ ಬಂದ್ ಯಾವುದೇ ಪರಿಣಾಮ ಬೀರಿಲ್ಲ. ಜನಜೀವನ ಸಹಜ ಸ್ಥಿತಿಯಲ್ಲಿದೆ. ವಾಹನಗಳು ಎಂದಿನಂತೆಯೇ ಸಂಚರಿಸುತ್ತಿವೆ. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ ಹಾಗೂ ವಿರಾಜಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದು ವ್ಯಾಪಾರ ನಡೆಯುತ್ತಿದೆ.

 • 09:36 am

  ಹೊಸಪೇಟೆ: ನೀರಸ ಪ್ರತಿಕ್ರಿಯೆ

  ಹೊಸಪೇಟೆ: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
  ಎಂದಿನಂತೆ ಸಾರಿಗೆ ಸಂಸ್ಥೆ ಬಸ್ಸುಗಳು, ಆಟೊಗಳು ಸಂಚರಿಸುತ್ತಿವೆ. ಶಾಲಾ-ಕಾಲೇಜುಗಳು ತೆರೆದಿವೆ. ಜನಜೀವನ ಸಹಜವಾಗಿದೆ.

 • 09:35 am

  ಉಡುಪಿಯಲ್ಲಿಲ್ಲ ಬಂದ್‌ ಕಾವು

  ಉಡುಪಿ: ಸರೋಜಿನಿ ಮಹಿಷಿ ವರದಿ ಜಾರಿಗೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‌ ಜಿಲ್ಲೆಯಲ್ಲಿ ನೀರಸವಾಗಿದೆ.
  ವ್ಯಾಪಾರ ವಹಿವಾಟು ಎಂದಿನಂತಿದೆ.  ಶಾಲಾ ಕಾಲೇಜುಗಳು ತರೆದಿವೆ. ಬಸ್ ಸಂಚಾರ, ಆಟೊ ಸಂಚಾರದಲ್ಲೂ ವ್ಯತ್ಯಯವಾಗಿಲ್ಲ.

 • 09:34 am

  ಸರೋಜಿನಿ ಮಹಿಷಿ ವರದಿ ಜಾರಿ ಆಗಬೇಕು ಆದರೆ, ಇಂದಿನ ಹೋರಾಟಕ್ಕೆ ಬೆಂಬಲವಿಲ್ಲ: ಸ್ಥಳೀಯ ಸಂಘಟನೆಗಳು

  ತುಮಕೂರು: ಸರೋಜಿನಿ ಮಹಿಷಿ ವರದಿಯ ಜಾರಿಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಸ್ಥಳೀಯ ಸಂಘಟನೆಗಳು ಬೆಂಬಲ ನೀಡಿಲ್ಲ.

  ಬಂದ್‌ ಕರೆಗೆ ಜಿಲ್ಲಾ ಕನ್ನಡ ಪರ ಸಂಘಟನೆಗಳಲ್ಲೇ ಅಸಮಾಧಾನವಿದ್ದು, ಜಿಲ್ಲೆಯ ಪ್ರಮುಖ ಕನ್ನಡಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ), ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ), ಜಯ ಕರ್ನಾಟಕ, ಕನ್ನಡ ಸೇನೆ ಸಂಘಟನೆಗಳು ಬಂದ್‌ಗೆ ಯಾವುದೇ ಬೆಂಬಲ ವ್ಯಕ್ತಪಡಿಸಿಲ್ಲ.

  ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ)ದ ಜಿಲ್ಲಾ ಘಟಕದ ಅಧ್ಯಕ್ಷ ರಘುರಾಮ್ 'ಪ್ರಜಾವಾಣಿ'ಯೊಂದಿಗೆ ಮಾತನಾಡಿ, ‘ನಾವು ಸರೊಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ, ಬೆಂಗಳೂರಿನ ಕೆಲ ಸಂಘಟನೆಗಳು ತಮ್ಮ ಸ್ವಹಿತಾಸಕ್ತಿಗೋಸ್ಕರ ಬಂದ್‌ಗೆ ಕರೆ ನೀಡಿವೆ. ಆದರೆ, ಈ ಬಂದ್‌ಗೆ ನಮ್ಮ ಯಾವುದೇ ಬೆಂಬಲ ಇಲ್ಲ’ ಎಂದು ತಿಳಿಸಿದರು.

  ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಾ ಕುಮಾರ್ ಪ್ರತಿಕ್ರಿಯಿಸಿ, ‘ಬಂದ್‌ಗೆ ನಮ್ಮ ಸಂಘಟನೆಯ ಯಾವುದೇ ಬೆಂಬಲವಿಲ್ಲ’ ಎಂದು ತಿಳಿಸಿದ್ದಾರೆ.

  ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಪ್ರತಿಕ್ರಿಯಿಸಿ, ‘ಬಂದ್‌ಗೆ ಸಂಘದ ನೈತಿಕ ಬೆಂಬಲವಿದೆ. ಆದರೆ, ಎಂದಿನಂತೆ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

  ಸಿಐಟಿಯು ಜಿಲ್ಲಾ ಸಂಘಟನೆಯ ಅಧ್ಯಕ್ಷ ಮುಜೀಬ್ ಮಾತನಾಡಿ, ‘ಬಂದ್‌ ಕುರಿತು ನಾವು ಕೇವಲ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ಮಾತ್ರವೇ ಕೇಳುತ್ತಿದ್ದೇವೆ. ಆದರೆ, ಬಂದ್‌ಗೆ ಬೆಂಬಲ ಸೂಚಿಸುವಂತೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಜಿಲ್ಲೆಯಲ್ಲಿ ಬಂದ್‌ನ ಸ್ವರೂಪವೇನು? ಯಾವ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಹಾಗಾಗಿ ನಾವು ಈ ವಿಚಾರದಲ್ಲಿ ತಟಸ್ಥರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

 • 09:32 am

  ಬಾಗಲಕೋಟೆ: ಬಂದ್ ಗೆ ಬೆಂಬಲ ಇಲ್ಲ, ಎಂದಿನಂತೆಯೇ ಜನಜೀವನ

  ಬಾಗಲಕೋಟೆ: ಜಿಲ್ಲೆಯಲ್ಲಿ ಬಂದ್ ಗೆ ಬೆಂಬಲ ಸಿಕ್ಕಿಲ್ಲ. ಜನಜೀವನ ಎಂದಿನಂತೆಯೇ ಇದ್ದು, ಶಾಲಾ-ಕಾಲೇಜು,ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ವಾಹನ ಸಂಚಾರ ದೈನಂದಿನಂತೆಯೇ ಇದೆ.

  ಬಂದ್ ನಲ್ಲಿ ಭಾಗವಹಿಸುವುದಿಲ್ಲ. ನಮ್ಮದು ಬರೀ ನೈತಿಕ ಬೆಂಬಲ ಮಾತ್ರ ಎಂದು ಕನ್ನಡ ಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಬುಧವಾರವೇ ಸ್ಪಷ್ಟನೆ ನೀಡಿವೆ. 

  ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಮಾತ್ರ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಕೊಡಲು ಮುಂದಾಗಿದೆ.

 • 09:31 am

  ವಿಜಯಪುರ: ಬಂದ್‌ ಬಿಸಿ ಇಲ್ಲ

  ವಿಜಯಪುರ: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಆದರೆ, ಕೆಲ ಅನುದಾನಿತ ಶಾಲೆಗಳು ರಜೆ ಘೋಷಿಸಿವೆ. ಬಸ್, ಆಟೊ, ಖಾಸಗಿ ವಾಹನಗಳ ಸಂಚಾರ ಎಂದಿನಂತಿದ್ದು, ಜನಜೀವನ ಸಹಜವಾಗಿದೆ.

 • 09:28 am

  ಕಲಬುರ್ಗಿ: ಎಂದಿನಂತೇ ಜನಜೀವನ

  ಕಲಬುರ್ಗಿ: ಸರೋಜಿನಿ ‌ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ‌ಕರೆ ನೀಡಿರುವ ಕರ್ನಾಟಕ ಬಂದ್ ಗೆ ನಗರದಲ್ಲಿ ‌ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಶಾಲಾ ಕಾಲೇಜುಗಳು ‌ಎಂದಿನಂತಿದ್ದು, ವಾಹನ ಸಂಚಾರವೂ‌ ಸರಾಗವಾಗಿದೆ. ಹೋಟೆಲ್ ‌ಹಾಗೂ‌ ಬೇಕರಿ ಮಾಲೀಕರ ಸಂಘವು ಬಂದ್ ಗೆ ನೈತಿಕ ಬೆಂಬಲವನ್ನಷ್ಟೇ ನೀಡಲಾಗುವುದು.‌ ಬಂದ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ‌ಸ್ಪಷ್ಟಪಡಿಸಿದೆ.

 • 09:27 am

  ಬಂದ್‌ಗೆ ಸ್ಪಂದಿಸದ ಗದಗ

  ಗದಗ: ಜಿಲ್ಲೆಯಾದ್ಯಂತ ಕರ್ನಾಟಕ ಬಂದ್‌ಗೆ ಬೆಂಬಲ‌ ಸಿಕ್ಕಿಲ್ಲ. ಬಸ್, ಆಟೊ ಸಂಚಾರ ಎಂದಿನಂತಿದೆ. ಜನಜೀವನ ಎಂದಿನಂತೆ ಸಹಜವಾಗಿದೆ. ಸಂಘಟನೆಗಳು ಬಂದ್ ಗೆ ಬೆಂಬಲ ಕೊಟ್ಟಿಲ್ಲ.
  ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಪ್ರಥಮ ಪಿಯುಸಿ ಇಂಗ್ಲಿಷ್ ಪರೀಕ್ಷೆ ಇದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳುತ್ತಿರುವ ಚಿತ್ರಣ ಕಂಡುಬರುತ್ತಿದೆ. ಅಂಗಡಿಗಳು ತೆರೆದಿದ್ದು, ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಎಂದಿನಂತಿದೆ.

 • 09:26 am

  ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ಭದ್ರತೆ

  ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

  ಮೆಜೆಸ್ಟಿಕ್, ಕೆ. ಆರ್. ಮಾರ್ಕೆಟ್, ಸಂಗೊಳ್ಳಿ ರಾಯಣ್ಞ ರೈಲಿ ನಿಲ್ದಾಣ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ‌.

  ಬಿಎಂಟಿಸಿ ಬಸ್ ಗಳು ಎಂದಿನಂತೆ ಓಡಾಡುತ್ತಿವೆ. ಆದರೆ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಸ್ ಸಂಚಾರ ತಡೆಯಲು ಯತ್ನಿಸಿದರು. ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

  ಆನಂದ ರಾವ್ ವೃತ್ತದಲ್ಲಿ ಹೋಟೆಲ್ ಗಳನ್ನು ಬಲವಂತವಾಗಿ ಬಂದ್ ಮಾಡಲು ಯತ್ನಿಸಿದರು. ಈ ವೇಳೆ ಬಂದ್ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ‌ ನಡೆಯಿತು.

 • 09:25 am

  ಬೆಂಗಳೂರಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

  ಬೆಂಗಳೂರು:  ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

  ಪುರಭವನ ಬಳಿ ಕೆಎಸ್ಆರ್ ಪಿ ಎರಡು ತುಕಡಿಗಳನ್ನು ನಿಯೋಜಿಸಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.

  ಅಂಬೇಡ್ಕರ್ ಸೇನೆ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಮಾತ್ರ ಪ್ರತಿಭಟನಾ ರ್ಯಾಲಿ ನಡೆಸಲು ಅನುಮತಿ ಸಿಕ್ಕಿದೆ. ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸೂಚಿಸಲಾಗಿದೆ. ಬೆಳಿಗ್ಗೆ 11.30ಕ್ಕೆ ಸಿಟಿ ರೈಲು ನಿಲ್ದಾಣದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಪ್ರತಿಭಟನಾ ರ್ಯಾಲಿ ಆರಂಭವಾಗಲಿದ್ದು,  ಸ್ವಾತಂತ್ರ್ಯ ಉದ್ಯಾನದವರೆಗೆ ನಡೆಸಲು ಸಂಘಟನೆಗಳು ನಿರ್ಧರಿಸಿವೆ. ಆದನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ ರಾ್ಯಲಿ ನಡೆಸಲು ಪೊಲೀಸರು ಅನುಮತಿ ನೀಡಿಲ್ಲ.

  ಪರಿಣಾಮ ಬೀರದ ಬಂದ್: ವಾಹನ ಸಂಚಾರದ ಮೇಲೆ ಬಂದ್ ಯಾವುದೇ ಪರಿಣಾಮ ಬೀರಿಲ್ಲ. ಮೆಜೆಸ್ಟಿಕ್ ನಲ್ಲಿ ಬಸ್ ಸಂಚಾರ ಎಂದಿನಂತಿದೆ. ಅಂಗಡಿ ಮುಂಗಟ್ಟುಗಳು ಒಂದೊಂದಾಗಿ ತೆರೆಯುತ್ತಿವೆ. ಜನರ ಓಡಾಟವೂ ನಿತ್ಯದಂತೆ ಇದೆ. ಎಂದಿನಂತೆ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಗಳು ಓಡಾಡುತ್ತಿವೆ. ಆಟೊ ಸಂಚಾರದಲ್ಲೂ ವ್ಯತ್ಯಯ ಉಂಟಾಗಿಲ್ಲ.

  ಮೈಸೂರು ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಸ್ ಸಂಚಾರ ತಡೆಯಲು ಯತ್ನಿಸಿದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಆಗ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.

 • 08:32 am

  ಬೆಂಗಳೂರು ವಿವಿ ಪರೀಕ್ಷೆಗಳು ಮುಂದಕ್ಕೆ

  ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಬಂದ್‌ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಎನ್‌ಐ ವರದಿ ಮಾಡಿದೆ. 

 • 08:29 am

  ಒತ್ತಾಯಪೂರ್ವಕವಾಗಿ ಬೆಂಬಲ ಪಡೆಯುವಂತಿಲ್ಲ

  ಬಂದ್‌ಗೆ ಬೆಂಬಲಿಸುವಂತೆ ಪ್ರತಿಭಟನಾಕಾರರು ಯಾರನ್ನೂ ಒತ್ತಾಯಪಡಿಸುವಂತಿಲ್ಲ, ಅಂಗಡಿ ಮಳಿಗೆಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ ಎಂದು ಬೆಂಗಳೂರು ಪೊಲೀಸ್‌ ಕಮಿಷನರ್‌ ಎಚ್ಚರಿಸಿದ್ದಾರೆ. 

 • 08:25 am

  ಬಿಎಂಟಿಸಿ ಎಂದಿನಂತೇ ಕಾರ್ಯಚರಣೆ: ಟ್ವೀಟ್‌

 • 08:18 am

  ಹೋರಾಟಗಾರರೊಂದಿಗೆ ಮಾತುಕತೆಗೆ ಸಿದ್ಧನಿದ್ದೇನೆ

  ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಲು ನಿರ್ಧರಿಸಿರುವವರೊಂದಿಗೆ ಮಾತುಕತೆಗೆ ಸಿದ್ಧನಿದ್ದೇನೆ. ಕರ್ನಾಟಕ ಬಂದ್‌ ಕೈಬಿಡಿ. ನಿಮ್ಮ ಬೇಡಿಕೆಗಳಲ್ಲಿ ಸಾಧ್ಯವಾಗುವುದನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಜನರಿಗೆ ತೊಂದರೆ ಆಗುವುದು ಬೇಡ -ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

 • 08:18 am

  ಶಾಲಾ– ಕಾಲೇಜಿಗೆ ರಜೆ ಇಲ್ಲ

  ಬಂದ್‌ ವೇಳೆ ಶಾಲಾ– ಕಾಲೇಜುಗಳಿಗೆ ರಜೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ. ಆದಾಗ್ಯೂ ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ಜಿಲ್ಲಾಡಳಿತ ಕ್ರಮ ಕೈಗೊಳ್ಳಬಹುದು ಎಂದೂ ಅವರು ತಿಳಿಸಿದ್ದಾರೆ.

 • 08:17 am

  ರಾಮನಗರದಲ್ಲಿ ಪರಿಣಾಮ ಬೀರದ ಬಂದ್

  ರಾಮನಗರ: ಕನ್ನಡಪರ ಸಂಘಟನೆಗಳ ಬಂದ್ ಕರೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಎಂದಿನಂತೆ ಇದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸುಗಮವಾಗಿದೆ. ಶಾಲೆ, ಕಾಲೇಜುಗಳು ತೆರೆದಿರಲಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ರೇಷ್ಮೆ ಮಾರುಕಟ್ಟೆ ಗೆ ರೈತರು ಉತ್ಪನ್ನ ತಂದಿದ್ದಾರೆ. ಜಿಲ್ಲೆಯ‌ ಚನ್ನಪಟ್ಟಣ, ಮಾಗಡಿ, ಕನಕಪುರ ತಾಲ್ಲೂಕಿನಲ್ಲೂ ಬಂದ್ ಪರಿಣಾಮ ಬೀರಿಲ್ಲ.  ಪ್ರತಿಭಟನೆ ಮೂಲಕ ಜಿಲ್ಲಾಡಳಿತ ಕ್ಕೆ ಮನವಿ ಸಲ್ಲಿಸುವುದಾಗಿ‌ ಕನ್ನಡಪರ ಸಂಘಟನೆಗಳು ತಿಳಿಸಿವೆ.

 • 08:16 am

  ಚಿಕ್ಕಮಗಳೂರಿನಲ್ಲಿ ಎಂದಿನಂತೇ ಜನ ಜೀವನ

  ಆಟೊ, ಬಸ್ಸು, ವಾಹನ ಸಂಚಾರ ಮಾಮೂಲಿ ಇದೆ. ಅಂಗಡಿ, ಹೋಟೆಲ್, ಮಳಿಗೆಗಳು ತೆರೆದಿವೆ. ಬಂದ್‌ ಬಿಸಿ ಇಲ್ಲಿ ತಟ್ಟಿಲ್ಲ. 

 • 08:16 am

  ಬಂದ್ ಗೆ ಚಿಕ್ಕಬಳ್ಳಾಪುರದಲ್ಲಿ ನೀರಸ ಪ್ರತಿಕ್ರಿಯೆ

  ಚಿಕ್ಕಬಳ್ಳಾಪುರ: ಸರೋಜಿನಿ‌ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ ಸಹಜ ಸ್ಥಿತಿಯಲ್ಲಿದೆ. ನಗರದಲ್ಲಿ ಸಾರಿಗೆ ಸಂಸ್ಥೆ ಬಸ್ ಗಳು, ಆಟೊಗಳು ಎಂದಿನಂತೆ ಸಂಚರಿಸುತ್ತಿವೆ. ವಾಣಿಜ್ಯ ಮಳಿಗೆಗಳ ಚಿತ್ರಣ ಸಹಜವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ವಿದ್ಯಾರ್ಥಿಗಳು  ಎಂದಿನಂತೆ ತರಗತಿಗಳಿಗೆ ತೆರಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

 • 08:15 am

  ಸಾರಿಗೆ ನೌಕರರ ನೈತಿಕ ಬೆಂಬಲ 

  ‘ಸಾರಿಗೆ ನಿಗಮಗಳ ಸಿಬ್ಬಂದಿ ನೈತಿಕ ಬೆಂಬಲ ನೀಡಿದ್ದರೂ ಬಂದ್‌ನಲ್ಲಿ ಭಾಗವಹಿಸುವುದಿಲ್ಲ. ಗಲಭೆಗಳು ನಡೆದರೆ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

 • 08:15 am

  ವಾಟಾಳ್ ಬೆಂಬಲವಿಲ್ಲ

  ‘ಬಂದ್‍ಗೆ ನಮ್ಮ ಬೆಂಬಲ ಇಲ್ಲ. ನಾವು ಬಂದ್‍ಗೆ ಕರೆ ಕೊಟ್ಟಿಲ್ಲ.‘ಮಹಿಷಿ ವರದಿ ಜಾರಿಗೆ ಹೋರಾಡುತ್ತಾ ಬಂದಿದ್ದೇವೆ. ವಿಧಾನಮಂಡಲ ಅಧಿವೇಶನ ಆರಂಭವಾದ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಒತ್ತಡ ಹೇರುತ್ತೇವೆ’ ಎಂದು ಕನ್ನಡ ಒಕ್ಕೂಟಗಳ ಕ್ರಿಯಾ ಸಮಿತಿ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಸ್ಪಷ್ಟಪಡಿಸಿದ್ದಾರೆ.

 • 08:15 am

  ಚಿತ್ರರಂಗದ ಬಾಹ್ಯ ಬೆಂಬಲ

  ‘ಬಂದ್‌ಗೆ ನಮ್ಮ ಬಾಹ್ಯ ಬೆಂಬಲವಿದೆ. ಆದರೆ, ಎಂದಿನಂತೆ ಚಿತ್ರೀಕರಣಗಳು ನಡೆಯಲಿದೆ. ನಾವು ಬಂದ್ ಮಾಡಿದರೆ ಕಾರ್ಮಿಕರಿಗೆ ತೊಂದರೆ ಆಗಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.