ಗುರುವಾರ , ಮಾರ್ಚ್ 4, 2021
18 °C

ಅತಿ ಮಧುರ ಈ ಅನುರಾಗ

ನಿರೂಪಣೆ: ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ನಿನ್ನೊಳಿದೆ ನನ್ನ ಮನಸ್ಸು’ ಎಂದು ಸಂಭ್ರಮಿಸಿದವರು ಕೆ.ಎಸ್.ನರಸಿಂಹಸ್ವಾಮಿ. ‘ಹಾಲಾಗುವಾ ಜೇನಾಗುವಾ ರತಿ ರೂಪಿ ಭಗವತಿಗೆ ಮುಡಿಪಾಗುವಾ’ ಎಂದರು ಕುವೆಂಪು.‌ ಕಲಾವಿದ ರವಿವರ್ಮನ ಕುಂಚಕ್ಕೂ ಧೀಶಕ್ತಿಯಾದುದು ಪ್ರೇಮವೇ. ವೇದ, ಪುರಾಣ, ಧರ್ಮ ಗ್ರಂಥಗಳಲ್ಲಿಯೂ ಪ್ರೀತಿ ತನ್ನ ಅಸ್ತಿತ್ವವನ್ನು ಸಾರುತ್ತ ಬಂದಿದೆ.

ಇನ್ನು ಕಾಳಿದಾಸನ ಸಾಹಿತ್ಯದಲ್ಲಿ ಪ್ರೇಮಪದಗಳೇ ತುಂಬಿ ಕಾವ್ಯವಾಗಿದ್ದಲ್ಲವೇ? ನಳ–ದಮಯಂತಿ, ಕೃಷ್ಣ–ರುಕ್ಮಿಣಿ, ರಾಧಾ–ಕೃಷ್ಣ, ಅರ್ಜುನ–ಸುಭದ್ರೆ, ಊರ್ವಶಿ–ಪುರು, ದುಷ್ಯಂತ–ಶಾಕುಂತಲೆಯರ ಬದುಕೇ ಪ್ರೀತಿಯಲ್ಲವೇ? ಹೀಗೆ ಬದುಕು–ಬರಹ–ಸಾಹಿತ್ಯ–ಕಲೆ ಎಲ್ಲೆಲ್ಲೂ ಹರಿದವಳು ಈ ಪ್ರೇಮಗಂಗೆ. ಇದರಿಂದ ತಪ್ಪಿಸಿಕೊಂಡವರು ಯಾರಿದ್ದಾರೆ? ಇಂತಹ ಸರ್ವವ್ಯಾಪಿ, ಸರ್ವಾಂತರ್ಯಾಮಿ ಪ್ರೇಮದಲೆಯ ಮೇಲೆ ತಂತಮ್ಮ ಹೆಜ್ಜೆ ಗುರುತು ಮೂಡಿಸಿದವರೇ ಎಲ್ಲಾ.

ಆದರೆ ಕೆಲವರ ಪಾಲಿಗೆ ಪ್ರೀತಿ ಎನ್ನುವುದು ನೆನಪುಗಳ ಒಡಲಿಗುಳಿದ ಅತೃಪ್ತ ಹಳಹಳಿ; ಇನ್ನೂ ಕೆಲವರಿಗೆ ನೆನೆದಾಗೊಮ್ಮೆ ಕಚಗುಳಿ ಇಡುವ ಮುದ್ದು ತಪ್ಪು; ಕೆಲವರಿಗೆ ಮಾತ್ರ ಬದುಕಿನುದ್ದಕ್ಕೂ ಸಂಭ್ರಮ ತರುವ ಅನುರಾಗ. ಹಾಗೆ ಇಡೀ ಬದುಕಿನುದ್ದಕ್ಕೂ ಸಂಭ್ರಮ ತುಂಬಿದ ಒಲವಿನ ಹೆಜ್ಜೆ ಗುರುತುಗಳನ್ನು ಹಿಂತಿರುಗಿ ಕಂಡು ಪುಳಕಗೊಂಡವರ ಖುಷಿಯ ಕಥೆಗಳಿವು.

***

ಬದಲಾವಣೆ ಪ್ರೀತಿಯ ಗುಣ

ಹದಿನಾರು ವರ್ಷಗಳೇ ಕಳೆದವು, ನಾವಿಬ್ಬರೂ ಒಬ್ಬರಾಗಿ...

ಅಂದು, ಯಾವ ಸುಳಿವೂ ಇಲ್ಲದೇ, ನಮ್ಮಿಬ್ಬರ ಹೃದಯದಲ್ಲಿ ರಂಗು ಮೂಡಿಸಿದ ಪ್ರೀತಿ ಇಂದಿಗೂ ನಮ್ಮ ನಡುವೆ ಜೀವಂತವಾಗಿದೆ. ಆದರೆ ಬದಲಾಗಿದೆ... ಬದಲಾಗುತ್ತಿದೆ...

ನಮ್ಮ ಪ್ರಪಂಚದಲ್ಲೀಗ ನಾವಿಬ್ಬರೇ ಇಲ್ಲ. ಮಕ್ಕಳು, ಅಮ್ಮ–ಅಪ್ಪ–ಬಂಧುಗಳೆಲ್ಲರೂ ಕೂಡಿಕೊಂಡಿದ್ದಾರೆ. ಪ್ರೀತಿಯ ಸುತ್ತ ಬಾಂಧವ್ಯಗಳು ಬೆಸೆತುಕೊಂಡಾಗ ಹೊಣೆಗಾರಿಕೆಗಳು ಹೆಗಲೇರುತ್ತವೆ. ಆ ಹೊಣೆಗಳನ್ನೂ ನಾವು ಅಷ್ಟೇ ಅಕ್ಕರೆಯಿಂದ ಸಂಭಾಳಿಸಿದಾಗ ಪ್ರೀತಿ ಬೆಳೆಯುತ್ತದೆ.

ಈ ಕ್ಷಣಕ್ಕೆ ಒಮ್ಮೆ ಹಿಂತಿರುಗಿ ನೋಡಿದರೆ ಸಂಭ್ರಮದ ಕ್ಷಣಗಳ ಜೊತೆಗೆ ಆತಂಕ–ಕಳವಳದ ಗಳಿಗೆಗಳೂ ನೆನಪಾಗುತ್ತವೆ. ಆರಂಭದಲ್ಲಿ ಅವರ ಸಂಸ್ಕೃತಿ, ಆಚಾರ–ವಿಚಾರ, ಉಟ–ತಿಂಡಿಗಳಿಗೆ ಹೊಂದಿಕೊಳ್ಳುವುದು ಕಷ್ಟವೆನಿಸಿತು. ಆದರೆ ಎಲ್ಲವನ್ನೂ ಗೆಲ್ಲುವಂತೆ ಮಾಡಿದ್ದು ಪ್ರೀತಿ. ಎಲ್ಲವನ್ನೂ ಗೆದ್ದಾಗ ಉಳಿದಿದ್ದು ಸಂಭ್ರಮ. ನಾನೂ ಬದಲಾಗಿದ್ದೀನಿ, ಉಪ್ಪಿ ಕೂಡ ಬದಲಾಗಿದ್ದಾರೆ, ನಮ್ಮ ಕುಟುಂಬ ಬದಲಾಗಿದೆ, ನಮ್ಮ ಪ್ರೀತಿಯ ವ್ಯಾಖ್ಯಾನವೂ ಬದಲಾಗಿದೆ, ಆದರೆ ಸಂಭ್ರಮ ಹಾಗೇ ಇದೆ.

ಪ್ರಿಯಾಂಕಾ ಉಪೇಂದ್ರ

ಸಿನಿಮಾ

***

ಪ್ರೀತಿ ಪಶ್ಚಾತಾಪವನ್ನು ಉಳಿಸಬಾರದು...

ನಾವಿಬ್ಬರೂ ಒಂದಾಗಿ ಬಾಳುವ ಗಟ್ಟಿ ನಿರ್ಧಾರಕ್ಕೆ 20 ವರ್ಷಗಳಾದರೆ, ಅದನ್ನು ವಾಸ್ತವಕ್ಕೆ ತಂದ ಶುಭಗಳಿಗೆಗೆ 13 ವಸಂತಗಳಾಗಿವೆ. ಎದುರಾದ ಏರಿಳಿತಗಳನ್ನೂ, ಕಷ್ಟ–ಸುಖಗಳನ್ನೂ ಸಮನಾಗಿ ನಿಂತು ಎದುರಿಸಿದ್ದೇವೆ. ಸಮುದಾಯ ರಂಗಭೂಮಿ ನಮ್ಮನ್ನು ಒಂದು ಮಾಡಿತ್ತು. ಆದರೆ ಮುಂದೆ ಹೆಜ್ಜೆಯೂರಿ ನಿಲ್ಲಬೇಕಾದವರು ನಾವೇ. ಎಷ್ಟು ಭದ್ರವಾಗಿ ನಿಲ್ಲುತ್ತೇವೆ, ಹೇಗೆ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುವ ಬದ್ಧತೆಯಲ್ಲಿ ಪ್ರೀತಿಯ ಯಶಸ್ಸಿದೆ.

ಪರಸ್ಪರರ ಅಸ್ಮಿತೆಗಳನ್ನು ಗೌರವಿಸಿಕೊಳ್ಳುವುದು, ನಮ್ಮ ನಮ್ಮ ಆಯ್ಕೆ–ಆಸಕ್ತಿಗಳನ್ನು ಪುರಸ್ಕರಿಸುವುದು, ನಾವಿರುವಂತೆ ನಮ್ಮನ್ನು ಒಪ್ಪುವುದು ಆಧರಿಸುವುದೇ ನಿಜವಾದ ಪ್ರೀತಿ. ನಾವು ಹಾಗೇ ಬದುಕುತ್ತಿದ್ದೇವೆ. ಹಾಗಂತಲೇ ಈವರೆಗೆ ಯಾವತ್ತೂ ಈ ಪ್ರೀತಿಯ ಬಗ್ಗೆ ನಾವು ಪಶ್ಚಾತಾಪ ಪಟ್ಟಿಲ್ಲ. ಅಂತಹ ಕ್ಷಣಗಳು ನಮ್ಮೆದುರು ಬರಲಿಲ್ಲ. ಗಿರೀಶರನ್ನು ಬಿಟ್ಟು ಬೇರೆ ಯಾರೊಂದಿಗಾದರೂ ಬದುಕುವ ಹಂಚಿಕೊಂಡಿದ್ದರೆ ಖಂಡಿತ ಈ ಸಂಭ್ರಮ ಇರುತ್ತಿರಲಿಲ್ಲ ಅಂದುಕೊಳ್ಳುತ್ತೇನೆ. ಪ್ರೀತಿಯ ಗುಣವೇ ಅದು.

ದೀಪಾ ಗಿರೀಶ

ಸಾಹಿತ್ಯ, ರಂಗಭೂಮಿ

****

ಅದೊಂದು ದೈವೀಕ ಸಂಬಂಧ

ನಮ್ಮ ಮೊದಲ ಪ್ರೀತಿ ಕಲೆ, ಆ ಕಲೆಯೇ ನಮ್ಮನ್ನು ಒಂದು ಮಾಡಿದ್ದು. ಕಲೆ ಎನ್ನುವ ದಿವ್ಯವಾದ ಶಕ್ತಿ ನಮ್ಮಿಬ್ಬರಲ್ಲಿ ಪ್ರೀತಿಯನ್ನು ಹುಟ್ಟು ಹಾಕಿದ್ದು. ನಮ್ಮ ಗುರು ಮಾಯಾರಾವ್ ಅವರು ಕಥಕ್‌ ಡ್ಯಯೆಟ್‌ ಮಾಡ್ತೀರಾ ಅಂತ ಕೇಳಿದ್ದರು. ಬಹುಶಃ ನಾವಿಬ್ಬರೂ ಜೀವನದಲ್ಲಿಯೂ ಸಂಗಾತಿಯಾಗಲು ಅವರೇ ಕಾರಣ.

25 ವರ್ಷಗಳ ಕ್ಷಣ ಕ್ಷಣವನ್ನೂ ನಾವು ಅಷ್ಟೇ ಸಂಭ್ರಮ ಸಡಗರದಿಂದ ಕಳೆದಿದ್ದೇವೆ. ಇನ್ನೂ ನೂರು ವರ್ಷ ಕಳೆದರೂ ನಮ್ಮಿಬ್ಬರ ನಡುವೆ ಪ್ರೀತಿ ಒಂದಿನಿತೂ ಹಳತಾಗದೆನ್ನುವ ನಂಬಿಕೆ ನಮಗಿದೆ. ಏಕೆಂದರೆ ನಮ್ಮ ಪ್ರೀತಿಯನ್ನು ನಾವು ಅಷ್ಟು ಬದ್ಧತೆಯಿಂದ, ಜವಾಬ್ದಾರಿಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. 

ಪ್ರೀತಿ ಮೊದಲು ಆಕರ್ಷಣೆಯಾಗಿ ಜನ್ಮ ತಾಳುತ್ತದೆ, ಆರಂಭದಲ್ಲಿ ಭಾವೋದ್ವೇಗವನ್ನುಂಟು ಮಾಡುತ್ತದೆ. ಆಮೇಲಾಮೇಲೆ ಆಕರ್ಷಣೆ ಕಡಿಮೆಯಾಗಿ, ಭಾವೋದ್ವೇಗ ಇಳಿಮುಖವಾಗಿ ಪ್ರೀತಿಯ ನಿಜವಾದ ಅಧ್ಯಾಯ ಆರಂಭವಾಗುತ್ತದೆ. ಬದ್ಧತೆ ಪ್ರೀತಿಯ  ಹೆಗಲೇರಿದಾಗ ನಿಜವಾದ ಅರ್ಥದಲ್ಲಿ ಪ್ರೀತಿ ಅರಳುತ್ತದೆ.

ಅವರ ಇಷ್ಟಕ್ಕೆ ವಿರುದ್ಧವಾಗಿ ನಾನು, ನನ್ನ ಇಷ್ಟಕ್ಕೆ ವಿರುದ್ಧವಾಗಿ ಅವರು ನಡಕೊಳ್ಳುವುದಿಲ್ಲ. ಒಬ್ಬರಿಗಾಗಿ ಒಬ್ಬರು ಬದುಕುವುದೇ ಪ್ರೀತಿ ಅಲ್ಲವೆ? ಇಲ್ಲಿ ‘ನಾನು’ ಎನ್ನುವುದು ಗೌಣವಾಗಿ ‘ನಾವು’ ಎನ್ನುವ ಭಾವ ಬೆಳೆಯಬೇಕು. ಪ್ರೀತಿಯ ಸೌಂದರ್ಯ ಅಡಗಿರುವುದೇ ಅಲ್ಲಿ. ನನ್ನ ಸಂತೋಷವನ್ನು ಅವರು ಗೌರವಿಸುವುದು, ಅವರ ನೆಮ್ಮದಿಯನ್ನು ನಾನು ಮನ್ನಿಸುವುದರಲ್ಲಿ ಬದುಕಿನ ಸಾರ್ಥಕ್ಯವಿದೆ, ಸೌಂದರ್ಯವಿದೆ.

ರಾಜೇಂದ್ರನನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ನನಗೆ ಗರ್ವವಿದೆ. ರಾಜೇಂದ್ರ ಅಲ್ಲದೇ ಬೇರೆ ಯಾರೇ ಜತೆಗೂಡಿದ್ದರೂ ಈ ಬದುಕಿಗೆ ಇಷ್ಟೊಂದು ಅರ್ಥ ತುಂಬುತ್ತಿರಲಿಲ್ಲವೇನೊ. ನಮ್ಮನ್ನು ಒಂದು ಮಾಡಿದ ಈ ಕಲೆಗೆ, ನಮ್ಮ ಗುರುಗಳಿಗೆ ಈ ಜೀವ ಇರುವತನಕ ನಾವು ಋಣಿಯಾಗಿರುತ್ತೇವೆ.

ನಿರುಪಮಾ ರಾಜೇಂದ್ರ

ನೃತ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.