ಭೂಮಿ ಪರ ವಕಾಲತ್ತಿಗೆ ಗಾಂಧಿ ಅಸ್ತ್ರ

ಲಂಡನ್ ಪೊಲೀಸರು ಇದನ್ನು ನಿರೀಕ್ಷಿಸಿರಲಿಲ್ಲ. ಕಳೆದ ಏಪ್ರಿಲ್ 15ರ ಬೆಳಿಗ್ಗೆ ಲಂಡನ್ನಿನ ಅತ್ಯಂತ ಜನಸಂದಣಿಯ ವಾಟರ್‌ಲೂ ಸೇತುವೆ ನೋಡನೋಡುತ್ತಲೇ ತರುಣರಿಂದ ತುಂಬಿಕೊಂಡು ಕಣ್ಣಿಗೆ ಕಾಣದಷ್ಟು ಮರೆಯಾಗಿಯೇ ಬಿಟ್ಟಿತ್ತು. ಸದಾ ಗಿಜಿಗುಡುವ ಮಾರ್ಬಲ್ ಆರ್ಚ್, ಆಕ್ಸ್‌ಫರ್ಡ್ ಸರ್ಕಸ್‍ನಲ್ಲೂ ಅದೇ ದೃಶ್ಯ. ಪ್ರತಿಭಟಿಸುವವರ ಸಂಖ್ಯೆ ನಿಮಿಷ ನಿಮಿಷಕ್ಕೂ ಏರಿತು. ವಾಹನಗಳ ಬಂದ್ ಜಗತ್ತಿನ ಸುದ್ದಿಯಾಯಿತು. ಪುಟ್ಟ ನಾವೆಗೆ ತಮ್ಮನ್ನು ತಾವೇ ಸರಪಳಿಯಿಂದ ಬಂಧಿಸಿಕೊಂಡಿದ್ದವರನ್ನು ಬಿಡಿಸಿ ಬಂಧಿಸಲು ಗರಗಸದಿಂದಲೇ ಸರಪಳಿಯನ್ನು ಕತ್ತರಿಸಬೇಕಾಯಿತು. ಎಲ್ಲರದ್ದೂ ಒಂದೇ ಕಂಠ ‘ನಿಮ್ಮ ಶೃಂಗಸಭೆಗಳಲ್ಲಿ ಏನೂ ಆಗುತ್ತಿಲ್ಲ. ಹವಾಗುಣ ಬದಲಾವಣೆ ಜಗತ್ತನ್ನೇ ಕಾಡುತ್ತಿದೆ. ಹೀಗೆಯೇ ಬಿಟ್ಟರೆ ನಾವೂ ಸೇರಿದಂತೆ ಇಡೀ ಜೀವರಾಶಿಯೇ ಅಳಿಸಿಹೋಗಿಬಿಡುತ್ತದೆ’. ಇದಕ್ಕೆ ಪೂರಕವೆಂಬಂತೆ ಇಬ್ಬರು ಪುಟಾಣಿಗಳು ಬಂದು ‘ಈ ಭೂಮಿಯಲ್ಲಿ ನಾವೇ ಕೊನೆಯ ತಲೆಮಾರಿಗೆ ಸೇರಿದವರೇ?’ ಎಂದು ಭಿತ್ತಿಫಲಕ ಹಿಡಿದದ್ದು ಸಾರ್ವಜನಿಕರ ಗಮನಸೆಳೆದಿತ್ತು.
ಕಳೆದ ಅಕ್ಟೋಬರ್‌ನಲ್ಲಷ್ಟೇ ‘ಎಕ್ಸ್‌ಟಿಂಕ್ಷನ್ ರೆಬೆಲಿಯನ್’ ಎಂಬ ಗುಂಪು ಹವಾ ಬದಲಾವಣೆಯಿಂದಲೇ ಮನುಕುಲ ನಿರ್ಗಮನವಾಗುತ್ತದೆಂಬ ಹತಾಶೆ, ಕೋಪ, ಆತಂಕದಿಂದಲೇ ಪ್ರತಿಭಟನೆಯನ್ನು ಸಂಘಟಿಸಿತ್ತು. ಕೈಯಲ್ಲಿ ಬಂದೂಕಿಲ್ಲ, ಚಾಕು, ಚೂರಿಗಳಿರಲಿಲ್ಲ. ಹಾಗಿದ್ದಿದ್ದರೆ ಪೊಲೀಸರಿಗೆ ಈ ದಂಗೆಯನ್ನು ಅಡಗಿಸುವುದು ಕಷ್ಟವಾಗುತ್ತಿರಲಿಲ್ಲ. ಇದು ಶಾಂತಿಯುತ ಬಂದ್, ಅಹಿಂಸಾ ಸತ್ಯಾಗ್ರಹ. ಗಾಂಧಿ ಹೇಳಿಕೊಟ್ಟ ಮಾರ್ಗ. ‘ಜೈಲು ತುಂಬಿ ತುಳುಕಬೇಕು, ಹಾಗೆ ಮಾಡುತ್ತೇವೆ’ ಎಂದು ನಗುನಗುತ್ತಲೇ ಭೂಮಿಯ ಪರವಾಗಿ ವಕಾಲತ್ತು ವಹಿಸಿದ್ದ, ದೆಹಲಿಯಲ್ಲಿ ಹುಟ್ಟಿ ಬ್ರಿಟಿಷ್ ಪ್ರಜೆಯಾಗಿರುವ 27ರ ತರುಣ ಜಹಾನ್ ಝಲ ಪ್ರತಿಭಟನಕಾರರ ಮಧ್ಯೆ ಧ್ವನಿ ಎತ್ತಿದಾಗ, ಹೊಸ ಮಿಂಚಿನ ಸಂಚಲನವಾಗಿತ್ತು. ಆದರೆ ಪೊಲೀಸರಿಗೆ ಟ್ರಾಫಿಕ್ ಜಾಮ್ ಚಿಂತೆ. ‘ಜೈಲ್ ಭರೋ’ ಬಿಟ್ಟರೆ ಬೇರೆ ಉಪಾಯವಿರಲಿಲ್ಲ.
ನಮ್ಮಲ್ಲಿ ಎಂಥೆಂಥ ಚಳವಳಿಗೋ ಗಾಂಧಿ ತೋರಿದ ಅಹಿಂಸಾ ಮಾರ್ಗವನ್ನು ಬಳಸಿಕೊಂಡದ್ದುಂಟು. ಸ್ವಹಿತಕ್ಕೆ, ಸಮೂಹಹಿತಕ್ಕೆ, ದೇಶದ ಹಿತಕ್ಕೆ, ಆದರೆ ಲಂಡನ್‍ನ ಈ ಪ್ರತಿಭಟನೆಗೆ ಇದನ್ನೂ ಮೀರಿ ಜಗತ್ತನ್ನು ಉಳಿಸುವ ಉದ್ದೇಶವಿತ್ತು. ಎಂದೇ ಬಹುಬೇಗ ಜಗತ್ತಿನ ಗಮನವನ್ನೂ ಸೆಳೆಯಿತು. ಈ ಪ್ರತಿಭಟನಕಾರರ ಜೊತೆಗೆ ಚಿತ್ರನಟಿ ಎಮ್ಮಾ ಥಾಮ್ಸನ್ ಸೇರಿದಳು. ಆಕೆಯದ್ದೂ ಅದೇ ವಿಚಾರಧಾರೆ; ಮನುಕುಲ ಉಳಿಯಬೇಕು. ಏಪ್ರಿಲ್ ಮೂರನೇ ವಾರಕ್ಕೆ ಕಾಲಿಟ್ಟ ಚಳವಳಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಂಧನಕ್ಕೊಳಗಾದರು. ಟ್ರಾಫಿಕ್ ಜಾಮ್ ಉಂಟಾದ್ದರಿಂದ, ಸುಮಾರು 50,000 ಪ್ರಯಾಣಿಕರಿಗೆ ಈ ಬಂದ್‌ನ ಬಿಸಿ ಮುಟ್ಟಿತು. ಸ್ವೀಡನ್ನಿನ 16 ವರ್ಷದ ಬಾಲೆ ಗ್ರೇಟಾ ತನ್‌ಬರ್ಗ್ ಪರಿಸರದ ಪರ ಧ್ವನಿ ಎತ್ತಿ ತಾರಾ ವರ್ಚಸ್ಸು ಗಳಿಸಿದ್ದಾಳೆ.
‘ನಮ್ಮ ಚಳವಳಿಗೆ ಬೇರೆಯದೇ ಸ್ವರೂಪವಿದೆ, ಕೈಬಿಡಬೇಡಿ’ ಎಂದು ಹೇಳಿ, ಶಾಲಾ ಮಕ್ಕಳೊಂದಿಗೆ ಯುರೋಪಿನ ರಾಜಕೀಯ ನೇತಾರರನ್ನು ಭೇಟಿ ಮಾಡಲು ಸ್ಟಾನ್‍ಬರ್ಗ್‍ಗೂ ಹೋಗಿದ್ದಳು. ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್‍ರನ್ನೂ ಭೇಟಿ ಮಾಡಿ ‘ಜಗತ್ತಿಗೆ ಬುದ್ಧಿ ಹೇಳಿ’ ಎಂದು ಕೋರಿದ್ದಳು. ಭೂಮಿಗೆ ಕಾವೇರಿದಂತೆ ಈ ಪ್ರತಿಭಟನೆಗೂ ಕಾವೇರುತ್ತಾ ಬಂತು. ಲಂಡನ್ನಿನ ಮಾಲ್‌ಗಳಲ್ಲಿ ಸತ್ತಂತೆ ಬಿದ್ದು ವಿನೂತನ ಬಗೆಯಲ್ಲಿ ಪ್ರತಿಭಟಿಸತೊಡಗಿದರು. ಫೇಸ್‍ಬುಕ್‍ನ ಲೈವ್ ಷೋಗಳಾಗಿ ಜಗತ್ತಿನ ಗಮನಸೆಳೆದರು. ಈಗ ಪ್ರತಿಭಟನೆಯ ಅಲೆ ಬ್ರಿಟನ್‌ಗಷ್ಟೇ ಸೀಮಿತವಾಗಿಲ್ಲ. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಸ್ವೀಡನ್, ಜರ್ಮನಿ, ಕೊಲಂಬಿಯ, ನ್ಯೂಜಿಲೆಂಡ್‍ಗೂ ಹಬ್ಬುತ್ತಿದೆ. ಅಲ್ಲೂ ಗಾಂಧಿಯವರ ಅಹಿಂಸಾ ಮಾರ್ಗವನ್ನೇ ಅನುಸರಿಸಲು ಹೊರಟಿದೆ.
ಹವಾ ಬದಲಾವಣೆ ಸಮಸ್ಯೆ ಇಡೀ ಭೂಮಂಡಲಕ್ಕೇ ಹಬ್ಬಿದೆ. ಎಗ್ಗಿಲ್ಲದೆ ತೈಲ ಉರಿಸುತ್ತಿದ್ದೇವೆ, ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ಬಳಕೆ ಹೆಚ್ಚುತ್ತಿದೆ, ಕಾರ್ಬನ್ ಡೈ ಆಕ್ಸೈಡನ್ನು ಹಿಡಿತದಲ್ಲಿಡಬೇಕು ಎಂದು ವಿಶ್ವಸಂಸ್ಥೆ ಹೇಳುತ್ತಲೇ ಬಂದಿದೆ. ಕೈಗಾರಿಕಾ ಕ್ರಾಂತಿಗೆ ಮೊದಲಿದ್ದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣಕ್ಕೆ ಹಿಂತಿರುಗಿಸಲು ಇಂದಿಗೂ ಸಾಧ್ಯವಾಗಿಲ್ಲ. ಈಗ ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತಿರುವ ವರದಿಯ ಕರಡನ್ನು ನೋಡಿದರೆ ಸಾಮಾನ್ಯರೂ ಕಳವಳಗೊಳ್ಳುವುದುಂಟು. ಸದ್ಯದ ಸ್ಥಿತಿಯಲ್ಲಿ ಹತ್ತು ಲಕ್ಷ ಜೀವಿಪ್ರಭೇದಗಳು ಶಾಶ್ವತವಾಗಿ ಭೂಮಿಯಿಂದ ನಿರ್ಗಮಿಸುವ ಅಪಾಯ ಎದುರಿಸುತ್ತಿವೆ. ಈ ಭಯಾನಕ ನಿರ್ಧಾರಕ್ಕೆ ಬರಲು ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಅಧ್ಯಯನ ಮಾಡಿ 1,800 ಪುಟದ ವರದಿ ನೀಡಿದ್ದಾರೆ. ಹವಾಗುಣ ಬದಲಾವಣೆಯ ಬಿಸಿ ಭಾರತಕ್ಕೆ ಈಗಾಗಲೇ ತಟ್ಟಿದೆ. ಇದು ಕಾಡದಿದ್ದರೆ ನಮ್ಮ ಕೃಷಿ ಉತ್ಪನ್ನಗಳಲ್ಲಿ ಇನ್ನೂ ಶೇ 30ರಷ್ಟು ಹೆಚ್ಚು ಆಹಾರೋತ್ಪಾದನೆಯನ್ನು ಸಾಧಿಸಬಹುದಾಗಿತ್ತು ಎಂದು ನಮ್ಮ ಕೃಷಿ ತಜ್ಞರೇ ಒಪ್ಪಿಕೊಂಡಿದ್ದಾರೆ. 2020ರ ಹೊತ್ತಿಗಾದರೂ ಕೊನೆಯಪಕ್ಷ 1.5 ಡಿಗ್ರಿ ಸೆಲ್ಷಿಯಸ್ ಉಷ್ಣತೆಯ ಹೆಚ್ಚಳವನ್ನು ತಡೆಯಬೇಕಾಗಿದೆ ಎಂದು ವಿಶ್ವಸಂಸ್ಥೆ ಹೇಳುತ್ತಲೇ ಬಂದಿದೆ.
ಸಾಮಾಜಿಕ ಮಾಧ್ಯಮಗಳು ಇಂಥ ಪ್ರತಿಭಟನೆಗಳನ್ನು ಜಗತ್ತಿನ ಮೂಲೆಮೂಲೆಗೂ ಒಯ್ಯುತ್ತಿವೆ. ಲಂಡನ್ ನಗರದ ನಂತರ ಭಾರತದಲ್ಲೂ ‘ಎಕ್ಸ್‌ಟಿಂಕ್ಷನ್ ರೆಬೆಲಿಯನ್’ ಯೋಧರು ಸಂಘಟಿತರಾಗುತ್ತಿದ್ದಾರೆ. ನಮಗೆ ಶುದ್ಧ ಕುಡಿಯುವ ನೀರು ಕೊಡಿ, ಉಸಿರಾಡಲು ಶುದ್ಧ ಗಾಳಿ ಕೊಡಿ, ದೆಹಲಿಯ ಮಾಲಿನ್ಯ ನಮ್ಮ ಪುಪ್ಪುಸದಲ್ಲಿ ಉಸಿರುಕಟ್ಟಿಸಿದೆ ಎಂದು ದೆಹಲಿಯವರೆಗೂ ದೂರುಹೋಗಿದೆ. ಮಾರ್ಚ್ 15ರಂದು ಸ್ಕೂಲಿಗೆ ಚಕ್ಕರ್ ಹೊಡೆದ 400 ಶಾಲಾ ಮಕ್ಕಳು ದೆಹಲಿಯ ಕನ್ನಾಟ್ ಪ್ರದೇಶದಲ್ಲಿ ಕೂಗೆಬ್ಬಿಸಿದ್ದವು. ಗುರುಗ್ರಾಮ, ಅಹಮದಾಬಾದ್‌ನಲ್ಲೂ ಈ ಪ್ರತಿಭಟನೆ ಮಕ್ಕಳನ್ನು ಹುರಿದುಂಬಿಸಿದೆ. ಮಳೆಗಾಲದಲ್ಲೇಕೆ ಬೇಸಿಗೆ ಇಣುಕುತ್ತಿದೆ? ಚಳಿಗಾಲದಲ್ಲೇಕೆ ಮಳೆ ಬರುತ್ತಿದೆ ಎಂಬಂಥ ಪ್ರಶ್ನೆಗಳನ್ನು ಮಕ್ಕಳೂ ಕೇಳುತ್ತಿವೆ.
ಚಿತ್ತರಂಜನ್ ದುಬೆ ಎಂಬ ತರುಣ ಭಾರತದಲ್ಲಿ ಸಂಘಟಿತವಾಗಿ ಹೋರಾಡುತ್ತಿದ್ದಾನೆ. ದಕ್ಷಿಣ ಭಾರತದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಸಮಾಧಾನವೆಂದರೆ, ಈ ಅವಕಾಶವನ್ನು ಯಾವ ರಾಜಕೀಯ ವ್ಯಕ್ತಿಯೂ ಬಳಸಿಕೊಂಡು ತನ್ನದೇ ತುತ್ತೂರಿ ಊದಲು ಅವಕಾಶವಿಲ್ಲ. ಹಾಗೆ ನೋಡಿದರೆ ಜಗತ್ತಿನ ಜನನಾಯಕರು ಶೃಂಗಸಭೆಗಳಲ್ಲಿ ಬಿಗಿಪಟ್ಟು ಹಿಡಿದು ವಿಶ್ವಸಂಸ್ಥೆಯ ಆಶಯವನ್ನು ಮುಂದಕ್ಕೆ ಒಯ್ದಿದ್ದರೆ, ಇಂಥ ಪ್ರತಿಭಟನೆಗಳೇ ಬೇಕಾಗಿರಲಿಲ್ಲ. ಕೆನಡಾದ ಮಾಂಟ್ರಿಯಲ್ ಒಪ್ಪಂದದ ನಂತರ ಕ್ಲೋರಿನ್ ಪ್ರಮಾಣ ಕಡಿಮೆ ಮಾಡಿ, ಓಜೋನ್ ಪದರ ನಾಶವಾಗುವುದನ್ನು ತಪ್ಪಿಸಿದ ಮಹಾಹೋರಾಟ ಯಶಸ್ವಿಯಾಗಿದ್ದು ಜಗತ್ತಿನ ಕಣ್ಣಮುಂದೆಯೇ ಇದೆ. ಆದರೆ ಕಾರ್ಬನ್ ಡೈ ಆಕ್ಸೈಡ್ ವಿಚಾರ ಹಾಗಲ್ಲ. ಏನು ಸುಟ್ಟರೂ ಕೊನೆಗೆ ಕಾರ್ಬನ್ ಡೈ ಆಕ್ಸೈಡೇ ಹೊರಬೀಳುವುದು. ಜಾಗತಿಕ ತಾಪಮಾನ ಹೆಚ್ಚಿಸುವ ‘ಅಪರಾಧಿ’ಗಳ ಪೈಕಿ ಇದು ಮೊದಲನೆಯದು.
ಇನ್ನೂ ನೂರು ವರ್ಷಗಳಷ್ಟು ಬಳಸಿದರೂ ಮುಗಿಯದ ಕಲ್ಲಿದ್ದಲ ಸಂಪನ್ಮೂಲ ಭಾರತದಲ್ಲಿದೆ ಎನ್ನುವುದೇ ಈಗ ಭರವಸೆಗಿಂತ ಭಯದ ಬೀಜ ಬಿತ್ತಿದೆ. ಇದೇ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್ ನಗರದಲ್ಲಿ ಹವಾಗುಣ ಬದಲಾವಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಮತ್ತೊಂದು ಶೃಂಗಸಭೆ ಕರೆದಿದೆ. ‘ಇದನ್ನು ಗೆಲ್ಲಲೇಬೇಕು, ಗೆದ್ದೇ ಗೆಲ್ಲುತ್ತೇವೆ’ ಎನ್ನುವ ಘೋಷವಾಕ್ಯವನ್ನೂ ಮೊಳಗಿಸಿದೆ. ಮಾಲಿನ್ಯದಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿರುವ ಅಮೆರಿಕ ಯಾವ ನಿರ್ಣಯ ತೆಗೆದುಕೊಳ್ಳುತ್ತದೋ ಎಂಬುದು ಸದಸ್ಯ ರಾಷ್ಟ್ರಗಳಿಗೂ ತಿಳಿಯದ ಸಂಗತಿ. ಅಷ್ಟರಮಟ್ಟಿಗೆ ಜಗತ್ತಿನ ಮೇಲೆ ದೊಡ್ಡಣ್ಣನ ಹಿಡಿತವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.