ಜೀರುಂಡೆ

7
ಮಕ್ಕಳ ಪದ್ಯ

ಜೀರುಂಡೆ

Published:
Updated:

ಒಂದಿನ ನಾನು ಹೊಲಕ್ಕೆ ಹೋದೆನು
ಅಪ್ಪನ ಜೊತೆಯಲ್ಲಿ
ಮಿಂಚುವ ಜೀರುಂಡೆ ಕಂಡೆನು ಆಗ
ಜಾಲಿಯ ಮರದಲ್ಲಿ

ಮುಳ್ಳಿನ ಗಿಡಕೆ ಕೈಯನು ಹಾಕಿ
ಹಿಡಿದೆನು ತವಕದಲಿ
ಬೆಂಕಿಪೊಟ್ಟಣದಿ ಕೂಡಿದೆ ಅದನು
ಸೊಪ್ಪನು ಹಾಕುತಲಿ

ಚಣಚಣ ತೆಗೆದು ನೋಡುತ ಕುಳಿತೆ
ಸಂತಸ ಹೊಂದುತಲಿ
ಮೊಟ್ಟೆಯನಿಕ್ಕಿಸಿ ಮರಿಯನು ಮಾಡಿಸಿ
ನೋಡುವ ಆಸೆಯಲಿ

ಕುತ್ತಿಗೆ ಹಿಡಿದು ದಾರವ ಬಿಗಿದು
ಹಾರಿಸಿ ನಲಿಯುತಲಿ
ಪುರ್ ಪುರ್ ಸದ್ದಿಗೆ ಸಂತಸಗೊಂಡು
ಪುಳಕಿತನಾಗುತಲಿ

ಉದ್ದದ ಮೀಸೆ ಗುಂಡನೆ ಕಣ್ಣು
ಮಿಂಚುವ ರೆಕ್ಕೆಯಲಿ
ಬಣ್ಣದ ಸೊಗಸು ನೀಲಿಯ ಹೊಳಪು
ಬಣ್ಣಿಸಿ ಹೇಳುತಲಿ

ಮೂರನೆ ದಿನಕೆ ಮೊಟ್ಟೆಯ ನೋಡಿ
ಆಸೆಯು ಹೆಚ್ಚುತಲಿ
ಮರಿಯನು ಕಾಣುವ ಆತುರವೇನು
ನನ್ನೆದೆ ಗೂಡಿನಲಿ

ಹಿಟ್ಟನು ತಿನ್ನಿಸಿ ಸಾಕುವ ಆಸೆಗೆ
ಜೀರುಂಡೆ ಮೌನದಲಿ
ರೆಕ್ಕೆಯ ಬಿಚ್ಚದೆ ಕಣ್ಣನು ಮುಚ್ಚಿತು
ಮೊಟ್ಟೆಯ ಪಕ್ಕದಲಿ

ಸತ್ತಿತು ನನ್ನ ಆಸೆಯ ಜೀರುಂಡೆ
ಬೇಸರ ಮಾಡುತಲಿ
ಅಯ್ಯೋ ಪಾಪ ಎನ್ನುತ ನೊಂದು
ಅತ್ತೆನು ನೆನಪಿನಲಿ.....

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !