ಮಾರುಕಟ್ಟೆಯಲ್ಲಿ ಈಗ ಮಾವಿನ ಸುಗ್ಗಿ

ಸೋಮವಾರ, ಮೇ 27, 2019
24 °C
ರಂಜಾನ್ ಹಾಗೂ ಮಳೆಗೆ ಮಾಂಸ, ಮೊಟ್ಟೆ ಧಾರಣೆ ಏರಿಕೆ

ಮಾರುಕಟ್ಟೆಯಲ್ಲಿ ಈಗ ಮಾವಿನ ಸುಗ್ಗಿ

Published:
Updated:
Prajavani

ಚಾಮರಾಜನಗರ: ಮಾರುಕಟ್ಟೆಯಲ್ಲೀಗ ಮಾವಿನ ಹಣ್ಣುಗಳ ಸುಗ್ಗಿ. ವಾರದಿಂದೀಚೆಗೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬಾದಾಮಿ, ರಸಪುರಿ, ಸೆಂದೂರ, ತೋತಾಪುರಿ, ಮಲಗೋವಾ ಮಾವಿನ ಹಣ್ಣುಗಳು ಸಿಗುತ್ತಿವೆ. ಹಾಪ್‌ಕಾಮ್ಸ್‌ನಲ್ಲಿ ಸದ್ಯದ ಬೆಲೆ ₹ 50ರಿಂದ ₹ 80 ರವರೆಗೂ ಇದೆ.

ಜಿಲ್ಲಾ ಕೇಂದ್ರದಲ್ಲಿ ತೋತಾಪುರಿ, ಮಲಗೋವಾ, ಬಾದಾಮಿ ಮಾವಿನ ಹಣ್ಣುಗಳದ್ದೇ ಕಾರುಬಾರು. ತಳ್ಳುಗಾಡಿ, ಹಣ್ಣುಗಳ ಮಾರಾಟ ಮಳಿಗೆ, ರಸ್ತೆ ಬದಿ.. ಹೀಗೆ ಎಲ್ಲೆಲ್ಲೂ ಈಗ ಮಾವಿನ ಹಣ್ಣಿನ ಘಮಲು ಹರಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ತಳಿಗಳ ಮಾವಿನ ಹಣ್ಣು ಬರಲಿವೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

‘ಮಾವಿನ ಕಾಲ ಆರಂಭವಾಗಿದೆ. ಜನರಿಂದಲೂ ಬೇಡಿಕೆ ಇದೆ. ನಮ್ಮಲ್ಲಿ ಮಲಗೋವಾ, ಸೆಂದೂರ ಮಾವಿನ ಹಣ್ಣು ಮಾರಾಟ ಮಾಡುತ್ತೇವೆ. ಆರಂಭದ ದಿನಗಳಲ್ಲಿ ಬೆಲೆ ಕಡಿಮೆ. ಮುಂದೆ ಬೇಡಿಕೆಗೆ ಅನುಗುಣವಾಗಿ ದರ ನಿಗದಿಯಾಗಲಿದೆ’ ಎಂದು ಹಾಪ್‌ಕಾಮ್ಸ್‌ ಮಾರಾಟಗಾರ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಆರಂಭವಾಗಿರುವುದರಿಂದ ದ್ರಾಕ್ಷಿ ಬೆಲೆ ಕಡಿಮೆಯಾಗಿದೆ. ದ್ರಾಕ್ಷಿ ಬೀಡು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಉಳಿದಂತೆ ಎಲ್ಲ ಹಣ್ಣುಗಳ ದರ ಯಥಾಸ್ಥಿತಿ ಮುಂದುವರಿದಿದೆ. ತರಕಾರಿಗಳ ಪೈಕಿ ಟೊಮೆಟೊ ದರ ₹10 ಕಡಿಮೆಯಾಗಿದೆ. ತೆಂಗಿನ ಕಾಯಿ ಬೆಲೆ ₹ 5 ಕಡಿಮೆಯಾಗಿದೆ. ತರಕಾರಿಗಳ ಬೆಲೆ ವ್ಯತ್ಯಾಸ ಕಂಡುಬಂದಿಲ್ಲ.

ಹೂವು: ಅಕ್ಷಯ ತೃತೀಯ, ಬಸವ ಜಯಂತಿ ಆರಂಭದ ದಿನಗಳಲ್ಲಿ ಹೂವಿಗೆ ಬೇಡಿಕೆ ಬಂದಿದೆ. ಕಳೆದ ವಾರ ಎಲ್ಲ ಹೂವುಗಳ ಬೆಲೆ ಕಡಿಮೆಯಾಗಿತ್ತು. ಈ ವಾರದಿಂದ ಶುಭ ಸಮಾರಂಭಗಳು ನಡೆಯಲಿವೆ. ಇದರಿಂದ ಹೂವಿಗೆ ಬೇಡಿಕೆ ಹೆಚ್ಚಲಿದೆ. ಎಲ್ಲ ಹೂವುಗಳಿಗೂ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಮಳೆಗೆ ಮೊಟ್ಟೆ ದರ ಹೆಚ್ಚಳ: ಕಳೆದ ವಾರದಿಂದ ಮಳೆ ಸುರಿಯುತ್ತಿರುವ ಬೆನ್ನಲ್ಲೆ ಮೊಟ್ಟೆ ದರ ಪ್ರತಿ ಒಂದು ದಿನಕ್ಕೆ ವ್ಯತ್ಯಾಸವಾಗುತ್ತಿದೆ. ಕಳೆದ ವಾರ 100 ಮೊಟ್ಟೆಗೆ ₹350 ಇದ್ದ ಬೆಲೆ ಈ ವಾರ ₹412ರಿಂದ ₹450 ಆಗಿದೆ. ಮೈಸೂರು, ಚಾಮರಾಜನಗರ ವ್ಯಾಪ್ತಿ ಪ್ರತಿ ಒಂದು ದಿನಕ್ಕೊಮ್ಮೆ ಮೊಟ್ಟೆ ದರ ಹೆಚ್ಚಳವಾಗುತ್ತದೆ. ಎರಡೂ ಕಡೆ ಬೆಲೆ ವ್ಯತ್ಯಾಸವಿರುತ್ತದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ರಂಜಾನ್‌ಗೆ ಮಾಂಸ ದುಬಾರಿ

ಮಂಗಳವಾರದಿಂದ ಆರಂಭವಾಗಿರುವ ರಂಜಾನ್‌ ಮಾಸದ ಉಪವಾಸಕ್ಕೆ ಮಾಂಸ ಮಾರುಕಟ್ಟೆಯಲ್ಲಿ ಚಿಕನ್, ಮಟನ್‌ ಬೆಲೆ ದುಬಾರಿಯಾಗಿದೆ. ರಂಜಾನ್‌ನಲ್ಲಿ ಮೀನಿನ ಬಳಕೆ ವಿರಳ. ಚಿಕನ್‌, ಮಟನ್‌ಗೆ ಬೇಡಿಕೆ ಇರುತ್ತದೆ. ಎಲ್ಲರೂ ಉಪವಾಸಕ್ಕೆ ಹೆಚ್ಚು ಗಮನ ನೀಡುತ್ತಾರೆ. ಇದೊಂದು ತಿಂಗಳು ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರಲಿದೆ. 

‘ಇಂದಿನಿಂದ ರಂಜಾನ್‌ ಹಬ್ಬದ ದಿನದವರೆಗೂ ಬೆಳಿಗ್ಗೆ ಸಂಜೆ ಮಾತ್ರ ಜನರು ಮಾಂಸ ಖರೀದಿಗೆ ಬರುತ್ತಾರೆ. ಈ ತಿಂಗಳಲ್ಲಿ ಉಪವಾಸವನ್ನು ಶ್ರದ್ಧೆಯಿಂದ ಆಚರಿಸುತ್ತೇವೆ. ಈ ಮಾಸದ ಪ್ರತಿ ದಿನವೂ ನಮ್ಮ ಮನೆಗಳಲ್ಲಿ ಹಬ್ಬದ ವಾತಾವರಣ. ಕೆಲ ಮಂದಿ ಮಾಂಸ ಮಳಿಗೆಗೂ ವಿದ್ಯುತ್‌ ದೀಪಾಲಂಕಾರ ಮಾಡುತ್ತಾರೆ. ಮಾಂಸಕ್ಕೆ ಬೇಡಿಕೆ ಇದೆ’ ಎಂದು ಮಾಂಸ ವ್ಯಾಪಾರಿ ತೌಸಿಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !