ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ, ಸಲ್ವಾರ್‌ನಲ್ಲಿ ಬೈಕ್‌ ರ‍್ಯಾಲಿ!

Last Updated 28 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಹೆಣ್ಣು ಮಕ್ಕಳು ಬೈಕ್‌ ಓಡಿಸ್ತಿದ್ರೆ ರಸ್ತೆಯುದ್ದಕ್ಕೂ ನೂರಾರು ಕಣ್ಣುಗಳು ಅಚ್ಚರಿಯಿಂದ ನೋಡುತ್ತವೆ. ಬೈಕ್‌ ಹೆಣ್ಣುಮಕ್ಕಳಿಗಲ್ಲ ಅವರಿಗೇನಿದ್ದರೂ ಗೇರ್‌ ಇಲ್ಲದ, ಹಗುರವಾದ ದ್ವಿಚಕ್ರ ವಾಹನಗಳೇ ಸರಿ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ನಗರದ ನೂರಾರು ಬೈಕ್‌ವಾಲಿಗಳು ಸಜ್ಜಾಗಿದ್ದಾರೆ.

ಬೈಕ್‌ ರ‍್ಯಾಲಿಯಲ್ಲಿಮಹಿಳೆಯರು ಪಾಲ್ಗೊಳ್ಳುವುದು ಹೊಸದೇನಲ್ಲ. ಆದರೆ ರಾಜ್ಯೋತ್ಸವದ ದಿನ ನಡೆಯುವ ಈ ರ‍್ಯಾಲಿಯಲ್ಲಿ ಬೈಕ್‌ವಾಲಿಗಳು ಸೀರೆ ಉಟ್ಟು ಬೈಕ್‌ ಓಡಿಸಲಿದ್ದಾರೆ. ಗೇರ್‌ ಬೈಕ್‌ ಹೊಂದಿರುವವರಿಗೆ ವಿನಾಯಿತಿ ನೀಡಿ ಸಲ್ವಾರ್‌ ಧರಿಸಲು ಅವಕಾಶ ನೀಡಲಾಗಿದೆ.

ಕೆಲವು ವರ್ಷಗಳಿಂದ ನಗರದಲ್ಲಿ ತಮ್ಮದೇ ಚಟುವಟಿಕೆಗಳಿಂದ ಮಹಿಳೆಯರ ಮೆಚ್ಚುಗೆ ಗಳಿಸಿರುವ ‘ಸಖಿ’ (Sakkhi) ಎಂಬ ಮಹಿಳೆಯರ ಗುಂಪು ಈ ರ‍್ಯಾಲಿಯನ್ನು ಆಯೋಜಿಸಿದೆ. ಕಳೆದ ವರ್ಷ ‘ಸೀರೆಯಲ್ಲಿ ವಾಕಥಾನ್‌’ ಮಾಡಿಈ ಗುಂಪು ಸುದ್ದಿಯಾಗಿತ್ತು.

‘ಬೈಕ್‌ ಓಡಿಸುವ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಪ್ಯಾಂಟ್‌ ಶರ್ಟು, ಟಿ ಶರ್ಟ್‌ ಧರಿಸುತ್ತಾರೆ. ಸೀರೆ ಉಟ್ಟುಕೊಂಡೂ ಬೈಕ್‌ ಓಡಿಸಬಹುದು. ಕಚ್ಚೆ ಸೀರೆ (ಧೋತಿ ಶೈಲಿಯಲ್ಲಿ) ಉಟ್ಟರೆ ತುಂಬಾ ಆರಾಮದಾಯಕ. ಆದರೆ ಸೀರೆ ಇಲ್ಲವೇ ಸಲ್ವಾರ್‌ ಧರಿಸಿಯೂ ಬೈಕ್‌ ಓಡಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನು ಸುಳ್ಳು ಮಾಡಲು ಈ ರ‍್ಯಾಲಿ ಹಮ್ಮಿಕೊಂಡಿದ್ದೇವೆ. ನಾನು ರೇಷ್ಮೆ ಸೀರೆ ಉಟ್ಟುಕೊಂಡೂ ನನ್ನ ಅವೆಂಜರ್‌ ಬೈಕ್‌ ಓಡಿಸಿದ್ದೇನೆ. ರ‍್ಯಾಲಿಗೆ ಈಗಾಗಲೇ 100ಕ್ಕೂ ಅಧಿಕ ಬೈಕ್‌ವಾಲಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಗೇರ್‌ ಇರುವ ಬೈಕ್‌ ಓಡಿಸುವವರು ಸಲ್ವಾರ್‌ ಧರಿಸಲು ನೀಡಲಾಗಿದೆ. ಆದರೆ ಶಕ್ತಿಶಾಲಿ ಎಂಜಿನ್‌ ಹೊಂದಿರುವ ಹ್ಯಾರ್ಲಿ ಡೇವಿಡ್‌ಸನ್‌, ಟ್ರಂಫ್‌ನಂತಹ ಹೆವಿ ಬೈಕ್‌ಗಳನ್ನೂ ಸೀರೆ ಉಟ್ಟುಕೊಂಡು ಓಡಿಸಿದವರಿದ್ದಾರೆ. ನವೆಂಬರ್‌ ಒಂದರ ರ‍್ಯಾಲಿಯಲ್ಲಿಯೂ ಈ ಹೆವಿ ಬೈಕ್‌ಗಳು ಪಾಲ್ಗೊಳ್ಳಲಿವೆ.ಕಳೆದ ವರ್ಷ ಮಹಾರಾಷ್ಟ್ರದಲ್ಲಿ ‘ಸೀರೆಯಲ್ಲಿ ಬೈಕ್‌ ರ‍್ಯಾಲಿ’ ನಡೆದಾಗ ಬೆಂಗಳೂರಿನಲ್ಲಿಯೂ ಅಂಥಹುದೇ ರ‍್ಯಾಲಿ ನಡೆಸಬೇಕು ಎಂಬ ಯೋಚನೆ ಬಂದಿತ್ತು. ಅದು ಈಗ ಸಾಕಾರಗೊಳ್ಳುತ್ತಿದೆ’ ಎಂದು ವಿವರಿಸುತ್ತಾರೆ, ‘ಸಖಿ’ಯ ಮುಖ್ಯಸ್ಥೆ ರಾಜಲಕ್ಷ್ಮಿ.

ಅವೆಂಜರ್‌ ಬೈಕ್‌ನಲ್ಲಿ ರಾಜಲಕ್ಷ್ಮಿ ‘ಸಖಿ’ ತಂಡದ ಮುಖ್ಯಸ್ಥೆ
ಅವೆಂಜರ್‌ ಬೈಕ್‌ನಲ್ಲಿ ರಾಜಲಕ್ಷ್ಮಿ ‘ಸಖಿ’ ತಂಡದ ಮುಖ್ಯಸ್ಥೆ

ಅನ್ಯಭಾಷೆ ಕಲಿತು ಕನ್ನಡ ಕಲಿಸೋಣ
ಕನ್ನಡ ಮಾತನಾಡಿ, ಮಾತನಾಡಿಸುವಂತಾಗಬೇಕು ಎಂಬ ಕಾಳಜಿಯೂ ಈ ರ‍್ಯಾಲಿಯದ್ದು ಎನ್ನುತ್ತಾರೆ ರಾಜಲಕ್ಷ್ಮಿ.

‘ಕನ್ನಡ ಮಾತನಾಡುವುದು ಅಭಿಮಾನದ ಸಂಗತಿಯಾಗಬೇಕು. ಆದರೆ ಬೆಂಗಳೂರಿನಲ್ಲಿ ಕನ್ನಡಿಗರು ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಬದಲು ಅವರ ಭಾಷೆ ಕಲಿತುಕೊಂಡು ಬಿಡುತ್ತಾರೆ. ಕನ್ನಡ ಮೂಲೆಗುಂಪಾಗಲು ಈ ಮನಸ್ಥಿತಿಯೇ ದೊಡ್ಡ ಕಾರಣ. ಬೇರೆ ಭಾಷೆ ಕಲಿಯೋಣ. ಭಾಷಾ ಜ್ಞಾನ ಹೆಚ್ಚಿಸಿಕೊಳ್ಳುವುದು ತಪ್ಪಲ್ಲ. ಆದರೆ ನಮ್ಮ ಊರಿಗೆ ಬಂದವರಿಗೆ ಕನ್ನಡವನ್ನೂ ಕಲಿಸೋಣ. ಆಗ ನಮ್ಮ ಭಾಷೆಯೂ ಬೆಳೆಯುತ್ತದೆ. ಹಾಗಾಗಿಸಾಂಪ್ರದಾಯಿಕ ಉಡುಗೆ ತೊಡುಗೆ, ಕನ್ನಡ ಭಾಷೆ ಮತ್ತು ಬೈಕ್‌ ಓಡಿಸುವ ಹೆಣ್ಣು ಮಕ್ಕಳ ಬಗ್ಗೆ ಅಭಿಮಾನ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯೋತ್ಸವದ ದಿನವನ್ನೇ ಈ ರ‍್ಯಾಲಿಗೆ ಆಯ್ಕೆ ಮಾಡಿಕೊಂಡೆ’ ಎಂಬುದು ರಾಜಲಕ್ಷ್ಮಿ ನೀಡುವ ವಿವರಣೆ.

‘ನಾನು ಕಾರ್ಪೊರೇಟ್‌ ವಲಯದಲ್ಲಿ ಕೆಲಸ ಮಾಡುತ್ತಿದ್ದೆ. ಬೈಕ್‌ ರ‍್ಯಾಲಿ, ದೂರ ಪ್ರಯಾಣ, ಬೈಕ್‌ ಟ್ರೆಕಿಂಗ್‌ ನನ್ನ ನೆಚ್ಚಿನ ಹವ್ಯಾಸ. ಹಾಗಾಗಿ ನಗರದ ಕೆಲವು ಬೈಕರ್‌ ಕ್ಲಬ್‌ಗಳ ಸಕ್ರಿಯ ಸದಸ್ಯೆ. ಆಗ ಕೆಲವು ಸಮಾನ ಮನಸ್ಕ ಸ್ನೇಹಿತೆಯರ ಜೊತೆ ಸೇರಿ ‘ವುಮೆನ್‌ ಟ್ರಾವೆಲರ್‌’ ಎಂಬ ತಂಡ ಶುರು ಮಾಡಿದೆ. ಆದರೆ ಈ ಹೆಸರು ಪ್ರವಾಸ ಅಥವಾ ಪ್ರಯಾಣಪ್ರಿಯ ಮಹಿಳೆಯರ ಗುಂಪು ಎಂಬ ಚೌಕಟ್ಟಿಗೆ ಬರುತ್ತದೆ ಎಂದು ಅನಿಸಿದ್ದರಿಂದ ‘ಸಖಿ– ಸ್ನೇಹಿತೆ, ಸಂಗಾತಿ’ ಎಂದು ಬದಲಾಯಿಸಿದೆ’ ಎನ್ನುತ್ತಾರೆ ಅವರು,

ಆರು ತಿಂಗಳ ಹಿಂದೆಯಷ್ಟೇ ಆರಂಭಿಸಲಾದ ‘ಸಖಿ ಲೇಡಿಸ್‌ ಕ್ಲಬ್‌’ ಮಹಿಳೆಯರು ಮತ್ತು ಮಕ್ಕಳಿಗಾಗಿ ತಿಂಗಳಿಗೊಮ್ಮೆ ಕಬ್ಬನ್‌ ಪಾರ್ಕ್‌ ಅಥವಾ ಲಾಲ್‌ಬಾಗ್‌ನಲ್ಲಿ ‘ಪ್ರಕೃತಿ ಮಧ್ಯೆ ಚಟುವಟಿಕೆ’ ಹಮ್ಮಿಕೊಂಡು ಬರುತ್ತಿದೆ. ಮಹಿಳೆಯರೊಂದಿಗೆ ನಗರದ ಮಕ್ಕಳಿಗೂಗ್ರಾಮೀಣ ಮತ್ತು ಸಾಂಪ್ರದಾಯಿಕ ಆಟಗಳನ್ನು ಕ್ಲಬ್‌ ಹಮ್ಮಿಕೊಳ್ಳುವುದು ವಿಶೇಷ.

ಅಂದ ಹಾಗೆ, ಯಾವುದೇ ಬಗೆಯ ದ್ವಿಚಕ್ರ ವಾಹನ ಹೊಂದಿರುವ ಹೆಣ್ಣುಮಕ್ಕಳು ಹೆಸರು ನೋಂದಾಯಿಸಿಕೊಂಡು ರ‍್ಯಾಲಿಯಲ್ಲಿ ಪಾಲ್ಗೊಳ್ಳ ಬಹುದು. ನವೆಂಬರ್‌ ಒಂದರಂದು ಬೆಳಿಗ್ಗೆ 6.30ಕ್ಕೆ ಎಲ್ಲರೂ ಸಮಾವೇಶಗೊಳ್ಳುತ್ತಾರೆ.ಪ್ರಧಾನ ಅಂಚೆ ಕಚೇರಿ (ಜಿಪಿಒ) ಬಳಿ ರ‍್ಯಾಲಿ ಶುರುವಾಗುತ್ತದೆ. ಬೆಳಿಗ್ಗೆ 8ಕ್ಕೆ ಟೌನ್‌ಹಾಲ್ ತಲುಪುತ್ತದೆ.

ನೆನಪಿನಲ್ಲಿರಲಿ
* ಸೀರೆ ಉಟ್ಟು ಬೈಕ್‌ ಓಡಿಸಲು ಸ್ವಲ್ಪ ಹೆಚ್ಚಿನ ಅಭ್ಯಾಸ ಬೇಕಾಗುತ್ತದೆ.
* ಕಚ್ಚೆಯಂತೆ ಸೀರೆ ಉಟ್ಟರೆ ಹೆಚ್ಚು ಆರಾಮದಾಯಕ
* ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳಿ ಇಲ್ಲವೇ ಭುಜದ ಮೂಲಕ ಮುಂಭಾಗಕ್ಕೆ ತೆಗೆದುಕೊಂಡು ರವಿಕೆಗೆ ಇಲ್ಲವೇ ಸೊಂಟಕ್ಕೆ ಪಿನ್‌ ಮಾಡಿಕೊಳ್ಳಿ
* ಬೈಕ್‌ನಲ್ಲಿ ಕುಳಿತನಂತರ ಸೀರೆಯ ನೆರಿಗೆ ನೆಲ/ಚಕ್ರಕ್ಕೆ ತಾಕುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ
* ಬೈಕ್‌ನ ದಾಖಲೆಪತ್ರಗಳನ್ನು ಹೊಂದಿರುವುದು ಕಡ್ಡಾಯ

ನೋಂದಣಿಗೆ ಲಿಂಕ್‌:https://www.facebook.com/Sakkhiwomentrave*er

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT