ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಮ್ಮಟನಿಗೆ ಮಸ್ತಕಾಭಿಷೇಕ ನಾಳೆ

Last Updated 23 ನವೆಂಬರ್ 2019, 9:40 IST
ಅಕ್ಷರ ಗಾತ್ರ

ಹುಣಸೂರು ತಾಲ್ಲೂಕಿನ ಬೆಟ್ಟದೂರಿನ ಗೊಮ್ಮಟಗಿರಿಯ ಬಾಹುಬಲಿ ಮೂರ್ತಿ ಮಸ್ತಕಾಭಿಷೇಕಕ್ಕೆ ಸಜ್ಜುಗೊಂಡಿದೆ. ನ.24ರ ಭಾನುವಾರ ನಡೆಯಲಿರುವ ಮಸ್ತಕಾಭಿಷೇಕ 70ನೇಯದ್ದು.

ವರ್ಷಧಾರೆಗೆ ನೆನೆದು, ಬಿಸಿಲಿಗೆ ಮೈಯೊಡ್ಡಿ ನಿಂತಿರುವ ಬಾಹುಬಲಿ ಮೂರ್ತಿಗೆ 17ಕ್ಕೂ ಹೆಚ್ಚು ತರಹದ ಮಂಗಳ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲು, ಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಅಜಾನುಬಾಹು ಬಾಹುಬಲಿಗೆ ಜೈನ ಸಮುದಾಯದ ಧಾರ್ಮಿಕ ಸಂಪ್ರದಾಯ, ವಿಧಿ–ವಿಧಾನಗಳಂತೆ ಮಸ್ತಕಾಭಿಷೇಕ ನಡೆಯಲಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಸಹ ಎಲ್ಲವೂ ಚಾಚೂ ತಪ್ಪದಂತೆ ನಡೆಯಲಿವೆ. ಈಗಾಗಲೇ ಗೊಮ್ಮಟಗಿರಿ ಬಳಿ ಜಾತ್ರೆಯ ವಾತಾವರಣ ನಿರ್ಮಾಣಗೊಂಡಿದೆ.

ವಿವಿಧ ಭಾಗಗಳಲ್ಲಿರುವ ಜೈನ ಸಮುದಾಯದ ಜನರು, ಕೆಲ ಜೈನ ಮುನಿಗಳು ಬೆಟ್ಟದೂರಿನತ್ತ ಬರುತ್ತಿದ್ದಾರೆ. ಸ್ಥಳೀಯ ಗ್ರಾಮಸ್ಥರು ತಮ್ಮೂರ ಜಾತ್ರೆಯಂತೆ ಸಂಭ್ರಮಿಸಿ, ಮಸ್ತಕಾಭಿಷೇಕದ ಪೂರ್ವ ಸಿದ್ಧತೆಯಲ್ಲಿ ತಲ್ಲೀನರಾಗಿದ್ದಾರೆ.

ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಚಾಲನೆ ಸಿಗುತ್ತಿದ್ದಂತೆ, ಮೊದಲು ಅರ್ಪಿಸುವ ಮಂಗಳಕಳಶಗಳು ಈಗಾಗಲೇ ಬಿಕರಿಯಾಗಿವೆ. 17 ತರಹದ ಮಂಗಳದ್ರವ್ಯಗಳನ್ನು ಜೈನ ಸಮುದಾಯದ ಭಕ್ತ ಸಮೂಹ ಖರೀದಿಸಿದೆ. ಮೊದಲ ಮಂಗಳಕಳಶ ₹ 11,000ಕ್ಕೆ ಮಾರಾಟವಾಗಿದೆ ಎಂದು ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್‌ಕುಮಾರ್ ಮಾಹಿತಿನೀಡಿದರು.

ಮೊದಲಿಗೆ 108 ಮಂಗಳಕಳಾಶಭಿಷೇಕ (ಜಲಾಭಿಷೇಕ), ತಲಾ 6 ಕೊಡ ಎಳನೀರು, ಕಬ್ಬಿನ ಹಾಲು, 120 ಲೀಟರ್ ಹಾಲು, ಅರಿಶಿಣ, ಚಂದನ, ಶ್ರೀಗಂಧ, ಕಷಾಯ ಅಭಿಷೇಕ ಸೇರಿದಂತೆ ವಿವಿಧ ಮಂಗಳದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಮಜ್ಜನ ನೆರವೇರಿಸಲಾಗುವುದು. ನಂತರ ಪುಷ್ಪವೃಷ್ಟಿ, ಮಹಾಮಂಗಳಾರತಿಯೊಂದಿಗೆ ಪೂಜಾಕಾರ್ಯ ಸಂಪನ್ನಗೊಳ್ಳಲಿದೆ. 5ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆಯಿದೆ ಎಂದು ಪೂಜಾ ಸಮಿತಿ ಅಧ್ಯಕ್ಷ ಎ.ಎನ್.ಧರಣೇಂದ್ರನ್‌ ತಿಳಿಸಿದರು.

ನವೆಂಬರ್ ಕೊನೆ ಭಾನುವಾರ ಮಸ್ತಕಾಭಿಷೇಕ: ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಅನಂತ ಚತುರ್ದಶಿ ವ್ರತದ ಬಳಿಕ ಬಾಹುಬಲಿಗೆ ಮಸ್ತಕಾಭಿಷೇಕ ನಡೆಯುತ್ತಿತ್ತು. ನಿಗದಿತ ದಿನವಿರಲಿಲ್ಲ. ಸೆಪ್ಟೆಂಬರ್‌ನಿಂದ–ಡಿಸೆಂಬರ್‌ ಅವಧಿಯಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಮಸ್ತಕಾಭಿಷೇಕ ಮಹೋತ್ಸವಜರುಗುತ್ತಿತ್ತು.

ಪ್ರಸಕ್ತ ವರ್ಷ ಇದಕ್ಕೆ ತಿಲಾಂಜಲಿ ನೀಡಲಾಗಿದೆ. ದಿನವೊಂದನ್ನು ನಿಗದಿಪಡಿಸಲಾಗಿದೆ. ಸ್ವಾಮೀಜಿ ಸಲಹೆಯಂತೆ ಮಳೆಗಾಲ ಮುಗಿದ ಬಳಿಕ ನವೆಂಬರ್ ಕೊನೆಯ ಭಾನುವಾರ ಇನ್ಮುಂದೆ ಪ್ರತಿ ವರ್ಷವೂ ತಪ್ಪದೇ ಮಸ್ತಕಾಭಿಷೇಕ ನಡೆಯಲಿದೆ ಎಂದು ಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಡಾ.ಎಂ.ವಿ.ಶಾಂತಕುಮಾರ್ ಹೇಳಿದರು.

ಮಂಡ್ಯ ಜಿಲ್ಲೆಯ ಆರತಿಪುರ ಜೈನ ಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಇದೇ ಮೊದಲ ಬಾರಿಗೆ ಗೊಮ್ಮಟಗಿರಿಗೆ ಬರುತ್ತಿದ್ದು, ಪುರಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶತಮಾನದ ಐತಿಹ್ಯ
ಮೈಸೂರು ನಗರದಿಂದ ಅಂದಾಜು 20 ಕಿ.ಮೀ. ದೂರದಲ್ಲಿರುವ ಬೆಟ್ಟದೂರಿನ ಗೊಮ್ಮಟಗಿರಿಯಲ್ಲಿರುವ ಬಾಹುಬಲಿಗೆ ಶತ ಶತಮಾನದ ಐತಿಹ್ಯವಿದೆ. 18 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ಗಂಗರಸರು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿಯಿದೆ.

ಬೆಟ್ಟದೂರಿನ ಬಾಹುಬಲಿ ಕುರಿತಂತೆ ಯಾವುದೇ ನಿಖರ ಐತಿಹ್ಯ ದಾಖಲೆಗಳಿಲ್ಲ. ಎರಡು ಶಾಸನಗಳು ದೊರೆತಿದ್ದರೂ; ಅಕ್ಷರಗಳನ್ನು ಗುರುತಿಸಲು ಸಾಧ್ಯವಾಗದಷ್ಟು ಸವೆದಿರುವುದರಿಂದ ಇತಿಹಾಸ ಸ್ಪಷ್ಟವಿಲ್ಲ.

1950ರಲ್ಲಿ ಕ್ಷೇತ್ರ ಜೀರ್ಣೋದ್ಧಾರಗೊಂಡಿದೆ. ಆಗಿನಿಂದಲೂ ಮಸ್ತಕಾಭಿಷೇಕದ ಧಾರ್ಮಿಕ ವಿಧಿ–ವಿಧಾನ ತಪ್ಪದೇ ನಡೆದಿದೆ. ಮಸ್ತಕಾಭಿಷೇಕದಲ್ಲಿ ಭಾಗಿಯಾಗುವ ಭಕ್ತ ಸಮೂಹಕ್ಕೆ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮಿತಿ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT