ಬುಧವಾರ, ಫೆಬ್ರವರಿ 8, 2023
18 °C

ಪರಂಪರೆ ಪರಿಚಯಿಸಿದ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮೋರ್‌ 45ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಿರುವ ಐದು ದಿನಗಳ ಕೈಮಗ್ಗ ಉಡುಪುಗಳ ಪ್ರದರ್ಶನ ‘ಹ್ಯಾಂಡ್‌ಲೂಮ್‌ ವಾಯೇಜ್’ಗೆ ಮಂಗಳವಾರ ತೆರೆ ಬೀಳಲಿದೆ. 

ಭಾರತದ ಕೈಮಗ್ಗ ಉದ್ಯಮದ ಶ್ರೀಮಂತ ಪರಂಪರೆಯನ್ನು ವಿಮೋರ್ ಹ್ಯಾಂಡ್‌ಲೂಮ್‌ ಸಂಸ್ಥೆ ಮುಂದುವರೆಸಿಕೊಂಡು ಬಂದಿದ್ದು, 45 ವಸಂತಗಳನ್ನು ಪೂರೈಸಿದೆ.

ದೊಮ್ಮಲೂರಿನ ಬೆಂಗಳೂರು ಇಂಟರ್‌ ನ್ಯಾಷನಲ್‌ ಸೆಂಟರ್‌ನಲ್ಲಿ ಶುಕ್ರವಾರದಿಂದ ಆರಂಭವಾದ ಪ್ರದರ್ಶನದಲ್ಲಿ ದೇಶದ ಕೈಮಗ್ಗಗಳ ಪೋಷಣೆ ಮತ್ತು ಉತ್ತೇಜನಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಕೈಮಗ್ಗ ಸಂರಕ್ಷಣೆಯಲ್ಲಿ ಸಮುದಾಯಗಳು ಹೇಗೆ ಕೈಜೋಡಿಸಬೇಕು ಎಂಬ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ಸಂವಾದ ಆಯೋಜಿಸಲಾಗಿತ್ತು.

ಭಾರತದ ಕೈಮಗ್ಗ ಉದ್ಯಮದ ಶ್ರೀಮಂತ ಪರಂಪರೆಯ ಜತೆಗೆ ನೇಯ್ಗೆಯ ಇತಿಹಾಸ, ಸಂಪ್ರದಾಯ, ನೇಕಾರರ ಜೀವನಶೈಲಿ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದೆ. ಮತ್ತು ಜವಳಿ, ನೇಯ್ಗೆ ವಿಕಾಸದ ಕುರಿತು ಮಕ್ಕಳ ಕಾರ್ಯಾಗಾರ ಮತ್ತು ಕೈಮಗ್ಗದ ಕಥೆ ಹೇಳುವ ಕಾರ್ಯಕ್ರಮ ಗಮನ ಸೆಳೆದವು.

ಕೈಮಗ್ಗ ತಜ್ಞ ಡಾ. ಜಯರಾಜ್, ಹೆಸರಾಂತ ನೇಕಾರರಾದ ಸಿ.ಶೇಖರ್, ಶಿಕ್ಷಣತಜ್ಞ ಪ್ರತಿಮಾ ಮಾರಿಯಾ, ಗುಂಜನ್ ಜೈನ್, ಸ್ಥಾಪಕ ಮತ್ತು ವಿನ್ಯಾಸಕ, ವೃಕ್ಷ ಸೇರಿದಂತೆ ನೇಕಾರರು, ವಿನ್ಯಾಸಕರು,ತಜ್ಞರು ಮತ್ತು ಉದ್ಯಮದ ಪ್ರಮುಖರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಕಂಬಳಿ ಕತೆ   

ವಿಮೋರ್ ಕೈಮಗ್ಗ ಉತ್ಸವದಲ್ಲಿ ಕಂಬಳಿ ತಯಾರಿಕರ ಕತೆ ಹಾಗೂ ಅವರ ಜೀವನ ಶೈಲಿಯನ್ನು ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಸ್ತುತ ಪಡಿಸಲಾಯಿತು. 

ಬೆಳಗಾವಿಯ ಕುರುಬ ಸಮುದಾಯದ ಕಂಬಳಿ ನೇಕಾರರು ತಲೆಮಾರುಗಳಿಂದ ಕಂಬಳಿಗಳನ್ನು ನೇಯುತ್ತಾ ಬಂದಿದಿದ್ದಾರೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟುತ್ತ ಬಂದಿರುವ ಕುರುಬ ಸಮುದಾಯದ ಅಪೂರ್ವ ಕತೆಗಳನ್ನು ಜಾನಪದ ಹಾಡುಗಳ ಮೂಲಕ ಪ್ರಸ್ತುತ ಪಡಿಸಿದರು.

ನೀಲಕಂಠ ನಾಗಪ್ಪ ಕುರುಬಾ ಮತ್ತು ನಿಂಗಪ್ಪ ಶಂಕರ್ ಸಣ್ಣಕ್ಕಿ ನೇತೃತ್ವದ ತಂಡ ತಮ್ಮ‌ ಸಮುದಾಯದ ಇತಿಹಾಸ,ಕುಲಕಸುಬನ್ನು ಜಾನಪದ ಹಾಡಿನ ಮೂಲಕ ತೆರೆದಿಟ್ಟರು. 

ಕುರುಬ ಸಮುದಾಯದಲ್ಲಿ ತಮ್ಮ ಗ್ರಾಮ ದೇವರಿಗೆ ಮದ್ಯ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಈ ಸಂಪ್ರದಾಯ ಮತ್ತು ಆಚಾರ, ವಿಚಾರಗಳನ್ನು ಈ ಕಾರ್ಯಕ್ರಮದ ಮೂಲಕ ತಲುಪಿಸಿದರು.‌


ಪವಿತ್ರಾ ಮುದ್ದಯ್ಯ

ಕೈಮಗ್ಗಗಳ ಪುನರುಜ್ಜೀವನಕ್ಕೆ ವಸ್ತು ಪ್ರದರ್ಶನ

45 ವರ್ಷಗಳಲ್ಲಿ ವಿಮೋರ್‌ನಲ್ಲಿ ನಾವು ಕೈಮಗ್ಗಗಳ ಪುನರುಜ್ಜೀವನ ಮತ್ತು ಸಂರಕ್ಷಣೆಗೆ ಮಾತ್ರವಲ್ಲ, ಜೀವನೋಪಾಯವನ್ನು ಸಬಲೀಕರಣಗೊಳಿಸುವ ಮತ್ತು ಉಳಿಸಿಕೊಳ್ಳಲು ಸಹಾಯ ಮಾಡಲು ದೇಶದ ಎಲ್ಲೆಡೆಯ ನೇಕಾರರೊಂದಿಗೆ ಕೆಲಸ ಮಾಡಿದ್ದೇವೆ ಎಂದು ವಿಮೋರ್ ಕೈಮಗ್ಗ ಪ್ರತಿಷ್ಠಾನದ ಸಹ ಸಂಸ್ಥಾಪಕಿ ಪವಿತ್ರಾ ಮುದ್ದಯ್ಯ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.