ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ ಎದುರಿಸುವ ಶಕ್ತಿ ನಗರಕ್ಕೆ ಇಲ್ಲ!

ಹಿಂದಿನ ಅವಘಡ, ಅನುಭವ ಪಾಠ ಕಲಿಸಿವೆ
Last Updated 23 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಅವಾಂತರ ಎದುರಿಸಲುಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿರುವ ಸಿದ್ಧತೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ‘ಮೆಟ್ರೊ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

* * *

ಪ್ರಕೃತಿ ಮುನಿಸಿನ ಎದುರು ಮಾನವನ ಪ್ರಯತ್ನ ತೃಣ ಸಮಾನ. ಹಾಗಂತ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ.ಹಿಂದಿನ ಅನುಭವಗಳು ಬಿಬಿಎಂಪಿಗೆ ಸಾಕಷ್ಟು ಪಾಠ ಕಲಿಸಿವೆ.ಅನುಭವದ ಆಧಾರದ ಮೇಲೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ. ಒಂದು ವೇಳೆ ಮಳೆ ರೌದ್ರಾವತಾರ ತಾಳಿದರೆ ನಮ್ಮ ಪ್ರಯತ್ನಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಲಿವೆ ಎಂದು ಮೇಯರ್‌ ಮಾತು ಆರಂಭಿಸಿದರು.

‘80 ಮಿಲಿ ಮೀಟರ್‌ನಿಂದ 120 ಮಿಲಿ ಮೀಟರ್‌ ಮಳೆಯಾದರೆ, ಅದನ್ನು ತಾಳಿಕೊಳ್ಳುವ ಶಕ್ತಿ ಬೆಂಗಳೂರಿಗೆ ಇದೆ. ಒಂದು ವೇಳೆ 120 ಮಿಲಿ ಮೀಟರ್‌ಗಿಂತ ಹೆಚ್ಚು ಮಳೆ ಸುರಿದರೆ ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಲಿದೆ. ಆಗ ಪರಿಸ್ಥಿತಿ ನಮ್ಮ ಕೈಮೀರಿ ಹೋಗಲಿದೆ’ ಎಂಬ ಸುಳಿವನ್ನು ಅವರು ಮಾತಿನ ಮಧ್ಯೆ ನೀಡಿದರು.

ಈ ಬಾರಿ ಮಳೆ ಎದುರಿಸಲು ಬಿಬಿಎಂಪಿ ಏನೆಲ್ಲಾ ಸಿದ್ಧತೆ ನಡೆಸಿದೆ?

ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಳೆಗಾಲದಲ್ಲಿ ಸಂಭವಿಸುವ ಅವಾಂತರ ತಪ್ಪಿಸುವುದು ಸದ್ಯ ನಮ್ಮ ಮುಂದಿರುವ ಸವಾಲು.ವಾಡಿಕೆಯಂತೆ ಜೂನ್‌ ಹೊತ್ತಿಗೆ ಮುಂಗಾರು ಶುರುವಾಗಬಹುದು ಎಂಬ ನಿರೀಕ್ಷೆಯಲ್ಲಿ ಮುಂಚಿತವಾಗಿ ಸನ್ನದ್ಧರಾಗಿದ್ದೇವೆ. ಮೇ ತಿಂಗಳಲ್ಲಿಯೇ ಅಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗಿದೆ.

ಮಳೆಗಾಲದಲ್ಲಿ ಗಾಳಿಗೆ ಬುಡಮೇಲಾಗುವ ಮರಗಳು ಸೃಷ್ಟಿಸುವ ಅವಘಡ ಜಾಸ್ತಿ ಅಲ್ಲವೇ?

ಹೌದು, ಅದನ್ನು ಗಮನದಲ್ಲಿಟ್ಟುಕೊಂಡು ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಲಾಗಿದೆ. ಅಂಥಅಪಾಯಕಾರಿ ಮರಗಳನ್ನು ಕಡಿದು, ತೆರೆವುಗೊಳಿಸಲು ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ನುರಿತ ಸಿಬ್ಬಂದಿಯ 21 ತಂಡಗಳಿವೆ. ಮಳೆಗಾಲದ ಅವಘಡ ತಡೆಯಲು ಹೆಚ್ಚುವರಿಯಾಗಿ ಏಳು ತಂಡ ನಿಯೋಜಿಸಲಾಗಿದೆ.ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬ ಮೇಲ್ವಿಚಾರಕ ಇರುತ್ತಾರೆ. ಮರಗಳನ್ನು ತೆರವುಗೊಳಿಸಲು ಅವಶ್ಯಕತೆ ಇರುವ ಗರಗಸ, ಕೊಂಬೆ ತುಂಡರಿಸುವ ಯಂತ್ರ, ಹಾರೆ, ಹಗ್ಗ ಮುಂತಾದ ಸಲಕರಣೆ ನೀಡಲಾಗಿದೆ.ಕತ್ತರಿಸಿದ ಮರದ ತುಂಡು ಸಾಗಣೆಗೆ ಪ್ರತಿ ವಾರ್ಡ್‌ಗೂ ಟ್ರ್ಯಾಕ್ಟರ್‌ ಹಾಗೂ ಚಿಕ್ಕ ಲಾರಿ ಒದಗಿಸಲಾಗಿದೆ.

ಹಿಂದಿನ ಅನುಭವಗಳಿಂದ ಬಿಬಿಎಂಪಿ ಕಲಿತ ಪಾಠ ಏನು?

ಈ ಹಿಂದೆ ಮಳೆಯಾದಾಗ ತೊಂದರೆಗೀಡಾದ ಪ್ರದೇಶಗಳನ್ನು ಗುರುತಿಸಿ, ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ನೀರು ನಿಲ್ಲುವ ರಸ್ತೆ ಮತ್ತು ಪ್ರದೇಶಗಳನ್ನು ಗುರುತಿಸಿ, ದುರಸ್ತಿ ಮಾಡಲಾಗಿದೆ.ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿಸಲಾಗಿದೆ. ಬೀಳುವ ಸ್ಥಿತಿಯಲ್ಲಿರುವಟೊಳ್ಳು ಮತ್ತು ಒಣಗಿದ ಮರಗಳನ್ನು ತೆರವುಗೊಳಿಸಲಾಗಿದೆ.

ಮಳೆಗಾಲದಲ್ಲಿ ತೊಂದರೆಗೀಡಾಗುವ ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುವಿರಿ?

ಮಳೆಯಿಂದಾಗುವ ಅನಾಹುತಗಳ ನಿವಾರಣೆಗೆ ವಲಯವಾರು9 ಶಾಶ್ವತ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ. ವಲಯದ ಪ್ರತಿ ಉಪ ವಿಭಾಗ ಕಚೇರಿಗಳಲ್ಲಿ 63 ತಾತ್ಕಾಲಿಕ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ತುರ್ತು ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಯಂತ್ರ, ಸಲಕರಣೆ ಜತೆ ಸಿಬ್ಬಂದಿ ಸದಾ ಸನ್ನದ್ಧರಾಗಿರುತ್ತಾರೆ.

ರಾಜಕಾಲುವೆಗಳಿಂದ ಕೂಡ ಹೆಚ್ಚಿನ ಅನಾಹುತಗಳು ಸೃಷ್ಟಿಯಾಗುತ್ತವೆಯಲ್ಲ?

ಅನೇಕ ಕಡೆ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. ಪಾಳುಬಿದ್ದಿದ್ದ ತಡೆಗೋಡೆ ದುರಸ್ತಿ ಮಾಡಲಾಗಿದೆ. ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದ್ದ ಕಸವನ್ನು ಕಾಲುವೆಗಳಿಂದ ತೆರವುಗೊಳಿಸಲು ಮೇ ತಿಂಗಳಲ್ಲಿ ಐದು ಕಡೆ ತ್ರ್ಯಾಶ್ ಬ್ಯಾರಿಯರ್ (ಕಸ ತಡೆಯುವ ಹಗುರ ಅಲ್ಯೂ ಮಿನಿಯಂ ಬಲೆ) ಅಳವಡಿಸಲಾಗಿದೆ. ಇನ್ನುಳಿದ ಕಾಲುವೆಗಳಲ್ಲಿಯೂ ಇಂಥ ಬಲೆ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT