ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆದಾಡುವ ಮಾಹಿತಿ ಕೇಂದ್ರ ಮುನೀರ್‌

ಅಕ್ಷರ ಗಾತ್ರ

ತು ರ್ತಾಗಿ ರಕ್ತ ಬೇಕಾದಾಗ ರಕ್ತನಿಧಿ ವಿಳಾಸ ಹುಡುಕಲು ಶುರುಮಾಡುತ್ತೇವೆ. ಅಚಾನಕ್ಕಾಗಿ ಅನಾರೋಗ್ಯ ಎದುರಾದಾಗ ಆಸ್ಪತ್ರೆಯ ವಿಳಾಸ ಗೊತ್ತಿಲ್ಲದೇ ಪರದಾಡುತ್ತೇವೆ, ಅಗ್ನಿಶಾಮಕ ದಳ, ಹತ್ತಿರದ ಶಾಲೆ, ಕಾಲೇಜು ಹೀಗೆ ಹತ್ತಾರು ತುರ್ತು ಅಗತ್ಯಗಳ ಬಗ್ಗೆ ಮೊದಲೇ ನಾವು ಸಿದ್ದತೆ ನಡೆಸುವುದಿಲ್ಲ. ಇಂತಹ ಸಂದರ್ಭದಲ್ಲಿ ನೆನಪಿಗೆ ಬರುವುದು ನೆಲಮಂಗಲದ ಮುನೀರ್‌ ಪಾಷ.

ಬಹುರಾಷ್ಟ್ರೀಯ ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಸ್ವಯಂ ನಿವೃತ್ತಿ ಪಡೆದು, ತಾಲ್ಲೂಕಿನ ಎಲ್ಲ ಆಸ್ಪತ್ರೆಗಳು, ಕ್ಲಿನಿಕ್‍ಗಳು, ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ಶಾಲೆಗಳು ಹೀಗೆ...ಅಗತ್ಯವಿರುವ ಎಲ್ಲಾ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ, ಸ್ವಂತ ಖರ್ಚಿನಿಂದ ಟೈಪ್ ಮಾಡಿಸಿ, ಮುದ್ರಿಸಿ, ಸಾವಿರಾರು ಪ್ರತಿಗಳನ್ನು ಮಾಡಿ ಅಂಗಡಿಗಳು, ಮನೆಗಳು, ಕಚೇರಿಗಳು ಸೇರಿದಂತೆ ಸಾರ್ವಜನಿಕರಿಗೆ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ.

2005ರಲ್ಲಿ ಆರಂಭವಾದ ಅವರ ಈ ಕಾಯಕ ಇಲ್ಲಿಯವರೆಗೂ ಸಾಗಿದೆ. ಸಾವಿರಾರು ಜನರು ಅವರಿಂದ ಅನುಕೂಲ ಪಡೆದು ಹರಸುತ್ತಾರೆ.

ಪ್ರತಿ ದಿನ ಪಟ್ಟಣವನ್ನು ಒಂದು ಸುತ್ತು ಹಾಕುವ ಇವರು, ಹೊಸದಾಗಿ ಆರಂಭವಾದ ಶಾಲೆ, ಕಚೇರಿ, ಆಸ್ಪತ್ರೆಗಳಿಗೆ ಹೋಗಿ ದೂರವಾಣಿ ಸಂಖ್ಯೆಗಳನ್ನು ಪಡೆದು, ದಾಖಲಿಸುವ ಕೆಲಸ ಮಾಡುತ್ತಾರೆ.

‘ಎಷ್ಟೊ ಜನರು ಆ ಕಚೇರಿ ಎಲ್ಲಿ ಬರುತ್ತದೆ, ಆಸ್ಪತ್ರೆ ಎಲ್ಲಿ ಇದೆ ಎಂದು ನಿತ್ಯ ಕೇಳುತ್ತಾರೆ. ಅವರಿಗೆಲ್ಲಾ ತಾಲ್ಲೂಕಿನ ಪೂರ್ತಿ ಮಾಹಿತಿ ಸಂಗ್ರಹಿಸಿ ವಿತರಿಸಬಹುದಲ್ವಾ ಎಂಬ ಆಲೋಚನೆ ಬಂದಿತು. ಇದರಿಂದ ನನಗೆ ಅಳಿಲು ಸೇವೆ ಮಾಡಿದ ಆತ್ಮತೃಪ್ತಿ ಮತ್ತು ಧನ್ಯತಾ ಭಾವ ಮೂಡುತ್ತದೆ’ ಎನ್ನುತ್ತಾರೆ ಮುನೀರ್‌ ಪಾಷ.

‘ನಮಗೆ ಮಕ್ಕಳಿಲ್ಲ. ಆ ಕೊರಗು ಕಾಡಬಾರದು ಎಂಬ ಕಾರಣಕ್ಕೆ ಪ್ರತಿ ರಾಷ್ಟ್ರೀಯ ಹಬ್ಬದಂದು ಒಂದೊಂದು ಶಾಲೆಗೆ ಹೋಗಿ, ರಾಷ್ಟ್ರಧ್ವಜ ಮತ್ತು ಸಿಹಿಯನ್ನು ಎಲ್ಲ ಮಕ್ಕಳಿಗೂ ವಿತರಿಸಿ ಖುಷಿ ಪಡುತ್ತೇನೆ. ಮಕ್ಕಳಿಗೆ ಉಚಿತ ಪುಸ್ತಕ ಕೊಡುತ್ತೇನೆ. ಶಾಲೆ ಹಾಗೂ ಕಚೇರಿಗಳಿಗೆ ಗಾಂಧಿ, ಅಂಬೇಡ್ಕರ್, ಭಾರತ ಮಾತೆಯ ಭಾವಚಿತ್ರಗಳನ್ನು ನೀಡುತ್ತೇನೆ. ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವಂತೆ ಮನೆ ಮನೆಗೆ ಹೋಗಿ ಹೇಳುತ್ತೇನೆ. ಬೀದಿ ದೀಪ ಹಾಳಾಗಿದ್ದರೆ ಸಂಬಂಧಪಟ್ಟವರಿಂದ ದುರಸ್ಥಿ ಮಾಡಿಸುವ ಕೆಲಸವನ್ನೂ ಮಾಡುತ್ತೇನೆ. ನನಗೆ ತೃಪ್ತಿ ಸಿಗುವ ಎಲ್ಲಾ ಕೆಲಸವನ್ನೂ ಮಾಡಿ ಖುಷಿ ಪಡುತ್ತೇನೆ’ ಎನ್ನುತ್ತಾರೆ ಅವರು.

‘ಇವರೊಂದಿಗೆ ಕಾಲ ಕಳೆದರೆ, ಮಾಹಿತಿ ಕೇಂದ್ರ ನಮ್ಮ ಜೊತೆ ಇದ್ದಂತೆ. ಎಲ್ಲ ಮಾಹಿತಿಯೂ ಅವರ ತಲೆಯಲ್ಲಿಯೇ ಇರುತ್ತದೆ. ಇವರಿಗೆ ತಹಶೀಲ್ದಾರ್ ಪ್ರಶಂಸನಾ ಪತ್ರ ಸಿಕ್ಕಿದೆ. ತಾಲ್ಲೂಕು ಸ್ವತಂತ್ರ್ಯೋತ್ಸವ ಪ್ರಶಸ್ತಿ ದೊರೆತಿದೆ’ ಎಂದು ನಿವೃತ್ತ ಶಿಕ್ಷಕ ಪುಟ್ಟಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT