ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ.. ನೋ ಮೀಟರ್ ನಾವ್ ಹೇಳಿದ್ದೇ ರೇಟ್‌!

Last Updated 17 ಜೂನ್ 2019, 19:30 IST
ಅಕ್ಷರ ಗಾತ್ರ

ಹಗಲು ನೋಡಿದ ಬೆಂದಕಾಳೂರು ಕತ್ತಲೆಯಲ್ಲಿ ಹೊಸಮುಖವನ್ನು ತೋರಿಸುತ್ತದೆ. ಇದಕ್ಕೆ ಜೀವಂತ ಸಾಕ್ಷಿ ಆಟೊಗಳು.ಸಂಜೆ 6 ಗಂಟೆಯಾದರೆ ಸಾಕು ಆಟೊ ಚಾಲಕರು ತಮ್ಮ ಹೊಸ ವರಸೆಯನ್ನು ತೋರುತ್ತಾರೆ. ಇನ್ನು ಮಳೆಗಾಲ ಶುರುವಾದರೆ ಆಟೊದವರಿಗೆ ಹಬ್ಬವೋ ಹಬ್ಬ. ಸಂಜೆ ವೇಳೆಗೆ ಮೋಡ ಮುಸುಕಿದರೆ ಸಾಕು ಆಟೊ ಮೀಟರ್ ಡಬಲ್‌. ಹಾಗಂತ ಇದೇನು ಬಿಬಿಎಂಪಿ ಮಾಡಿದ ರೂಲ್ಸ್ ಅಲ್ಲ. ಆಟೊ ಚಾಲಕರು ತಮಗೆ ತಾವೇ ಮಾಡಿಕೊಂಡ ದರ್ಬಾರ್ ರೂಲ್ಸ್.

ಆಟೊದಲ್ಲಿ ಪ್ರಯಾಣಿಸುವವರಿಗೆ ವಂಚನೆಯಾಗಬಾರದು ಎಂಬ ಉದ್ದೇಶದಿಂದ ಮೀಟರ್‌ ಅಳವಡಿಸಲಾಯಿತು. ಆದರೆ ಚಾಲಕರ ಪಾಲಿಗೆ ಮೀಟರ್ ಇರುವುದು ಕೇವಲ ನಾಮಕಾವಸ್ಥೆಗೆ ಎಂಬುದು ಹಲವು ಆಟೊ ಪ್ರಯಾಣಿಕರ ಅನುಭವ.

ಈ ಮೀಟರ್‌ ವಿಚಾರ ಹೊಸದೇನಲ್ಲ. ಆದರೆ, ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೂ ಈ ಸಮಸ್ಯೆಗೆ ಕಡಿವಾಣ ಬೀಳುತ್ತಿಲ್ಲ ಎಂಬುದು ಆಟೊ ಪ್ರಯಾಣಿಕರ ಅಳಲು. ’ಬನ್ನಿ ಎಲ್ಲಿಗೆ ಹೋಗಬೇಕು‘ ಎನ್ನುತ್ತಾರೆ ಆಟೊದಲ್ಲಿ ಕುಳಿತರೆ ಮೀಟರ್‌ ಹಾಕಲ್ಲ. ’ಎಷ್ಟು ಆಗುತ್ತೆ ಸಾರ್ ಅಲ್ಲಿಗೆ ಹೋಗೋಕೆ‘ ಎಂದು ಕೇಳಿದರೆ ಬಾಯಿಗೆ ಬಂದಷ್ಟು ಹೇಳುತ್ತಾರೆ. ‘ಯಾಕೆ ಅಷ್ಟು? ಮೀಟರ್ ಹಾಕಲ್ವಾ?’ ಎಂದು ಪ್ರಶ್ನಿಸಿದರೆ ’ಆ ಕಡೆ ಟ್ರಾಫಿಕ್‌ ಇದೆ, ರೋಡ್‌ ಸರಿಯಿಲ್ಲ’ ಎಂಬ ಸಬೂಬುಗಳನ್ನು ಹೇಳುತ್ತಾರೆ. ’ಬೇಕಾದ್ರೆ ಬೇರೆ ಆಟೊಗಳನ್ನು ಕೇಳಿ ನೋಡಿ, ಬಂದ್ರೆ ಅದರಲ್ಲಿ ಹೋಗಿ ಎಂದು ಉಡಾಫೆಯ ಉತ್ತರ ನೀಡುತ್ತಾರೆ’ ಎಂದು ನೋವಿನ ದನಿಯಲ್ಲಿ ತಮ್ಮ ಆಟೊ ಪ್ರಯಾಣದ ಅನುಭವವನ್ನು ಹಂಚಿಕೊಳ್ಳುತ್ತಾರೆ ರಾಘವೇಂದ್ರ ಸ್ವಾಮಿ.

‌ನಿಯಮಗಳ ಗಾಳಿಗೆ ತೂರಿ

‌ಆಟೊ ಚಾಲಕರು ನಿಯಮಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇನ್ನೂ ವಿಪರ್ಯಾಸ ಎಂದರೆ ಕೆಲವರಿಗೆ ನಿಯಮಗಳು ಇವೆ ಎಂಬುದು ಸಹ ಗೊತ್ತಿಲ್ಲ. ನೂರಕ್ಕೆ 35% ಚಾಲಕರು ನಿಯಮ ಪಾಲಿಸಿದರೆ 65% ಚಾಲಕರು ಪಾಲಿಸುವುದಿಲ್ಲ.

ಕೆಲವರು ಮೀಟರ್ ಹಾಕಿದರೆ ಇನ್ನೂ ಕೆಲವರು ಮೀಟರ್‌ ಹಾಕಲ್ಲ. ಮೀಟರ್‌ ಹಾಕಿದರೂ ಒಂದೇ ಹಾಕದಿದ್ದರೂ ಅಷ್ಟೇ ದರ ಆಗುತ್ತೆ ಎನ್ನುತ್ತಾರೆ. ಇನ್ನೂ ವಿಶೇಷವೆಂದರೆ ಸಮಯ ಬದಲಾದಂತೆ ಗಂಟೆ ಗಂಟೆಗೂ ಒಂದೊಂದು ದರ ಹೇಳುತ್ತಾರೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಆಟೊ ಪ್ರಯಾಣದ ರೇಟ್‌ ಬೆಟ್ಟಿಂಗ್‌ನಂತೆ ಬದಲಾಗುತ್ತೆಎಂಬುದು ಪ್ರಯಾಣಿಕರ ಅಭಿಪ್ರಾಯ.

ಏನ್ ಹೇಳ್ತಾರೆ ಆಟೊ ಚಾಲಕರು

ನಾವು ನಿಯಮ ಪಾಲಿಸುತ್ತೇವೆ. ಆದರೆ ಎಲ್ಲಾ ಸಮಯದಲ್ಲೂ ನಿಯಮ ಪಾಲಿಸಲು ಕಷ್ಟವಾಗುತ್ತದೆ. ‘ಆಟೊ ಚಾಲಕರು ಮಾತ್ರ ರೂಲ್ಸ್‌ ಬ್ರೇಕ್ ಮಾಡಲ್ಲ ದ್ವಿಚಕ್ರ, ಕಾರ್ ಚಾಲಕರು ಸೇರಿದಂತೆ ಎಲ್ಲರೂ ನಿಯಮ ಉಲ್ಲಂಘನೆ ಮಾಡುತ್ತಾರೆ. ನಮಗೆ ಮೀಟರ್‌ ಹಾಗೂ ಹೆವಿ ಲೋಡ್‌, ಚಾಲಕರ ವಸ್ತ್ರ ನಿಯಮಗಳು ಇವೆ. ಇವುಗಳನ್ನು ನಾವು ಕಡ್ಡಾಯವಾಗಿ ಪಾಲಿಸುತ್ತೇವೆ. ಆದರೆ ಕೆಲವು ಸಮಯದಲ್ಲಿ ಅನಿವಾರ್ಯ. ಏನು ಮಾಡುವುದು ನಮ್ ಜೀವನವೂ ನಡಿಬೇಕಲ್ಲ ಸಾರ್‘ ಎನ್ನುತ್ತಾರೆ ಕೆ. ಆರ್‌. ಮಾರುಕಟ್ಟೆಯ ಆಟೊ ಚಾಲಕರೊಬ್ಬರು.

ಮೀಟರ್ ಹಾಕಿ ಎಂದು ಸಹಜವಾಗಿ ಎಲ್ಲರೂ ಹೇಳುತ್ತಾರೆ. ಆದರೆ ದೂರವಿರುವ ಸ್ಥಳಕ್ಕೆ ಮೀಟರ್ ಹಾಕುತ್ತೇವೆ. ಪಕ್ಕದಲ್ಲಿ ಇರುವ ಸ್ಥಳಕ್ಕೆ ಮೀಟರ್ ಹಾಕುವುದರಿಂದ ನಮಗೆ ನಷ್ಟವಾಗುತ್ತೆ. ಹಾಗಾಗಿ ನಾವು ಮೀಟರ್ ಹಾಕಲು ಹಿಂಜರಿಯುತ್ತೇವೆ ಎನ್ನುತ್ತಾ ಸತ್ಯ ಒಪ್ಪಿಕೊಳ್ಳುತ್ತಾರೆ ಇನ್ನೊಬ್ಬ ಆಟೊ ಚಾಲಕ.

ಮಳೆ ಬಂದರೆ ನೋ ಮೀಟರ್‌

ಮಳೆ ಬಂದಾಗಲೆಲ್ಲ ಪ್ರಯಾಣಿಕರು ಹೆಚ್ಚು ಪರದಾಡುವ ಪರಿಸ್ಥಿತಿ ಇದ್ದೇ ಇರುತ್ತದೆ. ಅದರಲ್ಲೂ ರಸ್ತೆ, ಮೆಟ್ರೊ ನಿರ್ಮಾಣದ ಕಾಮಕಾರಿ ಚಾಲ್ತಿಯಲ್ಲಿದ್ದು ಇದು ಆಟೊದವರಿಗೆ ಹೆಚ್ಚು ಹಣ ಪೀಕುವ ಸಮಯವಾಗಿದೆ. ಮಳೆ ಆರಂಭವಾದರೆ ಸಾಕು ಯಾರು ಕೂಡ ಮೀಟರ್ ಹಾಕಲ್ಲ. ಆಟೊ ಚಾಲಕರು ಹೇಳಿದ ದರದಲ್ಲೇ ಹೋಗಬೇಕು. ‘ಚೌಕಾಸಿ ಮಾಡಬೇಡಿ ಹೋಗಿ, ಬೇರೆ ಆಟೊದವರನ್ನು ಕೇಳಿ ಬಂದ್ರೆ ಹೋಗಿ’ ಎಂದು ಆಟೊದವರು ಸಿಡುಕು ಮಾತುಗಳನ್ನು ಆಡುತ್ತಾರೆ ಎಂಬುದನ್ನು ನಾವು ಸಾಕಷ್ಟು ಬಾರಿ ಕೇಳಿದ್ದೇವೆ ಎನ್ನುತ್ತಾರೆ ಪ್ರಯಾಣಿಕರು.

ಆಟೊ ಚಾಲಕರು ನಿಯಮ ಪಾಲಿಸಲ್ಲ. ಅದಕ್ಕಾಗಿ ಆಟೊಗಳ ನಂಬರನ್ನು ಫೋಟೊ ತೆಗೆದು ಪಬ್ಲಿಕ್ ಐ ಆ್ಯಪ್‌ನಲ್ಲಿ ಹಾಕಿದರೆ ನಮಗೆ ತಿಳಿಯುತ್ತದೆ. ಅದಕ್ಕೆ ದಂಡ ವಿಧಿಸಿದಾಗ ಎಲ್ಲರೂ ನಿಯಮ ಪಾಲಿಸುತ್ತಾರೆ.

- ಶರಣಗೌಡ, ಟ್ರಾಫಿಕ್ ಪೊಲೀಸ್‌, ವಿವಿಪುರಂ

***

ಕೆಲವರು ಮೀಟರ್‌ ಹಾಕಲ್ಲ ನಿಜ. ಎಲ್ಲರೂ ಕಡ್ಡಾಯವಾಗಿ ಮೀಟರ್‌ ಹಾಕಬೇಕು. ದುಡ್ಡಿನ ಆಸೆಯಿಂದ ಹೀಗೆ ಮಾಡುತ್ತಾರೆ
- ಶಬ್ಬೀರ್, ಆಟೊ ಚಾಲಕ

***

ಮಳೆ ಬರುವಾಗ ರೋಡ್‌ಗಳ ಮಧ್ಯೆ ನೀರು ನಿಲ್ಲವುದರಿಂದ ರಸ್ತೆಗಳು ಬ್ಲಾಕ್‌ ಆಗುತ್ತವೆ. ಹಾಗಾಗಿ ನಾವು ಓಲಾ ಆಪ್ ಬುಕ್ಕಿಂಗ್ ಆಫ್ ಮಾಡಿಕೊಳ್ಳುತ್ತೇವೆ

- ಕೃಷ್ಣಪ್ಪ, ಆಟೊ ಚಾಲಕ

***

ನನಗೆ ಬೆಂಗಳೂರಿನಲ್ಲಿ ಆಟೊದಲ್ಲಿ ಪ್ರಯಾಣ ಮಾಡಬೇಕು ಎಂದರೆ ಭಯ ಹುಟ್ಟುತ್ತದೆ. ಅವರು ಒಂದು ಏರಿಯಾಕ್ಕೆ ಕೇಳುವ ಹಣದಲ್ಲಿ ನಾವು ನಮ್ಮ ಊರಿಗೆ ಹೋಗಿ ಬರಬಹುದು.

- ನಿತಿನ್ ಕುಮಾರ್, ಐಟಿ ಉದ್ಯೋಗಿ

***

ಮಳೆ ಶುರುವಾದರೆ ಓಲಾದಲ್ಲಿ ಆಟೊ ಸಿಗಲ್ಲ

ಇನ್ನೇನು ಮಳೆ ಶುರುವಾಗಬಹುದು ಅಥವಾ ಮಳೆ ಆರಂಭವಾಗಿದ್ದರೆ ಓಲಾ ಆಪ್‌ನಲ್ಲಿ ಆಟೊ ಚಾಲಕರು ಬುಕ್ಕಿಂಗ್ ಆಫ್‌ ಮಾಡಿಕೊಳ್ಳುತ್ತಾರೆ. ಬುಕ್ ಮಾಡಲು ಪ್ರಯಾಣಿಕರು ಎಷ್ಟು ಪರದಾಡಿದರೂ ಆಟೊ ಸಿಗುವುದಿಲ್ಲ. ಕೆಲವು ಆಟೊಗಳು ಸಿಕ್ಕರೂ ಹೆಚ್ಚು ಹಣ ತೋರಿಸುತ್ತದೆ. ಮೀಟರ್ ಅನ್ನುವ ಮಾತಿಲ್ಲ. ತಪ್ಪಿ ಮೀಟರ್ ಅಂದರೆ ಚಾಲಕರು ಕೆಳಗಿಂದ ಮೇಲೆ ನೋಡುತ್ತಾರೆ. ಇನ್ನೂ ಓಲಾ ಮೊರೆ ಹೋದರೆ ಸಿಗುವುದು ಕಷ್ಟ. ಕಾರಣ ಓಲಾ ಆಟೊದವರೇ ಬುಕ್ಕಿಂಗ್ ಆಫ್ ಮಾಡಿಕೊಂಡು ಹೆಚ್ಚು ಹಣ ಕೇಳುತ್ತಾರೆ. ಅನಿವಾರ್ಯ ಅವರು ಬರಲೇಬೇಕು ಎಂಬ ನಂಬಿಕೆ ಚಾಲಕರದ್ದು.

‘ಪಬ್ಲಿಕ್ ಐ’ ಆ್ಯಪ್‌ ಯಾರು ಬಳಸುತ್ತಿಲ್ಲ

ಆಟೊ ಪ್ರಯಾಣಿಕರು ಮೋಸ ಹೋಗಬಾರದು ಎಂಬ ಕಾರಣಕ್ಕಾಗಿ ‘ಪಬ್ಲಿಕ್ ಐ’ ಆ್ಯಪ್‌ಮಾಡಲಾಗಿದೆ. ಯಾರು ಮೀಟರ್ ಹಾಕದೆ ಆಟೊ ಚಲಾಯಿಸುತ್ತಾರೊ ಅಂತಹ ಆಟೊ ನಂಬರ್ ಫೋಟೊ ತೆಗೆದು‘ಪಬ್ಲಿಕ್ ಐ’ ನಲ್ಲಿ ಹಾಕಿದರೆ ಅಂತಹ ಆಟೊ ಚಾಲಕರಿಗೆ ದಂಡ ವಿಧಿಸುತ್ತೇವೆ. ಆದರೆ ಯಾರೊಬ್ಬರೂ ಕೂಡ ಇಂತಹ ಕೆಲಸ ಮಾಡುತ್ತಿಲ್ಲ. ಇದು ಪ್ರಯಾಣಿಕರಿಂದ ಸುಧಾರಣೆ ಆಗಬೇಕಿದೆ. ಎಲ್ಲಾ ಆಟೊಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಆ್ಯಪ್‌ ಬಳಕೆಗೆ ಮುಂದಾದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹೆಚ್ಚು ಹಣ ನೀಡದೆ ಮೀಟರ್ ಹಾಕಿ ಎಂದು ಕೇಳಿ ಹಾಕದಿದ್ದರೆ ನಂಬರನ್ನು ಆ್ಯಪ್‌ನಲ್ಲಿ ಹಾಕಿ ಎನ್ನುತ್ತಾರೆ ಟ್ರಾಫಿಕ್ ಪೊಲೀಸ್ ಶರಣಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT