ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹನಿಗೊಂದು ಹಾಡು...

ಸುಚಿತ್ರಾ ಹೆಗಡೆ
Published 8 ಜೂನ್ 2024, 0:35 IST
Last Updated 8 ಜೂನ್ 2024, 0:35 IST
ಅಕ್ಷರ ಗಾತ್ರ

ಬೆಂಗಳೂರಿನ ಮಳೆಗೊಂದು ತನ್ನದೇ ಆದ ಹದವಿತ್ತು. ಬೇಸಿಗೆ ಅಸಹನೀಯ ಅನ್ನಿಸುವ ಮೊದಲೇ ತೀಡುವ ಗಾಳಿ ‘ಎಲ್ಲಿ ಹೋಗುವಿರಿ… ನಿಲ್ಲಿ ಮೋಡಗಳೇ…’ ಎಂದು ಮೋಡಗಳ ಕಿವಿ ಹಿಂಡಿ, ನವಿರಾದ ರೇಷ್ಮೆದಾರಗಳನ್ನು ಇಳಿಬಿಟ್ಟಂತೆ. ‘ತುಂತುರು…ಅಲ್ಲಿ ನೀರಹಾಡು…’ ಹರಿಸಿ ಬೆಂಗಳೂರಿಗರ ಎದೆಯಲ್ಲಿ ಪ್ರೀತಿಯ ಕಂಪನ ಮೂಡಿಸುತ್ತಿತ್ತು.

ಆದರೆ ಈಗೀಗ ಇಲ್ಲಿಯ ಮಳೆ ಅನಾವೃಷ್ಟಿ ಅತಿವೃಷ್ಟಿಗಳ ನಡುವೆ ಜೀಕುವ ತೂಗುಯ್ಯಾಲೆ. ಹಿಂದೆಂದೂ ಕಾಣದ ಬಿಸಿಲಿನ ಧಗೆಗೆ ಬಸವಳಿದಿದ್ದ ‘ಬೆಂದ’ಕಾಳೂರು ಮೊನ್ನೆ ಒಂದೇ ಮಳೆಗೆ ಒದ್ದೆ ಮುದ್ದೆಯಾಗಿ ‘ಭೀಗಿ ಭೀಗಿ ರಾತೋ ಮೆ…ಐಸಿ ಬರಸಾತೋ ಮೆ ಕೈಸಾ ಲಗತಾ ಹೆ…? ಕೇಳಿದಂತಿತ್ತು.

‘ಘನನ..ಘನನ..ಕಾಲೇ ಮೇಘಾ ಕಾಲೇ ಮೇಘಾ ಪಾನಿ ತೊ ಬರಸಾವೋ…’ ಎಂದು ಲಗಾನ್ ನಲ್ಲಿ ಹಾಡಿದಂತೆ, ಇಡೀ ಬೆಂಗಳೂರು ಮಳೆ ಹನಿಗಳಿಗೆ ಕಾಯುವ ಚಾತಕ ಪಕ್ಷಿಯಂತಾಗಿತ್ತು. ಸಹನೆ ಕಳೆದುಕೊಂಡು ‘ನೆಲದ ಗಾಯ ಹೊಲಿಯುವಂತೆ ಸುರಿಯೇ ಮಳೆಯೆ’ ಅಂದು ಮಳೆರಾಯನಿಗೆ ಅಬ್ಬರಿಸಿದಂತೆ ಕೊನೆಗೂ ಮಳೆ ಸುರಿದಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ… ಮೆಲ್ಲ ಮೆಲ್ಲನೆ ಧರೆಗಿಳಿಯೇ…ಎಂದು ಹಂಸಲೇಖ ಹೇಳಿದ್ದು ಕೇಳಿಸಿಯೇ ಇಲ್ಲವೆಂಬಂತೆ.

ನಗರದ ಎಸ್ ಜೆ ಪಿ ರಸ್ತೆಯಲ್ಲಿ ಬಂದ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ -ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್

ನಗರದ ಎಸ್ ಜೆ ಪಿ ರಸ್ತೆಯಲ್ಲಿ ಬಂದ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ -ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್

ಟ್ರಾಫಿಕ್‌ನ ಹೊಗೆ, ಮೆಟ್ರೊದ ದೂಳೆಲ್ಲ ಮಳೆಯ ನೀರಲ್ಲಿ ಬೆರೆತು, ಬೆಂಗಳೂರಿನ ರಸ್ತೆಗಳು ‘ಆಜ್ ರಪಟ್ ಜಾಯೇತೋ ಹಮೆ ನ ಉಠಯ್ಯೋ…ಆಜ್ ಫಿಸಲ್ ಜಾಯೇತೊ ಹಮೆ ನ ಉಠೈಯ್ಯೋ…’ ಎಂದು ಹಾಡಿ ಕುಣಿಯಲು ಹೇಳಿಮಾಡಿಸಿದಂತಹ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಬದಿಯ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ‘ಮುಂಗಾರು ಮಳೆಯೇ… ಏನು ನಿನ್ನ ಹನಿಗಳ ಲೀಲೆ…’ ಎಂದು ರೋಮ್ಯಾಂಟಿಕ್ ಆಗಿ ಮಳೆಹಾಡನ್ನು ಹಾಡಬಯಸಿದ್ದವರು ‘ಶ್ರಾವಣಾ ಕುಣಿದಾಂಗ ರಾವಣಾ… ಕುಣಿದಾವ ಗಾಳಿ…ಭೈರವನ ರೂಪತಾಳಿ… ಎಂದು ಗುಣುಗುಣಿಸಿದ್ದರು. ‘ನೆಲ ಮುಗಿಲನಪ್ಪಿದುದೊ, ಮುಗಿಲೆ ನೆಲನಪ್ಪಿದುದೊಮಳೆಯಲ್ಲಿ ಬಯಲಾಯ್ತು ಬಯಲಿನಂತರವು! ಎಂಬಂತೆ ಒಂದೇ ಮಳೆಗೆ ಬೆಂಗಳೂರಿನ ರಾಜ ಕಾಲುವೆಗಳ, ಕೆರೆಗಳ ಒತ್ತುವರಿಯ ಬಣ್ಣವೂ ಬಯಲಾಗಿತ್ತು.

ನಮಗೆ ಮಳೆಯೆಂದರೆ ಬರೀ ನೀರಲ್ಲ. ಇಳೆಯ ಮೋಹ, ಬದುಕಿನ ಭಾವ, ಜಗದ ಜೀವ. ಖಲೀಲ್ ಗಿಬ್ರಾನ್ ಹೇಳುವಂತೆ ಪ್ರೀತಿಯ ಕಡಲಿನ ನಿಟ್ಟುಸಿರು…ನೆಲದಾತ್ಮದ ನಗು, ನೆನಪುಗಳ ಸ್ವರ್ಗದ ಕಣ್ಣೀರು. ಇಡೀ ಪಶ್ಚಿಮದ ಜಗತ್ತು ಬಿಸಿಲಿಗೆ, ಬೇಸಿಗೆಗೆ ಹಾತೊರೆದರೆ ನಮಗೆ ಮಾತ್ರ ‘ರಿಮ್ ಜಿಮ್ ಗಿರೇ ಸಾವನ್… ಸುಲಗ್ ಸುಲಗ್ ಜಾಯೇs ಮನ್’. ಅದಕ್ಕೇ ಇರಬೇಕು ಮಳೆಗೂ ಹಾಡಿಗೂ ಮುಗಿಯದ ನಂಟು. ಸುತ್ತ ಸಂಕೋಲೆಗಳಿಂದ ಬಂಧಿತರಾಗಿರುವ ನಮಗೆ ಮಳೆಯೆಂದರೆ ಸ್ವಚ್ಛಂದ ಭಾವ. ಪ್ರತಿ ಹನಿಯಲ್ಲೂ ಹೊಳೆಯುವ ಭರವಸೆ. ಬೆಳೆಯುವ ವಿಶ್ವಾಸ. ಒಳಗಿನ ತುಡಿತಗಳ, ಮಿಡಿತಗಳ ಪ್ರತಿಫಲನ. ಪ್ರೀತಿ, ಶೃಂಗಾರ, ದುಃಖ, ಬಯಕೆ, ಬೇಸರ, ಸಿಟ್ಟು… ಹೀಗೆ ವಿಭಿನ್ನ ಭಾವಗಳನ್ನು ಸಮರ್ಥವಾಗಿ ವ್ಯಕ್ತಪಡಿಸಲು ಮಳೆಯೇ ಸಾಧನ.

ಬೆಂಗಳೂರಿನ ಮಳೆ ಆಗಾಗ ಬಂದು ಹೋಗುವ ಅತಿಥಿಯಂತಲ್ಲ. ಸದಾ ಜೊತೆಗಿರುವ ಆಪ್ತಸಂಗಾತಿ. ‘ಪ್ಯಾರ್ ಹುವಾ…ಇಕರಾರ್ ಹುವಾ ಹೈ…ಪ್ಯಾರ್ ಸೆ ಫಿರ್‌ ಕ್ಯೂಂ ಡರತಾ ಹೆ ದಿಲ್…’ ಅದಕ್ಕೇ ಏನೋ ಬೆಂಗಳೂರಿಗರಿಗೆ ನೀರಿನಲ್ಲಿ ನೆನೆವ ಭಯ ಇಲ್ಲವೇ ಇಲ್ಲ. ಅದೊಂದು ಜೀವದೊಡನೆ ಬೆಸೆಯುವ ಭಾವನಾತ್ಮಕವಾದ ಬಂಧ. ಅಂದಹಾಗೆ ನೀರಲ್ಲಿ ನೆನೆಯುವುದೆಂದರೆ ಸಿನೆಮಾಗಳಿಗೂ ಪಂಚಪ್ರಾಣ. ಅದೂ ನಾಯಕಿ ತೆಳ್ಳನೆಯ ಜಾರ್ಜೆಟ್ ಸೀರೆಯುಟ್ಟು ತೋಯ್ದು ತೊಪ್ಪಡಿಯಾಗುತ್ತಿದ್ದರೆ ಮಳೆಯೇ ಅಲ್ಲಿ ಅದೃಶ್ಯ ಪ್ರೇಮಿ! ಪ್ರೇಕ್ಷಕರೆದೆಯಲ್ಲಿ ‘ಮುತ್ತು…ಮುತ್ತು… ನೀರ ಹನಿಯ ತಾಂತನನ!’

ಬೆಂಗಳೂರಿನ ಮಳೆ ಕರಾವಳಿಯ ಮಳೆಯಂತೆ ಭೋರ್ಗರೆಯುವುದಿಲ್ಲ. ಮಲೆನಾಡಿನಂತೆ ರಚ್ಚೆ ಹಿಡಿಯುವುದಿಲ್ಲ. ಕ್ಷಣ ಚಿತ್ತ. ಥೇಟ್ ಇಲ್ಲಿಯ ಟ್ರಾಫಿಕ್ಕಿನಂತೆ. ಜಯನಗರ ‘ಮಳೆ ಬರುವ ಹಾಗಿದೆ…’ ಎಂದು ಜಯಂತರ ಹಾಡು ಹಾಡುವಾಗ ಅಲ್ಲೇ ಪಕ್ಕದ ಜೆಪಿ ನಗರ ‘ಎಲ್ಲೋ ಮಳೆಯಾಗಿದೆ ಇಂದು…’ ಹಾಡಿ ಸುಮ್ಮನಾಗುತ್ತದೆ ಅಷ್ಟೆ.

ಈಗೀಗ ಬೆಂಗಳೂರಿಗರಿಗೆ ಮಳೆಯ ಕುರಿತು ಯೋಚಿಸಲು ಪುರುಸೊತ್ತಿಲ್ಲ. ಮಳೆ ಬಂದಾಗಲೆಲ್ಲ ಆಗುವ ಅನಾಹುತಗಳು ನಮ್ಮ ಅವ್ಯವಸ್ಥೆಯನ್ನು ನೆನಪಿಸುವ ಭಯ. ಮಳೆ ಜೋರಾಗುವ ಮೊದಲು ಮನೆ ಸೇರುವ ಅವಸರ. ಒಮ್ಮೆ ಇವೆಲ್ಲವನ್ನು ಬದಿಗಿಟ್ಟು ನೋಡಿ. ‘ಮತ್ತೆ ಮಳೆ ಹೊಯ್ಯುತಿದೆ… ಎಲ್ಲ ನೆನಪಾಗುತಿದೆ…’ ನೀಲಿ ಪರದೆಯ ಮೋಡಿಯಿಂದ ಹೊರಬಂದು, ನೀರಾಟವಾಡುತ್ತ, ‘ಯೇ ಕಾಗಜ್ ಕಿ ಕಷ್ಟಿ…ಯೇ ಬಾರಿಶ್ ಕಿ ಪಾನಿ’ ಎಂದು ಮತ್ತೆ ಗುನುಗುವಂತಾದರೆ ಎಷ್ಟು ಸೊಗಸು! ಆಕ್ಷೀ …

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT