ಸೋಮವಾರ, ಜನವರಿ 20, 2020
18 °C
ಬೆಂಗಳೂರಿನಲ್ಲಿ ಟ್ರೆಂಡ್‌ ಆಗುತ್ತಿದೆ ಪಾಶ್ಚಾತ್ಯ ಭವಿಷ್ಯ ಕಲೆ

ಭವಿಷ್ಯ ಹೇಳುವ ಟ್ಯಾರೋ ಕಾರ್ಡ್‌ಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಈಗೀಗ ಹೆಚ್ಚಾಗಿ ಕೇಳಿ ಬರುತ್ತಿರುವ ‘ಟ್ಯಾರೋ’ (Tarot) ಕನ್ನಡದ ಜಾಯಮಾನದ ಮಟ್ಟಿಗೆ ಹೊಸ ಪದ. ಇದು ಇಸ್ಪೀಟ್‌ ಎಲೆಗಳನ್ನು ಹೋಲುವ  ಕಾರ್ಡ್‌ಗಳ ನೆರವಿನಿಂದ ನುಡಿಯುವ ಭವಿಷ್ಯ ಶಾಸ್ತ್ರ. ‘ಟ್ಯಾರೋ’ ಪಾಶ್ಚಾತ್ಯ ಮತ್ತು ಯುರೋಪ್‌ ರಾಷ್ಟ್ರಗಳಲ್ಲಿ ಚಿರಪರಿಚಿತ.

‘ಇದು ಖಂಡಿತ ಜೋತಿಷ್ಯ ಅಥವಾ ಗಿಳಿಶಾಸ್ತ್ರವಲ್ಲ. ಅವುಗಳೊಂದಿಗೆ ಹೋಲಿಕೆ ಮಾಡಲು ಕೂಡ ನಾನು ಬಯಸುವುದಿಲ್ಲ. ಮನುಷ್ಯರ ಕ್ರಿಯೆ ಮತ್ತು ಮನಸ್ಥಿತಿಯನ್ನು ಗ್ರಹಿಸಿ ಭವಿಷ್ಯ ರೂಪಿಸಿಕೊಳ್ಳಲು ದಾರಿ ತೋರುವ ಮನಃಶಾಸ್ತ್ರದ ಅಧ್ಯಯನ. ಭವಿಷ್ಯದ ಬಗ್ಗೆ ಮಾರ್ಗದರ್ಶನ ಮಾಡುವ ಗೈಡನ್ಸ್‌ ಟೂಲ್‌’ ಎಂದು ಬೆಂಗಳೂರಿನ ಟ್ಯಾರೋ ರೀಡರ್‌ ಸವಿತಾ ರಮೇಶ್‌ ನಸು ನಗುತ್ತಲೇ ‘ಮೆಟ್ರೊ’ ಜತೆ ಮಾತಿಗಿಳಿದರು.  

ಟೇಬಲ್‌ ಮೇಲೆ ಹಾಸಿದ್ದ ಬಟ್ಟೆಯ ಮೇಲೆ ಹರಡಿಕೊಂಡು ಕುಳಿತಿದ್ದ ಬಣ್ಣ, ಬಣ್ಣದ ಕಾರ್ಡ್‌ಗಳನ್ನು ಶಫಲ್‌ ಮಾಡುತ್ತಿದ್ದ ಸವಿತಾ ಅಪ್ಪಟ ಜಾದೂಗಾರಿಣಿಯಂತೆ ಕಾಣುತ್ತಿದ್ದರು. ಪ್ರತಿ ಪ್ರಶ್ನೆಗೂ ಕಾರ್ಡ್‌ ಶಫಲ್‌ ಮಾಡಿ ಕಟ್ಟಿನಿಂದ ಐದು ಎಲೆಗಳನ್ನು ಬಟ್ಟೆ ಮೇಲೆ ಹರಡಿ ಭವಿಷ್ಯ ನುಡಿಯುವ ಈ ಕಲೆ ಖಂಡಿತ ಎದುರಿಗಿದ್ದ ವ್ಯಕ್ತಿಯ ಕುತೂಹಲ ಹೆಚ್ಚಿಸುತ್ತದೆ. 

ಪ್ರತಿಯೊಂದು ಕಾರ್ಡ್‌ ಮತ್ತು ಅದರಲ್ಲಿರುವ ಸಾಂಕೇತಿಕ ಚಿತ್ರಗಳಿಗೆ ಅವುಗಳದ್ದೇ ಆದ ಮಹತ್ವ ಮತ್ತು ಗೂಡಾರ್ಥಗಳಿರುತ್ತವೆ. ಟ್ಯಾರೋ ಕಾರ್ಡ್‌ಗಳನ್ನು ಶಫಲ್‌ ಮಾಡಿ ಬಟ್ಟೆಯ ಮೇಲೆ ಹರಡಿದಾಗ ಅವುಗಳೊಂದಿಗೆ ಎದುರು ಕುಳಿತ ವ್ಯಕ್ತಿಗಳ ಸಂಪೂರ್ಣ ಚಿತ್ರವೂ ಹರಡಿಕೊಳ್ಳುತ್ತದೆ.  

ಕಾರ್ಮಿಕ್‌ ಎನರ್ಜಿ ನೆರವಿನಿಂದ ಎದುರಿಗೆ ಕುಳಿತ ವ್ಯಕ್ತಿಗಳ ಸುಪ್ತ ಪ್ರಜ್ಞೆಯ ಆಳಕ್ಕೆ ಇಳಿದು ಅವರ ಮನಸ್ಸಿನಲ್ಲಿರುವ ತಾಕಲಾಟಗಳನ್ನು ಅರಿತುಕೊಳ್ಳುತ್ತೇನೆ. ಮನೋವೈದ್ಯರ ರೀತಿ ಅವರಿಗೆ ಸೂಕ್ತ ಸಲಹೆ, ಸೂಚನೆ ಮತ್ತು ಪರಿಹಾರ ಸೂಚಿಸುತ್ತೇನೆ. ನಾನು ಕಲಿತ ಪ್ರಾಣಿಕ್‌ ಹೀಲಿಂಗ್, ರೇಖಿ, ಧ್ಯಾನ ಮತ್ತು ಮನಃಶಾಸ್ತ್ರದ ವಿದ್ಯೆಗಳು ಟ್ಯಾರೋ ರೀಡಿಂಗ್‌ಗೆ ನೆರವಾಗುತ್ತಿವೆ ಎಂದರು.

‘ಕಾರ್ಡ್‌ ಮುಂದೆ ಕುಳಿತಾಗ ನನ್ನ ಮತ್ತು ಗ್ರಾಹಕರ ಮನಸ್ಸು ಶುದ್ಧ ಮತ್ತು ಪ್ರಶಾಂತವಾಗಿರಬೇಕು. ಮನಸ್ಸಿನಲ್ಲಿ ಯಾವುದೇ ಗೊಂದಲಗಳಿರಬಾರದು. ಅಂದಾಗ ಮಾತ್ರ ಪಕ್ಕಾ ಫಲಿತಾಂಶ ಸಾಧ್ಯ. ಇಲ್ಲದಿದ್ದರೆ ಒಂದು ಸೆಷನ್‌ ತಾಸುಗಟ್ಟಲೇ ಸಮಯ ಹಿಡಿಯುತ್ತದೆ’ ಎನ್ನುವುದು ಸವಿತಾ ಅನುಭವದ ಮಾತು.  

ಪ್ರಶ್ನೆಗಳಿಗೆ ಅನುಗುಣವಾಗಿ ಕಾರ್ಡ್‌ಗಳೂ ಬದಲಾಗುತ್ತವೆ. ಪ್ರತಿ ಹೊಸ ಪ್ರಶ್ನೆಗೂ ಕಾರ್ಡ್‌ಗಳನ್ನು ಮತ್ತೆ ಶಫಲ್‌ ಮಾಡುವುದನ್ನು ನೋಡುವುದೇ ಒಂದು ಅಂದ. ವೈಯಕ್ತಿಕ ಮತ್ತು ವೃತ್ತಿ ಜೀವನ, ಹಣಕಾಸು, ಉದ್ಯೋಗ, ಆರೋಗ್ಯ, ವೈವಾಹಿಕ ಸಂಬಂಧ, ಪ್ರೀತಿ, ದೋಖಾ ಮುಂತಾದವನ್ನು ಕಾರ್ಡ್‌ಗಳಿಂದ ಗ್ರಹಿಸಬಹುದು. ಭವಿಷ್ಯದಲ್ಲಿ ಜರಗುವ ಅವಘಡ ಮತ್ತು ಎದುರಾಗುವ ಅಪಾಯಗಳ ಬಗ್ಗೆ ಜನರಿಗೆ ಸಲಹೆ, ಸೂಚನೆ ನೀಡಲಾಗುತ್ತದೆ. ಯಜ್ಞ,ಯಾಗಾದಿ, ಪೂಜೆ, ಪುನಸ್ಕಾರ, ದಾನ, ಧರ್ಮ, ಹರಳು ಎಂದು ಗ್ರಾಹಕರನ್ನು ದಾರಿತಪ್ಪಿಸಿ ಹಣ ಸುಲಿಯುವುದಿಲ್ಲ.ಕಷ್ಟದಲ್ಲಿರುವ ಜನರಿಗೆ ಜೀವನದ ನಿರ್ಣಾಯಕ ಮತ್ತು ಸಂದಿಗ್ಧ ಸ್ಥಿತಿಯಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಟ್ಯಾರೋ ಸರಿಯಾದ ನೆರವು ನೀಡುತ್ತದೆ ಎನ್ನುವುದು ಸವಿತಾ ಮಾತು. 

 

ಕರಿಕೋಟು ಬಿಟ್ಟು ಕಾರ್ಡ್‌ ಹಿಡಿದರು!
ಕಾನೂನು ಪದವೀಧರೆಯಾದ ಸವಿತಾ ರಮೇಶ್‌ ವಕೀಲರಾಗಬೇಕಿತ್ತು. ಕಾರ್ಡ್‌ ಹಿಡಿದು ಟ್ಯಾರೋ ರೀಡರ್‌ ಆಗಿದ್ದು ಆಕಸ್ಮಿಕ! ‘ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ನಲ್ಲಿ (ಎನ್‌ಎಲ್‌ಎಸ್‌) ಕಾನೂನು ಪದವಿ ಓದುವಾಗ ಈಶಾನ್ಯ ರಾಜ್ಯಗಳಿಂದ ಬಂದಿದ್ದ ಸಹಪಾಠಿಗಳಿಂದ ಟ್ಯಾರೋ ನಂಟು ಬೆಳೆಯಿತು. ಕುತೂಹಲಕ್ಕಾಗಿ ಹಿಡಿದುಕೊಂಡ ಟ್ಯಾರೋ ಕಾರ್ಡ್‌ ನಂಟನ್ನು ಸುಲಭವಾಗಿ ಕಡಿದುಕೊಳ್ಳಲಾಗಲಿಲ್ಲ. ಮುಂದೆ ಈ ಹವ್ಯಾಸವನ್ನೇ ಪೂರ್ಣಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದೆ’ಎಂದು ಆಕಸ್ಮಿಕವಾಗಿ ಟ್ಯಾರೋ ರೀಡರ್‌ ಆದ ಕತೆಯನ್ನು ಅವರು ಮೆಲುಕು ಹಾಕುತ್ತಾರೆ. ಇಸ್ಪೀಟ್‌ ಎಲೆಗಳನ್ನು ಹೋಲುವ  78 ವಿಭಿನ್ನ ಆಕೃತಿ, ಗಾತ್ರ ಮತ್ತು ವಿನ್ಯಾಸಗಳ ಟ್ಯಾರೋ ಕಾರ್ಡ್‌ಗಳಲ್ಲಿ 22 ಕಾರ್ಡ್‌ಗಳ ಮೇಜರ್‌ ಅರ್ಕಾನ್‌ ಮತ್ತು 56 ಕಾರ್ಡ್‌ಗಳ ಮೈನರ್‌ ಅರ್ಕಾನ್‌ ಎಂಬ ಎರಡು ವಿಧಗಳಿವೆ. ಡಿವೈಟ್‌ ಟಾರೊ, ರೈಡರ್‌ ವೈಟ್‌ ಮತ್ತು ಡ್ರೀಮ್ಸ್‌ ಆಫ್‌ ಗಾಯಾ ಎಂಬ ಮೂರು ಪದ್ಧತಿಗಳಿವೆ. ಸವಿತಾ ‘ಡ್ರೀಮ್ಸ್‌ ಆಫ್‌ ಗಾಯಾ’ ಪದ್ಧತಿ ಅನುಸರಿಸುತ್ತಾರೆ.

ಅಪರಾಧಿಗಳನ್ನು ಪತ್ತೆ ಹಚ್ಚಲು ನೆರವು
ಯುರೋಪ್‌ ಮತ್ತು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರು ಟ್ಯಾರೋ ಕಾರ್ಡ್‌ಗಳ ಮೊರೆ ಹೋಗುತ್ತಾರೆ. ಷೇರು ಮಾರುಕಟ್ಟೆಗಳಲ್ಲಿಯ ಏರಿಳಿತ, ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮುಂತಾದ ಉದ್ದೇಶಗಳಿಗೂ ಜನರು ಟ್ಯಾರೋ ಮೊರೆಹೋಗುತ್ತಿದ್ದಾರೆ. 

ಭಾರತದಲ್ಲಿಯೂ ಪೊಲೀಸರು ಅಪರಾಧಿಗಳನ್ನು ಪತ್ತೆ ಹಚ್ಚಲು ಈ ಪ್ರಯೋಗ ಮಾಡಬಹುದು.ಟ್ಯಾರೋ ನಮ್ಮ ದೇಶದಲ್ಲಿ ಇನ್ನೂ ಅಷ್ಟು ಜನಪ್ರಿಯವಾಗಿಲ್ಲ. ಈಗೀಗ ಜನರಿಗೆ ಗೊತ್ತಾಗುತ್ತಿದೆ. ಯುವ ಜನರಲ್ಲಿ ಈ ಬಗ್ಗೆ ಹೆಚ್ಚಿನ ಕುತೂಹಲವಿದೆ ಎನ್ನುತ್ತಾರೆ ಸವಿತಾ. 

ಫೇಸ್‌ಬುಕ್ ಪೇಜ್‌ ತೆರೆದಿರುವ ಸವಿತಾ, ಅರ್ಬನ್‌ ಮ್ಯಾಗಜಿನ್‌ ಮೂಲಕ ಬಾಲಿವುಡ್‌ ಸ್ಟಾರ್‌ಗಳ ಟ್ಯಾರೋ ಕ್ಯಾಲೆಂಡರ್ ಹೊರ ತಂದಿದ್ದಾರೆ. ಅನೇಕ ಸಿನಿಮಾ ತಾರೆಗಳು ಮತ್ತು ರಾಜಕಾರಣಿಗಳಿಗೆ ಟ್ಯಾರೋ ಮೂಲಕ ಮಾರ್ಗದರ್ಶನ ಮಾಡುತ್ತಿದ್ದಾರೆ.  


ಸವಿತಾ ರಮೇಶ್‌

ಫೋನ್‌ ಮೂಲಕವೂ ರೀಡಿಂಗ್‌
ಟ್ಯಾರೋ ರೀಡಿಂಗ್‌ಗೆ ಗ್ರಾಹಕರು ಕಡ್ಡಾಯವಾಗಿ ಇರಬೇಕು ಎಂಬ ನಿಯಮವಿಲ್ಲ. ಗ್ರಾಹಕರು ದೂರವಾಣಿ, ಸ್ಕೈಪ್‌, ವಿಡಿಯೊ ಕಾಲ್‌ಗಳ ಮೂಲಕವೂ ಟ್ಯಾರೋ ಸೇವೆ ಪಡೆಯಬಹುದು. ಹೊರ ದೇಶಗಳಿಂದಲೂ ಗ್ರಾಹಕರು ಸ್ಕೈಪ್‌ ಮೂಲಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆಯುತ್ತಾರೆ.

*
ಟ್ಯಾರೋ ಮೂಲಕ ಹಣ ಗಳಿಸುವುದು ನನ್ನ ಉದ್ದೇಶವಲ್ಲ. ನನ್ನ ಜ್ಞಾನ ಬಳಸಿ ಜನರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಇದರಿಂದ ನಾಲ್ಕು ಜನರ ಬಾಳು ಹಸನಾದರೆ ನನ್ನ ಜೀವನ ಸಾರ್ಥಕ.
-ಸವಿತಾ ರಮೇಶ್‌, ಟ್ಯಾರೋ ರೀಡರ್‌

ಮೊಬೈಲ್‌ ಸಂಖ್ಯೆ 8310440116 ಅಥವಾ ಇ–ಮೇಲ್‌ ವಿಳಾಸ savita@ladyofdivinetarot.com  ಮೂಲಕ ಸವಿತಾ ಅವರನ್ನು ಸಂಪರ್ಕಿಸಬಹುದು. 

ಪ್ರತಿಕ್ರಿಯಿಸಿ (+)