ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲರಹಿತ ದುಡಿಮೆಗಾರರಿಗೆ ತರಬೇತಿ

Last Updated 8 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು ಐಟಿ ನಂತರ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕವಾಗಿ ಕೆಲ ಕಂಪನಿಗಳು ಇಲ್ಲಿ ನೆಲೆಯೂರಿವೆ. ಗಗನಚುಂಬಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳ ಸಮಚ್ಛಯ ಶರವೇಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ಕಟ್ಟಡ ನಿರ್ಮಾಣಕ್ಕೆ ಅಪಾರ ಮಾನವ ಸಂಪನ್ಮೂಲದ ಅಗತ್ಯವಿದ್ದು, ಕೂಲಿ ಕಾರ್ಮಿಕರಿಗೆ ವಿಪರೀತ ಬೇಡಿಕೆ ಇದೆ. ಹಾಗೆಯೇ ಕೌಶಲದ ಕೊರತೆಯೂ ಕಾಣಬಹುದು.

ಕಟ್ಟಡ ಕಾರ್ಮಿಕರು ಬಹುತೇಕರು ವಲಸಿಗರು ಮತ್ತು ಅನಕ್ಷರಸ್ಥರು. ಹೊಟ್ಟೆ ಹೊರೆಯಲು ದುಡಿಮೆ ಅರಸಿ ಬಂದವರು. ಮಹಾನಗರದಲ್ಲಿ ಗಾಳಿ – ಬೆಳಕು ಸುಳಿವೇ ಇಲ್ಲದ ಗೂಡಿನಂತಹ ಸ್ಲಂಗಳಲ್ಲಿ ವಾಸ ಮಾಡುವ ಶ್ರಮಜೀವಿಗಳು. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮಣ್ಣು ಹೊರೆಯುವ ಕೂಲಿಗಳಾಗಿ ಮೊದಲಿಗೆ ಕೆಲಸ ಆರಂಭಿಸುತ್ತಾರೆ. ಗಾಣೆತ್ತುಗಳಂತೆ ದುಡಿದರೂ ಮಣ್ಣು, ಇಟ್ಟಿಗೆ, ಗಾರೆ ಹೊರೆಯುವ ಕೆಲಸಕಷ್ಟೇ ಸೀಮಿತರಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೈರಾಣಪಡುತ್ತಾರೆ.

ಕಟ್ಟಡ ನಿರ್ಮಾಣಕಾರರಾಗಿ ಇಲ್ಲವೇ ಮೇಸ್ತ್ರಿಗಳಾಗಿ ಈ ಕ್ಷೇತ್ರದಲ್ಲೂ ಬಡ್ತಿ ಪಡೆಯಲು ಅಪಾರವಾದ ಅನುಭವ ಅವಶ್ಯ. ಇದೊಂದು ಸುದೀರ್ಘವಾದ ದುಡಿಮೆಯಾನ. ಕೌಶಲರಹಿತ ದುಡಿಮೆಗಾರರಿಗೆ ಸೂಕ್ತ ತರಬೇತಿ ನೀಡಿ ಹಂತ – ಹಂತವಾಗಿ ಮೇಲೇರಲು ಇನ್‌ಸ್ಟ್ರಕ್ಟ್‌ (INSTRUCT) ಸಂಸ್ಥೆ ಕಳೆದ ಮೂವತ್ತು ವರ್ಷದಿಂದ ಕಟ್ಟಡ ಕಾರ್ಮಿಕರು, ಮೇಸ್ತ್ರಿಗಳು, ಪ್ಲಂಬರ್‌, ಎಲೆಕ್ಟ್ರಿಷಿಯನ್‌, ಬಾರ್‌ ಬೆಂಡರ್ಸ್‌, ಮೆಟಲ್‌ ವಕರ್ಸ್‌, ಸೂಪರ್‌ ವೈಸರ್‌, ಎಂಜಿನಿಯರ್‌ಗಳಿಗೆ ಸತತ ಪ್ರಾಯೋಗಿಕ ತರಬೇತಿ ನೀಡುತ್ತಾ ಬಂದಿದೆ.

ಅರೆಬರೆ ಕೌಶಲದಿಂದ ಕೆಲಸ ಮಾಡುವವರಿಗೆ ಪೂರ್ಣ ಪ್ರಮಾಣದಲ್ಲಿ ತರಬೇತಿ ನೀಡಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಲು ಸಂಸ್ಥೆ ನೆರವು ನೀಡುತ್ತಿದೆ. ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣ ಕುರಿತು ಪೂರ್ಣ ಪ್ರಮಾಣದಲ್ಲಿ ಕೌಶಲ ತರಬೇತಿ ನೀಡುತ್ತಾ ಬಂದಿರುವುದು ಈ ಸಂಸ್ಥೆ ಹೆಗ್ಗಳಿಕೆ.

ಕಟ್ಟಡ ಕಾರ್ಮಿಕರಿಗೆ ತರಬೇತಿ ಅವಧಿಯಲ್ಲಿ ಕೂಲಿ ನಷ್ಟ ಪರಿಹಾರವೂ ನೀಡಲಾಗುವುದು. ಊಟ-ಉಪಹಾರವೂ ಸಿಗಲಿದೆ. ವಸತಿ ಸೌಲಭ್ಯ ಕಲ್ಪಿಸಿ, ವೃತ್ತಿ ಸಂಬಂಧ ಸುರಕ್ಷತಾ ಕಿಟ್‍ಗಳನ್ನು ನೀಡುವ ವ್ಯವಸ್ಥೆ ಇದೆ. ತರಬೇತಿ ಪಡೆದ ನಂತರ ವೃತ್ತಿ ಕೌಶಲ ಪ್ರಮಾಣ ಪತ್ರವೂ ಸಿಗಲಿದೆ.

ಕೂಲಿಕಾರ್ಮಿಕರು ವೃತ್ತಿಪರವಾದ ಕೌಶಲ ಗಳಿಸಿದರೆ ಗುಣಮಟ್ಟದ ಕಟ್ಟಡ ನಿರ್ಮಾಣದ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗಲಿದೆ. ಕಟ್ಟುವ ಕಟ್ಟಡಗಳು ರಾಷ್ಟ್ರ ನಿರ್ಮಾಣದ ಕಟ್ಟಡಗಳು. ಗ್ರಾಮೀಣ, ನಗರ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ನೂರಾರು ವರ್ಷಗಳು ಬಾಳುವ ಕಟ್ಟಡಗಳನ್ನು ಕಟ್ಟಬೇಕಾದರೆ ಈ ರೀತಿಯ ತರಬೇತಿ ಅವಶ್ಯ ಎನ್ನುತ್ತಾರೆ ಬಿಐಟಿ ಕಾಲೇಜಿನ ‍ಪ್ರಾಂಶುಪಾಲ ಡಾ.ಅಶ್ವತ್ಥ್‌.

ಇದುವರೆಗೂ 2 ಸಾವಿರ ಕಾರ್ಯಾಗಾರ ಹಮ್ಮಿಕೊಂಡು 30 ಸಾವಿರ ಜನರಿಗೆ ತರಬೇತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರದ ತಾಂತ್ರಿಕ ಬದಲಾವಣೆ ಬಗ್ಗೆಯೂ ಆಗಾಗ ಸೂಕ್ತ ತರಬೇತಿ ನೀಡಲಾಗುತ್ತಿದೆ. ಯಂತ್ರಗಳನ್ನು ಬಳಸುವ ವಿಧಾನದ ಬಗ್ಗೆಯೂ ಪ್ರಾಯೋಗಿಕ ತರಬೇತಿ ಇರಲಿದೆ ಎಂದು ಮಾಹಿತಿ ನೀಡಿದರು.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಮಂದಿ ಅಸಂಘಟಿತ ಕಾರ್ಮಿಕರು. ಸೌಲಭ್ಯಗಳಿಲ್ಲದ ಜೀವನ ಅವರದ್ದು. ನಿರಂತರ ಗುಳೆ ಹೊರಡುವುದು, ಆರ್ಥಿಕ ಅನಿಶ್ವಿತತೆಯಲ್ಲಿ ಬದುಕು ಸಾಗಿಸುವ ಮಂದಿಗೆ ತರಬೇತಿ, ಕಾರ್ಯಾಗಾರ ಎಂದರೆ ನಗೆಪಾಟಲಿನ ವಿಷಯ. ಅವರನ್ನು ಸಂಘಟಿಸಿ ತರಬೇತಿ ನೀಡುವುದು ದೊಡ್ಡ ಸಾಹಸದ ಕೆಲಸ. ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕೆಲ ಕಂ‍ಪನಿಗಳು ಕಾರ್ಮಿಕರಿಗೆ ತರಬೇತಿ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದು;ಈ ಕ್ಷೇತ್ರದ ಆಶಾದಾಯಕ ಬೆಳವಣಿಗೆ ಎನ್ನುತ್ತಾರೆ ಇನ್‌ಸ್ಟ್ರಕ್ಟ್‌ ಸಂಸ್ಥೆ ಖಜಾಂಚಿ ಡಾ.ಎಲ್‌.ಆರ್.ಮಂಜುನಾಥ್‌.

ಇನ್‌ಸ್ಟ್ರಕ್ಟ್‌ ಲಾಭ ರಹಿತವಾದ ಸಂಸ್ಥೆ. ಸಿವಿಲ್ ಎಂಜಿನಿಯರ್ ಕ್ಷೇತ್ರದ ಎಂಜಿನಿಯರ್‌ಗಳು, ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು ಈ ಸಂಸ್ಥೆ ಪದಾಧಿಕಾರಿಗಳು. ಕಳೆದ ಮೂವತ್ತು ವರ್ಷದಿಂದ ಈ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸಂಸ್ಥೆಗೆ ಸರ್ಕಾರದ ಬೆಂಬಲ ಅಗತ್ಯವಿದೆ. ಈ ಕ್ಷೇತ್ರದ ಪರಿಣತರ ಅನುಭವ ಸಮಪರ್ಕವಾಗಿ ಸದುಪಯೋಗವಾದರೆ ಮಾತ್ರ ಕಟ್ಟಡ ನಿರ್ಮಾಣದ ಭವಿಷ್ಯ ಸುಭದ್ರವಾಗಿರಲು ಸಾಧ್ಯ ಎನ್ನುವುದು ತಜ್ಞರ ಪ್ರತಿಪಾದನೆ.

ಬಿಇಎಲ್‌, ಬೆಂಗಳೂರು ಜಲಮಂಡಳಿ, ಕೆಪಿಸಿಎಲ್‌ ಸೇರಿದಂತೆ ರಾಜ್ಯ ಹಾಗೂ ದೇಶದ ಪ್ರಮುಖ ಕಂಪನಿಗಳು ಈ ಸಂಸ್ಥೆಯ ಗ್ರಾಹಕರು.

ಸಂಪರ್ಕ: 080 – 22243257

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT