ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಒಂದು ಚುನಾವಣೆ ಬಂತು ಹೋಯ್ತು

Last Updated 18 ಏಪ್ರಿಲ್ 2019, 19:50 IST
ಅಕ್ಷರ ಗಾತ್ರ

ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರೇ ಇಲ್ಲ! ‘ಕಿಸೀ ಲಿಸ್ಟ್‌ ಮೇ ಹಮಾರಾ ನಾಮ್‌ ಹೀ ನಹೀ ಸಾಬ್‌’!!.. ನಗರದ ಪ್ರತಿ ಲೋಕಸಭಾ ಮತಕ್ಷೇತ್ರಗಳ ಹಲವು ಬೂತ್‌ಗಳಲ್ಲಿ ಬೆಳಿಗ್ಗೆಯಿಂದ ಕೇಳಿಬಂದ ಮಾತುಗಳಿವು. ಇದು ಕೆಲವು ಹಿತಾಸಕ್ತಿಗಳ ಕೆಲಸ ಎಂದು ಬೈದುಕೊಳ್ಳುತ್ತಿದ್ದ ಮತದಾರರು ಚುನಾವಣಾ ಆಯೋಗ ವನ್ನೇ ದೂರುತ್ತಿದ್ದರು.

ಲೋಕಲ್‌ ಲೀಡರ್‌ಗಳು ತಮಾಷೆ ಯಿಂದಲೇ ಪರಸ್ಪರ ವಾಗ್ವಾದ ನಡೆಸುತ್ತ ತಮ್ಮ ಮತದಾರರನ್ನು ಓಲೈಸುವ ಕೆಲಸದಲ್ಲಿ ನಿರತರಾಗಿದ್ದರು. ಚೀಟಿ ಬರೆದು ಕೊಡುವ, ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ ಕೊಡುವವರ ಮತ್ತು ಬಂದವರಿಗೆಲ್ಲ ಬೂತ್‌ ಕಡೆ ದಾರಿ ತೋರಿಸಿ ಮತ ಚಲಾವಣೆಗೆ ಪ್ರೇರೇಪಿಸುವ ದೃಶ್ಯಗಳೇ ಎಲ್ಲೆಲ್ಲೂ ಕಂಡು ಬಂದವು.

ವಯಸ್ಸಾದವರು ಮಂಡಿ ನೋವಿನಿಂದ ಬಳಲುವವರು ತೆವಳುತ್ತ ಮತಗಟ್ಟೆ ಕಡೆ ಸಾಗುತ್ತಿದ್ದರು. ಅವರನ್ನು ತಡೆದು ‘ರೀ ಸ್ವಾಮೀ ನೀವ್ಯಾಕೆ ಕಷ್ಟ ತಗೋತೀರಿ? ಮನೆಗೇ ಗಾಡಿ ಕಳಿಸ್ತಾರೆ’ ಎಂದೆಲ್ಲ ಅವರನ್ನು ಖುಷಿ ಪಡಿಸುವ ಕೆಲಸವೂ ಜೋರಾಗೇ ಇತ್ತು.

‘ಅಲ್ರಯ್ಯಾ ದಿನ ಹೀಗೆ ತೆವಳುತ್ತ ಇರುವ ನಮ್ಮನ್ನು ಕೇಳೋರೇ ಇರಲ್ಲ. ಇವತ್ತೊಂದು ದಿನ ಗಾಡಿ ಕಳಿಸಿ ಏನ್‌ ದೊಡ್ಡ ಉಪಕಾರಾ ಮಾಡ್ತೀರಾ? ನಮ್ಮ ದಿನದ ಕಷ್ಟಕ್ಕೆ ಏನಾರು ವ್ಯವಸ್ಥೆ ಮಾಡಿದ್ದರೆ ಆ ಮಾತು ಬೇರೆ. ಇಲೆಕ್ಷನ್‌ ಟೈಂನಲ್ಲಿ ಇರುವ ಇಂಥ ಕಾಳಜಿ ವರ್ಷದುದ್ದಕ್ಕೂ ಇರುತ್ತಾ?’ ಎಂದೆಲ್ಲ ಆ ಹಿರೀಕರು ತಿರುಗಿ ಹೇಳುತ್ತಿದ್ದುದು ಈ ಸಲದ ಚುನಾವಣಾ ವಿಶೇಷದಂತೆ ಕಾಣಿಸುತ್ತಿತ್ತು.

ಕೆಲವರುಟ್ರಿಪ್‌ನ ಒಂದು ಭಾಗದಂತೆ ಬೂತ್‌ ತನಕ ಕಾರುಗಳಲ್ಲಿ ಪರಿವಾರ ಸಮೇತ ಬಂದು ಮತ ಹಾಕಿ, ಪಕ್ಕದ ದರ್ಶಿನಿಗಳಲ್ಲಿ ಇಡ್ಲಿ, ಸಾಂಬಾರು, ಮಸಾಲೆದೋಸೆ ಸವಿದು ಪ್ರಯಾಣ ಮುಂದುವರಿಸಿದರು. ಪ್ರತಿ ಟೋಲ್‌ಗಳಲ್ಲಿ ಮುಂಜಾನೆಯಿಂದ ಇಂಥ ಟ್ರಿಪ್‌ ವಾಹನಗಳು ದೊಡ್ಡ ಸಂಖ್ಯೆಯಲ್ಲಿ ಸಾಲು ಸಾಲಾಗಿ ನಿಂತಿದ್ದು ಸಾಮಾನ್ಯವಾಗಿತ್ತು.

ಪಕ್ಷಗಳ ಯುವ ಕಾರ್ಯಕರ್ತರು ನೀಟಾಗಿ ಡ್ರೆಸ್‌ ಮಾಡಿಕೊಂಡು, ಹೆಗಲಿಗೆ ಪಕ್ಷದ ಶಾಲುಗಳನ್ನು ಹೊದ್ದುಕೊಂಡು ಬೂತ್ ಸುತ್ತಮುತ್ತ ಸುಳಿದಾಡುತ್ತಿದ್ದರು. ಅವರ ಜೋಶ್‌, ಭರಾಟೆ ಕಣ್ಣು ಕುಕ್ಕುವಂತಿತ್ತು. ಅಣ್ಣಾ, ಅಕ್ಕಾ, ಅಂಕಲ್‌, ಆಂಟೀ, ಬ್ರದರ್‌, ಭಯ್ಯಾ.. ಎಂದು ಮತದಾರರನ್ನು ಕರೆಯುತ್ತಿದ್ದ ರೀತಿ ತುಂಬ ಮಜವಾಗಿತ್ತು.

ವಾಟ್ಸಪ್‌, ಫೇಸ್‌ಬುಕ್‌, ಯುಟ್ಯೂಬ್‌ಗಳಲ್ಲಿ ತಮ್ಮ ನಾಯಕರ ಭಾಷಣಗಳು, ಟ್ರಾಲ್‌ಗಳು, ಜೋಕುಗಳನ್ನು ಪರಸ್ಪರ ತೋರಿಸಿಕೊಂಡು ನಗಾಡುತ್ತಿದ್ದ ಗುಂಪುಗಳು ಅಲ್ಲಲ್ಲಿ ಮತಚೀಟಿ ನೀಡುತ್ತಿದ್ದ ಗುಂಪಿನ ಬಳಿ ಕಂಡುಬಂದವು.

‘ಯಾರ್‌ ಬಂದ್ರೆ ಏನು? ಇಲೆಕ್ಷನ್‌ ಬಂದಾಗಲೆಲ್ಲ ಒಂದು ವೋಟ್‌ ಹಾಕೋದು ನಮ್ಮ ಕರ್ಮ’ ಎಂದು ಕೈಗೆ ಅಂಟಿಸಿಕೊಂಡ ಶಾಯಿ ನೋಡಿ ಗೊಣಗುತ್ತ ಮತಗಟ್ಟೆಗಳಿಂದ ಹೊರಬರುತ್ತಿದ್ದವರ ಸಂಖ್ಯೆಯೇನೂ ಕಮ್ಮಿ ಇರಲಿಲ್ಲ.

‘ಈ ಸರ್ತಿ ವೋಟ್‌ ಹಾಕಲೇಬಾರದು ಅನ್ಕೊಂಡಿದ್ವಿ. ಏನ್ಮಾಡ್ತಿರಾ ಮನೇಲಿ ನಮ್ಮ ಮಕ್ಕಳು ಒತ್ತಾಯ ಮಾಡಿ ಇಲ್ಲಿಗೆ ಕರಕೊಂಡು ಬಂದ್ರು. ಎಷ್ಟು ಇಲೆಕ್ಷನ್‌ ಕಂಡಿಲ್ಲ ನಾವೆಲ್ಲ. ಪ್ರತಿ ಸರ್ತಿನೂ ಇದೇ ಗೋಳು. ಎಲ್ರೂ ಇಲೆಕ್ಷನ್‌ ಟೈಂನಲ್ಲಿ ಏನೇನೋ ದೊಡ್ಡ ಮಾತಾಡ್ತಾರೆ. ಕೆಲಸ ಮಾಡೋದೆಲ್ಲ ಜೀರೋ. ಆದ್ರೂ ಈ ಬಿಸಿಲಲ್ಲಿ ಒದ್ದಾಡಿಕೊಂಡು ವೋಟ್‌ ಹಾಕ್ತೀವಿ. ಅವ್ರಿಗೇನು ಒಮ್ಮೆ ಆರಿಸಿ ಬಂದ್ರೆ ಎಸಿ ವ್ಯವಸ್ಥೆ ಇರೋ ಪಾರ್ಲಿಮೆಂಟ್‌ ಸೇರ್ಕೋತಾರೆ. ಅಲ್ಲಿ ಒಂದ್‌ ಮಾತೂ ಆಡಲ್ಲ. ನಿದ್ದೆ ಮಾಡ್ತಾರೆ. ಫ್ಲೈಟ್‌ನಲ್ಲಿ ದಿಲ್ಲಿಗೆ ಬೆಂಗಳೂರಿಗೆ ಓಡಾಡಿಕೊಂಡಿರ್ತಾರೆ. ಕರ್ಮ ಕರ್ಮ..’ ಎಂದ ರಾಯರೊಬ್ಬರ ಮುಖದಲ್ಲಿ ಏರಿದ ಬಿಪಿ ಕಳೆ ಇತ್ತು.

ಅಂತೂ ಮತ್ತೊಂದು ಚುನಾವಣೆ ಬಂತು ಹೋಯ್ತು.

ಮೊಬೈಲ್‌ಗಳಿಗೆ ಇರಲಿಲ್ಲ ನಿಷೇಧ!

ಮತಗಟ್ಟೆಗಳಲ್ಲಿ ಮೊಬೈಲ್‌ ಮತ್ತು ಕ್ಯಾಮೆರಾಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಿರುವುದಾಗಿ ಚುನಾವಣಾ ಆಯೋಗ ಸಾಕಷ್ಟು ಮೊದಲೇ ಮತದಾರರಿಗೆ ಮಾಹಿತಿ ನೀಡಿತ್ತು. ಮತಗಟ್ಟೆ ಸುತ್ತಮುತ್ತ 100 ಮೀಟರ್‌ ವ್ಯಾಪ್ತಿ ಒಳಗೆ ಮೊಬೈಲ್‌ ಫೋನ್‌ಗಳನ್ನು ಕೊಂಡೊಯ್ಯುವಂತಿಲ್ಲ ಎಂದು ನಿರ್ದೇಶನ ನೀಡಿತ್ತು.

ಮನೆ ಅಥವಾ ವಾಹನಗಳಲ್ಲಿ ಮೊಬೈಲ್‌ ಇಟ್ಟು ಬರುವಂತೆ ಸೂಚಿಸಿತ್ತು. ಚುನಾವಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಾಗಿ ಮೊಬೈಲ್‌ಗಳ ಅವಲಂಬಿಸಿದ್ದ ಮತದಾರರು ತಮ್ಮೊಂದಿಗೆ ಮೊಬೈಲ್‌ ತಂದಿದ್ದರು.ಮತಗಟ್ಟೆ ಒಳಗೆ ಮೊಬೈಲ್‌ ಕೊಂಡೊಯ್ಯಲು ಸಿಬ್ಬಂದಿ ಅಡ್ಡಿಪಡಿಸಲಿಲ್ಲ.

ಮತಗಟ್ಟೆಗಳಲ್ಲಿ ಮೊಬೈಲ್‌ ಫೋನ್‌ ಇಡಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಆ ಬಗ್ಗೆ ಸಿಬ್ಬಂದಿಗೂ ಯಾವುದೇ ಸ್ಪಷ್ಟ ಸೂಚನೆ, ಮಾಹಿತಿ ಇರಲಿಲ್ಲ. ಹೆಸರು, ವಿಳಾಸ ಮತ್ತು ಮತಗಟ್ಟೆ ಸಂಖ್ಯೆ ಇರುವ ಮತಚೀಟಿಯ ಬದಲಾಗಿ ಹೆಚ್ಚಿನ ಮತದಾರರು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಟ್ಟುಕೊಂಡಿದ್ದ ಡಿಜಿಟಲ್‌ ಮತಚೀಟಿ ತೋರಿಸಿದರು.

ಮತ ಹಾಕಿ ಬಂದ ಮತಗಟ್ಟೆ ಹೊರಗೆ ಬಂದವರು ಶಾಯಿ ಹಾಕಿದ ತೋರು ಬೆರಳು ತೋರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವ ಸಮೂಹ ಅಲ್ಲಿಂದಲೇ ಸಾಮಾಜಿಕ ಜಾಲತಾಣಗಳಿಗೆ ವಿಡಿಯೊ, ಚಿತ್ರಗಳನ್ನು ಅಪಲೋಡ್‌ ಮಾಡುವಲ್ಲಿ ಬ್ಯುಸಿಯಾಗಿದ್ದರು.

ಮತದಾನಕ್ಕೂ ಮುನ್ನಾದಿನವೇ ರಾಜಕೀಯ ಪಕ್ಷಗಳು ಮತದಾರರಿಗೆ ಎಲ್ಲ ವಿವರಗಳಿದ್ದ ಸಂದೇಶ ರವಾನಿಸಿದ್ದ ಕಾರಣ ಮತಗಟ್ಟೆಗಳ ಹೊರಗೆಕುರ್ಚಿ, ಮೇಜು ಹಾಕಿಕೊಂಡು ಕುಳಿತ ರಾಜಕೀಯ ಪಕ್ಷಗಳ ಏಜೆಂಟ್‌ರಿಗೆ ಹೆಚ್ಚಿನ ಕೆಲಸ ಇರಲಿಲ್ಲ. ಈ ಮೊದಲು ಚುನಾವಣೆ ಸಂದರ್ಭಗಳಲ್ಲಿ ಏಜೆಂಟ್‌ರ ಬಳಿ ಸಾಮಾನ್ಯವಾಗಿ ಕಾಣುತ್ತಿದ್ದ ಜನರ ಗುಂಪು ಕಾಣಲಿಲ್ಲ.

ಮತ ಹಾಕಲು ಬರುವಅಂಗವಿಕಲರು, ದೃಷ್ಟಿದೋಷವುಳ್ಳವರು ಮತ್ತು ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ ಕಲ್ಪಿಸುವುದಾಗಿಚುನಾವಣಾ ಆಯೋಗ ಹೇಳಿತ್ತು. ಆದರೆ, ಗುರುವಾರ ನಗರದ ಕೆಲವು ಮತಗಟ್ಟೆಗಳಲ್ಲಿ ಕೆಲವು ಸೌಲಭ್ಯಗಳು ಕಾಣಲಿಲ್ಲ.

ಪಾಲನೆಯಾಗದ ಆಯೋಗದ ನಿರ್ದೇಶನ

*ಮಂದದೃಷ್ಟಿ, ದೃಷ್ಟಿದೋಷ ಉಳ್ಳವರಿಗಾಗಿ ಭೂತಗಾಜಿನ ಸೌಲಭ್ಯ ನೀಡುವುದಾಗಿ ಆಯೋಗ ಈ ಮೊದಲೇ ಹೇಳಿತ್ತು. ಆದರೆ, ಹಲವು ಮತಗಟ್ಟೆಗಳಲ್ಲಿ ಭೂತಗನ್ನಡಿ ಹಾಕಿ ಹುಡುಕಿದರೂ ಭೂತಗಾಜು ಸಿಗಲಿಲ್ಲ.

*ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗಾಗಿ ರ‍್ಯಾಂಪ್‌, ಗಾಲಿಕುರ್ಚಿ ಮತ್ತು ಮತದಾನದ ವೇಳೆ ಮೊದಲ ಆದ್ಯತೆ ನೀಡುವುದಾಗಿ ಹೇಳಿತ್ತು. ನಡೆಯಲು ಪರದಾಡುತ್ತಿದ್ದ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ರೋಗಿಗಳು ನಡೆದುಕೊಂಡೇ ಮತಗಟ್ಟೆಗೆ ಬಂದರು. ಅವರಿಗೆ ನೆರವು ನೀಡುವ ಸಿಬ್ಬಂದಿ ಅಲ್ಲಿ ಕಾಣಲಿಲ್ಲ.

*ಪ್ರತಿ ಪುರುಷ ಮತಗಟ್ಟೆ ಪ್ರವೇಶಿಸುವ ವೇಳೆ ಇಬ್ಬರು ಮಹಿಳಾ ಮತದಾರರಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸುವ ಆಯೋಗದ ಸೂಚನೆ ಕೂಡ ಕಟ್ಟುನಿಟ್ಟಾಗಿ ಪಾಲನೆಯಾಗಲಿಲ್ಲ.

*ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು ಮತ್ತು ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆಗಳನ್ನು ಮಾಡಿರುವುದಾಗಿ ಹೇಳಿತ್ತು. ಮಹಿಳಾ ಸಿಬ್ಬಂದಿ ಮನೆಯಿಂದಲೇ ಬಾಟಲಿಗಳಲ್ಲಿ ಕುಡಿಯುವ ನೀರು ತಂದಿದ್ದರು. ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆ ಇರಲಿಲ್ಲ.

*ಹಲವು ಕಡೆ ಮಹಿಳೆಯರು ಮತ್ತು ಪುರುಷ ಮತದಾರರಿಗೆ ಪ್ರತ್ಯೇಕ ಸರದಿ ಸಾಲುಗಳಿರಲಿಲ್ಲ. ಇಬ್ಬರೂ ಒಂದೇ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೂ ಮೊದಲ ಆದ್ಯತೆ ದೊರೆಯಲಿಲ್ಲ.

*ದೃಷ್ಟಿದೋಷವುಳ್ಳವರಿಗೆ ಬ್ರೈಲ್‌ ಲಿಪಿ ಮಾದರಿ ಬ್ಯಾಲೆಟ್‌ ಬಗ್ಗೆ ಚುನಾವಣಾ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ತಮ್ಮ ಮತಗಟ್ಟೆಯಲ್ಲಿ ಯಾರೂ ವಿಶೇಷ ಮತದಾರರು ಇಲ್ಲ ಎಂದರು. ದೃಷ್ಟಿಮಾಂದ್ಯರು, ಅಂಗವಿಕಲರ ಬಗ್ಗೆ ಮೊದಲೇ ಮಾಹಿತಿ ಹಾಕಿರುವ ಆಯೋಗ ಅಂತಹ ಮತಗಟ್ಟೆಗಳಿಗೆ ಮಾತ್ರ ವಾಹನ, ಗಾಲಿಕುರ್ಚಿ ಮತ್ತು ಭೂತಗನ್ನಡಿ ಒದಗಿಸಿದೆ ಎಂದು ಸಮಜಾಯಿಷಿ ನೀಡಿದರು.

*ಮತ ಚಲಾಯಿಸಲು ಬಂದಿದ್ದ ಹೆಚ್ಚಿನವರು ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ ತಂದಿದ್ದರು. ಗುರುತಿನ ಚೀಟಿ ಇಲ್ಲದವರು ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌ ಮತ್ತು ಪಾನ್‌ ಕಾರ್ಡ್‌ ತೋರಿಸಿದರು. ಮೂಲಪ್ರತಿ ಇಲ್ಲದ ಕೆಲವರು ಜೆರಾಕ್ಸ್‌ ಪ್ರತಿಗಳನ್ನು ತೋರಿಸಿ ಮತ ಹಾಕಿದರು.

*ಚಾಲೆಂಜ್‌ ಮತ್ತು ಟೆಂಡರ್‌ ಮತದಾನ ಮಾಡಿದ ನಿದರ್ಶನಗಳು ಎಲ್ಲಿಯೂ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT