ಮೊಘಲರು, ಬ್ರಿಟಿಷರು ಮತ್ತು ಅಪ್ಪಟ ಭಾರತೀಯರು ‘ಅಂದಕಾಲತ್ತಿಲ್’ ತಿನ್ನುತ್ತಿದ್ದ ಮಾಂಸಾಹಾರಿ ಖಾದ್ಯಗಳು ಹೇಗಿದ್ದಿರಬಹುದು? ಆಗಿನ ಸಾಂಪ್ರದಾಯಿಕ ಮಸಾಲೆಗಳನ್ನು ಹೊಸ ಪ್ರಯೋಗಗಳೊಂದಿಗೆ ವರ್ತಮಾನಕ್ಕಿಳಿಸಿದರೆ ದಕ್ಕುವ ಸ್ವಾದವನ್ನು ಗ್ರಾಹಕರಿಗೆ ಉಣಬಡಿಸಿದರೆ ಅವರು ಹೇಗೆ ಚಪ್ಪರಿಸಿಯಾರು? ಇಂತಹುದೊಂದು ಪ್ರಯೋಗವನ್ನು ಚಿಕನ್ ಮತ್ತು ಮಟನ್ ಕಬಾಬ್‌ಗಳಲ್ಲಿ ಮಾಡಿ ಗ್ರಾಹಕರ ಮುಖದಲ್ಲಿ ಬದಲಾಗುವ ಭಾವಗಳನ್ನು ಎಣಿಸುತ್ತಿದ್ದಾರೆ ಇಂದಿರಾನಗರದ ‘ಕಾಪರ್ ಚಿಮ್ಣಿ’ಯ ಮುಖ್ಯ ಶೆಫ್ ರಾಮ್ ಬಿ. ಮಹ್ರೋಲಿಯ.

ಕಳೆದೆರಡು ವಾರಗಳಿಂದ ಕಾಪರ್ ಚಿಮ್ಣಿಯಲ್ಲಿ ‘ದಿ ಗ್ರೇಟ್ ಇಂಡಿಯನ್ ಕನಾನ್ ಫೆಸ್ಟಿವಲ್’ ಅಂಗವಾಗಿ ರಾಮ್ ನಡೆಸಿರುವ ಹಳೆಯ ಹೊಸ ಪಾಕವೈವಿಧ್ಯದ ಸಮಪಾಕವನ್ನು ಗ್ರಾಹಕರು ಸವಿಯುತ್ತಿದ್ದಾರೆ.

‘ಬೆಂಗಳೂರು ಫುಡ್ ಸಿಟಿ. ಜಗತ್ತಿನ ಎಲ್ಲಾ ಭಾಗದ ಜನರ ಮೆಚ್ಚಿನ ತಾಣ. ಮಾತ್ರವಲ್ಲ, ಇಂದಿರಾನಗರ ನೂರು ಅಡಿ ರಸ್ತೆಯೊಂದರಲ್ಲೇ 70 ರೆಸ್ಟೋರೆಂಟ್‌ಗಳಿವೆ. ಅಂದರೆ ನಮ್ಮ ಮುಂದಿರುವ ಸ್ಪರ್ಧೆ ಎಂತಹುದು ನೋಡಿ. ಜನ ನಮ್ಮಲ್ಲಿಗೇ ಬರಬೇಕಾದರೆ ಅಕ್ಕಪಕ್ಕದಲ್ಲೆಲ್ಲೂ ಸಿಗದಿರುವ ಆಹಾರಗಳನ್ನು ನಾವು ಪೂರೈಸಬೇಕು. ಅದಕ್ಕಾಗಿ ನಮ್ಮ ಕಿಚನ್‌ನಲ್ಲಿ ಪ್ರತಿದಿನದ ಆಹಾರವನ್ನೂ ನಿನ್ನೆಗಿಂತ ವಿಭಿನ್ನವಾಗಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ.

ಆಫ್ಘಾನಿಸ್ತಾನ, ಬಾಂಗ್ಲಾ, ಪಾಕಿಸ್ತಾನದ ಸ್ವಾದಗಳನ್ನೂ ಬೆರೆಸಿ ಕೊಟ್ಟಾಗ ಗ್ರಾಹಕರ ಮುಖದಲ್ಲಿ ಮೂಡುವ ಆನಂದದ ಗೆರೆಗಳು ನಮ್ಮ ಶ್ರಮವನ್ನು ಸಾರ್ಥಕಗೊಳಿಸುತ್ತವೆ’ ಎಂದು ಪ್ರಸ್ತುತ ಆಹಾರೋತ್ಸವದ ಹಿಂದಿನ ಪರಿಕಲ್ಪನೆಯನ್ನು ಬಿಡಿಸಿಟ್ಟರು.

ಮಾತಿನ ಭರದಲ್ಲಿ ವೆಲ್‌ಕಂ ಡ್ರಿಂಕ್ಸ್ ಕೂಡ ನೀಡುವುದನ್ನು ಮರೆತಿದ್ದ ರಾಮ್ ತಮ್ಮದೇ ಪ್ರಯೋಗದ ಪಾನೀಯವನ್ನು ತರಿಸಿದರು. ಎಲೆ ಹಸಿರು ಬಣ್ಣದ ಪಾನೀಯ ಬಂತು. ಲಿಂಬೆಹಣ್ಣಿನ ತಿರುಳು ಮತ್ತು ಸಿಪ್ಪೆಯನ್ನು ಪುದೀನಾ, ಶುಂಠಿ ಜೊತೆ ರುಬ್ಬಿ ಮಾಡಿದ ಎಲೆ ಹಸಿರು ಬಣ್ಣದ ಪಾನೀಯ ಗಂಟಲಿಗಿಳಿಯುತ್ತಿದ್ದಂತೆ ಸ್ವಲ್ಪ ಕಹಿ, ಸ್ವಲ್ಪ ಹುಳಿಯೊಂದಿಗೆ ಆಹ್ಲಾದ ನೀಡಿತು.

ಆಹಾರೋತ್ಸವ ನಿಜಕ್ಕೂ ಗ್ರಾಹಕರ ಮೆಚ್ಚುಗೆ ಪಡೆದಿದೆ ಎಂಬುದಕ್ಕೆ ಗುರುವಾರ (ನ.28) ಮಧ್ಯಾಹ್ನ ರೆಸ್ಟೋರೆಂಟ್‌ನಲ್ಲಿ ಜಮಾಯಿಸಿದ್ದ ಗ್ರಾಹಕರ ಸಂಖ್ಯೆಯೇ ಸಾಕ್ಷಿಯಾಯಿತು.

ಒಂದಿಷ್ಟು ಸೂಪರ್ ರುಚಿ
ಬಲೂಚಿಸ್ತಾನದವರ ಮನೆಮಾತಾದ ಬಲೂಚಿ ಚಿಕನ್ (365 ರೂಪಾಯಿ), ಪಟಿಯಾಲದ ರಾಜ ಮನೆತನಗಳಲ್ಲಿ ಮೆಚ್ಚಿನ ಖಾದ್ಯವಾಗಿದ್ದ ಚೂಸಾ-ಇ-ಶಾನ್ (450 ರೂಪಾಯಿ) ಖಡಕ್ ಉಪ್ಪು ಹುಳಿ, ಖಾರದಿಂದಾಗಿ ಇಷ್ಟವಾಗುತ್ತದೆ. ಈ ಆಹಾರೋತ್ಸವದಲ್ಲಿ ಬಹುತೇಕ ಖಾದ್ಯಗಳು ಖಾರವಾಗಿರುತ್ತವೆ. ‘ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದವರಿಗೆ ಬಲು ಇಷ್ಟವಾದ ಮಂಡಿ ಚಾಂಪ್ ಬೋಟಿ ಹೇಗಾಗಿದೆ ನೋಡಿ ಎಂದು ಸರ್ವರ್ ಕೈನಿಂದ ತಾವೇ ತಟ್ಟೆಗೆ ಬಡಿಸಿದರು ರಾಮ್.

ಬೋಟಿ ಎಂದಾಕ್ಷಣ ಕುರಿಯ ಕರುಳಿನ ಭಾಗದಿಂದ ಮಾಡಿದ್ದು ಎಂದು ಕಲ್ಪಿಸಿಕೊಂಡಿದ್ದ ನಾವು ಅದು ಉದರದ ಭಾಗದ ಮಾಂಸ ಎಂದು ಊಹಿಸಿಕೊಂಡು ಪಕ್ಕೆಲುಬುಗಳ ಕೊನೆಯಲ್ಲಿ ಮಸಾಲೆಯಲ್ಲಿ ಬೆಂದು ಕಡುಕೆಂಪಾಗಿದ್ದ ಮಾಂಸವನ್ನು ಸವಿದೆವು. ಸೂಪರ್ರು! ಇದರ ಬೆಲೆ 750 ರೂಪಾಯಿ.

ರಾವಲ್ಪಿಂಡಿಯ ಚಿಕನ್ ಬೋಟಿ ಟಿಕ್ಕಿ, ಆಫ್ಘಾನಿ ಕೋಫ್ತಾ ಕಬಾಬ್, ಚಾಪ್ಲಿ ಕಬಾಬ್ ಮುಂತಾದ ಒಟ್ಟು 16 ಬಗೆಯ ಕಬಾಬ್‌ಗಳೊಂದಿಗೆ ಸುನೇರಿ ಜಿಂಗಾ ಎಂಬ ಟೈಗರ್ ಪ್ರಾನ್ಸ್ ಕಬಾಬ್ ಕೂಡ ಆಹಾರೋತ್ಸವದಲ್ಲಿ ಲಭ್ಯ ಎಂದು ರಾಮ್ ಮಾಹಿತಿ ನೀಡಿದರು.

‘ಲಾಹೋರಿ ತಾಳಿ ಮಚ್ಲಿ’ ಎಂಬ ಪಾಕಿಸ್ತಾನದ ಮೀನಿನ ಮಸಾಲಾ ಫ್ರೈ ಬರುವಷ್ಟರಲ್ಲಿ ಕಬಾಬ್‌ನ ಮೂರ್ನಾಲ್ಕು ವೈವಿಧ್ಯವನ್ನು ಸವಿದಿದ್ದೆವು. ಆದರೂ ಲಾಹೋರ್ ಮೀನಿನ ರುಚಿ ಎಲ್ಲಕ್ಕಿಂತಲೂ ಅಗ್ರಸ್ಥಾನಿ ಅನಿಸಿತು. ಎಣ್ಣೆ ಸ್ವಲ್ಪ ಜಾಸ್ತಿಯೇ ಇದ್ದರೂ ಹವಾನಿಯಂತ್ರಕದ ಕುಳಿರ್ಗಾಳಿಯ ಮುಂದೆ ಆ ಖಾರ ಮಸಾಲೆ, ಹದವಾದ ಉಪ್ಪಿನೊಂದಿಗೆ ಫ್ರೈ ಆದ ರೀತಿ ಅಚ್ಚುಕಟ್ಟಾಗಿ ಹೊಟ್ಟೆಗಿಳಿಯಿತು.

ಸಸ್ಯಾಹಾರಿಗಳೂ ನಿರಾಶರಾಗಬೇಕಿಲ್ಲ. ಪನೀರ್, ಆಲೂ, ಕಾರ್ನ್, ಸೊಪ್ಪು ಸಸ್ಯಾಹಾರಗಳಲ್ಲಿ ಅಗ್ರಸ್ಥಾನ ಪಡೆದಿವೆ. ಮುಲ್ತಾನಿ ಪನೀರ್, ಕಾಬೂಲ್ ವೆಜ್ ಗ್ರಿಲ್, ಆಲೂ ಲಚೋದರ್, ಆಲೂ ಬೂತಿಯಾನ್ ಪನೀರ್ ದೆ ಟಿಕ್ಕಿ, ಚುಕಂದರ್ ಕಿ ಸೀಕ್ ಮೇನ್ ಕೋರ್ಸ್‌ನಲ್ಲಿವೆ. ಊಟವಾದ ಮೇಲೆ ಡೆಸರ್ಟ್ ಸವಿಯಬೇಕೆಂದರೂ ನಾಲ್ಕಾರು ಬಗೆಯ ಆಯ್ಕೆಗಳಿವೆ. ರಾಮ್ ಹೇಳುವಂತೆ ‘ಕಾಪರ್ ಚಿಮ್ಣಿಯಲ್ಲಿ ಮಾತ್ರ ಸಿಗುವ’ ಜಿಹ್ವಾರಸದಲ್ಲಿ ಕರಗುವ ಮಾಲ್ಪೋವಾ ಇಲ್ಲಿನ ಸಿಗ್ನೇಚರ್ ಡೆಸರ್ಟ್.

ಆರಾಮವಾಗಿ ಕುಳಿತು ಊಟ ಮಾಡುವವರಿಗೆ ಸರ್ವಿಸ್, ಒಂದು ಗಂಟೆಯೊಳಗೆ ವಾಪಸಾಗಬೇಕೆನ್ನುವವರಿಗೆ ಬಫೆಯೂ ಇದೆ. ಕಾಪರ್ ಚಿಮ್ಣಿಯಲ್ಲಿ ಮೆನುವಿನಲ್ಲಿ ನಮೂದಿಸಿರುವ ದರಗಳ ಮೇಲೆ ಶೇ 10 ಹೆಚ್ಚುವರಿ ಸೇವಾ ಶುಲ್ಕ ಹಾಗೂ ಇತರ ತೆರಿಗೆಗಳು ಸೇರ್ಪಡೆಯಾಗುತ್ತವೆ. ಡಿ. 15ರವರೆಗೂ ಈ ಆಹಾರೋತ್ಸವದಲ್ಲಿ ನಿಮಗೆ ಬೇಕಾದ ಅಂತರ ದೇಸಿ ಆಹಾರಗಳನ್ನು ಸವಿಯಬಹುದು.
ಆಸನ ಕಾದಿರಿಸಲು ಸಂಪರ್ಕಿಸಿ: – 080 4229 2395.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.