ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಂಗ್ ಮೋಡಿಗಾತಿ ಅನಸೂಯ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ವಾದ್ಯ ಸಂಗೀತ ಕಲೆಯಲ್ಲಿ `ಫ್ಯೂಷನ್~ ಮಾಡಿ, ನುಡಿಸುವುದರಲ್ಲಿ ಪರಿಣತಿ ಸಾಧಿಸಿ ಅದನ್ನೇ ಕರಗತ ಮಾಡಿಕೊಂಡಿರುವ ಕಲಾವಿದರು ವಿರಳ. ಅಂತಹ ಕಲಾವಿದರಲ್ಲಿ ಡಾ.ಅನಸೂಯ ಕುಲಕರ್ಣಿ ಅವರು ಒಬ್ಬರು.ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿಯಿದ್ದ ಇವರು ಅದನ್ನೇ ಹವ್ಯಾಸವಾಗಿ ಬೆಳಸಿಕೊಂಡರು.

ಇಂಡೋನೇಷ್ಯಾದ ಸಮೂಹ ಕಲೆಯಾದ ಅಕ್ರಂಗ್ (ಬಿದಿರಿನ ವಾದ್ಯ) ಕಲೆಯಲ್ಲಿ ವಿಶೇಷತೆ ಸಾಧಿಸಿದರು. ಅದರಲ್ಲಿ ಭಾರತೀಯ ಶೈಲಿಯನ್ನು ಬೆರೆಸಿ ಸಮೂಹ ಕಲೆಯಾದ ಇದನ್ನು ಒಬ್ಬರೇ ನುಡಿಸುವ ಕಲೆಯನ್ನು ಕರಗತ ಮಾಡಿಕೊಂಡವರು ಡಾ.ಅನಸೂಯ.
ಅಕ್ರಂಗ್‌ನ್ನು ಏಕಾಂಗಿಯಾಗಿ ಸುಶ್ರಾವ್ಯವಾಗಿ ನುಡಿಸುವ ಅವರ ಕಲೆಯು ಈಗಾಗಲೇ 1998 ರ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಟ್ಟಿದ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿ ನಾರಾಯಣ ಕುಲಕರ್ಣಿ ಯುನೈಟೆಡ್ ನೇಷನ್ಸ್‌ನ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದುದರಿಂದ ವಿದೇಶಗಳಿಗೆ ಪ್ರಯಾಣ ಬೆಳೆಸುವುದು ಸಾಧ್ಯವಾಯಿತು.
ಹೀಗಾಗಿ ಅವರಲ್ಲಿದ್ದ ಸಂಗೀತ ಮತ್ತು ವಾದ್ಯ ಪ್ರತಿಭೆ ಹೊಸ ರೂಪು ಪಡೆಯುವಲ್ಲಿ ಸಹಾಯಕವಾಯಿತು. ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ವಾದ್ಯಗಳನ್ನು ಕಲಿತು ಅದನ್ನು ಸಂಗ್ರಹ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡರು. ಅಲ್ಲದೇ, ಆ ವಾದ್ಯಗಳಿಗೆ ಭಾರತೀಯ ಶೈಲಿಯನ್ನು ಮಿಶ್ರ ಮಾಡಿ ನುಡಿಸುವ ಕಲೆಯಲ್ಲಿ ಪರಿಣಿತರಾದರು. ಅದನ್ನೇ ಜೀವನದ ಉಸಿರು ಮಾಡಿಕೊಂಡರು.

ಹೀಗೆ ವಿದೇಶಗಳಿಗೆ ಪ್ರಯಾಣ ಮಾಡುವ ಸುಯೋಗ ಲಭ್ಯವಾಗಿದ್ದರಿಂದ ನಾನಾ ದೇಶದ ವಾದ್ಯಗಳು ಅವರ ಬಳಿಯಲ್ಲಿ ಸಂಗ್ರಹಗೊಂಡಿವೆ. ಸುಮಾರು 300 ವಾದ್ಯಗಳ ಸಣ್ಣ ಸಂಗ್ರಹಾಲಯವನ್ನೇ ಅವರು ನಿರ್ಮಿಸಿದ್ದಾರೆ.

ಅವರ ಸಂಗ್ರಹಾಲಯದಲ್ಲಿ ಒಟ್ಟು ನಾಲ್ಕು ತರಹದ ವಾದ್ಯಗಳಿವೆ. ತತ ವಾದ್ಯಗಳು, ಚರ್ಮ ವಾದ್ಯಗಳು, ಘನ ವಾದ್ಯಗಳು, ಗಾಳಿ ವಾದ್ಯಗಳು. ಒಂದೊಂದು ವಾದ್ಯಗಳು ಒಂದೊಂದು ದೇಶವನ್ನು ಪ್ರತಿನಿಧಿಸುತ್ತವೆ. ಆ ಎಲ್ಲ ವಾದ್ಯಗಳಿಗೆ ಅವುಗಳದೇ ಆದ ವಿಶೇಷತೆಗಳಿವೆ. ಚಿಕ್ಕ ಚಿಕ್ಕ ಮಕ್ಕಳು ಹಾಗೂ ವಾದ್ಯಗಳ ಬಗ್ಗೆ ಆಸಕ್ತಿ ಇರುವವರು ಬಂದು ನೋಡಿಕೊಂಡು ಹೋಗುತ್ತಾರೆ ಮತ್ತು ಅವುಗಳ ವಿವರಣೆಯನ್ನು ಕೇಳಿ ಪಡೆಯುತ್ತಾರೆ.

ಇವರ ಇನ್ನೊಂದು ಹವ್ಯಾಸವೆಂದರೆ, ಶೋಕೇಸ್‌ನಲ್ಲಿ ಇಡಬಹುದಾದಂತಹ ಚಿಕ್ಕ ಶೂಗಳನ್ನು ಸಂಗ್ರಹ ಮಾಡಿದ್ದಾರೆ. ಸುಮಾರು 1000 ಚಿಕ್ಕ ಶೂಗಳು ಇವರ ಸಂಗ್ರಹಣೆಯಲ್ಲಿ ಬೆಚ್ಚಗೆ ಕುಳಿತಿವೆ.

`ಕಲೆಗೆ ಎಂದೂ ಬೆಲೆ ಇದ್ದೇ ಇರುತ್ತದೆ. ಕಲೆಯನ್ನು ಆರಾಧಿಸುವವರು ತುಂಬ ಜನ ಇದ್ದಾರೆ. ವಾದ್ಯಗಳಲ್ಲಿ ಜೀವವಿದೆ. ಒಂದು ತಂತಿಯು ಒಂದೊಂದು ಭಾವಕ್ಕೆ ಸ್ಫೂರ್ತಿಯಾಗುತ್ತದೆ. ನನಗೆ ವಾದ್ಯಗಳ ಬಗೆಗೆ ವಿಶೇಷ ಒಲವು~.

`ಎಲ್ಲ ತರಹದ ವಾದ್ಯಗಳಲ್ಲಿ ಭಾರತೀಯ ಶೈಲಿಯಾದ ಹಿಂದುಸ್ತಾನಿಯನ್ನು ಅಳವಡಿಸುವುದು ತುಂಬ ಕಷ್ಟ. ಆದರೂ ನಾನು ಅದರಲ್ಲೇ ವಿಶೇಷತೆ ಸಾಧಿಸುವ ಪ್ರಯತ್ನ ಮಾಡಿದ್ದೇನೆ~ ಎಂದು ಹೇಳುವ ಡಾ ಅನುಸೂಯ ಕುಲಕರ್ಣಿ ಅವರ ಮುಖಭಾವದಲ್ಲಿ ಧನ್ಯತೆಯಿತ್ತು.

ಅವರು ಇಷ್ಟಪಟ್ಟು ಸ್ಥಾಪಿಸಿದ ಎಥ್ನೊಮ್ಯೂಸಿಕ್ ಸಂಸ್ಥೆಯಲ್ಲಿ ಅವರು ಸಂಗ್ರಹಿಸಿದ ವಾದ್ಯಗಳಿವೆ. ಅವರ ಮಾಹಿತಿಗೆ, 2658 6826 ಸಂಪರ್ಕಿಸಿ.

 -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT