ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಕಲಿಸುವ ಕುಕರಿ ಶಾಲೆ

Last Updated 23 ಜುಲೈ 2015, 19:30 IST
ಅಕ್ಷರ ಗಾತ್ರ

ವಿಧಿಯಿಲ್ಲದೆ ಹೋಟೆಲ್‌ ಊಟ ನೆಚ್ಚಿಕೊಂಡ ಅನೇಕರಿಗೆ ಅಡುಗೆ ಮಾಡುವುದನ್ನು ಕಲಿಸುವವರೇ ಇಲ್ಲದ ಪರಿಸ್ಥಿತಿ ಇದೆ. ಇಂತಹವರಿಗೆ ಕಳೆದ 28 ವರ್ಷದಿಂದ ನೆರವಾಗುತ್ತಾ ಬಂದಿರುವುದು ನಗರದ ಆರ್‌ಪಿಸಿ ಲೇಔಟ್‌ನಲ್ಲಿರುವ ‘ಬನಶಂಕರಿ ಕುಕರಿ ಶಾಲೆ’. 1987ರಲ್ಲಿ ಗೃಹಿಣಿ ವಿಜಯಲಕ್ಷ್ಮಿ ರೆಡ್ಡಿ ಅಡುಗೆ ಮಾಡುವ ಕಲೆಯನ್ನು ಇತರರಿಗೂ ಕಲಿಸುವ ಕಾರ್ಯ ಆರಂಭಿಸಿದರು. ಮೊದ ಮೊದಲು ತನ್ನ ಮನೆಯಲ್ಲಿ ಐದು ಮಂದಿಗೆ ಹೇಳಿಕೊಟ್ಟರು. ಅಕ್ಕಪಕ್ಕದ ಮನೆಯವರೇ ಆಗ ಇವರ ವಿದ್ಯಾರ್ಥಿಗಳು.

‘ನನ್ನ ಪತಿ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಕೆಲಸದ ನಿಮಿತ್ತ ಅವರು ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯಬೇಕಿತ್ತು. ನನಗೂ ಮನೆಯಲ್ಲಿ ಸಮಯ ದೂಡಲು ತುಸು ಕಷ್ಟವಾಗುತ್ತಿತ್ತು. ಹೋಟೆಲ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದೆ. ಅಡುಗೆ ಹೇಳಿಕೊಡಲು ಅದರಿಂದ ಸುಲಭವಾಯಿತು. ಆಮೇಲೆ ಅಡುಗೆ ಕಲಿಸುವುದೇ ಕಾಯಕವಾಯಿತು. ಇದುವರೆಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಅಡುಗೆ ತರಬೇತಿ ನೀಡಿದ್ದೇನೆ’ ಎಂದು ಹೆಮ್ಮೆಯಿಂದ ತಮ್ಮ ನಳಪಾಕ ಪಾಠಶಾಲೆಯನ್ನು ಆರಂಭಿಸಿದ ಬಗೆ ವಿವರಿಸುತ್ತಾರೆ 69 ವರ್ಷದ ವಿಜಯಲಕ್ಷ್ಮಿ ರೆಡ್ಡಿ.

‘ಇಲ್ಲಿ ಕಲಿಯುವವರಿಗೆ ವಯಸ್ಸಿನ ಮಿತಿ ಇಲ್ಲ. ಆರು ವರ್ಷದ ಮಕ್ಕಳಿಂದ ಅರವತ್ತು ವರ್ಷದವರೂ ಅಡುಗೆ ಕಲಿಯಲು ಬರುತ್ತಾರೆ. ಕೆಲಸದಲ್ಲಿ ತೊಡಗಿರುವ ಮಹಿಳೆಯರು, ಮದುವೆ ಗೊತ್ತಾದ ಹೆಣ್ಣುಮಕ್ಕಳು, ಮಕ್ಕಳಿಗೆ ರುಚಿಯಾದ ತಿನಿಸುಗಳನ್ನು ಮಾಡಿಕೊಡಬೇಕೆಂದು ಬರುವ ಅಮ್ಮಂದಿರು, ಪತ್ನಿಯನ್ನು ಕಳೆದುಕೊಂಡವರು, ಹೋಟೆಲ್ ಆರಂಭಿಸಲು ಬಯಸುವವರು, ಬೇಸಿಗೆ ರಜೆಯಲ್ಲಿ ಮಕ್ಕಳು, ವಯಸ್ಸಾದ ಪೋಷಕರು ಹೀಗೆ ಅನೇಕರು ನನ್ನ ಬಳಿ ಬಂದು ಅಡುಗೆ ಮಾಡುವುದನ್ನು ಕಲಿಯುತ್ತಾರೆ. ಎಷ್ಟೋ ಮಂದಿ ಇಲ್ಲಿ ಅಡುಗೆ ಮಾಡುವುದನ್ನು ಕಲಿತು ಸ್ವಂತ ಉದ್ಯೋಗವನ್ನೂ ಆರಂಭಿಸಿದ್ದಾರೆ’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ  ಪಾಕಶಾಲೆಯ ಒಡತಿ ವಿಜಯಲಕ್ಷ್ಮಿ.

‘ವೆಜ್, ನಾನ್ ವೆಜ್ ಎರಡೂ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಕಲಿಯಲು ಮೂರು ವರ್ಷಗಳಾದರೂ ಸಾಕಾಗುವುದಿಲ್ಲ. ಅಷ್ಟು ಬಗೆಯ ತಿನಿಸುಗಳ ಮಾಡುವುದನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಇಂಥದ್ದೇ ಎಂಬ ಮಿತಿಯಿಲ್ಲದೆ ಎಲ್ಲ ಬಗೆಯ ತಿನಿಸುಗಳ ತಯಾರಿಸುವುದನ್ನು ಕಲಿಸುತ್ತೇನೆ. ಜೊತೆಗೆ ವೆಜಿಟೆಬಲ್ ಕಾರ್ವಿಂಗ್, ಇಂಟೀರಿಯರ್ ಡೆಕೊರೇಷನ್, ಕ್ಯಾಂಡಲ್ ಮೇಕಿಂಗ್, ಫ್ಲವರ್ ಅರೇಂಜ್‌ಮೆಂಟ್, ಡಿಟರ್ಜೆಂಟ್ (ಶಾಂಪೂ, ಸೋಪುಗಳು, ಫಿನಾಯಿಲ್ ಇತ್ಯಾದಿ) ತಯಾರಿಸುವುದನ್ನೂ ಹೇಳಿಕೊಡುತ್ತೇನೆ. ಎಲ್ಲಾ ಕೋರ್ಸ್‌ಗಳ ಅವಧಿ ಮೂರು ದಿನಗಳಷ್ಟೆ. ಪ್ರತಿ ಮಂಗಳವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೂ ಈ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ಕೆಲಸದಲ್ಲಿ ತೊಡಗಿರುವ ಮಹಿಳೆಯರಿಗೆ ಶನಿವಾರ ಪ್ರತ್ಯೇಕ ಬ್ಯಾಚ್‌ವೊಂದನ್ನೂ ಆಯೋಜಿಸಲಾಗಿದೆ’ ಎನ್ನುತ್ತಾರೆ ಇವರು.

ಮೂರು ಬಾರಿ ಪ್ರಯೋಗ
‘ಮೊದಲ ಬಾರಿಗೆ ಯಾವ ಅಡುಗೆಯೂ ಹದವಾಗಿ ತಯಾರಾಗುವುದಿಲ್ಲ. ಬೇರೆಯವರಿಗೆ ಹೇಳಿಕೊಡುವ ಮೊದಲು ನಾನು ಪಕ್ವವಾಗಬೇಕು. ಹಾಗಾಗಿ ಮನೆಯಲ್ಲಿ ನಿರ್ದಿಷ್ಟ ಅಡುಗೆಯನ್ನು ಮೂರು ಬಾರಿ ಪ್ರಯೋಗ ಮಾಡುತ್ತೇನೆ. ನಂತರವೇ ಬೇರೆಯವರಿಗೆ ಹೇಳಿಕೊಡುವುದು. ಭಾರತೀಯ ಸಿಹಿತಿನಿಸುಗಳನ್ನು ಮಾಡುವುದು ಕೊಂಚ ಕಷ್ಟ’ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ವಿಜಯಲಕ್ಷ್ಮಿ.

ಕಾಯಿಲೆಗಳಿಗೂ ರುಚಿಕರ ಮೆನು 
ಹಬ್ಬದೂಟಗಳು, ಚಾಕೊಲೆಟ್‌ಗಳು, ಕೇಕ್, ಫಾಸ್ಟ್‌ಫುಡ್‌ಗಳನ್ನು ಹೇಳಿಕೊಡುವ ಜೊತೆಗೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಇಲ್ಲಿ ಅಡುಗೆ ಹೇಳಿಕೊಡಲಾಗುತ್ತದೆ. ಡಯಾಬಿಟೀಸ್, ಥೈರಾಯಿಡ್, ಪಿಸಿಒಡಿ, ಕಾಮಾಲೆ ಇರುವ ರೋಗಿಗಳು ಯಾವ ರೀತಿ ಆಹಾರ ಸೇವಿಸಬೇಕು ಎನ್ನುವುದರ ಪ್ರಾತ್ಯಕ್ಷಿಕೆಯನ್ನು ಮೆನು ತಯಾರಿಸಿ ಕೊಡುವ ಮೂಲಕ ವಿಜಯಲಕ್ಷ್ಮಿ ತೋರಿಸಿಕೊಡುತ್ತಾರೆ. ಇದು ಏಳು ದಿನಗಳ ಕೋರ್ಸ್‌.

ನಳಪಾಕದ ಪುಸ್ತಕಗಳು
ವಿಜಯಲಕ್ಷ್ಮಿ ಅವರು ಅಡುಗೆ ತಯಾರಿಸುವುದರ ಕುರಿತು ಅನೇಕ ಪುಸ್ತಕಗಳನ್ನೂ ರಚಿಸಿದ್ದಾರೆ. ಚಾಕೊಲೆಟ್, ಪನ್ನೀರ್ ಕಾ ಖಜಾನಾ, ಆಂಧ್ರ ಘಮಘಮಲು, ವರ್ಕಿಂಗ್ ವುಮನ್ಸ್ ಕುಕ್ ಬುಕ್, ನೈವೇದ್ಯ, ಟಿಫನ್ ಬಾಕ್ಸ್, ಆಂಧ್ರ ನಾನ್‌ವೆಜ್ ಕೋಡಿ ಮಸಾಲ, ಹಪ್ಪಳ ಸಂಡಿಗೆ ಹಾಗೂ ಉಪ್ಪಿನಕಾಯಿಗಳು ಪುಸ್ತಕಗಳು ಈಗಾಗಲೇ ಬಿಡುಗಡೆಗೊಂಡಿವೆ. ಬಾಡೂಟ, 7ಡೇಸ್ ಮೆನು ಫಾರ್ ಡಯಾಬಿಟೀಸ್ ಪೇಷೆಂಟ್, ತಾಯಿ ಮತ್ತು ಮಗು ಹಾರೈಕೆ ಮತ್ತು ಮೈಕ್ರೋವೇವ್ ನಾನ್-ವೆಜ್ ಎಂಬ ನಾಲ್ಕು ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿವೆ.

ವೃತ್ತಿಯಲ್ಲಿ ನೆಚ್ಚಿಕೆ
‘ನನಗೆ ಪತಿ ಸಂಪೂರ್ಣ ಬೆಂಬಲ ನೀಡುತ್ತಿದ್ದರು. ಸಾವನ್ನಪ್ಪಿದ ನಂತರ ನನ್ನ ಶಾಲೆಯನ್ನು ಇನ್ನಷ್ಟು ಬೆಳೆಸಬೇಕೆಂಬ ಹಂಬಲ ಹೆಚ್ಚಿತು. ಇದರಿಂದಲೇ ನಾನು ಆರ್ಥಿಕವಾಗಿ ಸಬಲಳಾದೆ. ಪ್ರತಿನಿತ್ಯ ವಿವಿಧ ಬಗೆಯ ಜನರನ್ನು ಭೇಟಿ ಮಾಡುತ್ತಿರುತ್ತೇನೆ. ದುಡ್ಡು ಸಂಪಾದಿಸುವುದಕ್ಕಿಂತ ಹೆಚ್ಚಾಗಿ ಈ ವೃತ್ತಿ ಹೆಚ್ಚು ಆಪ್ತವಾಗಿಬಿಟ್ಟಿದೆ. ಅತ್ಯಂತ ಸರಳವಾಗಿ ಎಲ್ಲರಿಗೂ ಅಡುಗೆ ಮಾಡುವುದನ್ನು ಹೇಳಿಕೊಡುತ್ತೇನೆ. ಎಲ್ಲರೂ ಖುಷಿಯಿಂದ ಕಲಿಯುತ್ತಾರೆ. ನನ್ನ ಪ್ರಕಾರ ಕುಕಿಂಗ್ ಎಂದರೆ ಆರೋಗ್ಯಕರ ಫುಡ್‌ ಹ್ಯಾಬಿಟ್’ ಎಂದು ತಮ್ಮ ವೃತ್ತಿಯ ಬಗ್ಗೆ ಹೇಳಿಕೊಳ್ಳುತ್ತಾರೆ ಇವರು.

ನೀವು ರುಚಿ ರುಚಿಯಾಗಿ ಅಡುಗೆ ಮಾಡುವುದನ್ನು ಕಲಿಯಬೇಕೆಂದರೆ ಸಂಪರ್ಕಿಸಿ: ವಿಳಾಸ- ನಂ. 1081, 10ನೇ ಮುಖ್ಯರಸ್ತೆ, ಚಿತ್ರಕೂಟ ಶಾಲೆ ಹಿಂಭಾಗ, ಆರ್‌ಪಿಸಿ ಲೇಔಟ್. ದೂರವಾಣಿ: 98801 64224.

ಕೋರ್ಸ್‌ಗಳ ಶುಲ್ಕ

ಸಸ್ಯಹಾರಿ ಅಡುಗೆಗಳನ್ನು ಹೇಳಿಕೊಡಲು ಒಂದು ಕೋರ್ಸ್‌ಗೆ (ಮೂರು ದಿನ) 1,300 ರೂಪಾಯಿ ಶುಲ್ಕ ತೆಗೆದುಕೊಂಡರೆ, ಮಾಂಸಾಹಾರಿ ಅಡುಗೆಗಳನ್ನು ಕಲಿಯಲು ಮೂರು ದಿನದ ಕೋರ್ಸ್‌ಗೆ  1,500ರೂಗಳನ್ನು ಪಾವತಿಸಬೇಕಾಗುತ್ತದೆ. ಹಬ್ಬದೂಟಗಳನ್ನು ಕಲಿಯಲು ಸಹ 1,300 ಕೊಡಬೇಕಾಗುತ್ತದೆ.

ನಿರ್ದಿಷ್ಟ ಕಾಯಿಲೆಗೆ ಸಂಬಂಧಪಟ್ಟ ಏಳು ದಿನದ ಆಹಾರ ಪಟ್ಟಿ ತಯಾರಿಸಿ ಅದನ್ನು ಹೇಳಿಕೊಡಲು ಆರಂಭಿಕ ಶುಲ್ಕವಾಗಿ ಐದು ಸಾವಿರ ರೂಪಾಯಿಯನ್ನು ನಿಗದಿ ಪಡಿಸಲಾಗಿದೆ. ಇದನ್ನು ಹೊರತುಪಡಿಸಿ ಡಿಟರ್ಜೆಂಟ್, ವೆಜಿಟೆಬಲ್ ಕಾರ್ವಿಂಗ್, ಫ್ಲವರ್ ಅರೇಂಜ್‌ಮೆಂಟ್ ಇತ್ಯಾದಿ ಕೋರ್ಸ್‌ಗಳು  ಒಂದೊಂದು ದಿನಕ್ಕೆ ಮೀಸಲು. ಈ ಒಂದು ದಿನದ ಕೋರ್ಸ್‌ ಗೆ 1,300ರೂಪಾಯಿಯನ್ನು ಚಾರ್ಜ್ ಮಾಡಲಾಗುತ್ತದೆ. (ಕಲಿಯಲು ಬೇಕಾದ ಸಾಮಾಗ್ರಿಗಳನ್ನು ತರಬೇತುದಾರರೇ ನೀಡುತ್ತಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT