ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದ ಕತ್ತಲಲ್ಲಿ ಮಾನವೀಯತೆಯ ಬೆಳಕು

Last Updated 12 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ವಿವಿಧ ವರ್ಗಗಳ, ವಿವಿಧ ಭಾಷೆಗಳ ಜನರು ಸಂಚರಿಸುವ ಬಿಎಂಟಿಸಿ ಬಸ್‌ಗಳಿಗೆ ಗ್ರಾಮೀಣ ಚಹಾ ಅಂಗಡಿಗಳ, ಊರ ಮುಂದಣ ಅರಳಿಕಟ್ಟೆಗಳ ಗುಣವಿದೆ. ಅಲ್ಲಿ, ಬದುಕಿನ ವಿವಿಧ ಮುಖಗಳು ಅನಾವರಣಗೊಳ್ಳುತ್ತವೆ. ಸ್ನೇಹ, ಪ್ರೇಮ, ಜಗಳ, ಅಸಹನೆ, ನೋವು, ಸಂಭ್ರಮ, ಸ್ವಾರಸ್ಯ, ವಿಷಾದ, ಹೊಸ ಅರಿವು- ಕೆಲವು ನಿಮಿಷಗಳ ಬಸ್ ಪ್ರಯಾಣ ಹಲವು ಅನುಭವಗಳಿಗೆ ಪ್ರಯಾಣಿಕರನ್ನು ಪಕ್ಕಾಗಿಸುತ್ತದೆ. ಇಂಥ ಅನುಭವಗಳ ನಿರೂಪಣೆಯೇ `ಬಸ್ ಕಥೆ'. ಬಸ್ ಪಯಣದಲ್ಲಿನ ನಿಮ್ಮ ಅನುಭವಗಳಿಗೆ ಕಥನದ ರೂಪು ಕೊಟ್ಟು ಕಳಿಸಬಹುದು. ಬರಹಗಳು ಚಿಕ್ಕದಾಗಿರಲಿ. ಕಥನ ಆಕರ್ಷಕವಾಗಿರಲಿ. ವಿಳಾಸ: `ಬಸ್ ಕತೆ ವಿಭಾಗ', ಮೆಟ್ರೊ, ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ, ಬೆಂಗಳೂರು- 560 001. metropv@prajavani.co.in

ಈಗ್ಗೆ ಕೆಲವು ವರ್ಷಗಳ ಹಿಂದಿನ ಘಟನೆ, ನೆನೆದೊಡನೆ ಇಂದಿಗೂ ಮೈ ಜುಂ ಎನ್ನುತ್ತದೆ.

ಮೆಜೆಸ್ಟಿಕ್ ಬಸ್ ನಿಲ್ದಾಣ. ಸಂಜೆ 7ರ ಸಮಯ. ಚಂದ್ರಾ ಲೇಔಟ್ ಕಡೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಆರ್.ಪಿ.ಸಿ.ಲೇಔಟ್ ನಾಮಫಲಕವಿದ್ದ 87ನೇ ಮಾರ್ಗ ಸಂಖ್ಯೆಯ ಬಸ್ ಅಲ್ಲಿಗೆ ಬಂತು. ಬಸ್‌ನಲ್ಲಿ ಹೆಚ್ಚಿನ ಪ್ರಯಾಣಿಕರು ಇಲ್ಲದಿದ್ದ ಕಾರಣ ಆರ್.ಪಿ.ಸಿ.ಲೇಔಟ್‌ನಿಂದ ಅತ್ತಿಗುಪ್ಪೆಗೆ ನಡೆದು ಹೋಗಬಹುದೆಂದೆಣಿಸಿ ಆ ಬಸ್‌ನಲ್ಲಿ ಹತ್ತಿ ಕುಳಿತೆ. 

ನಿಗದಿತ ಮಾರ್ಗದಲ್ಲಿ ಚಲಿಸಿ ಸಾಗಿದಂತೆ ಮಾಗಡಿ ರಸ್ತೆ ಟೋಲ್‌ಗೇಟ್‌ನ ನಂತರ ವಿಜಯನಗರ ಪೈಪ್‌ಲೈನ್ ರಸ್ತೆಗೆ ಬಸ್ ತಿರುಗಿತು! ಬೇರೆಲ್ಲಾ ಬಸ್‌ಗಳಂತೆ ಇದೂ ವಿಜಯನಗರ ಮೂಲಕ ಹೋಗಬಹುದೆಂದು ಭಾವಿಸ್ದ್ದಿದೆ. ನನ್ನ ತಿಳುವಳಿಕೆ ತಪ್ಪಾಗಿದ್ದಕ್ಕೆ ಪೇಚಾಡಿಕೊಂಡೆ. ಆರ್.ಪಿ.ಸಿ ಲೇಔಟ್ ನಿಲ್ದಾಣವನ್ನು ಬಸ್ ಪ್ರವೇಶಿಸಿದಾಗ ನನ್ನ ಜಾಗದಿಂದ ಎದ್ದೆ. ಹಳೆ ಮಾದರಿಯ ಬಸ್ ಅದಾಗಿದ್ದು, ನನಗೆ ಸಮೀಪ ಇದ್ದ ಮುಂದಿನ ಬಾಗಿಲ ಬಳಿ ಬಂದು ನಿಂತೆ. ಬಸ್ ಚಾಲಕ ವಾಹನವನ್ನು ಒಂದೆಡೆ ನಿಲ್ಲಿಸಿದರು. 

ಬಸ್ ನಿಂತಿತೆಂದು ಭಾವಿಸಿ ನಾನು ಕೆಳಕ್ಕೆ ಇಳಿಯತೊಡಗಿದೆ. ಇನ್ನೇನು ನೆಲದ ಮೇಲೆ ಕಾಲಿಡಬೇಕು, ಅಷ್ಟರಲ್ಲಿ ಚಾಲಕ ವಾಹನವನ್ನು ಹಿಮ್ಮುಖವಾಗಿ ಚಲಿಸಿದ. ಬಸ್ ಹಿಮ್ಮುಖವಾಗಿ ಚಲಿಸಿದ ಕಾರಣ ಆಯತಪ್ಪಿ ಬಿದ್ದೆ. ನಾನು ಕೆಳಗೆ ಬಿದ್ದುದನ್ನು ಕಂಡು ಆ ನಿಲ್ದಾಣದಲ್ಲಿದ್ದ ಹಲವಾರು ಮಂದಿ ಒಮ್ಮೆಗೇ `ಹೋ ಹೋ' ಎಂದು ಕೂಗಿಕೊಂಡರು.

ಏನೋ ಅಚಾತುರ್ಯ ನಡೆದಿರಬಹುದು ಎಂದು ಅರಿತ ಬಸ್ ಚಾಲಕ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ. ಜನರೆಲ್ಲ ನನ್ನ ಬಳಿ ಧಾವಿಸಿ ಬಂದರು. ಚಾಲಕನೂ ಎಂಜಿನ್ ಬಂದ್ ಮಾಡಿ ಇಳಿದು ಬಂದ. ಅಷ್ಟರಲ್ಲಿ ನನ್ನ ಶರೀರದ ಕೆಳ ಅರ್ಧಭಾಗ ಬಸ್ಸಿನ ಕೆಳಗಿತ್ತು. ಎಡಭಾಗದ ಮುಂದಿನ ಚಕ್ರ ನನ್ನ ಕಿಬ್ಬೊಟ್ಟೆಗೆ ಒತ್ತಿದಂತೆ ನಿಂತಿತ್ತು. ಕೆಲವೇ ಸೆಕೆಂಡುಗಳ ಅಂತರದಿಂದ ನಾನು ಸಾವಿನ ದವಡೆಯಿಂದ ಪಾರಾಗಿದ್ದೆ. ಅದು ನನ್ನ ಮರುಹುಟ್ಟೇ ಆಗಿತ್ತು. ಪಕ್ಕೆಲುಬುಗಳ ಮೇಲೆ ಹಗುರಾಗಿ ಬಿದ್ದ ಚಕ್ರದ ಒತ್ತಡದಿಂದ ಸ್ವಲ್ಪ ಒಳ ನೋವು ಆಯಿತಷ್ಟೆ.

ಅಲ್ಲಿ ನೆರೆದಿದ್ದವರೆಲ್ಲರಲ್ಲೂ ಈ ಆಕಸ್ಮಿಕದ ಬಗ್ಗೆ ಆತಂಕ, ಆಶ್ಚರ್ಯದ ಮಿಶ್ರಭಾವ. ನನ್ನ ಬಗೆಗೆ ವಿಶೇಷ ಗಮನ ಹರಿಸಿ ಯೋಗಕ್ಷೇಮ ವಿಚಾರಿಸಿದರು. ಕೆಳಗೆ ಬಿದ್ದ ರಭಸಕ್ಕೆ ಬ್ಯಾಗ್, ಮೊಬೈಲ್ ಫೋನ್, ಪರ್ಸ್ ಇತರೆ ವಸ್ತುಗಳೆಲ್ಲ ಚದುರಿದಂತೆ ಬಿದ್ದವು. ಅಲ್ಲಿದ್ದ ಜನ ಪ್ರಾಮಾಣಿಕವಾಗಿ ಎಲ್ಲವನ್ನೂ ಹುಡುಕಿ ತಂದುಕೊಟ್ಟರು.

ಬಸ್ಸಿನ ಚಾಲಕನಂತೂ ಕಾಳಜಿ ವಹಿಸಿ, ಬಲವಂತವಾಗಿ ಹಾಲು ಹಣ್ಣುಗಳನ್ನಿತ್ತು ಉಪಚರಿಸಿದರು. ನನ್ನನ್ನು ಮನೆಯವರೆಗೆ ಬಿಟ್ಟುಬರಲು ಒಬ್ಬ ವ್ಯಕ್ತಿಯನ್ನು ನಿಯೋಜಿಸಿ, ಆತ್ಮೀಯನೊಬ್ಬನನ್ನು ಬೀಳ್ಕೊಡುವಂತೆ ಕಳುಹಿಸಿದರು. ಅಪಘಾತಕ್ಕೆ ಒಳಗಾದರೂ ಅಂದು ನಿಜವಾದ ಮಾನವೀಯ ಪ್ರೀತಿಯನ್ನು ಜನರಲ್ಲಿ ಕಂಡೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT