ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರ ಇಲ್ಲದ ವ್ಯಾಪಾರ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಂಜೆಯಾಗುತ್ತಿದ್ದಂತೆ ಶಿವಾಜಿನಗರದ ಸೇಂಟ್‌ ಮೇರಿ ಬೆಸಿಲಿಕಾದ ದೀಪಾಲಂಕಾರ ಇಡೀ ವಾತಾವರಣಕ್ಕೆ ಹೊಸ ಮೆರುಗು ನೀಡುತ್ತಿತ್ತು. ಚರ್ಚ್ ಮುಂದಿನ ರಸ್ತೆಗಳಲ್ಲಿ ಕ್ರಿಸ್ಮಸ್‌ ಮಾರುಕಟ್ಟೆ ತೆರೆದಿದ್ದ ವ್ಯಾಪಾರಿಗಳಿಗೆ ವರ್ಷದ ‘ಬೆಳೆ’ಯನ್ನು ಬಾಚಿಕೊಳ್ಳುವ ಕಾತರ. ವಿದ್ಯುದ್ದೀಪಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದವು. ಕತ್ತಲು–ಬೆಳಕಿನ ಜುಗಲ್‌ಬಂದಿಯ ನಡುವೆಯೇ ವ್ಯಾಪಾರಿಗಳು ಒಂದಿಷ್ಟು ಲಾಭ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದರು. ರಾಜಸ್ತಾನದ ಯುವಕರು ರಸ್ತೆಯಲ್ಲೇ ಸಾಂಟಾಕ್ಲಾಸ್ ಟೋಪಿಗಳನ್ನು ಮಾರುತ್ತಿದ್ದರು.
ಕ್ರಿಸ್ಮಸ್‌ಗೆ ವಾರವಿದೆ ಎನ್ನುವಾಗಲೇ ಪ್ರತಿವರ್ಷ ಚರ್ಚ್ ಮುಂಭಾಗದಲ್ಲಿ ತೆರೆದುಕೊಳ್ಳುವ ತಾತ್ಕಾಲಿಕ ಮಾರುಕಟ್ಟೆ ಸೋಮವಾರದ ಇಳಿಸಂಜೆಯ ನೋಟ ದಕ್ಕಿದ್ದು ಹೀಗೆ.

ಹಬ್ಬಕ್ಕೆ ಬೇಕುಬೇಕಾಗುವ ಎಲ್ಲಾ  ಸಾಮಗ್ರಿಗಳೂ ಈ ಮಾರುಕಟ್ಟೆಯಲ್ಲಿ ಲಭ್ಯ. ಗೋದಲಿ (ದನದ ಹಟ್ಟಿ) ಅಥವಾ ಕ್ರಿಬ್‌ಗಳದ್ದೇ ಒಂದು ಲೋಕ ತೆರೆದುಕೊಂಡಂತಿತ್ತು. ಮಾರಾಟವೂ ಜೋರಾಗಿತ್ತೆನ್ನಿ. ಹತ್ತು ವರ್ಷಗಳ ಹಿಂದೆ ಮಣ್ಣಿನ ಗೊಂಬೆಗಳು ಹೆಚ್ಚಾಗಿ ವ್ಯಾಪಾರವಾಗುತ್ತಿದ್ದವು. ಆದರೆ ಇತ್ತೀಚೆಗೆ ಪ್ಲಾಸ್ಟಿಕ್, ಪ್ಲಾಸ್ಟರ್ ಆಫ್‌ ಪ್ಯಾರಿಸ್‌, ಸೆರಾಮಿಕ್‌ ಗೊಂಬೆಗಳಿಗೆ ಬೇಡಿಕೆ ಹೆಚ್ಚಿದೆ. ಹಾಗೂ ಪ್ಲಾಸ್ಟಿಕ್‌ ಕ್ರಿಸ್ಮಸ್‌ ಟ್ರೀ ಉಪಯೋಗಿಸುತ್ತಿರುವುದರಿಂದ ಕ್ರಿಸ್ಮಸ್‌ ಗಿಡಗಳ ವ್ಯಾಪಾರವೂ ಕಡಿಮೆಯಾಗಿದೆ ಎಂಬುದು ಇಲ್ಲಿನ ವ್ಯಾಪಾರಸ್ಥರ ನೋವು.

‘ಮನೆಯಲ್ಲಿ ಗೋದಲಿಯನ್ನು ನಿರ್ಮಿಸಿ ಅಲ್ಲಿ ಬಾಲಯೇಸುವಿನ ಮೂರ್ತಿ, ತಾಯಿ ಮೇರಿ, ದನಗಳು ಹಾಗೂ ಕುರಿ, ಒಂಟೆ ಗೊಂಬೆಗಳನ್ನು ಇಡುತ್ತೇವೆ. ಯೇಸುವಿನ ಜನ್ಮವನ್ನು ತಿಳಿಸಲು ನಕ್ಷತ್ರಗಳು ದಾರಿ ತೋರಿದವು ಎನ್ನುವ ಪ್ರತೀತಿಗಾಗಿ ನಕ್ಷತ್ರಗಳ ಎಳೆ ಬಿಡಲಾಗಿರುತ್ತದೆ. ಕ್ರಿಸ್ಮಸ್ ಗಿಡವನ್ನೂ ಇಡಲಾಗುತ್ತದೆ. ಅದೇ ದಿನವನ್ನು ಮಕ್ಕಳ ಕ್ರಿಸ್ಮಸ್ ಎಂದು ಆಚರಣೆ ಮಾಡಲಾಗುತ್ತದೆ. ಎಲ್ಲ ಮಕ್ಕಳಿಗೆ ಕೇಕ್, ಸಿಹಿ ತಿಂಡಿ ಹಾಗೂ ಉಡುಗೊರೆಗಳನ್ನು ನೀಡಲಾಗುತ್ತದೆ’ ಎನ್ನುತ್ತಾರೆ ಶಿವಾಜಿನಗರದ ಉಷಾ.

ಟೋಪಿಗೂ ಕುಸಿದ ಬೇಡಿಕೆ
ಚರ್ಚ್‌ ಎದುರು ರಸ್ತೆಯಲ್ಲೇ ಸಾಂಟಾಕ್ಲಾಸ್ ಟೋಪಿ ವ್ಯಾಪಾರ ಮಾಡುತ್ತಿದ್ದ ರಾಜಸ್ತಾನದ ಹುಡುಗರು ‘ಮೆಟ್ರೊ’ದೊಂದಿಗೆ ಮಾತನಾಡಿದರು. ‘ನಾವು ಐದು ಮಂದಿ ಇದ್ದೇವೆ. ಕೆ.ಆರ್‌. ಮಾರುಕಟ್ಟೆಯಿಂದ ತಲಾ 100 ಟೋಪಿಗಳನ್ನು ತಂದಿದ್ದೇವೆ. ರೂ20ರಿಂದ ರೂ25 ರೂಪಾಯಿಗೊಂದರಂತೆ ಮಾರುತ್ತೇವೆ. ಕ್ರಿಸ್ಮಸ್ ತಿಂಗಳಲ್ಲಿ ಮಾತ್ರ ಈ ವ್ಯಾಪಾರ. ಉಳಿದಂತೆ ಎಂ.ಜಿ.ರಸ್ತೆ, ಮಲ್ಲೇಶ್ವರದಲ್ಲಿ ಭಾರತದ ನಕ್ಷೆ ಮಾರಾಟ ಮಾಡುತ್ತೇವೆ. ಕ್ರಿಕೆಟ್‌ ಸಂದರ್ಭಗಳಲ್ಲಿ ಬಾವುಟ ಮಾರಾಟ ಮಾಡುವುದು ನಮ್ಮ ಕಸುಬು. ಡಿ.24ರ ರಾತ್ರಿ 12ರವರೆಗೂ ಟೋಪಿಗಳ ವ್ಯಾಪಾರ ಮಾಡಿ ಒಂದಿಷ್ಟು ಕಾಸು ಸಂಪಾದಿಸುತ್ತೇವೆ. ಈ ಬಾರಿ ಕ್ರಿಸ್ಮಸ್ ಟೋಪಿ ಅಷ್ಟಾಗಿ ಮಾರಾಟವಾಗಿಲ್ಲ’ ಎಂದು ಬೇಸರಿಸಿದರು ರಾಜೇಶ್‌ ಕುಮಾರ್‌.

ಕರೆಂಟು ಕೈಕೊಟ್ಟಾಗಲೆಲ್ಲ ಕತ್ತಲೆಯಲ್ಲೇ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಗ್ರಾಹಕರನ್ನು ಕೂಗಿಕೂಗಿ ಕರೆಯುವ ಮೂಲಕ ತಮ್ಮಿರವನ್ನು ಸೂಚಿಸುತ್ತಿದ್ದರು.

ಸಾಂಟಾಕ್ಲಾಸ್‌ ಮುಖವಾಡ, ನಕ್ಷತ್ರ, ಬಲೂನ್‌, ಬಣ್ಣಬಣ್ಣದ ಚೆಂಡು ಹಾಗೂ ಗಂಟೆಗಳ ಖರೀದಿ ಜೋರಾಗಿತ್ತು. ಅಂಗಡಿಗಳ ಎದುರು ನೇತುಹಾಕಿದ್ದ ಆಲಂಕಾರಿಕ ವಸ್ತುಗಳು ಮಿರಮಿರ ಮಿಂಚುತ್ತಾ ಗ್ರಾಹಕರನ್ನು ಸೆಳೆಯುತ್ತಿದ್ದವು.

ವ್ಯಾಪಾರ ಅಷ್ಟಕ್ಕಷ್ಟೇ

‘ಹನ್ನೆರಡು ವರ್ಷಗಳಿಂದ ಕ್ರಿಸ್ಮಸ್‌ ಟ್ರೀಗಳ ವ್ಯಾಪಾರ ಮಾಡುತ್ತಿದ್ದೇನೆ. ನೀಲಸಂದ್ರ, ವರ್ತೂರು, ಸಿದ್ದಾಪುರ ನರ್ಸರಿಯಲ್ಲಿ ಗಿಡಗಳನ್ನು ತರುತ್ತೇನೆ. ಇಲ್ಲಿಯವರೆಗೂ (ಸೋಮವಾರ ರಾತ್ರಿ 8) 150 ಗಿಡಗಳಷ್ಟೇ ಖರ್ಚಾಗಿವೆ. ಕಳೆದ ವರ್ಷ 350ರಿಂದ 500 ಗಿಡಗಳು ಬಿಕರಿಯಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ಜನರು ಮುಂಬೈ, ಒಡಿಶಾದ ಪ್ಲಾಸ್ಟಿಕ್‌ ಗಿಡ ಬಳಸುತ್ತಿದ್ದಾರೆ. ಐದು ವರ್ಷಗಳಿಂದ ದರದಲ್ಲೇನೂ ವ್ಯತ್ಯಾಸ ಆಗಿಲ್ಲ. ಕಳೆದ ವರ್ಷ ಉಪಯೋಗಿಸಿದ ಗಿಡವನ್ನೇ ಈ ವರ್ಷ ತೊಳೆದು ಬಳಸುತ್ತಾರೆ. ಹಾಗಾಗಿ ವ್ಯಾಪಾರವೂ ಕಡಿಮೆಯಾಗಿದೆ’ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್‌ ಘನಿ.

ಕ್ರಿಬ್‌ ಸೆಟ್‌ (ಗೋದಲಿ) ವ್ಯಾಪಾರಿ ಫ್ರೇಜರ್‌ಟೌನ್‌ನ ರವಿ 20 ವರ್ಷಗಳಿಂದ ಶಿವಾಜಿ ನಗರದಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ನಾಲ್ಕು ಇಂಚಿನಿಂದ ಎರಡು ಅಡಿ ವರೆಗಿನ ಕ್ರಿಬ್‌ ಸೆಟ್‌ಗಳು ಇವರ ಬಳಿ ವ್ಯಾಪಾರವಾಗುತ್ತಿದ್ದವು. ‘ನಮ್ಮಲ್ಲಿ ಇನ್ನೂರ ಐವತ್ತು ರೂಪಾಯಿಯಿಂದ ಎರಡು ಸಾವಿರದವರೆಗಿನ ಬೆಲೆಯ ಕ್ರಿಬ್ ಸೆಟ್‌ಗಳಿವೆ.

ಎಲ್ಲಾ ಜೇಡಿಮಣ್ಣಿನ ಗೊಂಬೆಗಳು. ಚೆನ್ನೈನಿಂದ ತರು ತ್ತೇವೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.50 ರಷ್ಟು ವ್ಯಾಪಾರ ಇಳಿಮುಖ ವಾಗಿದೆ. ಬಹುತೇಕ ಮಂದಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌, ಪ್ಲಾಸ್ಟಿಕ್‌ ಸೆಟ್‌ ಗಳನ್ನೇ ಕೊಂಡುಕೊಳ್ಳುತ್ತಿದ್ದಾರೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌, ಚೀನಾದ ಸೆರಾ ಮಿಕ್‌ ಸೆಟ್‌ಗಳನ್ನು ಮೂರರಿಂದ ಐದು ವರ್ಷ ಬಳಕೆ ಮಾಡಬಹುದು. ಆದ್ದ ರಿಂದ ನಮ್ಮ ಮಣ್ಣಿನ ಸೆಟ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ’ ಎನ್ನುತ್ತಾರೆ ರವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT