ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಸೇರುವ ಆತಂಕದಲ್ಲಿ ಏರ್‌ಲೈನ್ಸ್‌ ಹೋಟೆಲ್‌

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ಬದಲಾಗುತ್ತಿದೆ. ಹಳೆಯದೆಲ್ಲಾ ಈಗ ಬರಿ ನೆನಪುಗಳಷ್ಟೇ. ಎಂ.ಜಿ. ರಸ್ತೆಯ ಹೆಗ್ಗುರುತಾಗಿದ್ದ ಇಂಡಿಯಾ ಕಾಫಿ ಹೌಸ್‌, ಗಂಗಾರಾಮ್ಸ್‌ ಪುಸ್ತಕ ಮಳಿಗೆ ಹೀಗೆ ಹಳೆಯದೆಲ್ಲಾ ಆ ರಸ್ತೆಯಿಂದ ಬೇರೆಡೆ ಸ್ಥಳಾಂತರವಾಗಿವೆ. ಆದರೆ ದಂಡು ಪ್ರದೇಶದಲ್ಲಿ ಹೆಸರುವಾಸಿಯಾಗಿದ್ದ ಏರ್‌ಲೈನ್ಸ್‌ ಹೋಟೆಲ್‌ ಈಗ ಶಾಶ್ವತವಾಗಿ ಮುಚ್ಚುವ ಹಾದಿ ಹಿಡಿಯುತ್ತಿದೆ.

ಎಂ.ಜಿ. ರಸ್ತೆ ಬಳಿಯ ಲ್ಯಾವೆಲ್ಲೆ ರಸ್ತೆಗೆ ಹೊಂದಿಕೊಂಡಂತಿರುವ ಏರ್‌ಲೈನ್ಸ್‌ ಹೋಟೆಲ್‌ ಅಂದಿನ ಹಿರಿಯರಿಗೆ ಮಾತ್ರವಲ್ಲ ಇಂದಿನ ಯುವಜನಾಂಗದೊಂದಿಗೂ ಭಾವನಾತ್ಮಕ ಸಂಬಂಧ ಹೊಂದಿತ್ತು. ಗೆಳೆಯರೆಲ್ಲರೂ ಕೂಡಿ ಇಲ್ಲಿ ದೋಸೆ, ಬಿಸಿಬೇಳೆ ಭಾತ್‌ ತಿಂದು, ಕಾಫಿ ಸವಿಯುತ್ತಾ ಹರಟುವುದು ಸಾಮಾನ್ಯ ದೃಶ್ಯವಾಗಿತ್ತು. ಬಗೆಬಗೆಯ ಬೈಕರ್‍್ಸ್‌ ತಂಡಗಳು ಪ್ರತಿ ಭಾನುವಾರ ಲಾಂಗ್‌ ಡ್ರೈವ್‌ಗೆ ತೆರಳುವ ಮುನ್ನ ಇಲ್ಲಿನ ಉಪಹಾರ ಸವಿದೇ ಮುಂದೆ ಸಾಗುವುದು ರೂಢಿ. ಹೀಗೆಲ್ಲಾ ಪ್ರಖ್ಯಾತಿ ಗಳಿಸಿದ್ದ ಹೋಟೆಲ್‌ಗೆ ಇದೀಗ ಬೀಗ ಬಿದ್ದಿದೆ.

ಹೈಕೋರ್ಟ್‌ ಹೊರಡಿಸಿದ ತಡೆಯಾಜ್ಞೆಯಂತೆ ಮಾರ್ಚ್‌ 22ರಿಂದ ಏರಲೈನ್ಸ್‌ ಹೋಟೆಲ್‌ ಬಾಗಿಲು ಮುಚ್ಚಿದೆ. ಬಿಬಿಎಂಪಿ ರದ್ದುಪಡಿಸಿದ ಹೋಟೆಲ್‌ ಪರವಾನಗಿ ವಿಷಯವಾಗಿ ಹೈಕೋರ್ಟ್‌ ಮೆಟ್ಟಿಲೇರಿದ ಏರ್‌ಲೈನ್ಸ್‌ ಹೋಟೆಲ್‌ ಸಂಸ್ಥಾಪಕ ಎಸ್‌ಎನ್‌ಎಸ್‌ ರಾವ್‌ ಅವರ ಮಗ ದಿವಾಕರ್‌ ರಾವ್‌ ಅವರ ದೂರನ್ನು ಪರಿಶೀಲಿಸಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಪ್ರಕರಣದ ಹಿನ್ನೆಲೆ
ಮೂಲಗಳ ಪ್ರಕಾರ, ವಕ್ಫ್‌ ಟ್ರಸ್ಟ್‌ಗೆ ಸೇರಿದ್ದ ಈ ಜಾಗವನ್ನು ಕಲರಿಕ್ಕಲ್‌ ಥಾಮಸ್‌ ಅವರು ಖರೀದಿಸಿದ್ದರು. ನಂತರ ಅವರು ಎಸ್‌ಎನ್‌ಎಸ್‌ ರಾವ್‌ ಅವರಿಗೆ ಭೋಗ್ಯಕ್ಕ ನೀಡಿದ್ದರು. 1995ರಲ್ಲಿ ಎಸ್‌ಎನ್‌ಎಸ್‌ ರಾವ್‌ ಅವರ ನಿಧನದ ನಂತರ ಅವರ ಮಗ ದಿವಾಕರ್‌ ರಾವ್‌ ಈ ಹೋಟೆಲನ್ನು ನಡೆಸುತ್ತಿದ್ದರು.

2011ರಲ್ಲಿ ಕಲರಿಕ್ಕಲ್‌ ಅವರು ನಿಧನರಾದ ನಂತರ ಅವರ ಮಗ ಕುರಿಯನ್‌ ಇಲ್ಲಿನ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸುವಂತೆ 2012ರಲ್ಲಿ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದರು. ಕುರಿಯನ್‌್ ಅವರ ಅನುಮತಿ ಇಲ್ಲದೆ ದಿವಾಕರ್‌ ಅವರು ಪರವಾನಗಿಯನ್ನು ವರ್ಗಾಯಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಾದ–ಪ್ರತಿವಾದ ಆಲಿಸಿದ ಹೈಕೋರ್ಟ್‌ ಮುಂದಿನ ಸೂಚನೆ ನೀಡುವವರೆಗೂ ಇಲ್ಲಿನ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.

ಈ ಎಲ್ಲಾ ಬೆಳವಣಿಗೆಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ 150 ನೌಕರರು ಆತಂಕಕ್ಕೊಳಗಾಗಿದ್ದಾರೆ. ನ್ಯಾಯಾಲಯದ ಮುಂದಿನ ಆದೇಶಕ್ಕೆ ಕಾತರರಾಗಿದ್ದಾರೆ. ಈ ನಡುವೆ ಕೋರ್ಟ್‌ ವಿಚಾರಣೆಗೆ ಹಾಜರಾಗುವುದರಲ್ಲಿ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಮುಳುಗಿರುವ ದಿವಾಕರ್‌ ಅವರ ಪ್ರಕಾರ ಯಾವುದೂ ಇನ್ನೂ ಅಂತಿಮವಾಗಿಲ್ಲವಂತೆ. ‘ನಾವು ಶಾಶ್ವತವಾಗಿ ಈ ಸ್ಥಳವನ್ನು ತೊರೆಯಬೇಕೆ ಅಥವಾ ಮತ್ತೆ ನಮ್ಮ ಸೇವೆಗೆ ಪರವಾನಗಿ ದೊರೆಯುವುದೇ? ಯಾವುದನ್ನೂ ಈಗಲೇ ಹೇಳುವಂತಿಲ್ಲ. ನ್ಯಾಯಾಲಯದ ತೀರ್ಪಿಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ’ ಎಂದಿದ್ದಾರೆ.

ಏರ್‌ಲೈನ್ಸ್‌ ಹೋಟೆಲ್‌ ಸೇವೆ ಸ್ಥಗಿತಗೊಂಡಿರುವುದರಿಂದ ಬೇಸರಗೊಂಡಿರುವ ಇಲ್ಲಿನ ಖಾದ್ಯಪ್ರಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ ಮರು ಆರಂಭಕ್ಕೆ ನಾವೆಲ್ಲರೂ ಸಂಘಟಿತರಾಗಿ ಹೋರಾಡುತ್ತೇವೆ. ಎಂದಿಗೂ ಅದನ್ನು ಮುಚ್ಚಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುವ ಮಂದಿ, ಹೋಟೆಲ್‌ನ ಆರಂಭಕ್ಕೆ ಒತ್ತಾಯಿಸಿ ಸದ್ದಿಲ್ಲದೇ ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

‘ಬೆಂಗಳೂರಿನ ಐತಿಹಾಸಿಕ ತಾಣವೊಂದು ಈಗ ಮುಚ್ಚಿರುವುದು ಬೇಸರದ ಸಂಗತಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಹಲವರು ತಮ್ಮ ಬಾಲ್ಯದಿಂದಲೂ ಈ ಹೋಟೆಲ್‌ನ ನಂಟು ಹೊಂದಿದ್ದಾರೆ. ಆಗ ಇಲ್ಲೊಂದು ಪುಟ್ಟಾಣಿ ರೈಲು ಇತ್ತು. ಇಂಥ ಹಲವಾರು ನೆನಪುಗಳು ಇನ್ನೂ ಹಸಿರಾಗಿವೆ. ನಿತ್ಯ ಕಾಲೇಜಿನ ತರಗತಿಗಳು ಮುಗಿದ ನಂತರ ಹಳೆಯ ಸ್ನೇಹಿತರು ಸೇರುತ್ತಿದ್ದ ಈ ತಾಣದ ಸಾಕಷ್ಟು ಮಧುರ ನೆನಪುಗಳನ್ನು ನಾವು ಮರೆಯುವಂತೆಯೇ ಇಲ್ಲ. ಇಲ್ಲಿನ ದಟ್ಟ ಹಸಿರ ನಡುವೆ ಕುಳಿತು ಹರಟಿದ ಮಾತೆಲ್ಲವೂ ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆ. ನಮ್ಮ ಬದುಕಿನ ಭಾಗವಾಗಿದ್ದ ಅಂಥದ್ದೊಂದು ಹೋಟೆಲ್‌ ಮುಚ್ಚಿದೆ ಎಂದರೆ ಅದನ್ನು ಅರಗಿಸಿಕೊಳ್ಳುವುದಾದರೂ ಹೇಗೆ?’ ಎಂದು ಸಹಿ ಸಂಗ್ರಹ ಅಭಿಯಾನದ ವಿಶಾಲ್‌ ಹೇಳುತ್ತಾರೆ.

‘ಹೋಟೆಲ್‌ ಮುಚ್ಚಿದೆ ಎಂಬ ವಿಷಯ ಕೇಳಿಯೇ ನನ್ನ ಹೃದಯ ಒಡೆದುಹೋದಂತಾಯಿತು. ಒಂದೇ ತಾಣದಲ್ಲಿ ಬಹುಬಗೆಯ ಜನರನ್ನು ಕಾಣಬಹುದಾದ ಏಕೈಕ ಹೋಟೆಲ್‌ ಏರ್‌ಲೈನ್ಸ್‌. ನಗರದ ಹೃದಯಭಾಗದಲ್ಲಿ ಮರದ ನೆರಳಲಿ ಕುಳಿತುಕೊಳ್ಳಲು ಅವಕಾಶವಿರುವ ಏಕೈಕ ಹೋಟೆಲ್‌ ಅದೊಂದೇ. ನನ್ನ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಇಲ್ಲಿ ಕಾಫಿ ಹೀರುವುದೂ ಒಂದಾಗಿತ್ತು. ಇಲ್ಲಿನ ಸ್ನೇಹಮಯ ವಾತಾವರಣ ಹಾಗೂ ಪರಿಚಾರಕರ ನಗುಮೊಗ ಮತ್ತೆ ಮತ್ತೆ ಇಲ್ಲಿಗೆ ಬರುವಂತೆ ಮಾಡುತ್ತಿತ್ತು’ ಎಂದರು ರೋಹನ್‌ ಪೆರೇರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT