ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಂಗೋ ಕಲಾರಾಧನೆ

ಕಲಾಪ
Last Updated 20 ಜುಲೈ 2015, 19:41 IST
ಅಕ್ಷರ ಗಾತ್ರ

‘ಕಲೆ ಎನ್ನುವುದು ವೃತ್ತಿಯಲ್ಲ. ಯಾರದೋ ಹಿಂಸೆಗೆ ಅಥವಾ ಬಲವಂತಕ್ಕೊಳಗಾಗಿ ಅಭ್ಯಾಸ ಮಾಡಿದರೆ ಪ್ರಯೋಜನವಿಲ್ಲ. ಕಲೆ ದೈವದ ಆರಾಧನೆ. ಭಕ್ತಿಯಿಂದ ಕಲೆಯನ್ನು ಆರಾಧಿಸಿದರೆ ಖಂಡಿತ ಫಲ ಸಿಗುತ್ತದೆ.
-ಎ.ವಿ.ಇಲಾಂಗೊ.

ನಗರದಲ್ಲಿ ಈಗಾಗಲೇ ಅನೇಕ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಿ ಕಲೆಯ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿರುವ ಆರ್ಟ್ ಹೌಸ್ ಗ್ಯಾಲರಿಗೆ ಈಗ ಒಂದು ವರ್ಷದ ಸಂಭ್ರಮ. ಈ ವಾರ್ಷಿಕೋತ್ಸವದ ಸಲುವಾಗಿ ಗ್ಯಾಲರಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಹಿರಿಯ ಕಲಾವಿದ ಎ.ವಿ. ಇಲಾಂಗೋ ಅವರ ಕೆಲ ಆಯ್ದ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ‘ಆಫ್ ರಿದಂ ಅಂಡ್ ಮೂವ್‌ಮೆಂಟ್’ ಎಂಬ ಶೀರ್ಷಿಕೆಯ ಈ ಕಲಾ ಪ್ರದರ್ಶನ ಆಗಸ್ಟ್ 8ರಂದು  ಕೊನೆಗೊಳ್ಳಲಿದೆ.

ಶ್ರೀಕೃಷ್ಣ ಖುಷಿಯಿಂದ ಕೊಳಲನೂದುವಾಗ ತನ್ಮಯನಾಗಿರುವ ಪರಿ, ಪ್ರೇಮಿಗಳ ಆಲಿಂಗನ, ಸಾಮೂಹಿಕ ನೃತ್ಯದ ಮನಮೋಹಕ ಭಂಗಿಗಳು... ಹೀಗೆ ಆಕರ್ಷಕ ಕಲಾಕೃತಿಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು. ತಮಿಳುನಾಡಿನ  ಗೋಬಿಚೆಟ್ಟಿಪಾಳ್ಯಂ ಎಂಬ ಪುಟ್ಟ ನಗರದಲ್ಲಿ ಹುಟ್ಟಿದ ಇಲಾಂಗೋ ಅವರು ಇದುವರೆಗೂ ಸುಮಾರು 45ಕ್ಕೂ ಹೆಚ್ಚು ಏಕವ್ಯಕ್ತಿ ಕಲಾಪ್ರದರ್ಶನಗಳನ್ನು ನೀಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟು ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 

‘ಏಳು ವರ್ಷದವನಿದ್ದಾಗ ಸ್ಲೇಟ್ ಮೇಲೆ ಬಳಪ ಹಿಡಿದು ಚಿತ್ರಗಳನ್ನು ಬಿಡಿಸುತ್ತಿದ್ದೆ. ಯಾರ ಬಳಿಯೂ ತರಬೇತಿ ಪಡೆದಿಲ್ಲ. ಚಿಕ್ಕ ನಗರವೊಂದರಲ್ಲಿ ಹುಟ್ಟಿ ಬೆಳೆದವನು ನಾನು. ಆಗಲೇ ನನ್ನ ಅಜ್ಜಿಯ ಪೋಟ್ರೇಟ್ ಮಾಡಿದ ನೆನಪು. ನಂತರ ವಿದ್ಯಾಭ್ಯಾಸದ ಕಡೆ ಗಮನ ಹೆಚ್ಚಾಯಿತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ನನ್ನ ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಮತ್ತೆ ಕಲಾಕೃತಿಗಳನ್ನು ರಚಿಸಲು ಆರಂಭಿಸಿದೆ. ನನಗೆ ಹಾಗೂ ಕಲೆಗೆ ಸುಮಾರು ನಲವತ್ತಕ್ಕೂ ಹೆಚ್ಚು ವರ್ಷದ ನಂಟು’ ಎಂದು ತಮ್ಮ ಕಲಾಭ್ಯಾಸದ ಆರಂಭಿಕ ದಿನಗಳ ಕುರಿತು ಹೇಳಿಕೊಂಡರು ಪ್ರದರ್ಶನದ ರೂವಾರಿ ಇಲಾಂಗೋ.

‘ನಮ್ಮ ಊರಿನಲ್ಲಿ ಹಲವಾರು ಜಾತ್ರೆಗಳು, ಕರಗ, ಕಾವಡಿ, ಓಯಿಲಾಟ್ಟಂನಂತಹ ಉತ್ಸವಗಳು ನಡೆಯುತ್ತಿದ್ದವು. ಅಲ್ಲಿನ ಸಂಪ್ರದಾಯ, ನೃತ್ಯ, ಜನರ ಸಂಭ್ರಮಗಳೇ ನನ್ನ ಕ್ಯಾನ್ವಾಸ್‌ನ ವಿಷಯ ವಸ್ತುಗಳು. ಮೊದಲಿಗೆ ಇವೆಲ್ಲಾ ಆಯಿಲ್ ಪೇಂಟಿಂಗ್‌ಗಳೇ ಆಗಿದ್ದವು. ವ್ಯವಸಾಯ ಚಟುವಟಿಕೆಗಳು, ಹಬ್ಬ ಹರಿದಿನ ಜಾನಪದ ಸಂಸ್ಕೃತಿಗಳು ಎಲ್ಲಾ ದೃಶ್ಯಗಳನ್ನು ಸ್ಮರಿಸಿ ಆ ಚಿತ್ರಣಗಳನ್ನು ಕ್ಯಾನ್ವಾಸ್ ಮೇಲೆ ಬಿಂಬಿಸಲು ಆರಂಭಿಸಿದೆ. ಮಧುರೈನ ಶಿಲ್ಪಕಲಾಕೃತಿಗಳು ಹಾಗೂ ವಾಸ್ತುಶಿಲ್ಪ ನನ್ನ ಕಲಾಸಕ್ತಿ ವೃದ್ಧಿಸಿಕೊಳ್ಳಲು ಮತ್ತಷ್ಟು ಪ್ರೇರಣೆ ನೀಡಿದವು. ಈ ರೀತಿಯ ಕಲಾಕೃತಿಗಳಿಗೆ ಉತ್ಸವ್ ಸೀರೀಸ್ ಎಂದೇ ಹೆಸರಿಸಿ, ಪ್ರದರ್ಶನಕ್ಕಿಟ್ಟಿದ್ದೆ’ ಎಂದು ಹೇಳುತ್ತಾರೆ ಇಲಾಂಗೋ. ಆಗ ಟ್ರಾಫಿಕ್‌ನ ಕಿರಿಕಿರಿ, ಶಬ್ದ ಮಾಲಿನ್ಯ, ನಗರ ಪರಿಸರ ಕುರಿತ ಚಿತ್ರಣಗಳನ್ನು ಕೂಡ ತಮ್ಮ ಕ್ಯಾನ್ವಸ್‌ನಲ್ಲಿ ಮೂಡಿಸಿ, ಅದಕ್ಕೆ ವಿಭಿನ್ನ ಶೀರ್ಷಿಕೆಗಳನ್ನಿಟ್ಟು, ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.

ಇಲಂಗೊ ಅವರಿಗೆ ಕಲೆ ಹವ್ಯಾಸವಾಗಿ ಸಿಕ್ಕ ಉಡುಗೊರೆ. ಕಲೆಯ ಬಗ್ಗೆ ಏನೂ ತಿಳಿಯದ ಕಾಲದಲ್ಲಿ ಚಿತ್ರಕಲೆ ಆರಂಭಿಸಿ ಇಂದು ಆಯಿಲ್ ಪೇಂಟಿಂಗ್, ಆಕ್ರಿಲಿಕ್ ಪೇಂಟಿಂಗ್, ಇಂಕ್ ಸ್ಕೆಚ್, ಡ್ರಾಯಿಂಗ್ ಹೀಗೆ ಎಲ್ಲ ರೀತಿಯ ಪೇಂಟಿಂಗ್ ಕೌಶಲಗಳನ್ನೂ ಕರಗತ ಮಾಡಿಕೊಂಡಿದ್ದಾರೆ. 1989ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಕಲಾಪ್ರದರ್ಶನದಲ್ಲಿ ಚಿನ್ನದ ಪದಕ ಲಭಿಸಿತ್ತು. ‘ಪಶುಪತಿಪಾಸಂ’ ಎಂಬ ವಿಷಯಾಧಾರಿತ ಬುಲ್ ಸರಣಿ, ಮಹಿಳಾ ಸರಣಿ, ಒಡಿಸ್ಸಿ ಆಧಾರಿತ ಕಲೆಗಳು, ನೃತ್ಯ ಸರಣಿಗಳು, ಚೆನ್ನೈ ಸೀರೀಸ್  ಎಂಬ ಅನೇಕ ವಿಷಯವಸ್ತುಗಳನ್ನು ಇಟ್ಟುಕೊಂಡು ಸರಣಿಯಂತೆ ಕಲಾಕೃತಿಗಳನ್ನು ಇವರು ರಚಿಸಿದ್ದಾರೆ. ತಮ್ಮ ಕಲಾಕೃತಿಗಳನ್ನು ಮಕ್ಕಳಂತೆ ಪ್ರೀತಿಸುವ ಇವರು ಇನ್ನು ಕೆಲವೇ ತಿಂಗಳಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬಂದು ನಗರದ ಚಿತ್ರಕಲಾ  ಪೇಂಟಿಂಗ್ ತರಬೇತಿ ನೀಡುವ ಉತ್ಸಾಹದಲ್ಲಿದ್ದಾರೆ.

ಯುವ ಕಲಾವಿದರಿಗೆ ಸಲಹೆ
‘ಕಲಾವಿದರಿಗೆ ತಾಯ್ನಾಡಿನ ಬಗ್ಗೆ ಪ್ರೀತಿ ಇರಬೇಕು. ನಾಡಿನ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಬಿಂಬಿಸುವ ಕಲಾಕೃತಿಗಳನ್ನು ರಚಿಸಿದರೆ, ಮುಂದಿನ ಪೀಳಿಗೆಯವರು ನಮ್ಮ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವಾಗ ಇಂತಹ ಕಲಾಕೃತಿಗಳು ನೆರವಾಗಬಲ್ಲವು. ಹಾಗೆಯೇ ಬೇರೆಯವರ ಬಲವಂತಕ್ಕೆ ಈ ಕ್ಷೇತ್ರಕ್ಕೆ ಕಾಲಿಡಬೇಡಿ. ಕಲೆ ಎನ್ನುವುದು ಸಂಪೂರ್ಣವಾಗಿ ಅವರ ಇಚ್ಛೆಗೆ ಬಿಟ್ಟದ್ದು. ಆಸಕ್ತಿಯಿದ್ದವರು ಈ ಕ್ಷೇತ್ರಕ್ಕೆ ಬಂದರೆ ಯಶಸ್ಸು ಕಾಣಬಹುದು’ ಎನ್ನುತ್ತಾರೆ ಇಲಾಂಗೋ.

ಸ್ಥಳ: ಆರ್ಟ್ ಹೌಸ್ ಗ್ಯಾಲರಿ, ಪ್ಯಾಲೆಸ್ ರಸ್ತೆ, ವಸಂತನಗರ.
ಪ್ರದರ್ಶನದ ಅವಧಿ: ಜುಲೈ 8ರಿಂದ ಆಗಸ್ಟ್ 8.
ಸಮಯ: ಬೆಳಿಗ್ಗೆ 10.30ರಿಂದ ಸಂಜೆ 6.30  (ಭಾನುವಾರ ಹೊರತುಪಡಿಸಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT