ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಶಾಲೆಯ ಹೆಮ್ಮೆಯ ಮಕ್ಕಳು!

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡ ಶಾಲೆಗಳಲ್ಲಿಯೇ ತಮ್ಮ ಮಕ್ಕಳು ಶಿಕ್ಷಣ ಪಡೆಯಲಿ ಎಂದು ಬಯಸಿ, ಆ ಹಾದಿಯನ್ನು ಆರಿಸಿಕೊಂಡ ಕೆಲವು ಎಂಜಿನಿಯರಿಂಗ್‌ ಪದವೀಧರರು ನಗರದಲ್ಲಿ ಇದ್ದಾರೆ. ಅಂಥ ಮೂರು ದಂಪತಿಗಳ ಕನ್ನಡ ಪ್ರೀತಿಯ ಪರಿ ಇದು...

ಆಧುನೀಕರಣ, ನಗರೀಕರಣ ಮತ್ತು ಜಾಗತೀಕರಣಗಳ ಒತ್ತಡದಲ್ಲಿ ಕನ್ನಡತನ ಮರೆಯಾಗುತ್ತಿದೆ ಎಂಬ ಭಾವನೆ ನಮ್ಮಲ್ಲಿ ಮೂಡುವುದು ಸಹಜ. ಪ್ರಪಂಚದೆಲ್ಲೆಡೆ ಇಂಗ್ಲಿಷ್ ರಾರಾಜಿಸುತ್ತಿರುವ ಕಾಲಘಟ್ಟದಲ್ಲಿ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂಬ ಸಂಕಲ್ಪ ಹೊಂದಿರುವ ಐಟಿ-–ಬಿಟಿ ಮಂದಿ ನಮ್ಮ ಜೊತೆ ಇದ್ದಾರೆ ಎನ್ನುವುದು ಆಶ್ಚರ್ಯವಾದರೂ ಸಂತೋಷದ ವಿಷಯ. ಕೂಲಿ ಮಾಡುವ ಹಾಗೂ ಮನೆಗೆಲಸ ಮಾಡುವ ಕೆಳ ವರ್ಗದ ಜನ ಸಹ ಹೊಟ್ಟೆ-ಬಟ್ಟೆ ಕಟ್ಟಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆ ಸೇರಿಸುತ್ತಿರುವ ಈ ಸಂದರ್ಭದಲ್ಲಿ ಎಂಜಿನಿಯರಿಂಗ್, ಎಂ.ಎಸ್ಸಿ, ಎಲ್.ಎಲ್.ಬಿ. ಪದವಿ ಗಳಿಸಿ, ಉನ್ನತ ಹುದ್ದೆಗಳನ್ನು ಅಲಂಕರಿಸಿ, ಕೈತುಂಬಾ ಸಂಬಳ ಪಡೆಯುವ ಅನೇಕ ಕನ್ನಡಾಭಿಮಾನಿ ಪೋಷಕರು ಸದ್ದಿಲ್ಲದೆ ಕನ್ನಡ ಸೇವೆಯನ್ನು ಮಾಡುತ್ತಿದ್ದಾರೆ.

ಇನ್ಫೋಸಿಸ್ ಮತ್ತು ವಿಪ್ರೋ ಸಂಸ್ಥೆಗಳಲ್ಲಿ ಕೆಲಸ ಮಾಡಿ ಈಗ ಸ್ವಂತ ಸಂಸ್ಥೆಯನ್ನು ನಡೆಸುತ್ತಿರುವ ಸಾಫ್ಟ್‌ವೇರ್ ಎಂಜಿನಿಯರ್ ಎಚ್.ಎ.ಗಣೇಶ್ ಚೇತನ್ ಮತ್ತು ವಕೀಲರಾದ ಕಲ್ಪನಾ ಹೆಗಡೆ ದಂಪತಿ ತಮ್ಮ ಮಗಳು ಇಂಚರಾಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿದ್ದಾರೆ. ‘ಕನ್ನಡ ಮಾಧ್ಯಮದಲ್ಲಿ ನಮ್ಮ ಮಕ್ಕಳನ್ನು ಓದಿಸಬೇಕು ಎನ್ನುವುದು ಆದರ್ಶದ ಅಥವಾ ಅವಮಾನದ ವಿಚಾರವಲ್ಲ. ಅದು ನಂಬಿಕೆಯ ವಿಚಾರ. ನಾನು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸಂಚರಿಸಿದ್ದೇನೆ ಮತ್ತು ಅಲ್ಲಿನ ವಿದ್ಯಾಭ್ಯಾಸ ಮತ್ತು ಅವರ ಮಾತೃಭಾಷಾ ಶಿಕ್ಷಣದ ಬಗ್ಗೆ ಅನೇಕ ಅಧ್ಯಯನ ನಡೆಸಿದ್ದೇನೆ. ಅದರ ಪ್ರಕಾರ ಮಾತೃಭಾಷಾ ಪ್ರಾಥಮಿಕ ಶಿಕ್ಷಣ ಮಗುವಿನ ಬೌಧ್ಧಿಕ ಮತ್ತು ಮನೋವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆ ನಂಬಿಕೆಯಿಂದಾಗಿ ನಾವು ನಮ್ಮ ಮಗಳನ್ನು ಕನ್ನಡ ಶಾಲೆಗೆ ಸೇರಿಸಿದ್ದೇವೆ. ಅಲ್ಲದೆ, ನಮ್ಮ ಸಂಸ್ಥೆಯ ಮೂಲಕ ನಾವು ಒಂದು ಸಮೀಕ್ಷೆ ನಡೆಸಿ ಬೆಂಗಳೂರಿನ ಉತ್ತಮ ಖಾಸಗಿ ಕನ್ನಡ ಶಾಲೆಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದೇವೆ. ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಲು ಬಯಸುವ ಪೋಷಕರು ನಮ್ಮನ್ನು ಸಂಪರ್ಕಿಸಬಹುದು’ ಎನ್ನುತ್ತಾರೆ ಗಣೇಶ್ ಚೇತನ್.

‘ಕನ್ನಡ ಮಾಧ್ಯಮ ಶಾಲೆಗಳ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಇಂದು ಅನೇಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಕನ್ನಡ ಶಾಲೆಗಳು ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಅಭಿಪ್ರಾಯ ಪಡುತ್ತಾರೆ ಎಂಜಿನಿಯರ್ ಟಿ.ಜಯಪ್ರಕಾಶ್. ಹಾಗೆಂದುಕೊಂಡು ಪೋಷಕರು ನಿರಾಶರಾಗುವ ಅಗತ್ಯವಿಲ್ಲ. ಬೆಂಗಳೂರಿನಲ್ಲಿ ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳಿಗೆ ಕೊರತೆಯಿಲ್ಲ. ಅಂಥವುಗಳನ್ನು ಗುರ್ತಿಸಿ ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಅವರು ಆಶಿಸುತ್ತಾರೆ. ‘ಮಾತೃಭಾಷಾ ಶಿಕ್ಷಣದಿಂದ ಅನೇಕ ಲಾಭವಿದೆ. ಜಪಾನ್, ಜರ್ಮನಿ, ಕೊರಿಯಾ, ಇಸ್ರೇಲ್ ಮತ್ತು ಚೀನಾದಂತಹ ದೇಶಗಳು ತಮ್ಮ ದೇಶೀಯ ಭಾಷೆಗಳಲ್ಲೇ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನಗಳ ಅತ್ಯದ್ಭುತ ಪ್ರಾವೀಣ್ಯ, ನೈಪುಣ್ಯಗಳನ್ನು ಗಳಿಸಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವಾಗ ನಾವೇಕೆ ಇಂಗ್ಲಿಷನ್ನು ನಮ್ಮ ಮಕ್ಕಳ ಮೇಲೆ ಹೇರಿ ಕೃತಕ ಪ್ರತಿಷ್ಠೆಯನ್ನು ಮೆರೆಯಬೇಕು’ ಎಂದು ಅವರು ಪ್ರಶ್ನಿಸುತ್ತಾರೆ.

ಮತ್ತೊಬ್ಬ ಎಂಜಿನಿಯರ್ ಎಸ್.ವಲ್ಲೀಶ್ ಕುಮಾರ್ ಮತ್ತು ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಪದವೀಧರೆಯಾಗಿರುವ ಶ್ರುತಿ ಅವರು ತಮ್ಮ ಮಗ ಅಭಿಕ್ಷಿತನನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿರುವುದು ಹೆಮ್ಮೆಯ ಸಂಗತಿ. ‘ಮಾತೃಭಾಷಾ ಶಿಕ್ಷಣದ ಬಗ್ಗೆ ನಾನು ಅನೇಕ ಅಂತರರಾಷ್ಟ್ರೀಯ ವರದಿಗಳನ್ನು ಅಧ್ಯಯನ ಮಾಡಿದ್ದೇನೆ. ಯುನೆಸ್ಕೋ ಮತ್ತು ಬ್ರಿಟಿಷ್ ಕೌನ್ಸಿಲ್ ವರದಿಗಳು, ನಮ್ಮ ದೇಶದಲ್ಲೇ ೨೦೧೨ರಲ್ಲಿ ಬಿಡುಗಡೆಯಾದ ಪ್ರಥಮ್ ಸಂಸ್ಥೆಯ ಅಸರ್ ವರದಿಗಳು, ಪಟ್ನಾಯಕ್ ವರದಿಗಳು ಮಾತೃಭಾಷಾ ಶಿಕ್ಷಣಕ್ಕೆ ವಿಪರೀತ ಒತ್ತು ಕೊಟ್ಟಿವೆ. ಆದರೆ ನಮ್ಮಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ವೈಭವೀಕರಿಸುತ್ತಿರುವುದು ದುರಂತ. ಇಂಗ್ಲಿಷ್ ಇಲ್ಲದಿದ್ದರೆ ಕೆಲಸವಿಲ್ಲ, ಇಂಗ್ಲಿಷ್ ಕಲಿಯದಿದ್ದರೆ ಇತರರೊಡನೆ ಸ್ಪರ್ಧಿಸುವುದು ಸಾಧ್ಯವಿಲ್ಲ ಎಂಬ ಭಾವನೆಯಿಂದಾಗಿ ನಮ್ಮ ಮಕ್ಕಳಲ್ಲಿ ‘ಕೀಳರಿಮೆ’ ಮೂಡುತ್ತದೆ. ಇದನ್ನು ಹೋಗಲಾಡಿಸಲು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಚೆನ್ನಾಗಿ ಇಂಗ್ಲಿಷನ್ನು ಕಲಿತು ಇತರರೊಡನೆ ಸ್ಪರ್ಧಿಸಲು ಸಬಲರಾಗಬೇಕು’ ಎನ್ನುವುದು ವಲ್ಲೀಶ್ ಅವರ ಅನುಭವ ನುಡಿ.

ಟೊಯೋಟಾ ಕಂಪೆನಿಯಲ್ಲಿ ತಾಂತ್ರಿಕ ಪರಿಣಿತರಾಗಿರುವ ಆನಂದ್ ಜೋಷಿ ಅವರ ಮಗ ಸಂಕರ್ಷಣ ಕನ್ನಡ ಮಾಧ್ಯಮದಲ್ಲಿ ಕಲಿತು ಈಗ ಎಂಜಿನಿಯರಿಂಗ್ ಓದುತ್ತಿದ್ದಾನೆ. ಮತ್ತೊಬ್ಬ ಮಗ ಸಂಕೀರ್ತನ ಸಹ ಕನ್ನಡ ಮಾಧ್ಯಮದಲ್ಲಿ ಕಲಿತು ಶೇಕಡಾ ೯೩ಕ್ಕೂ ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದಾನೆ. ಇದನ್ನು ಉದಾಹರಣೆ ನೀಡುವ ಆನಂದ್ ಅವರು, ‘ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳು ಯಾವುದರಲ್ಲೂ ಕಡಿಮೆಯಿರುವುದಿಲ್ಲ. ಅವರಲ್ಲಿ ಸೃಜನಶೀಲತೆ ಮತ್ತು ಅಲೋಚನಾಶಕ್ತಿ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಹಿಂದೆ ಬೀಳಬೇಕಾದ ಅಗತ್ಯವಿಲ್ಲ’ ಎನುತ್ತಾರೆ.

ಪತ್ನಿಯರ ಸಹಕಾರ
ಅನೇಕ ವೇಳೆ ತಂದೆಯರು ತಮ್ಮ ಮಕ್ಕಳನ್ನು ಕನ್ನಡದಲ್ಲಿ ಓದಿಸಲು ಉತ್ಸುಕರಾಗಿದ್ದರೂ ತಾಯಿಯರು ಅದಕ್ಕೆ ಒಪ್ಪದಿರುವ ನಿದರ್ಶನಗಳಿರುತ್ತವೆ. ಆದರೆ ಈ ನಾಲ್ವರು ದಂಪತಿಗಳು ಸುಶಿಕ್ಷಿತರಾಗಿರುವುದರಿಂದ ಅವರಿಗೆ ಆ ಸಮಸ್ಯೆ ಎದುರಾಗಲಿಲ್ಲ. ತಾಯಿಯರೂ ತಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವುದನ್ನು ಸಂತೋಷದಿಂದ ಸಮರ್ಥಿಸಿಕೊಳ್ಳುತ್ತಾರೆ.
ಈ ನಾಲ್ವರು ದಂಪತಿಗಳು ನಿಜವಾದ ಅರ್ಥದಲ್ಲಿ ‘ಕನ್ನಡಾನುಷ್ಠಾನ’ ಮಾಡುತ್ತಿದ್ದಾರೆ. ಇಂಥ ಅನೇಕ ಪೋಷಕರು ತಮ್ಮ ಪಾಡಿಗೆ ತಾವು ಕನ್ನಡ ನಾಡು–-ನುಡಿಯ ಸೇವೆಯನ್ನು ಅಬ್ಬರವಿಲ್ಲದೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT