ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದುಹೋದ ನಮ್ಮತಿಂಡಿ

Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಅದೆಂತಹ ಸಂವೇದನಾ ಶೂನ್ಯ ಅಸಾಮಿಯೇ ಆದರೂ ಬಾಲ್ಯ ನೆನಪಾದರೆ ಸಾಕು ಪುಳಕಿತನಾಗುತ್ತಾನೆ. ಈಗಿನ ಕಣ್ಣೆದುರಿಗಿರುವ ಹೈಟೆಕ್ ಬಾಲ್ಯವನ್ನು ಕಂಡರೆ, ಅದ್ಭುತವಾದ ರಸಕ್ಷಣಗಳು ಪುಟ್ಟ ಬೊಗಸೆಗಳಿಂದ ದೂರ ನಿಂತವಲ್ಲಾ ಎಂಬ ಕೊರಗು ಕಾಡುತ್ತದೆ. ಎಳೆಮಕ್ಕಳ ಕೈಗೆ ಎಟಕುತ್ತಿದ್ದ ಗೂಡಂಗಡಿಗಳು ಈಗಿಲ್ಲ. ಹೊಸ ಅಂಗಡಿ ಮುಂಗಟ್ಟಿನ ಫಳ್ಳನೆ ಹೊಳೆಯುವ ಗಾಜಿನ ಬಾಟಲಿಗೆ ಆಧುನಿಕ ಅರ್ಥ.

ಅದರ ನೆತ್ತಿಯಲ್ಲಿ ನೇತುಬಿದ್ದಿರುವ ಕುರ್‌ಕುರೇ, ಲೇಸುಗಳ ಉಬ್ಬಿದ ಪ್ಯಾಕೆಟ್ಟುಗಳನ್ನು ಕಂಡರೆ ಬಾಲ್ಯದಲ್ಲಿ ನಾವು ಉಬ್ಬಿದ ದಿನಗಳು ಕಣ್ಮುಂದೆ ಬರುತ್ತವೆ. ಆ ದಿನಮಾನದ ತಿಂಡಿಗಳು ನೆನಪಿಗೆ ಬರಲು ಅದೇ ನೆಪ. ಈಗಿನ ತಿಂಡಿಗಳ ಸಾಲಿನಲ್ಲಿ ಅದ್ಯಾವುದೂ ಕಾಣಿಸುವುದಿಲ್ಲ. ಒಂದೊಮ್ಮೆ ಕಂಡರೂ ಅವುಗಳ ಸ್ವರೂಪ ನಮ್ಮ ಕಾಲದ್ದಲ್ಲ.

ನಮ್ಮೆಲ್ಲರ ಬಾಲ್ಯದ ಫ್ಲೇವರುಗಳಿರುವುದು ಕಾಕಾ ಅಂಗಡಿ, ಪೆಟ್ಟಿ ಅಂಗಡಿ, ಶೆಟ್ಟರಂಗಡಿಯ ಮಬ್ಬು ಮಬ್ಬು ಬಾಟಲಿಗಳಲ್ಲಿಯೇ. ಜೇಬಲ್ಲಿ ಐದೇ ಐದು ಪೈಸೆಯಿದ್ದರೂ ಚಿಕ್ಕ ಮೂಸಂಬಿ ತೊಳೆ ಗಾತ್ರದ ನಿಂಬೆಹುಳಿ, ಕಾಫಿ ಬೀಜ, ಬಾಯಿಬಣ್ಣ, ಶುಂಠಿ ಪೆಪ್ಪರಮಿಂಟ್, ಹುಣಸೆ ಹುಳಿ ಕೈಲಿರುತ್ತಿತ್ತು. ಅದರಲ್ಲಿಯೇ ಆಸುಪಾಸು ನೀರೂರುವ ಬಾಯಿಗಳಿಗೂ ಒಂದೊಂದು ಪೀಸು ಹಾಕಿ ಇದ್ದುದ್ದರಲ್ಲಿಯೇ ದೊಡ್ಡಭಾಗ ಚಪ್ಪರಿಸುವ ಸುಖವೇ ಬೇರೆಯಾಗಿತ್ತು.

ಇಪ್ಪತ್ತೈದು ಪೈಸೆಗೊಂದು ಕಂಬರ್‌ಗಟ್ಟ, ಅದೇ ಮೊತ್ತಕ್ಕೆ ಸಿಗುತ್ತಿದ್ದ ಪ್ಯಾರಿಸ್ ಎಂಬ ಫೇಮಸ್ ಚಾಕೊಲೇಟ್ ಐವತ್ತು ಪೈಸೆ  ಕೊಟ್ಟರೆ ಪುಟ್ಟ ಕೈಗಳ ತುಂಬಾ ತುಂಬಿ ಉದುರುವಷ್ಟು ಬಿಲ್ಲೆ ಬಿಲ್ಲೆ ಬಿಳಿ ಬಣ್ಣದ ಶುಂಠಿ ಪೆಪ್ಪರ್‌ಮೆಂಟ್. ಅವೆಲ್ಲಾ ಇಂದು ಕಣ್ಮರೆಯಾಗಿವೆ. ಒಟ್ಟಾರೆಯಾಗಿ ಅಂದಿನ ಶಾಲಾ ದಿನಗಳ ಲೀಷರ್ ಪೀರಿಯಡ್ಡಿನಲ್ಲಿ ಜೇಬಲ್ಲಿ ಒಂದು ರೂಪಾಯಿ ಇದ್ದವನೇ ಮಹಾಶೂರ!
ಆಗಿನ ಬಹುತೇಕರಿಗೆ ಬಾಲ್ಯದಲ್ಲಿ ಚಪ್ಪರಿಸಿದ ಪ್ರತಿ ತಿಂಡಿಯೊಂದಿಗೆ ಬಡತನದ `ಘಮಲು' ಅಂಟಿಕೊಂಡಂತೆ ಭಾಸವಾಗುತ್ತದೆ.

ಮನೆಯಲ್ಲಿ ಕೊಟ್ಟ ಒಂದು ರೂಪಾಯಿಯನ್ನು ಒಡಹುಟ್ಟಿದವರೊಂದಿಗೆ ಪಾಲು ಮಾಡಿದರೂ ತಿಂಡಿಗೇನೂ ತತ್ವಾರವಿರುತ್ತಿರಲಿಲ್ಲ. ಪೆಪ್ಪರ್‌ಮಿಂಟ್ ಜಾಸ್ತಿ ಚೀಪಿದರೆ ಬೇಗ ಖರ್ಚಾದೀತೆಂದು ಬಾಯಿಂದ ತೆಗೆದು ಒರೆಸಿ ಜೇಬಿಗೆ ತುರುಕುತ್ತಿದ್ದ ನೆನಪುಗಳು ಬಹುತೇಕರಲ್ಲಿರುತ್ತವೆ. ಇಂತಹ ತಿಂಡಿಗಳಲ್ಲಿಯೇ ಅತ್ಯಂತ ಲಕ್ಷುರಿ ಅನ್ನಿಸುತ್ತಿದ್ದದ್ದು ಕೆಂಪು ಕೆಂಪಗಿನ ರಸಗುಲ್ಲ.

ಅದು ಮಾತ್ರ ಐವತ್ತು ಪೈಸೆಗೆ ಒಂದೇ ಸಿಗುತ್ತಿತ್ತು. ಅದು ಒಳಗೆಲ್ಲಾ ಸಕ್ಕರೆ ಪಾಕ ಬಚ್ಚಿಟ್ಟುಕೊಂಡಿದ್ದ ತಿನಿಸು. ಆದರೆ ಇದ್ದಕ್ಕಿದ್ದ ಹಾಗೆ ಆ ಅಂಗಡಿಯ ರಸಗುಲ್ಲದಲ್ಲಿ ಹುಳು ಬಿದ್ದಿದೆ ಎಂಬ ವದಂತಿ! ಹುಳ ಹಾಳು ಬಿದ್ದು ಹೋಗಲಿ, ಹಾವು ಬಿದ್ದಿದ್ದರೂ ಎತ್ತಿ ಎಸೆದು ಸಕ್ಕರೆ ಪಾಕ ಸವಿಯಲು ಹವಣಿಸುತ್ತಿದ್ದ ಐನಾತಿ ಮನಸು.

ಇವತ್ತಿನಂತೆ ನೋಟು ಕೊಟ್ಟರೆ ಚಾಟ್ಸ್ ಎನ್ನುವ ಅನಿವಾರ್ಯ ಕೂಡ ಆ ದಿನಗಳಲ್ಲಿ ಇರಲಿಲ್ಲ. ಮನೆಯಲ್ಲಿ ತುಕ್ಕು ಹಿಡಿದು ಬಿದ್ದಿದ್ದ ಕಬ್ಬಿಣ, ನಟ್ಟು-ಬೋಲ್ಟು, ಸ್ಕ್ರೂ ಏನು ಕೊಟ್ಟರೂ ತೂಗಿ ಅಳೆದು ಅದಕ್ಕಿಷ್ಟು ಮಿಠಾಯಿ ಕೊಟ್ಟು, ಮಕ್ಕಳ ಮನಸ್ಸಿನ ಮೇಲೆ ಸಿಹಿ ಸಿಂಪಡಿಸುತ್ತಿದ್ದ `ಪಾಪ್ಪನ್‌ಪಪ್ಪು'ಗಳಿದ್ದರು. ನಾಲ್ಕಾಣಿ ಎಂಟಾಣಿಗೆ ಬುರಬುರನೆ ಗಾಲಿ ಸುತ್ತಿ, ಸಣ್ಣದೊಂದು ಕಡ್ಡಿಯ ಸುತ್ತ ಅಜ್ಜಿಕೂದಲು ಸುತ್ತಿ ಕೊಡುತ್ತಿದ್ದ ಮಿಠಾಯಿ ಮಾಮಂದಿರಿದ್ದರು.

ಕೆಂಪು ಕೆನ್ನೆ, ಕಾಡಿಗೆ ಬಳಿದ ಕಣ್ಣುಗಳು, ಬೈತಲೆ ಬೊಟ್ಟು, ಕಾಸಿನ ಸರ, ಯಾವತ್ತಿಗೂ ತೊರೆಯದ ಜಡೆ ಕುಚ್ಚು, ನೂರೆಂಟು ಬಣ್ಣದ ರೇಷಿಮೆ ಲಂಗದ ಬೊಂಬೆಯ ಕೈಗಳನ್ನು ಕುಣಿಸಿ ಮನರಂಜಿಸುತ್ತಲೇ ಎಂಟಾಣಿ ನಾಣ್ಯ ಕೊಟ್ಟವರ ಕೈಗೊಂದು ರಬ್ಬರಿನಂತಹ ಮಿಠಾಯಿ ತುಣುಕನ್ನು ಎಳೆದುಕೊಂಡು ಕ್ಷಣಮಾತ್ರದಲ್ಲಿ ಬೊಂಬೆ ಮಾಡಿ, ಬಾತುಕೋಳಿಯನ್ನಾಗಿ, ನವಿಲು, ಚಿಟ್ಟೆ, ಮಾನವ, ಕೈಗಡಿಯಾರದ ಆಕಾರಕ್ಕೆ ಬದಲಿಸಿಕೊಡುತ್ತಿದ್ದ ಬೊಂಬೆ ಮಿಠಾಯಿ ಮಾರುವವರಿದ್ದರು.

ಅಂದಿನ ಅಂಗಡಿ ತಿಂಡಿಗಳು ದೇಹಕ್ಕೆ ಸಂಪೂರ್ಣ ಪೌಷ್ಟಿಕಾಂಶ ನೀಡದಿದ್ದರೂ ತೀರಾ ಅನಾರೋಗ್ಯವನ್ನು ತಂದೊಡ್ಡುತ್ತಿರಲಿಲ್ಲ. ಆದರೆ ಇಂದಿನ ಪಿಜ್ಜಾ, ಬರ್ಗರ್, ಫಿಂಗರ್ ಚಿಪ್ಸ್, ಚಾಕೊಲೇಟ್‌ಗಳು ಎಳ್ಳಷ್ಟೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಅವನ್ನೇ ಬಯಸುವ ಮಕ್ಕಳು. ಮಕ್ಕಳ ಡಬ್ಬಿಗೆ ಮ್ಯಾಗಿ ಮಾಡಿ ಹಾಕಿಕೊಟ್ಟರೆ ಸಾಕು ಎನ್ನುವ ಮನಸ್ಥಿತಿಯ ಮಾತೆಯರು ಹೆಚ್ಚಾಗುತ್ತಿದ್ದಾರೆ.

ಬಿಲ್ಲೆ ಗಾತ್ರದ ಶುಂಠಿ ಪೆಪ್ಪರ್‌ಮೆಂಟ್ ಈಗ ತೂತು ಬಿದ್ದು ಪೋಲೊ ಆಗಿದೆ. ಕೆಂಪಗಿನ ರಸಗುಲ್ಲ ತನ್ನ ಹಿಂದಿನ ಸಿಹಿ ಕಳೆದುಕೊಂಡಿದೆ. ನಿಂಬೆಹುಳಿ ಚಾಕೊಲೇಟ್ ಅಂತೂ ಅಪರೂಪವಾಗಿದೆ. ಇರುವುದರಲ್ಲಿ ಹಳದಿ ಬಣ್ಣದ ಬೋಟಿ, ಚೌಕಾಕಾರದ ಹಾಲ್ಕೋವಾದಂತಹ ತಿನಿಸುಗಳು ಇನ್ನೂ ಸಿಗುತ್ತಿವೆಯಾದರೂ ಕೊಳ್ಳುವ ಕೈಗಳಿಲ್ಲದೆ ಮುಗ್ಗಲು ಹಿಡಿದಿವೆ.

ಈಗಿನ ಬಾಲ್ಯ ಹಳೆಕಾಲದ ಮಜದ ಸಂಗತಿಗಳಿಂದ ವಂಚಿತವಾಗಿದೆ ಎಂದು ನಾವು ಅಂದುಕೊಳ್ಳುತ್ತೇವೆ. ಈಗಿನ ಮಕ್ಕಳ ಮಜದ ರಹದಾರಿಗಳೇ ಬೇರೆ. ಕುರ್‌ಕುರೇ, ಲೇಸ್, ಕಿಂಡಲ್ ಜಾಯ್‌ಗಳ ಸದ್ದಿನ ಮಧ್ಯೆ ಹಳೇ ತಿಂಡಿಗಳ ನೆನಪು ಮುತ್ತಿಕೊಳ್ಳುತ್ತವೆ. ಬಹುತೇಕ ತಲೆಮಾರುಗಳ ಬಾಲ್ಯದ ಆಸೆ, ನಿರಾಸೆಗಳ ನೆನಪನ್ನು ಅಲಂಕರಿಸಿರುವುದು ಈ ತಿಂಡಿಗಳೇ.

ಆದರೀಗ ಅಂಗಡಿ ಮುಂಗಟ್ಟಿನಲ್ಲಿ `ಕುಲ್ಕುಲೇ' ಕೊಡಿ ಎಂಬ ತೊದಲು ಮಾತು ಕೇಳಿದ ತಕ್ಷಣ ಪೆಪ್ಪರ್‌ಮಿಂಟ್ ನೆನಪಾಗುತ್ತದೆ. ನಿಂಬೆಹುಳಿ ಚಾಕೊಲೇಟಿನ ಅಗೋಚರ ರುಚಿ ನಾಲಗೆಯಲ್ಲಿ ನಲಿದಾಡಿ ಹುಳಿಹುಳಿ ನೆನಪುಗಳು ಕದಲುತ್ತವೆ. ಆ ಮೂಲಕ ಚಂದನೆಯ, ರಸವತ್ತಾದ ಬಾಲ್ಯ ಪರ್ವವೊಂದು ಆಧುನಿಕತೆಯ ಸೀಸೆಯಲ್ಲಿ ರೂಪಾಂತರ ಹೊಂದುತ್ತಿರುವ ವಾಸ್ತವ ವಿಷಾದ ಹುಟ್ಟಿಸುತ್ತದೆ.

ಬದಲಾಗುತ್ತಿರುವ ಜೀವನಶೈಲಿಗೆ ನಮ್ಮ ಆಹಾರಾಭ್ಯಾಸವನ್ನೂ ಬದಲಿಸಿಕೊಳ್ಳಬೇಕೆಂದೇನೂ ಇಲ್ಲ. ರಾಗಿಮುದ್ದೆ, ಚಪಾತಿ, ಜೋಳದ ರೊಟ್ಟಿಯ ಮುಂದೆ ಯಾವ ಮೃಷ್ಟಾನ್ನ ಭೋಜನವೂ ನಿಲ್ಲುವುದಿಲ್ಲ ಎಂಬುದು ವೈದ್ಯರ ಬಾಯಿಂದ ಕೇಳಿದ ಮೇಲೆ ಪಥ್ಯವಾಗುತ್ತದೆ!
ಆರೋಗ್ಯಕ್ಕೆ ಹಾನಿ ಮಾಡದ ನಮ್ಮ ಬಾಲ್ಯದ ತಿನಿಸುಗಳನ್ನು ಒಮ್ಮೆ ನಮ್ಮ ಮಕ್ಕಳಿಗೂ ತಿನ್ನಿಸೋಣ.  

ಅಜ್ಜಿ ಗುರುತಿಸಿದರಷ್ಟೆ ಆಹಾರ
ನಿಮ್ಮ ಮುತ್ತಜ್ಜಿ ಅಥವಾ ಅಜ್ಜಿಗೆ ಯಾವುದು ಆಹಾರ ಎಂದು ಗುರುತಿಸಲು ಬರುವುದಿಲ್ಲವೋ ಅದನ್ನು ದಯವಿಟ್ಟು ತಿನ್ನಬೇಡಿ. ಯಾವುದೇ ಬೇಕರಿಗೆ ಹೋದರೆ ನಮ್ಮ ಕಣ್ಣಿಗೆ ಹಬ್ಬವೆನಿಸುವ ಹಾಗೆ ವೈವಿಧ್ಯಮಯ ತಿನಿಸುಗಳು ಕಾಣಬಹುದು. ಆದರೆ ಅವುಗಳ ತಯಾರಿಕೆಗೆ ಬಳಸುವ ಸಾಮಾನ್ಯವಾದ ಪದಾರ್ಥಗಳೆಂದರೆ ಸಕ್ಕರೆ, ವನಸ್ಪತಿ ಎರಡೇ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇವು ನಮ್ಮ ಆರೋಗ್ಯಕ್ಕೆ ತೀರಾ ಅಪಾಯಕಾರಿಯಾದ ಪದಾರ್ಥಗಳು.

ಆದರೆ ಇಂದು ಸಿಗುವ ಬಹುತೇಕ ತಿಂಡಿ ತಿನಿಸುಗಳೆಲ್ಲಾ ಹಾನಿಕಾರಕ ಅಂಶಗಳಿಂದ ಕೂಡಿವೆ. ಹಾಗಾಗಿ ಪೋಷಕರು ನಮ್ಮ ಮೂಲ ಬೇರುಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿ, ಆಹಾರ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಪೌಷ್ಟಿಕ ಆಹಾರ ಸೇವಿಸದ ಮಗು ಅನಾರೋಗ್ಯಕ್ಕೆ ತುತ್ತಾಗುವುದರಿಂದ ಮಕ್ಕಳ ಬಾಯಿ ರುಚಿಗೆ ಪ್ರಾಧಾನ್ಯ ಸಲ್ಲದು. ದೇಹ ಹಾಗೂ ಮಾನಸಿಕ ಸದೃಢತೆಗೆ ಸಹಾಯಕವಾಗುವ ಆಹಾರ ನೀಡಿ.  
-ಕೆ.ಸಿ. ರಘು, ಆಹಾರ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT