ಸಮಾರು 30 ವರ್ಷಗಳ ಹಿಂದಿನ ಮಾತು! ಆಗತಾನೆ ದ್ವಿತೀಯ ಪಿಯುಸಿ ಮುಗಿಸಿದ ನಾನು, ರಜಾ ದಿನಗಳನ್ನು ಸವಿಯುತ್ತಿದ್ದೆ. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಅವಕಾಶವಿರಲಿಲ್ಲ. ಆದ್ದರಿಂದ ನನ್ನ ತಂದೆ ‘ಓದು ಸಾಕು, ಮನೆಯಲ್ಲಿ ಕೂರು’ ಎನ್ನುತ್ತಿದ್ದರು.

ಮುಂದೆ ಡಿಗ್ರಿ ಓದಿ ಕಾನೂನು ಪದವಿ ಪಡೆಯಬೇಕು ಎನ್ನುವ ಕನಸು ಮಾಸಲು ಶುರುವಾಗಿತ್ತು. ಆದರೂ ಕೋಪಿಷ್ಟರಾದ ಅಪ್ಪನ ಮುಂದೆ ದಿನವೂ ನಿಂತು ಅಂಗಲಾಚುವುದೇ ಕೆಲಸವಾಯಿತು. ಮನೆಯು ಗ್ರಾಮೀಣ ಪ್ರದೇಶದಲ್ಲಿ ಇದ್ದ ಕಾರಣ ದೂರದ ಊರಿಗೆ ಹೋಗಿ ಓದುವುದು ಕನಸಿನ ಮಾತಾಗಿತ್ತು. ಆದರೂ ಮನದ ಮೂಲೆಯಲ್ಲಿ ಓದುವ ಹಂಬಲ ಪುಟಿದೇಳುತ್ತಿತ್ತು.

ಹೀಗಿರುವಾಗ ಒಂದು ದಿನ. ಕುಕ್ಕೆ ಸುಬ್ರಹ್ಮಣ್ಯದಲ್ಲಿಯೇ ಡಿಗ್ರಿ ಕಾಲೇಜು ಪ್ರಾರಂಭವಾಗಲಿದೆ ಎಂಬ ಸುದ್ದಿ ಬಂತು. ನಮ್ಮ ಊರು ಸ್ವಲ್ಪ ಹತ್ತಿರವೇ, ಎಂದರೆ ಕೇವಲ ಮುಕ್ಕಾಲು ಗಂಟೆಯ ಹಾದಿಯಲ್ಲಿತ್ತಷ್ಟೆ. ದಿನವೂ ಹೋಗಿ ಬರಬಹುದು ಎಂದು ಖುಷಿಯಲ್ಲಿ ತೇಲಾಡಿದೆ. ಅಪ್ಪನ ಮುಂದೆ ಪ್ರಸ್ತಾಪವಿಟ್ಟಾಗ ‘ಈ ವರ್ಷವೇ ಪ್ರಾರಂಭವಾದರೆ ಸೇರಿಕೊ’ ಎಂದು ಅರೆಮನಸ್ಸಿನಿಂದ ಒಪ್ಪಿಗೆಯಿತ್ತರು.

ಸದ್ಯ ಕಾಲೇಜು ಅದೇ ವರ್ಷ ಆರಂಭವಾಯಿತು. ಜೂನ್ನಲ್ಲಿ ಶುರುವಾಗಬೇಕಾದ ತರಗತಿಗಳು ಸೆಪ್ಟೆಂಬರ್ನಲ್ಲಿ ಪ್ರಾರಂಭವಾದವು. ಬಿ.ಎ. ಸೇರಿದ ನನ್ನ ಜೊತೆಗೆ 13 ಜನ ಸಹಪಾಠಿಗಳಿದ್ದರು. ಬಿ.ಕಾಂ.ಗೆ ಕೇವಲ 5 ಜನ ಸೇರಿದ್ದರು. ತರಗತಿಗಳು ಶುರುವಾಗುವ ಸಮಯದಲ್ಲಿ ಸರಿಯಾದ ಕಟ್ಟಡವಿರಲಿಲ್ಲವಾದ್ದರಿಂದ ದೇವಸ್ಥಾನದ ಛತ್ರಗಳಲ್ಲಿಯೇ ಪಾಠ ಮಾಡತೊಡಗಿದರು. ಅತ್ಯಂತ ಶ್ರದ್ಧೆ ಹಾಗೂ ಖುಷಿಯಿಂದ ಕಳೆದ ವರ್ಷ ಅದಾಗಿತ್ತು.

ಎರಡನೇ ವರ್ಷದಲ್ಲಿದ್ದಾಗ, ಕಟ್ಟಡ ನಿರ್ಮಾಣಗೊಂಡಿತ್ತು. ನಮ್ಮ ಬೆವರಿನ ಹನಿಗಳಿಂದ ಕಷ್ಟಪಟ್ಟು ಮಣ್ಣು ಹಾಕಿ ಸಹಾಯ ಮಾಡಿ ಕಟ್ಟಿದ ಕಾಲೇಜು ಅದು. ನಮ್ಮದು ಮೊದಲ ಬ್ಯಾಚ್. ಕೇವಲ 18 ಮಂದಿ ಇದ್ದುದರಿಂದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಲೇಬೇಕಿತ್ತು. ಹಾಗಾಗಿ ಅಲ್ಲಿ ನಮ್ಮದೇ ರಾಜ್ಯಭಾರ. ನಮ್ಮ ತರಗತಿಯಲ್ಲಿ ನಾಗೇಶ್ ಎಂಬ ಹುಡುಗನಿದ್ದ. ಅವನು ಯಾವಾಗಲೂ ಅಳುಕಿಲ್ಲದೆ ವೇದಿಕೆ ಹತ್ತಿ ಹಾಡುವುದು ಎಲ್ಲರಿಗೂ ಗೊತ್ತಿತ್ತು.

ಮೊದಲ ಬಾರಿ ಅವನು ಸ್ಟೇಜ್ ಹತ್ತಿದಾಗ ‘ಭಾರಿ ಧೈರ್ಯವುಂಟು ಮಾರಾಯ’ ಎಂದು ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಅಷ್ಟೇನೂ ಉತ್ತಮ ಗಾಯಕ ಅಲ್ಲದೇ ಇದ್ದರೂ ‘ಕೋಡಗನ ಕೋಳಿ ನುಂಗಿತ್ತಾ’ ಎಂಬ ಹಾಡನ್ನು ಶ್ರದ್ಧೆಯಿಂದ ಹಾಡಿದ್ದ. ಎರಡನೇ ಬಾರಿ ವೇದಿಕೆ ಹತ್ತಿದ್ದಾಗ ಓಹೋ ಇಂದು ಬೇರೆ ಹಾಡು ಹಾಡಬಹುದು ಎಂದು ಕಾದದ್ದೇ ಬಂತು. ಅವನು ಮತ್ತೆ ಅದೇ ಹಾಡನ್ನು ಹಾಡಿ ಮುಗಿಸಿದ.

ಹೀಗೆ ಇಡೀ ವರ್ಷ ಯಾವುದೇ ಕಾರ್ಯಕ್ರಮ ನಡೆದರೂ ‘ಕೋಡಗನ ಕೋಳಿ ನುಂಗಿತ್ತಾ’ ಎಂದು ಅದೇ ರಾಗ ಎಳೆಯುತ್ತಿದ್ದ. ನಮಗೋ ಅವನು ವೇದಿಕೆ ಹತ್ತಿದನೆಂದರೆ ನಗು ಬರುತ್ತಿತ್ತು. ಮೂರನೇ ವರ್ಷಕ್ಕೆ ಕಾಲಿಟ್ಟ ನಾವು ಉದ್ಘಾಟನಾ ಸಮಾರಂಭದಲ್ಲಿ ಕೂತಿರುವಾಗ, ಯಾರಾದರೂ ಹಾಡು ಹೇಳುವವರಿದ್ದರೆ ಬನ್ನಿ ಎಂದು ಕರೆದಾಗ ನಮ್ಮ ನಾಗೇಶ ಎದ್ದು ನಿಂತ. ಕೂಡಲೇ ಬಿ.ಕಾಂ.ನಲ್ಲಿ ಇದ್ದ ಸಹಪಾಠಿ ಗಣೇಶ, ‘ಕೋಡಗನಾ ಕೋಳಿ ನುಂಗಿತ್ತಾ’ ಎಂದು ಜೋರಾಗಿ ಹಾಡಿಯೇ ಬಿಟ್ಟ.

ಒಮ್ಮೆಲೆ ಇಡೀ ಸಭೆ ನಕ್ಕರೂ ನಾಗೇಶ ನಿಧಾನಕ್ಕೆ ಹೋದ. ನಾವೆಲ್ಲರೂ ‘ಹೋ ಈ ವರ್ಷ ಹಾಡು ಬದಲಾಗಿರಬೇಕು’ ಎಂದು ಎಣಿಸುವಾಗಲೇ, ‘ಕೋಡಗನ ಕೋಳಿ ನುಂಗಿತ್ತಾ’ ಹಾಡು ಕಿವಿಗೆ ಬಿದ್ದಿತು. ಇವನದು ಹಳೇ ಟೇಪ್ ರೆಕಾರ್ಡರ್, ಅದೇ ರಾಗ ಅದೇ ತಾಳ ಎಂದು ಇಡೀ ಸಭೆ ಹುಚ್ಚೆದ್ದು ನಕ್ಕಿತು. ಈಗಲೂ ಎಲ್ಲಿಯಾದರೂ ‘ಕೋಡಗನ ಕೋಳಿ ನುಂಗಿತ್ತಾ’ ಹಾಡು ಕೇಳಿದರೆ ನಗು ಬರದೇ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.