ಬೇಸಿಗೆಯಂತಹ ಸಂದರ್ಭದಲ್ಲಿ ಬಿಸಿಲಿನ ತಾಪವನ್ನು ತಡೆಯುವಂತಹ ಬಟ್ಟೆಯನ್ನು ಧರಿಸುವುದಕ್ಕೆ ಮಹಿಳೆಯರು ಮೊದಲ ಆದ್ಯತೆ ನೀಡಬೇಕು. ತಾಪ ಚರ್ಮಕ್ಕೆ ಹೆಚ್ಚು ತಾಗದಂತೆ ಹಾಗೂ ಬಿಸಿಲಿನ ಬೇಗೆಯನ್ನು ತಡೆಯುವ ಬಟ್ಟೆಯನ್ನು ಧರಿಸಬೇಕು. ಇದರಲ್ಲಿ ನಾನಾ ರೀತಿಯ ಉಡುಪುಗಳು ಸಿಗುತ್ತವೆ. ಬೇಸಿಗೆ ಉಡುಪುಗಳೆಂದೇ ಮಹಿಳೆಯರಿಗೆ ಲಭ್ಯವಾಗುತ್ತವೆ.
ಮಾರುಕಟ್ಟೆಯಲ್ಲಿ ಟೆರ್ರಿಕಾಟ್ ಸೇರಿದಂತೆ ನಾನಾ ಪ್ರಕಾರದ ಬಟ್ಟೆಗಳ ಸಾಮ್ರಾಜ್ಯವೇ ಇದೆ. ಆದರೆ, ಬೇಸಿಗೆಯ ಸಂದರ್ಭದಲ್ಲಿ ಇವುಗಳಿಂದ ದೂರವಿದ್ದರೆ ಒಳಿತು. ಹೆಚ್ಚಾಗಿ ಹತ್ತಿ ಬಟ್ಟೆಗಳನ್ನೇ ಧರಿಸಿ. ಇವುಗಳು ಸೂರ್ಯನ ಪ್ರಖರತೆಯನ್ನು ತಡೆಯುವ ಶಕ್ತಿ ಹೊಂದಿರುತ್ತವೆ. ಹೊರಗಿನ ಶಾಖ ಹೀರಿಕೊಂಡು ದೇಹ ತಂಪಾಗಿಡುತ್ತದೆ. ಇಂತಹ ಬಟ್ಟೆಗಳಿಂದ ದೇಹದ ಚರ್ಮ ಕಳೆಗುಂದುವುದನ್ನು ತಪ್ಪಿಸಬಹುದು.
ಬೇಸಿಗೆಯಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನೇ ಧರಿಸಿದರೆ, ಇವು ದೇಹದ ತಾಪ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಇವು ಸೂರ್ಯನ ಕಿರಣಗಳನ್ನು ಅಥವಾ ಶಾಖವನ್ನು ತಡೆಯುತ್ತವೆ. ಇದರಿಂದ ಹೆಚ್ಚು ಸೆಖೆಯಾಗುವುದು ತಪ್ಪುತ್ತದೆ. ಆದರೆ, ಕಪ್ಪು ಬಣ್ಣದ ಬಟ್ಟೆಗಳು ಹೆಚ್ಚು ಶಾಖ ಚರ್ಮಕ್ಕೆ ತಗಲುವಂತೆ ಮಾಡುತ್ತದೆ. ಇದರಿಂದ ಸಹಜವಾಗಿಯೇ ಬೆವರುವುದು ಹೆಚ್ಚಾಗುತ್ತದೆ.
ಸಾಮಾನ್ಯವಾಗಿ ಯುವತಿಯರು ಟೈಟ್ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಅನ್ನೇ ಬಳಸುತ್ತಾರೆ. ಆದರೆ, ಈ ರೀತಿಯ ಉಡುಪು ಬೇಸಿಗೆ ವೇಳೆ ಧರಿಸಿದರೆ ದೇಹದಿಂದ ದುರ್ಗಂಧ ಬೀರುವ ಸಾಧ್ಯತೆ ಹೆಚ್ಚು.
ಬಿಗಿ ಉಡುಪುಗಳನ್ನು ಧರಿಸುವುದರಿಂದ ಗಾಳಿಯಾಡದೆ ಬೆವರು ಹೆಚ್ಚಾಗುತ್ತದೆ. ಶಾಖ ಕಡಿಮೆ ಮಾಡುವ ಕಾಟನ್ ಶೈಲಿಯ ಸಡಿಲವಾದ ಬಟ್ಟೆಗಳನ್ನು ಧರಿಸುವುದು ಒಳಿತು.