ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾದ ಗಾಜಿನ ಮನೆಯ ಕನಸು

ರಾಜೋದ್ಯಾನ ಕಥನ -5
Last Updated 14 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇಂದು ‘ಆಲ್ಬರ್ಟ್‌ ವಿಕ್ಟರ್‌ ಕನ್ಸರ್‌ವೇಟರಿ’ ಎಂದರೆ ಯಾರಿಗೂ ತಿಳಿಯುವುದಿಲ್ಲ. ‘ಎಕ್ಸಿಬಿಷನ್‌ ಬಿಲ್ಡಿಂಗ್‌’ ಎಂದರೂ ಅರ್ಥವಾಗುವುದು ಅಪರೂಪ. ಅದೀಗ ಪ್ರಸಿದ್ಧವಾಗಿರುವುದು ‘ಗ್ಲಾಸ್‌ ಹೌಸ್‌’ ಎಂದೇ.

ಕೆಂಪುತೋಟದ ಮುಕುಟ ಮಣಿಯಂತಿರುವ ‘ಗಾಜಿನ ಮನೆ’ಯ ಕನಸನ್ನು ಮೊದಲು ಕಂಡವರು ಜಾನ್‌ ಕೆಮರೋನ್‌. ಸಸ್ಯಶಾಸ್ತ್ರದ ಹಿನ್ನಲೆ ಹೊಂದಿದ್ದು ವಿಶ್ವವಿಖ್ಯಾತ ಕ್ಯೂ ರಾಯಲ್‌ ಬಟಾನಿಕಲ್‌ ಗಾರ್ಡನ್ಸ್‌ನಲ್ಲಿ ತರಬೇತಿ ಪಡೆದಿದ್ದ ಕೆಮರೋನ್‌ ತೋಟಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಲಾಲ್‌ಬಾಗ್‌ನಲ್ಲಿ ಹಾಗೂ ಈ ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ಅನುಪಮ ಕೊಡುಗೆ ಕೊಟ್ಟರು. ಅವರೇ ಗ್ಲಾಸ್‌ ಹೌಸ್‌ ಯೋಜನೆಯನ್ನು ಆಗಿನ ದೊರೆ ಚಾಮರಾಜೇಂದ್ರ ಒಡೆಯರ್‌ ಅವರಿಂದ ಮಂಜೂರು ಮಾಡಿಸಿಕೊಂಡು ಬಿಳಿಯ ರಾಜಕುಮಾರ ಆಲ್ಬರ್ಟ್‌ ವಿಕ್ಟರ್‌ರಿಂದ ಅಡಿಗಲ್ಲು ಹಾಕಿಸಿದರು. (30, ನವೆಂಬರ್‌ 1889).

ಮೊನ್ನೆ ಮೊನ್ನೆ ಕಾಮನ್‌ವೆಲ್ತ್ ಕ್ರೀಡೆಗಳು ನಡೆದ ‘ಗ್ಲಾಸ್ಗೋ’ ನಗರದ ಮೆಕ್‌ ಫ್ಲಾರ್‍್ಲೆನ್ ಕಂಪೆನಿ ಲಂಡನ್‌ನಲ್ಲಿ ನಿರ್ಮಿಸಿದ ತಾತ್ಕಾಲಿಕ ವಸ್ತುಪ್ರದರ್ಶನ ಕಟ್ಟಡ ಎಷ್ಟು ಆಕರ್ಷಕವಾಗಿತ್ತೆಂದರೆ ಜನ ಅದನ್ನು ‘ಕ್ರಿಸ್ಟಲ್‌ ಪ್ಯಾಲೆಸ್‌’ ಕರೆದರು. ಇದೇ  ನಿರ್ಮಾಣ ಸಂಸ್ಥೆಯೇ ಲಾಲ್‌ಬಾಗ್ ‘ಗಾಜಿನ ಮನೆ’ಯನ್ನು ಕಟ್ಟಿಕೊಟ್ಟಿದ್ದು. ಅರಮನೆ ಅಲ್ಲದಿದ್ದರೂ ಅರಮನೆಯಂತೆಯೇ ವಿನ್ಯಾಸ ಹೊಂದಿದ್ದದ್ದು ಅದರ ವೈಶಿಷ್ಟ್ಯ.

ಫಲ ಪುಷ್ಪ ಪ್ರದರ್ಶನಗಳು ಲಾಲ್‌ಬಾಗ್‌ನಲ್ಲಿ ನಡೆಯುತ್ತಿದ್ದರೂ ಅದರ ನಿರಂತರತೆಗೆ ಆಗಾಗ ಅಡ್ಡಿಯಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಬರಗಾಲ. ಸರಿಯಾಗಿ ಮಳೆ ಬೀಳದೆ ಸಂಕಷ್ಟಕ್ಕೆ ಒಳಗಾಗಿದ್ದ ತೋಟಗಾರರು ತತ್ತರಿಸಿ ಹೋಗಿದ್ದರಿಂದ ಕೆಲವು  ಪ್ರದರ್ಶನಗಳು ಅನಿವಾರ್ಯವಾಗಿ ರದ್ದಾಗಿದ್ದವು. ಕೆಲವು ಸಂದರ್ಭದಲ್ಲಿ ವರ್ಷಕ್ಕೊಂದೇ ಪ್ರದರ್ಶನ ಏರ್ಪಾಡಾಗಿದ್ದೂ ಇದೆ. ಇದಕ್ಕೆ ಪ್ಲೇಗ್‌ ಮಹಾಮಾರಿ ಹಬ್ಬಿ ಅಪಾರ ಸಾವು ನೋವು ಆಗಿದ್ದು ಇನ್ನೊಂದು ಕಾರಣ.

ಫಲಪುಷ್ಪ ಪ್ರದರ್ಶನದಂತೆ ವೈವಿಧ್ಯ ವಿನ್ಯಾಸದ ಗಾಜಿನ ಮನೆಯೂ ಲಾಲ್‌ಬಾಗ್‌ ಆಕರ್ಷಣೆಗಳಲ್ಲಿ ಒಂದಾಗಿ ಹೆಚ್ಚು ಹೆಚ್ಚು ವೀಕ್ಷಕರನ್ನು ಸೆಳೆಯುತ್ತಿದ್ದು, ವರ್ಷದ ಎಲ್ಲಾ ಕಾಲದಲ್ಲೂ ಲಾಲ್‌ಬಾಗ್‌ ಆಕರ್ಷಕ ತಾಣವಾಗಿ ಅಭಿವೃದ್ಧಿ ಹೊಂದಲು ಕೆಮರೋನ್‌ ಸುಮಾರು 3000ಕ್ಕೂ ಹೆಚ್ಚಿನ ಸಸ್ಯ ಪ್ರಬೇಧಗಳನ್ನು ದೇಶವಿದೇಶಗಳಿಂದ ತರಿಸಿ ಇಲ್ಲಿ ನೆಡಿಸಿದ್ದು ಮಹತ್ವದ ಕಾರಣವಾಯಿತು.

ಜಿ.ಎಚ್‌. ಕೃಂಬಿಗಲ್‌ ಕೆಮರೋನ್‌ ಬಳಿಕ ಕೆಂಪುತೋಟದ ಮೇಲ್ವಿಚಾರಕರಾಗಿ ಅಧಿಕಾರ (1908) ವಹಿಸಿಕೊಂಡ ಮೇಲೆ ಲಾಲ್‌ಬಾಗ್‌ ಇನ್ನೂ ಹೆಚ್ಚಿನ ವಿಶೇಷಗಳನ್ನು ತನ್ನಲ್ಲಿಟ್ಟುಕೊಳ್ಳಲು ಸಾಧ್ಯವಾಯಿತು.

ಫಲ ಪುಷ್ಪ ಪ್ರದರ್ಶನಗಳನ್ನು ವ್ಯವಸ್ಥಿತವಾಗಿ ಏರ್ಪಡಿಸುವ ಜೊತೆಗೆ ಸಂಸ್ಥಾನದಲ್ಲಿ ತೋಟಗಾರಿಕೆಯ ಬಹುಮುಖ ಏಳಿಗೆ ಆಗಬೇಕೆಂಬ ಕೃಂಬಿಗಲ್‌ ಅವರ ದೂರದೃಷ್ಟಿಯ ಫಲವಾಗಿ ಮೈಸೂರು ಉದ್ಯಾನ ಫಲಾ ಸಂಘ (ಮೈಸೂರು ಹಾರ್ಟಿಕಲ್ಚರ್‌ ಸೊಸೈಟಿ) 1912ರಲ್ಲಿ ಅಸ್ತಿತ್ವಕ್ಕೆ ಬಂತು. ನೂರು ವರ್ಷಗಳ ನಂತರವೂ ಫಲ ಪುಷ್ಪ ಪ್ರದರ್ಶನಗಳು ನಡೆದಿರುವುದು ಅದೇ ಸಂಘದಿಂದ.

ಫಲ ಪುಷ್ಪ ಪ್ರದರ್ಶನಗಳೆಂದರೆ ಒಂದು ಬಗೆಯ ಉತ್ಸವ ಎನ್ನುವಂತೆ ಹೆಸರಾಗಿ ರೈತಾಪಿ ಜನರೊಂದಿಗೆ ದೇಶವಿದೇಶಗಳ ಗಣ್ಯರೂ ಆ ಕಾಲಕ್ಕೆ ಭೇಟಿ ಕೊಡುವುದು ಸಾಮಾನ್ಯವಾಯಿತು. ಪ್ರದರ್ಶನಕ್ಕೆ ಸಂತೋಷ ನೀಡುವುದೊಂದೇ ಉದ್ದೇಶ ಇರಲಿಲ್ಲ. ತೋಟಗಾರಿಕೆ ಕುರಿತು ಅರಿವು ಮೂಡಿಸುವ ಉದ್ದೇಶವೂ ಇದ್ದಿದ್ದರಿಂದ ಅದು ಹೆಚ್ಚು ಯಶಕಂಡಿತು. ರಾಜ್ಯದ ವಿವಿಧ ಭಾಗಗಳ ರೈತರು ತೋಟಗಾರಿಕಾ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಆರಂಭಿಸಿದರೆ, ನಗರ–ಪಟ್ಟಣವಾಸಿಗಳು ತಮ್ಮ ಮನೆಗಳ ಅಂಗಳಗಳಲ್ಲಿ ಕೈತೋಟಗಳನ್ನು ಮಾಡಿಕೊಳ್ಳಲು ಶುರುಮಾಡಿದರು. ಇದರಿಂದಾಗಿ ಬೆಂಗಳೂರಿನಲ್ಲಿ ಹೂ ಗಿಡ ಬೆಳೆಯುವ ಪ್ರದೇಶಗಳು ಹೆಚ್ಚಿದವು. ದಿನ ಕಳೆದಂತೆ ಇದಕ್ಕೆ ಉದ್ಯಾನನಗರವೆಂಬ ವಿಶೇಷಣವೂ ಸೇರಿಹೋಯಿತು.

ಬೇರೆ ಬೇರೆ ನಗರಗಳಲ್ಲಿ ಹಾಗೂ ಗಿರಿಧಾಮಗಳಲ್ಲಿ ಫಲಪುಷ್ಪ ಪ್ರದರ್ಶನಗಳು ನಡೆಯುತ್ತವಾದರೂ ಬೆಂಗಳೂರು ಲಾಲ್‌ಬಾಗ್‌ ಫಲ ಪುಷ್ಪ ಪ್ರದರ್ಶನಕ್ಕೆ ಪ್ರತ್ಯೇಕವಾದ ಮಹತ್ವ ನೂರು ವರ್ಷಗಳ ನಂತರವೂ ಉಳಿದುಕೊಂಡು ಬಂದಿರುವುದಕ್ಕೆ ಕಾಲಕಾಲಕ್ಕೆ ಆದ ಬದಲಾವಣೆಗಳು ಮತ್ತು ಹೆಚ್ಚು ಹೆಚ್ಚು  ಜನರನ್ನು ಒಳಗೊಳ್ಳುತ್ತಾ ಹೋಗಿದ್ದು ಕಾರಣ.

ಬೆಳ್ಳಿ– ಕಂಚು ಕಪ್‌ಗಳು, ನಗದು ಬಹುಮಾನ, ವಿದೇಶದಿಂದ ತರಿಸಿದ ವಿವಿಧ ಬಗೆಯ ಹೂಗಳ ಬಿತ್ತನೆ ಬೀಜಗಳು ಆಗಿನ ರಾಜರು ನೀಡುತ್ತಿದ್ದ ವಿಶೇಷ ಬಹುಮಾನ, ಮೆಡಲುಗಳು ತೋಟಗಾರರಿಗೆ ಪ್ರೋತ್ಸಾಹ ನೀಡಿದವು. ಬಹುಮಾನದ ಒಟ್ಟೊಟ್ಟಿಗೆ ತೋಟಗಾರರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತು. ಆಗಲೇ ತೋಟಗಾರಿಕೆ ಬೆಳೆಗಳು ವಾಣಿಜ್ಯ ಬೆಳೆಗಳಾಗಿ ಪರಿವರ್ತನೆಯಾದದ್ದು.

ಮಹಾಯುದ್ಧಗಳು, ಮಳೆ ಕೊರತೆಗಳಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಗಳಿಗೆ ಅಡಚಣೆಯಾದರೂ  ಮುಂದುವರಿಯಲು ಅದನ್ನು ರೂಪಿಸಲಾಗಿದ್ದ ರೀತಿಯೇ ಹಾದಿ ತೋರಿತು. ದೇಶ ವಿದೇಶಗಳಲ್ಲಿ ನಡೆಯುತ್ತಿದ್ದ ತೋಟಗಾರಿಕಾ ಕ್ಷೇತ್ರಗಳ ಅಭಿವೃದ್ಧಿ ವಿಷಯಗಳನ್ನು ಕಾಲಕಾಲಕ್ಕೆ ಪ್ರದರ್ಶನಗಳು ಅಳವಡಿಸಿಕೊಳ್ಳುತ್ತಾ ಸಾಗಿದ್ದಕ್ಕೂ ಕಲಾ ಸಂಘದ ತಳಪಾಯ ಗಟ್ಟಿಯಾಗಿತ್ತೆನ್ನುವುದಕ್ಕೆ ನಿದರ್ಶನ.
ಇನ್ನೂರನೇ ಪ್ರದರ್ಶನ ಕಾಣುತ್ತಿರುವ ಫಲ ಪುಷ್ಪ ಉತ್ಸವ ಎಂದೂ ಏಕತಾನ ಅನ್ನಿಸಲಿಲ್ಲ. ಇದಕ್ಕೆ ಪೂರಕವಾಗಿ ಅನೇಕ ಚಟುವಟಿಕೆಗಳೂ ಸೇರಿಕೊಂಡವು. ಹಲವಾರು ರೀತಿಯ ಸ್ಪರ್ಧೆಗಳೂ ಸೇರ್ಪಡೆಯಾದವು. ಆಸಕ್ತರು ಮಾತ್ರವಲ್ಲದೆ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಕಾರ್ಖಾನೆಗಳೂ ಸಂಘ– ಸಂಸ್ಥೆಗಳೂ ಫಲ ಪುಷ್ಪ ಪ್ರದರ್ಶನಗಳ ಭಾಗವಾಗಿ ಇಂದಿಗೂ ಆ ಬಾಂಧವ್ಯ ಮುಂದುವರಿಸಿಕೊಂಡು ಹೋಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT