ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಮೋಹಿಯ ನಟನಾ ದಾಹ

Last Updated 22 ಜೂನ್ 2015, 19:30 IST
ಅಕ್ಷರ ಗಾತ್ರ

‘ಓದಿದ್ದು ಎಂಜಿನಿಯರಿಂಗ್‌ ಆದರೂ ಬದುಕು ಕಟ್ಟಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದು ನಟನಾ ಕ್ಷೇತ್ರ. ಮೂಲತಃ ಮೈಸೂರಿನವರಾದರೂ ನೆಲೆ ಕಂಡುಕೊಂಡಿರುವುದು ಬೆಂಗಳೂರಿನಲ್ಲಿ. ಆಸಕ್ತಿ ಇದ್ದದ್ದು ನೃತ್ಯದಲ್ಲಿ. ಆದರೆ ಗುರುತಿಸಿಕೊಳ್ಳುತ್ತಿರುವುದು ನಟನಾ ರಂಗದಲ್ಲಿ’ ಎಂದು ಮಾತು ಆರಂಭಿಸುವ  ಈ ಚೆಲುವನ ಹೆಸರು ಕಾರ್ತಿಕ್‌.

ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರಾವಾಹಿಯ ಅಭಯ್‌ ಪಾತ್ರಧಾರಿ ಈತ. ತನಗಿಂತ ವಯಸ್ಸಿನಲ್ಲಿ ದೊಡ್ಡವಳನ್ನು ಪ್ರೀತಿಸಿ ಮದುವೆಯಾಗಿ, ಚಿಕ್ಕ ವಯಸ್ಸಿಗೇ ಸಂಸಾರ ಹಾಗೂ ಕೆಲಸದ ಜಂಜಾಟಗಳನ್ನು ನಿಭಾಯಿಸುವ ಪಾತ್ರ ಅಭಯ್‌ನದ್ದು. ಅಭಯ್‌ ಪಾತ್ರಧಾರಿ ಕಾರ್ತಿಕ್‌ ‘ಮೆಟ್ರೊ’ದೊಂದಿಗೆ ಮಾತನಾಡಿರುವುದು ಹೀಗೆ...

‘ನನ್ನ ತಂದೆ ಕುಮಾರ್‌. ತಾಯಿ ವಿನುತಾ. ನಾವು ಮೂಲತಃ ಮೈಸೂರಿನವರು. ಅಪ್ಪ ಉದ್ಯಮಿ. ಅಮ್ಮ ಗೃಹಿಣಿ. ನಟನಾ ರಂಗಕ್ಕೆ ನಮ್ಮ ಕುಟುಂಬದಿಂದ ಪದಾರ್ಪಣೆ ಮಾಡಿದವರಲ್ಲಿ ನಾನೇ ಮೊದಲಿಗ’ ಎಂದು ತಮ್ಮನ್ನು ಪರಿಚಯಿಸಿಕೊಳ್ಳುವ ಕಾರ್ತಿಕ್‌, ರಾಜ್ಯ ಮಟ್ಟದ ಬ್ಯಾಸ್ಕೆಟ್‌ ಬಾಲ್‌ ಕ್ರೀಡಾಪಟು. ಉತ್ತಮ ನೃತ್ಯಪಟುವೂ ಆಗಿರುವ ಕಾರ್ತಿಕ್‌, ಮೈಸೂರಿನ ಎಟಿಎಂಇ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಿಂದ ಪದವಿ ಪಡೆದಿದ್ದಾರೆ.

ನಟನೆ ನನ್ನ ‘ಪ್ಯಾಷನ್‌’ 
‘ಚಿಕ್ಕಂದಿನಿಂದಲೂ ನನಗೆ ನಟನೆಯ ಬಗ್ಗೆ ತುಂಬಾ ಆಸಕ್ತಿ ಇತ್ತು. ಶಾಲಾ– ಕಾಲೇಜಿನಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಾ ಬೆಳೆದವನು ನಾನು. ಹಾಗಾಗಿ ನಟಿಸುವುದು ಎಂದರೆ ನನಗೆ ಪ್ಯಾಷನ್‌. ಮುಂದೆಯೂ ಇದೇ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಮೈಸೂರಿನ ರಂಗಾಯಣದಲ್ಲಿ ಒಂದೂವರೆ ವರ್ಷ ನಟನಾಭ್ಯಾಸ ಮಾಡಿದ್ದೇನೆ’ ಎಂದು ನಟನೆಯ ಕುರಿತ ತಮ್ಮ ಆಸಕ್ತಿಯ ಬಗ್ಗೆ ಹೇಳುತ್ತಾರೆ ಕಾರ್ತಿಕ್‌.

ಆಡಿಷನ್‌ನಲ್ಲಿ ಆಯ್ಕೆಯಾದೆ
‘ಜೊತೆ ಜೊತೆಯಲಿ’ ಧಾರಾವಾಹಿಯ ಅಭಯ್‌ ಪಾತ್ರಕ್ಕೆ ಆಯ್ಕೆಯಾಗುವ ಮೊದಲು ನನ್ನ ವೈಯಕ್ತಿಕ ವಿವರಗಳು ಹಾಗೂ ವಿವಿಧ ಭಂಗಿಗಳಲ್ಲಿ ತೆಗೆಸಿಕೊಂಡಿದ್ದ ಫೋಟೊಗಳನ್ನು ಕೊಟ್ಟಿದ್ದೆ. ಆಡಿಷನ್‌ನಲ್ಲಿಯೂ ಓಕೆ ಆಗಿ ಅಭಯ್‌ ಪಾತ್ರಧಾರಿಯಾದೆ. ಇದಕ್ಕೂ ಮುನ್ನ ಹಲವಾರು ಆಡಿಷನ್‌ಗಳಲ್ಲಿ ಭಾಗವಹಿಸಿದ್ದೆ. ಅಲ್ಲೆಲ್ಲಾ ಸಿಹಿ–ಕಹಿ ಅನುಭವಗಳಾಗಿದ್ದರೂ ನನ್ನ ಕಲಿಕಾ ಪ್ರಕ್ರಿಯೆಯಲ್ಲಿ ಎಲ್ಲವೂ ನನಗೆ ಸಿಹಿ ಅನುಭವಗಳೇ...’ ಎಂದು ಅವಕಾಶಕ್ಕಾಗಿ ತಾವು ಪಟ್ಟ ಶ್ರಮದ ಬಗ್ಗೆಯೂ ಹೇಳಿಕೊಳ್ಳುತ್ತಾರೆ. 

ನೃತ್ಯದಿಂದ ನಟನೆಯತ್ತ...
‘ನಾನು ರಾಷ್ಟ್ರ ಮಟ್ಟದ ನೃತ್ಯಪಟುವಾಗಿದ್ದೆ. ಬಿ ಬೋಯಿಂಗ್‌, ಹಿಪ್‌ ಹಾಪ್‌, ಲಾಕಿಂಗ್‌ ಅಂಡ್‌ ಪಾಪಿಂಗ್‌ ಹಾಗೂ ಇನ್ನೂ ಅನೇಕ ನೃತ್ಯ ಪ್ರಕಾರಗಳನ್ನು ಮಾಡುತ್ತೇನೆ. ನೃತ್ಯ ಮಾಡುತ್ತಾ ಮಾಡುತ್ತಾ ನಟನೆಯ ಬಗ್ಗೆಯಿದ್ದ ಆಸಕ್ತಿ ಮತ್ತಷ್ಟು ಹೆಚ್ಚಿತು.    ನೃತ್ಯದಿಂದಲೇ ಭಾವಾಭಿವ್ಯಕ್ತಿಯ ಜತೆಗೆ ನಟನೆಗೆ ಬೇಕಾದ ಹಲವಾರು ಅಂಶಗಳನ್ನು ಕಲಿತೆ. ನಾನು ನೃತ್ಯ ಬಿಡುತ್ತೇನೆಂದರೂ ಅದು ನನ್ನನ್ನು ಬಿಡುವುದಿಲ್ಲ. ರಾಜಕುಮಾರ್‌, ವಿಷ್ಣುವರ್ಧನ್‌, ಹೃತಿಕ್‌ ರೋಷನ್‌ ಅವರಂತಹ ನಾಯಕ ನಟರು ನನ್ನ ಆಸೆಗೆ ಸ್ಫೂರ್ತಿ ನೀಡಿದವರು. ಅವರ ಅನೇಕ ಸಿನಿಮಾಗಳನ್ನು ನೋಡಿ ಸ್ಫೂರ್ತಿಗೊಂಡಿದ್ದೇನೆ’ ಎನ್ನುತ್ತಾರೆ ಯುವನಟ ಕಾರ್ತಿಕ್‌.

ನಟನೆಯೇ ಗರ್ಲ್‌ಫ್ರೆಂಡ್‌
‘ಸದ್ಯಕ್ಕೆ ನನ್ನ ಇಡೀ ಗಮನ ನಟನೆಯತ್ತಲೇ ಇದೆ. ನಟನೆಯೇ ನನ್ನ ಗರ್ಲ್‌ ಫ್ರೆಂಡ್‌. ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಎಲ್ಲಾ ರೀತಿಯ ಪಾತ್ರಗಳಲ್ಲಿಯೂ ಅಭಿನಯಿಸಬೇಕು. ಹೀರೊ ಆಗಬೇಕು, ನಿಜ. ಆದರೆ ಅದಕ್ಕಿಂತ ಮುಂಚೆ ನಾನೊಬ್ಬ ಉತ್ತಮ ನಟ ಆಗಬೇಕು. ಹಾಗಾಗಿ ಸಂಪೂರ್ಣ ಸಮಯ ನನ್ನ ಗರ್ಲ್‌ ಫ್ರೆಂಡ್‌ಗೇ ಮೀಸಲಿಟ್ಟಿದ್ದೇನೆ’ ಎನ್ನುತ್ತಾರೆ 23ರ ಹರೆಯದ ಕಾರ್ತಿಕ್‌.

ಆಹಾರ ನಿರ್ಹವಣೆಯೇ ಫಿಟ್‌ನೆಸ್‌ ಸೂತ್ರ
‘ಫಿಟ್‌ನೆಸ್‌ಗಾಗಿ ಅಂಥದ್ದೇನನ್ನೂ ಮಾಡುವುದಿಲ್ಲ. ಎಲ್ಲವನ್ನೂ ಆಹಾರದಲ್ಲೇ ನಿರ್ವಹಿಸುತ್ತೇನೆ. ನನಗೆ ಜಂಕ್‌ ಫುಡ್ಸ್‌ ಹಾಗೂ ಚಾಟ್ಸ್‌ ಅಂದರೆ ತುಂಬಾ ಇಷ್ಟ ಇತ್ತು. ಆದರೆ ಈಗ ಅದನ್ನೆಲ್ಲಾ ನಿಲ್ಲಿಸಿದ್ದೇನೆ. ನಾನು ಪಕ್ಕಾ ಸಸ್ಯಾಹಾರಿ. ಉತ್ತರ ಭಾರತದ ಖಾದ್ಯಗಳೆಂದರೆ ಇಷ್ಟ’ ಎಂದು ಹೇಳುವ ಈ ಯುವಕಲಾವಿದ, ತಮ್ಮ ಬಿಡುವಿನ ಸಮಯದಲ್ಲಿ ಗೆಳೆಯರೊಂದಿಗೆ ಕ್ರಿಕೆಟ್‌ ಆಡುತ್ತಾರೆ.

ಜನಮನ್ನಣೆ ಖುಷಿ ಕೊಟ್ಟಿದೆ
‘ಮೊದಲೆಲ್ಲ್ಲಾ ಯಾರೂ ನನ್ನನ್ನು ಗುರುತಿಸುತ್ತಿರಲಿಲ್ಲ. ಆದರೆ ಈಗ ಒಂದು ಹೋಟೆಲ್‌ಗೆ ಹೋದರೂ ಜನ ನನ್ನನ್ನು ಗುರುತಿಸುತ್ತಾರೆ. ಈ ರೀತಿ ಜನಮನ್ನಣೆ ಬೇರೆ ಕ್ಷೇತ್ರದಲ್ಲಿ ದೊರಕುವುದು ಬಹಳ ಕಡಿಮೆ’ ಎನ್ನುತ್ತಾರೆ ಇವರು.

ಮುಂದಿನ ಯೋಜನೆ
‘ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಅರಸುತ್ತಾ ಬಂದಿವೆಯಾದರೂ ಸದ್ಯಕ್ಕೆ ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಾನು ಬ್ಯುಸಿ ಆಗಿದ್ದೇನೆ. ಈ ಧಾರಾವಾಹಿ ಮುಗಿಯುವವರೆಗೆ ನಾನು ಯಾವ ಬೇರೆ ಯೋಜನೆಗಳಿಗೂ ಕೈ ಹಾಕುವುದಿಲ್ಲ. ಇದು ಮುಗಿದ ನಂತರ ಸಿನಿಮಾಗಳತ್ತ ಹೋಗುವ ಯೋಚನೆಯಿದೆ’ ಎಂದು ತಮ್ಮ ಯೋಜನೆಗಳ ದಿಟ್ಟ ನಿರ್ಧಾರದ ಕುರಿತು ಹೇಳುತ್ತಾರೆ ಮೈಸೂರಿನ ಹುಡುಗ ಕಾರ್ತಿಕ್‌.  
*
ಕಲಿಕೆ ಜೀವನದ ಪ್ರತಿ ಹಂತದಲ್ಲಿಯೂ ಇರುತ್ತದೆ. ಇದನ್ನರಿತ ನಾನು  ಪ್ರತಿಯೊಂದು ಶಾಟ್‌ನಲ್ಲಿಯೂ ನಟನೆಯ ವಿವಿಧ ಆಯಾಮಗಳನ್ನು ಕಲಿಯುತ್ತಿದ್ದೇನೆ. ಜೊತೆಜೊತೆಯಲಿ ಧಾರಾವಾಹಿಯ ಇಡೀ ತಂಡ ನನ್ನ ಕಲಿಕೆಗೆ ಬೆಂಬಲವಾಗಿ ನಿಂತಿದೆ. ಈ ಧಾರಾವಾಹಿಯಲ್ಲಿನ ನನ್ನ ಯಶಸ್ಸು ನಿರ್ದೇಶಕ ಕಿರಣ್‌ ಸೇರಿದಂತೆ ತಂಡದ ಎಲ್ಲರಿಗೂ ಸಲ್ಲುತ್ತದೆ.      
-ಕಾರ್ತಿಕ್‌    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT