ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಕಾವ್ಯಕ್ಕೆ ಬ್ಲಾಗಿನ ಭಾಷ್ಯ

Last Updated 5 ಜನವರಿ 2016, 19:46 IST
ಅಕ್ಷರ ಗಾತ್ರ

ಹುಸಿ ಪ್ರತಿಭಟನೆ, ಪ್ರಚಾರದ ಹಂಬಲ, ಅಂದಭಕ್ತಿಯ ಹಿಂಸೆಯ ದಾರಿಗಳನ್ನು ಅನುಸರಿಸದೇ ಕನ್ನಡ ನಾಡು–ನುಡಿಗಾಗಿ ತಮ್ಮಷ್ಟಕ್ಕೆ ತಾವು ಸೇವೆ ಸಲ್ಲಿಸುತ್ತಿರುವ ಅನೇಕ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಅಂತಹ ವಿರಳರಲ್ಲಿ ಒಬ್ಬರು ಎ.ನಾರಾಯಣ ಪ್ರಸಾದ್. ವೃತ್ತಿಯಿಂದ ಹಿಂದಿ ಪ್ರಾಧ್ಯಾಪಕರಾದರೂ ಅವರ ಪ್ರೀತಿ-ಪ್ರವೃತ್ತಿ ಕನ್ನಡಕ್ಕೆ ಮೀಸಲು. ಅಂತರ್ಜಾಲದ ಬ್ಲಾಗ್‌ಗಳ ಮೂಲಕ ಅವರು ಸಲ್ಲಿಸುತ್ತಿರುವ ಕನ್ನಡ ಸೇವೆ ಪ್ರಶಂಸನಾರ್ಹವಾದದ್ದು.

ಸರ್ಕಾರಿ ಕಾಲೇಜಿನಲ್ಲಿ ಹಿಂದಿ ಅಧ್ಯಾಪಕರಾಗಿ ಸುಮಾರು ಇಪ್ಪತ್ತೈದು ವರ್ಷಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿ, ರಾಜ್ಯ-ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿದ ಅನುಭವ ನಾರಾಯಣ ಪ್ರಸಾದ್ ಅವರದು. ನಾಲ್ಕು ವರ್ಷಗಳ ಹಿಂದೆ ತಮ್ಮ ಈ ಪ್ರಬಂಧಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲೆಂದು ವೈಯಕ್ತಿಕ ಬ್ಲಾಗ್‌ ಒಂದನ್ನು ತೆರೆದರು.

‘ಶಿಕ್ಷಣ-ವೃತ್ತಿ ತರಬೇತಿ’ ಕುರಿತ ಮಾಹಿತಿಗಳನ್ನೂ ಅದರಲ್ಲಿ ಪ್ರಕಟಿಸತೊಡಗಿದರು. ಸಾಹಿತ್ಯ-ಸಂಗೀತದಲ್ಲೂ ಆಸಕ್ತಿ ಇದ್ದುದರಿಂದ ‘ನಾನೇಕೆ ನಮ್ಮ ಹಾಸನದ ಸಾಹಿತಿ-ಕಲಾವಿದರ ಮಾಹಿತಿಯನ್ನು ಬ್ಲಾಗ್‌ಗೆ ರವಾನಿಸಬಾರದು?’ ಎಂದುಕೊಂಡು ಕನ್ನಡ ಸಾಹಿತಿಗಳ ಮನೆಗಳನ್ನು ಎಡತಾಕಿದರು. ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿಯಾಗಿ ಪದೋನ್ನತಿ ಪಡೆದು ಬೆಂಗಳೂರಿಗೆ ವರ್ಗವಾದ ಮೇಲೆ ಆ ಕೆಲಸ ವಿಸ್ತಾರವಾಯಿತು.

ವಿಶಿಷ್ಟ ಪರಿಕಲ್ಪನೆ
ಬ್ಲಾಗ್ ಮಾಧ್ಯಮ ಶ್ರವಣ-ದೃಶ್ಯ ಮಾಧ್ಯಮಗಳಿಗೆ ವಿಪುಲ ಆಯ್ಕೆ-ಅವಕಾಶಗಳನ್ನು ಹೊಂದಿರುವ ವೇದಿಕೆ. ‘ಇಂಥ ಮಾಧ್ಯಮದಲ್ಲಿ ಸಾಹಿತಿ-ಕಲಾವಿದರ ಕುರಿತ ವಿವರ ಬರೆಯುವುದರಲ್ಲಿ ಹೊಸತೇನೂ ಇರುವುದಿಲ್ಲ. ಬದಲಿಗೆ ವಿಡಿಯೊ ಸಂದರ್ಶನ ಮಾಡಿದರೆ ಅದೊಂದು ಶಾಶ್ವತ ಸಾಕ್ಷ್ಯಚಿತ್ರವೇ ಆಗಬಹುದಲ್ಲ?’ ಎಂಬ ಯೋಚನೆಯಿಂದ ಸಾಹಿತಿಗಳ ವಿಳಾಸ-ದೂರವಾಣಿ ಸಂಖ್ಯೆಗಳನ್ನು ಕಲೆ ಹಾಕಿದರು. ತಮ್ಮ ವಿಡಿಯೊ ಚಿತ್ರಿಕೆಗಳಿಗೆ ನಾರಾಯಣ ಪ್ರಸಾದರು ವಿನೂತನ ಚೌಕಟ್ಟು-ವಿಶಿಷ್ಟ ನಮೂನೆಯನ್ನು ರೂಪಿಸಿದರು.

ಕೇವಲ ಹವ್ಯಾಸಕ್ಕೆಂದು ಆರಂಭವಾದ ಈ ಚಟುವಟಿಕೆ ಅವರಿಗೇ ಅರಿವಿಲ್ಲದಂತೆ ನೂರು ದಾಟಿ, ಸಾವಿರಕ್ಕೆ ಕಾಲಿಟ್ಟಿತು. ಇದುವರೆವಿಗೂ ಒಂದು ಸಾವಿರದ ಒಂದು ನೂರು ವಿಡಿಯೊ ಚಿತ್ರಿಕೆಗಳು ಅಂತರ್ಜಾಲದಲ್ಲಿ ಹರಿದು, ಕನ್ನಡಿಗರ ಮನೆ-ಮನ ಮುಟ್ಟಿವೆ. 26 ದೇಶಗಳ 14 ಲಕ್ಷ ವೀಕ್ಷಕರು ಈ ದೃಶ್ಯಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅನೇಕ ಕನ್ನಡ ಸಾಹಿತಿ-ಕಲಾವಿದರನ್ನು ಸಂಪರ್ಕಿಸುವ ವೇದಿಕೆಯಾಗಿವೆ. ಡಿ.ವಿ.ಜಿ.ಯವರಂಥ ಸಾಹಿತಿ ದಿಗ್ಗಜರ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ಶೈಕ್ಷಣಿಕ ವಾಹಿನಿಯಾಗಿವೆ.

ನಾರಾಯಣ ಪ್ರಸಾದರ ಬ್ಲಾಗ್‌ಗಳಲ್ಲಿ ಶಾಲಾ-ಕಾಲೇಜುಗಳ ಪಠ್ಯದಲ್ಲಿನ ಕನ್ನಡ-ಹಿಂದಿ ಕವಿತೆಗಳ ಗಾಯನ, ಖ್ಯಾತ ಲೇಖಕರಿಂದ ಅವುಗಳ ವ್ಯಾಖ್ಯಾನಗಳೂ, ಇಂಗ್ಲಿಷ್ ಕಠಿಣವೆನ್ನುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಾಠಗಳು ಲಭ್ಯವಿದೆ. ಬಹುಮುಖಿ ಪ್ರತಿಭೆಯ ಅವರು ಕ್ರೀಡೆ, ಚಾರಣ, ಪ್ಯಾರಾ ಸೈಕ್ಲಿಂಗ್ ಸಾಹಸ ಕ್ರೀಡೆಗಳು, ಉದ್ಯೋಗ ಮಾಹಿತಿ-ವ್ಯಕ್ತಿತ್ವ ವಿಕಸನ ಕುರಿತ ಪ್ರಾಯೋಗಿಕ ತರಗತಿಗಳನ್ನೂ ತಮ್ಮ ಬ್ಲಾಗ್‌ಗಳಲ್ಲಿ ಅಳವಡಿಸಿರುವುದು ಗಮನಾರ್ಹ. 

ಏಕವ್ಯಕ್ತಿ ಪರಿಶ್ರಮ
ತಮ್ಮ ಬ್ಲಾಗ್‌ಗಳ ಮೂಲಕ ಇಷ್ಟೊಂದು ಮಾಹಿತಿ-ಚಿತ್ರಿಕೆಗಳನ್ನು ಕಲೆಹಾಕಿದ್ದಾರೆ ಈ ಪ್ರಾಧ್ಯಾಪಕರು. ಯಾರ ನೆರವನ್ನೂ ಪಡೆಯದೆ ತಮ್ಮ ಖರ್ಚು, ಶ್ರಮ, ಸಮಯ, ನೈಪುಣ್ಯದಿಂದ 10 ಬ್ಲಾಗ್‌ಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

-ಎ.ನಾರಾಯಣ ಪ್ರಸಾದ್ ಅವರ ಬ್ಲಾಗ್‌ ಕೊಂಡಿ: napskannada.blogspot.in

-ಮೊಬೈಲ್: 9242260456.

ವಿಡಿಯೋ ಬ್ಲಾಗ್‌ನ ಪರಿವಿಡಿ
* ವ್ಯಕ್ತಿಯ ಬಾಲ್ಯದ ರೋಚಕ ಘಟನೆಯ ವಿವರ
* ಅವರ ವಿಡಿಯೊ ಸಂದರ್ಶನ
* ಅವರ ನಡೆ-ನುಡಿ-ವಾಚನ/ಗಾಯನ/ನೃತ್ಯ
* ಕಾರ್ಯವೈಖರಿ
* ಸಾಧನೆ-ಪ್ರಶಸ್ತಿಗಳ ದೃಶ್ಯಾವಳಿ
* ಪುಸ್ತಕಗಳು/ಕಾರ್ಯಕ್ರಮಗಳ ಮಾಹಿತಿ
* ಪದ ವಿಶ್ಲೇಷಣೆ: ಇಷ್ಟವಾದ ಒಂದು ಪದದ ಬಗ್ಗೆ ವ್ಯಕ್ತಿಯ ವಿಶ್ಲೇಷಣೆ
* ವಿಳಾಸ-ದೂರವಾಣಿ-ಈಮೈಲ್ ವಿವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT