ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಮ ಅರಿತ ಮಾಸ್ಟರ್

Last Updated 25 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಪ್ರದರ್ಶಕ ಹಾಗೂ ಆತ್ಮರಕ್ಷಣಾ ಕಲೆ ಕರಾಟೆಯಲ್ಲಿ ಪರಿಣತಿ ಹೊಂದುವ ಮಾರ್ಗದಲ್ಲಿಯೇ ಕಲಿತಿದ್ದು ಮರ್ಮಕಲೆ. ಅತಿ ಕ್ಲಿಷ್ಟವಾದ ಈ ವಿದ್ಯೆಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕವೇ ಸಿದ್ಧಿಸಿಕೊಂಡ ಸುರೇಶ್ ಎಸ್. ರಾವ್ ಸಾವಿರಾರು ಜನರ ನೋವು ನಿವಾರಣೆ ಮಾಡುವ ಮೂಲಕ `ಕರಾಟೆ ಮಾಸ್ಟರ್~ ಆಗಿದ್ದವರು `ಮರ್ಮ ಮಾಸ್ಟರ್~ ಎನಿಸಿಕೊಂಡಿದ್ದಾರೆ.

ಉದ್ಯಾನನಗರಿಯಲ್ಲಿ ಮರ್ಮ ಚಿಕಿತ್ಸಾ ಕೇಂದ್ರವನ್ನು ನಡೆಸುತ್ತಿರುವ ಇವರು ಕಲಿತ ವಿದ್ಯೆಯನ್ನು ಹಂಚಿಕೊಳ್ಳುವಲ್ಲಿ  ಸಂತಸ ಕಂಡಿರುವ ವ್ಯಕ್ತಿ. ಆದ್ದರಿಂದಲೇ ಚಿಕಿತ್ಸೆಯ ತಂತ್ರವನ್ನು ಹೇಳಿಕೊಟ್ಟು ದೊಡ್ಡ ಶಿಷ್ಯವೃಂದವನ್ನೇ ಸಜ್ಜುಗೊಳಿಸಿದ್ದಾರೆ.
 
ಆದರೆ ಯಾರೇ ತಮ್ಮಲ್ಲಿ ನೋವು ಎಂದು ಬಂದರೂ ಮೊದಲು ಸಮಸ್ಯೆ ಇರುವವರ ದೇಹದ ಶಕ್ತಿ ಕೇಂದ್ರದ ನಾಡಿ ಹಿಡಿದು ನೋಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ನಂತರ ಅವರು ಹೇಳಿದಂತೆ `ಮರ್ಮ ಚಿಕಿತ್ಸಾ~ ಶಿಷ್ಯವೃಂದ ಪಟ್ಟಿ ಅಂಟಿಸುವ ಹಾಗೂ ಮಸಾಜ್ ಮಾಡುವ ಹಲವು ಸೂತ್ರಗಳ ಪಾಲನೆ ಮಾಡುತ್ತದೆ.

ಈ `ಮರ್ಮ ಚಿಕಿತ್ಸೆ~ ಪುರಾತನ ವಿದ್ಯೆ. ಆದರೆ ಪ್ರಭಾವಿಯಾಗಿ ಅದನ್ನು ಅರಿತವರು ಈಗ ಬಹಳ ಕಡಿಮೆ. `ಇದು ವೈದ್ಯವೃತ್ತಿ ಅಲ್ಲ ಪ್ರಕೃತಿ ಚಿಕಿತ್ಸೆ~ ಎಂದು ಸ್ಪಷ್ಟ ಪಡಿಸುತ್ತಾರೆ.
ಔಷಧಿಗಳ ಮೊರೆ ಹೋಗದೆಯೇ ನೀಡುವ ಸಹಜವಾದ ಗುಣಕಾರಿ ಮಾರ್ಗವೇ ಮರ್ಮ ಚಿಕಿತ್ಸೆ. ಇಲ್ಲಿ ಬಳಕೆ ಆಗುವ ಮೂಲ ಸಾಧನವೆಂದರೆ ಅದು ಚಿಕಿತ್ಸಕನ ಕೈ. `ವರ್ಮಕಲಾ~, `ತಿರುಮ್ಮು~ ಇಲ್ಲವೆ `ತಿರುಮ್ಮಲ~ ಎಂದು ಕೂಡ ಈ ಚಿಕಿತ್ಸಾ ಮಾರ್ಗವನ್ನು ಕರೆಯಲಾಗುತ್ತದೆ.

ದೇಹದಲ್ಲಿನ ಶಕ್ತಿ ಪ್ರವಾಹದ ಮಾರ್ಗಗಳು ತೊಡಕು ಮುಕ್ತವಾಗುವಂತೆ ಮಾಡುವುದು. ವಾತದಿಂದಾಗುವ ಸಮಸ್ಯೆಗಳನ್ನು ಪರಿಹರಿಸುವುದು. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಉತ್ಸಾಹಿತರಾಗುವಂತೆ ಮಾಡುವುದೇ ಮರ್ಮ ಚಿಕಿತ್ಸೆಯಾಗಿದೆ.

`ಲಾ ಆಫ್ ಹಿಟ್ಟಿಂಗ್~ನಿಂದ `ಲಾ ಆಫ್ ಟ್ರೀಟಿಂಗ್~:
ದೇಹದ ಮರ್ಮ ಕೇಂದ್ರಗಳ ಮೇಲೆ ಪ್ರಹಾರ ನಡೆಸುವ ಯುದ್ಧ ಕಲೆಯನ್ನು  `ಲಾ ಆಫ್ ಹಿಟ್ಟಿಂಗ್~ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಆದರೆ ಇದು ಕಾದಾಟಕ್ಕೆ ಮಾತ್ರ ಎನ್ನುವ ಭಾವನೆ ತಪ್ಪು. ಅದನ್ನು ದೈಹಿಕ ನೋವು ನಿವಾರಣೆಗೂ ಪ್ರಯೋಗಿಸಬಹುದು. `ಮಾಸ್ಟರ್ ಸುರೇಶ್~ ಮಾರ್ಗದರ್ಶನದಲ್ಲಿ ತಾರಾಕುಮಾರಿ ಎಂ.ಎಲ್., ರೇಣು ಪ್ರಸಾದ್, ಚಂದ್ರು ಯಾದವ್, ಸುರೇಶ್, ಸಂತೋಷ್, ಕಾರ್ತಿಕ್ ಹಾಗೂ ಭರತ್ ಅವರೂ ಈ ವಿದ್ಯೆ ಕಲಿಯುತ್ತಿದ್ದಾರೆ.

ಬೆನ್ನು ನೋವೆನ್ನುವವರೇ ಹೆಚ್ಚು:
ಮರ್ಮ ಹೀಲಿಂಗ್ ಕೇಂದ್ರಕ್ಕೆ ಬರುವ ಹೆಚ್ಚಿನವರ ಸಮಸ್ಯೆಯೆಂದರೆ `ಸೊಂಟ ಹಾಗೂ ಮಂಡಿ ನೋವು~. ಯುವಕರು ಕೂಡ ಈ ಸಮಸ್ಯೆಗೆ ಪರಿಹಾರ ಕೇಳುತ್ತಾರೆ. ಅರವತ್ತು ದಾಟಿದವರಲ್ಲಿ ಬಹಳಷ್ಟು ಮಂದಿ ಮೊಣಕಾಲು ಸೆಳೆಯುತ್ತದೆ, ಕಾಲು ಎತ್ತಿಡಲು ಆಗುವುದಿಲ್ಲ ಎನ್ನುತ್ತಾರೆ. ಕೆಲವರಂತೂ `ನೋವು-ಸೆಳೆತ ಸಹಿಸಲಾಗದು~ ಎಂದು ಕಣ್ಣೀರಿಡುತ್ತಾರೆ.

ಸಾಫ್ಟ್‌ವೇರ್ ಜನರ ಸಮಸ್ಯೆ:

ಶನಿವಾರ ಹಾಗೂ ಭಾನುವಾರ ಬಂತೆಂದರೆ ಮಾಸ್ಟರ್ ಮುಂದೆ ಸಾಫ್ಟ್‌ವೇರ್ ಕ್ಷೇತ್ರದವರ ದೊಡ್ಡ ದಂಡೇ ಇರುತ್ತದೆ. ಹೆಚ್ಚಿನವರ ಗೋಳು ಒಂದೇ `ಬೆನ್ನು ನೋವು...ಬೆನ್ನು ನೋವು...~. ಕಂಪ್ಯೂಟರ್ ಎದುರು ಒಂದೇ ಭಂಗಿಯಲ್ಲಿ ಕೂರುವುದರಿಂದ ಬೆನ್ನಿನಲ್ಲಿನ ಶಕ್ತಿ ಪ್ರವಾಹ ಕೇಂದ್ರಗಳು ಬ್ಲಾಕ್ ಆಗುತ್ತವೆ.
 
ಸಹಜವಾಗಿಯೇ ಬೆನ್ನು ನೋವು. ಇನ್ನು ಕೆಲವರು ಮೌಸ್  ಹಿಡಿದು ನಿರಂತರವಾಗಿ ಕೆಲಸ ಮಾಡುವುದರಿಂದ ಕೈ ಊದಿಕೊಳ್ಳುತ್ತದೆಂದು ಕೂಡ ಹೇಳಿಕೊಳ್ಳುತ್ತಾರೆ. ಅಂಥವರಿಗೆ ಈ `ಮಾಸ್ಟರ್~ ನೀಡುವ ಸರಳವಾದ ಚಿಕಿತ್ಸೆ ಪರಿಣಾಮಕಾರಿ.

ದೇಹದ ನೂರೆಂಟು ಮರ್ಮ ಕೇಂದ್ರಗಳು:

ಪ್ರತಿಯೊಬ್ಬರಲ್ಲಿಯೂ 108 ಮರ್ಮ ಕೇಂದ್ರಗಳು ಅಂದರೆ `ಎನರ್ಜಿ ಪಾಯಿಂಟ್ಸ್~ ಇವೆ. ಅಲ್ಲಿಂದಲೇ ದೇಹದ ಪ್ರತಿಯೊಂದು ಅಂಗವು ಸುಗಮವಾಗಿ ಕಾರ್ಯನಿರ್ವಹಿಸುವಂಥ ಶಕ್ತಿ ಉತ್ಪನ್ನ ಆಗುತ್ತದೆ. ಶಕ್ತಿ ಪ್ರವಾಹಕ್ಕೆ ತೊಡಕಾಗುವ ಕೇಂದ್ರಗಳು ದೈಹಿಕ ಸಮಸ್ಯೆಗೆ ಕಾರಣವಾಗುತ್ತವೆ. 

ಈ ತೊಡಕು ನಿವಾರಣೆಯೇ ಚಿಕಿತ್ಸೆ. ಈ  ಹನ್ನೆರಡು ಕೇಂದ್ರಗಳು ಮಾತ್ರ ಹೆಚ್ಚು ಸಂಕೀರ್ಣವಾದವು. ಇಂಥ ಭಾಗದಲ್ಲಿ ಉಂಟಾಗುವ ಸಮಸ್ಯೆ ಸಾವಿಗೂ ಕಾರಣವಾಗಬಹುದು.

ಯುದ್ಧ ಕಲೆಯಲ್ಲಿ ಈ ಸೂಕ್ಷ್ಮ ಕೇಂದ್ರಗಳ ಮೇಲೆ ಪ್ರಹಾರ ನಡೆಸುವ ತಂತ್ರವನ್ನು ಹೇಳಿಕೊಡಲಾಗುತಿತ್ತು. ಕಮಲ್ ಹಾಸನ್ ಅವರ `ಇಂಡಿಯನ್~ ಸಿನಿಮಾದಲ್ಲಿ ಈ ಕಲೆಯು ಎಷ್ಟೊಂದು ಪರಿಣಾಮಕಾರಿ ಎನ್ನುವುದನ್ನು ತೋರಿಸಲಾಗಿತ್ತು. ಆದ್ದರಿಂದಲೇ ಈ ಹನ್ನೆರಡು ಕೇಂದ್ರಗಳನ್ನು `ಪಡುಮರ್ಮ~ ಎಂದು ಕರೆಯಲಾಗುತ್ತದೆ. ಬಾಕಿಯವು `ತೋಡು ಮರ್ಮ~ ಆಗಿವೆ.

ಮೂಲ ನೆಲೆಯಿಂದ ವಿಶ್ವಕ್ಕೆ...!:
ಮರ್ಮ ಚಿಕಿತ್ಸೆಯ ಮೂಲ ನೆಲೆ ಭಾರತ. ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಈ ಚಿಕಿತ್ಸಾ ತಂತ್ರವು ಬಳಕೆಯಲ್ಲಿತ್ತು ಎಂದು ನಂಬಲಾಗಿದೆ. ಕೇರಳದ `ಕಳರಿಪಯಟ್ಟು~ ಪ್ರದರ್ಶಕ ಕಲೆಯೇ  ವಿಧಾನದ ಮೂಲ. ಬೌದ್ಧ ಧರ್ಮದೊಂದಿಗೆ ಚೀನಾಕ್ಕೂ ಹರಡಿತು. ಮಾಸ್ಟರ್ ಸುರೇಶ್ ಅವರಲ್ಲಿಯೂ ದೇಶಿಯರು ಮಾತ್ರವಲ್ಲ ವಿದೇಶಿಯರೂ ಬಂದು ತಮ್ಮ ದೈಹಿಕ ನೋವಿಗೆ ಪರಿಹಾರ ಕಂಡುಕೊಂಡಿದ್ದಾರೆ.   
  
ಯಾವ ಸಮಸ್ಯೆಗಳಿಗೆ ಚಿಕಿತ್ಸೆ?
* ಸ್ನಾಯು ಮತ್ತು ಸಂಧಿ ನೋವು
* ಸಂಧಿ ಬಿಗಿತ ಹಾಗೂ ಊತ
* ಸ್ನಾಯು ಸೆಳೆತ
* ಉಸಿರಾಟದ ತೊಂದರೆ
* ಪಚನ ಕ್ರಿಯೆ ಸಮಸ್ಯೆಗಳು
* ನರದೌರ್ಬಲ್ಯ
* ನಿರಂತರ ತಲೆನೋವು
* ಇಳಿವಯಸ್ಸಿನ ಸಮಸ್ಯೆಗಳು
* ಗ್ರಂಥಿ ಸೋಂಕು
* ಮಾನಸಿಕ ಸಮಸ್ಯೆ, ಒತ್ತಡ
* ಸ್ನಾಯು ಶಕ್ತಿ ಕುಂದುವಿಕೆ


`ಮರ್ಮ ಕಲೆಯನ್ನು ಓದಿ ಕಲಿಯುವುದು ಖಂಡಿತ ಸಾಧ್ಯವಿಲ್ಲ. ಗುರುವಿನ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡಿಯೇ ಕರಗತ ಮಾಡಿಕೊಳ್ಳಬೇಕು. ಅರಿಯದೇ ಈ ತಂತ್ರದಿಂದ ಚಿಕಿತ್ಸೆ ಮಾಡುವ ಸಾಹಸಕ್ಕೆ ಕೈಹಾಕಿ ತಪ್ಪು ಶಕ್ತಿ ಕೇಂದ್ರದ ಮೇಲೆ ಒತ್ತಡ ಹೆಚ್ಚಿಸಿದರೆ ಪ್ರಾಣಾಪಾಯ~
-ಮಾಸ್ಟರ್ ಸುರೇಶ್ ಎಸ್. ರಾವ್


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT