ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖವಾಡವಿಲ್ಲದೆ ಆಟವಾಡಿದೆ: ಕಾವ್ಯಾ

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ

* ‘ಕಂಡಿರೋ ಮುಖಗಳ ಕಾಣದ ಮುಖ’ ಎಂಬ ‘ಬಿಗ್‌ಬಾಸ್‌’ನ ಟ್ಯಾಗ್‌ಲೈನ್‌ ನಿಮಗೆ ಎಷ್ಟರಮಟ್ಟಿಗೆ ಅನ್ವಯವಾಗುತ್ತದೆ?
ನನಗೆ ಅದು ಅನ್ವಯವಾಗುವುದಿಲ್ಲ. ಯಾಕೆಂದರೆ, ‘ಬಿಗ್‌ಬಾಸ್‌ ಮನೆಯಲ್ಲಿ 14 ಸ್ಪರ್ಧಿಗಳನ್ನು ಮುಖವಾಡದಿಂದ ನಂಬಿಸುವುದು ಸುಲಭ. 56 ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ವೀಕ್ಷಿಸಿ ನಮ್ಮ ಬಗ್ಗೆ ನಿರ್ಧರಿಸುವ ವೀಕ್ಷಕರನ್ನು ನಂಬಿಸುವುದು ಸಾಧ್ಯವಿಲ್ಲ ಎಂಬ ಪ್ರಜ್ಞೆ ಇದ್ದವರು ಸಹಜವಾಗಿ ಇರುತ್ತಾರೆ, ಇಲ್ಲದವರು ನಾಟಕ ಮಾಡುತ್ತಾರೆ. ನನ್ನಲ್ಲಿ ಆ ಪ್ರಜ್ಞೆ ಸದಾ ಜಾಗೃತವಾಗಿತ್ತು. ಮುಖ್ಯವಾಗಿ, ನಾನು ನೇರ ಮತ್ತು ದಿಟ್ಟ ನಡೆಯಲ್ಲಿ ನಂಬಿಕೆ ಇಟ್ಟವಳು.

* ಅಂದರೆ, ವೀಕ್ಷಕರು ‘ಬಿಗ್‌ಬಾಸ್’ ಮನೆಯೊಳಗೆ ಕಂಡದ್ದು ಕಾವ್ಯಾ ಮುಖವಾಡವಲ್ಲ?
ಯಾವುದೇ ಅಗ್ಗದ ಕಾರ್ಯತಂತ್ರಗಳನ್ನೋ, ಹೇಗಾದರೂ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಬೇಕು ಎಂಬ ಗಿಮಿಕ್ ಮುಂದಿಟ್ಟುಕೊಂಡೋ ನಾನು ಬಿಗ್‌ಬಾಸ್‌ ಮನೆಗೆ ಹೋಗಲಿಲ್ಲ. ಅಲ್ಲಿಗೆ ಹೋಗಲು ನನಗೆ ನನ್ನದೇ ಆದ ಕಾರಣಗಳಿದ್ದವು. ಮುಖವಾಡ ಹಾಕಿಕೊಳ್ಳದೆ ಆಟವಾಡಿದೆ. ಟಾಸ್ಕ್‌ಗಳನ್ನು ಸಮರ್ಥವಾಗಿ ನಿಭಾಯಿಸಿದೆ. ಕ್ಯಾಪ್ಟನ್‌ ಆಗಿಯೂ ಪ್ರಾಮಾಣಿಕವಾಗಿ ತೊಡಗಿಸಿಕೊಂಡೆ.

* ಆಪ್ತ ಸ್ನೇಹಿತರಂತಿದ್ದವರ ಬಗ್ಗೆಯೂ ಎಲಿಮಿನೇಟ್‌ ತಕ್ಷಣ ಕಳಪೆ ಮಾತುಗಳನ್ನಾಡುತ್ತಾರಲ್ಲ?
ಅದು ಅವರ ಸ್ವಭಾವ. ಅಲ್ಲಿ ಕಷ್ಟಕ್ಕೂ ಸುಖಕ್ಕೂ ಅದೇ ಜನರು. ಅಲ್ಲಿ ಯಾರೂ ಒಳ್ಳೆಯವರೂ ಇಲ್ಲ, ಕೆಟ್ಟವರೂ ಅಲ್ಲ ಎಂಬ ಪಾಠ ಕಲಿತಿದ್ದೇನೆ. ಯಾಕೆಂದರೆ  ಪ್ರತಿಯೊಬ್ಬರೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅಷ್ಟೇ. ಮತ್ತೆ, ಯಾರೂ ನನ್ನ ಬಗ್ಗೆ ಒಳ್ಳೆಯ ಮಾತನ್ನಾಡಲಿ ಎಂದು ನಾನು ನಿರೀಕ್ಷಿಸುವುದೂ ಇಲ್ಲ. ನನಗೆ ಸರಿ ಅನಿಸಿದ್ದು ಎಲ್ಲರಿಗೂ ಸರಿ ಅನಿಸಬೇಕಾದ್ದಿಲ್ಲ.

* ಇನ್ನು ‘ಬಿಗ್‌ಬಾಸ್‌’ನ ವೀಕ್ಷಕರಲ್ಲಿ ನೀವೂ ಒಬ್ಬರು?
ಬಿಲ್‌ಕುಲ್‌ ಇಲ್ಲ. ದೇವರಾಣೆಗೂ ನಾನು ನೋಡುವುದಿಲ್ಲ.

* ನಾಲ್ಕು ವಾರಗಳ ಅನುಭವ ಹೇಗಿತ್ತು?
ಅದ್ಭುತ ಅನುಭವ. ನಾನಂತೂ ಮೊದಲ ವಾರವೇ ಎಲಿಮಿನೇಟ್‌ ಆಗಿದ್ದರೂ ಖುಷಿಯಾಗಿ ಹೊರಬರಲು ಮಾನಸಿಕವಾಗಿ ಸಿದ್ಧವಾಗಿಯೇ ಹೋಗಿದ್ದೆ.  35 ದಿನ ಅಲ್ಲಿದ್ದೆ. ಈಗ ವೀಕ್ಷಕರ ಅಭಿಪ್ರಾಯದ ಮೇರೆಗೆ ಹೊರಗೆ ಬಂದಿದ್ದೇನೆ. ಅದರ ಬಗ್ಗೆ ಬೇಸರವೇನೂ ಇಲ್ಲ.

* ಬಿಗ್‌ಬಾಸ್‌ಗೆ ಹೋಗಲು ಕಾರಣವೇನು?
ನನಗೆ ನನ್ನ ಬಗ್ಗೆ ಕೆಲವು ಟೀಕೆಗಳನ್ನು ಸ್ವೀಕರಿಸಲು ಕಷ್ಟವಾಗುತ್ತಿತ್ತು. ಅದು ನನ್ನ ಸಮಸ್ಯೆ. ಅದರಿಂದ ನಾನು ಹೊರ ಬರಬೇಕಾಗಿತ್ತು. ಒಂದು ಕಾರಣ ಅದು. ನನ್ನ ಹಣಕಾಸಿನ ಪರಿಸ್ಥಿತಿ ಎರಡನೇ ಕಾರಣ. ಎರಡನ್ನೂ ಸಾಧಿಸಿದ್ದೇನೆ.

* ‘ಬಿಗ್‌ಬಾಸ್‌’ ಸ್ಪರ್ಧಿ ಕಾವ್ಯಾನನ್ನು ಇಷ್ಟಪಟ್ಟು ಯಾರಾದ್ರೂ ಪ್ರಪೋಸ್‌ ಮಾಡಿದ್ರೆ?
ಹ್ಹಹ್ಹಹ್ಹ... ನೋಡೋಣ... ಅದೂ ಆಗಿ ಹೋಗಲಿ. ಜನ ನನ್ನನ್ನು ಯಾವ ರೀತಿ ಸ್ವೀಕರಿಸಿದ್ದಾರೆ ಎಂಬ ಬಗ್ಗೆ ನನಗೆ ಬಹಳ ಕುತೂಹಲವಿದೆ. ಏನೇನಾಗುತ್ತದೋ ಕಾದು ನೋಡಬೇಕಷ್ಟೇ.

* ಪ್ರಥಮ್‌ ಬಹಳ ಬದಲಾಗಿದ್ದಾರೆ?
ಪ್ರಥಮ್‌ ನಿಜಕ್ಕೂ ಒಳ್ಳೆಯ ಸ್ಪರ್ಧಿ. ಕೊನೆಯವರೆಗೂ ಉಳಿಯುವ ತಾಕತ್ತು ಅವರಿಗಿದೆ. ಆದರೆ ಯಾವಾಗಲೂ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಬೇಕು, ಸುದ್ದಿಯಲ್ಲಿ ಇರಬೇಕು ಎಂಬ ಹಪಾಹಪಿ ಅವರಿಗಿದೆ. ಮೂರು ವಾರ ಅವರ ಅತಿರೇಕದ ವರ್ತನೆಗೆ ಅದುವೇ ಕಾರಣ. ಕಳೆದ ವಾರ ಸುದೀಪ್‌ ಅವರು ಹಿಗ್ಗಾಮುಗ್ಗಾ ರೇಗಿದ ನಂತರ, ‘ಸುದೀಪ್‌ ಅವರೇ ನನ್ನನ್ನು ಇಷ್ಟಪಟ್ಟಿಲ್ಲವೆಂದರೆ ನಾನು ತಪ್ಪು ಮಾಡಿದ್ದೇನೆ ಎಂದೇ ಅರ್ಥ’ ಎಂಬ ಮಾತನ್ನು ಪ್ರಥಮ್‌ ಖುದ್ದಾಗಿ ನನ್ನ ಬಳಿ ಹೇಳಿದ್ರು. ಭಾನುವಾರದಿಂದಲೇ ಅವರಲ್ಲಿ ಗಣನೀಯ ಬದಲಾವಣೆ ಆರಂಭವಾಯಿತು.

* ನಿರ್ದೇಶನದ ಕನಸಿನ ಬಗ್ಗೆ ಹೇಳಿ.
ನಿರ್ದೇಶನ ಮಾಡುವುದು ನನ್ನ ಜೀವನದ ದೊಡ್ಡ ಆಸೆ. ಅದನ್ನು ಮಾಡಿಯೇ ಮಾಡುತ್ತೇನೆ. ತಕ್ಷಣಕ್ಕೆ ಏನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಧಾರಾವಾಹಿ ಅಥವಾ ಇತರ ಪ್ರಾಜೆಕ್ಟ್‌ಗಳು ಬಂದರೆ ತಕ್ಷಣ ಒಪ್ಪಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT