ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸಿಂಗ್ ಬೆನ್ನಟ್ಟಿ

Last Updated 30 ಜನವರಿ 2014, 19:30 IST
ಅಕ್ಷರ ಗಾತ್ರ

ನಿಖಿಲ್ ಅವರ ವಯಸ್ಸು ಇನ್ನೂ 19. ಆದರೆ ಇವರ ಪ್ರತಿಭೆ, ಅನುಭವಗಳು ಮಾತ್ರ ವಯಸ್ಸನ್ನು ಮೀರಿದ್ದು. ನಗರದ ಭಗವಾನ್ ಮಹಾವೀರ್ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ನಿಖಿಲ್ ಪಿ. ಕಶ್ಯಪ್ ರೇಸಿಂಗ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಷ್ಟೇ ಅಲ್ಲ, ಅವರು ರೇಸ್ ಟ್ರೇನರ್ ಕೂಡ ಆಗಿದ್ದಾರೆ. ಭಾರತದ ಹಲವೆಡೆ ಹೊಸ ಡ್ರೈವರ್‌ಗಳಿಗೆ ರೇಸಿಂಗ್ ಸ್ಪರ್ಧೆಗಳನ್ನು ಏರ್ಪಡಿಸಿದ್ದೂ ನಿಖಿಲ್‌ ಸಾಧನೆಯ ಪಟ್ಟಿ ಸೇರುತ್ತದೆ.

ರೇಸಿಂಗ್ ಲೋಕಕ್ಕೆ ನಿಖಿಲ್ ಮೊದಲು ಕಾಲಿಟ್ಟಿದ್ದು ತಮ್ಮ ಏಳನೇ ವಯಸ್ಸಿನಲ್ಲಿ. ಈ ಬಗ್ಗೆ ಕೇಳಿದ್ದೇ ತಡ, ಅವರು ಉತ್ಸುಕರಾಗಿ ಮಾತನಾಡಿದರು. ‘ಆ ಸಮಯದಲ್ಲಿ ಬೆಂಗಳೂರಿಗೆ ರೇಸಿಂಗ್ ಇನ್ನೂ ಹೊಸತು. ಆದರೆ ನನಗೆ ಇದರ ಬಗ್ಗೆ ಇನ್ನಿಲ್ಲದ ಉತ್ಸಾಹ, ಆಸಕ್ತಿ. ನನ್ನ ಮೊದಲ ಪ್ರಯತ್ನ ನಾನಂದುಕೊಂಡಿದ್ದಕ್ಕಿಂತ ಚೆನ್ನಾಗಿ ನಡೆಯಿತು. ಅಲ್ಲಿದ್ದ ಸಿಬ್ಬಂದಿಯೂ ನಾನು ಬೇರೆಯವರಿಗಿಂತ ತಾಳ್ಮೆ, ಬುದ್ಧಿವಂತಿಕೆಯಿಂದ ಭಾಗವಹಿಸಿದೆ ಎಂದು ಹೊಗಳಿದರು. ಅದಷ್ಟೇ ಸಾಕಾಯಿತು, ನನ್ನ ಆಸೆ ಹೆಮ್ಮರವಾಗಲು’ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡರು ನಿಖಿಲ್.

ನಿಖಿಲ್‌ ಅವರ ವಿಶೇಷ ಪ್ರತಿಭೆ ಗುರುತಿಸಿದ ಅವರ ತಂದೆ ತಕ್ಷಣವೇ ರೇಸಿಂಗ್ ತರಬೇತಿ ಕೇಂದ್ರಗಳ ಹುಡುಕಾಟಕ್ಕೆ ಶುರುವಿಟ್ಟುಕೊಂಡರು. ಕೊನೆಗೂ ಚೆನ್ನೈನಲ್ಲಿ ಕೋಚ್ ಒಬ್ಬರನ್ನು ಸಂಪರ್ಕಿಸಿ, ಮಗನ ಆಸೆಗೆ ಇಂಬುಗೊಟ್ಟರು. ಅದೇ ಸಂದರ್ಭದಲ್ಲಿ 2003ರಲ್ಲಿ ಪ್ರಸಿದ್ಧ ಫಾರ್ಮುಲಾ 3 ಡ್ರೈವರ್ ಸ್ಟೀವ್ ಚಾಪ್‌ಮನ್ ಭಾರತಕ್ಕೆ ಬಂದಿದ್ದರು. ಅವರ ಬಳಿ ತರಬೇತಿ ಪಡೆಯುವ ಅವಕಾಶ ನಿಖಿಲ್‌ ಅವರದ್ದಾಗಿತ್ತು.

‘ನಾನು ಅವರ ಬಳಿ ತರಬೇತಿ ಪಡೆಯಲು ತುಂಬಾ ಅದೃಷ್ಟ ಮಾಡಿದ್ದೆ. ಇದು ನನಗೆ ರೇಸಿಂಗ್ ಲೋಕದ ಒಂದೊಳ್ಳೆ ಅನುಭವ ನೀಡಿತು. ಅದೇ ಭವಿಷ್ಯಕ್ಕೆ ಉತ್ತಮ ತಳಹದಿಯಾಗಿತ್ತು’ ಎಂದು ಹೇಳಿಕೊಂಡರು. ಫಾರ್ಮುಲಾ ರೇಸಿಂಗ್‌ನ ಮೊದಲ ಪ್ರಯತ್ನದಲ್ಲೇ ನಿಖಿಲ್ ಯಶಸ್ಸು ಕಂಡಿದ್ದರು. 2010ರ ‘ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಷಿಪ್ ಫಾರ್ಮುಲಾ ರೋಲಾನ್’ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಲ್ಲದೆ, ‘ಜೆಕೆ ಟೈರ್ ರೋಟಾಕ್ಸ್‌ ಮ್ಯಾಕ್ಸ್‌ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್‌ಷಿಪ್‌’ನ ಎರಡು ರೇಸ್‌ಗಳಲ್ಲೂ ಮೊದಲ ಐದು ಸ್ಥಾನ ಪಡೆದವರಲ್ಲಿ ಸೇರಿದ್ದರು.

‘ನ್ಯಾಷನಲ್ ಚಾಂಪಿಯನ್‌ ಆಫ್ ದಿ ರೆಡ್‌ಬುಲ್‌ ಕಾರ್ಟ್‌ಫೈಟ್‌ ಇಂಡಿಯಾ’ ಆಗಿದ್ದಲ್ಲದೆ, ‘ಸಹರಾ ಫೋರ್ಸ್‌ ಇಂಡಿಯಾ–ಒನ್ ಫ್ರಂ ಎ ಬಿಲಿಯನ್ ಹಂಟ್’ನಲ್ಲಿ ಭಾಗವಹಿಸಿದ್ದ ಖ್ಯಾತಿಯೂ ನಿಖಿಲ್‌ ಅವರದ್ದು. ರೇಸಿಂಗ್‌ನಲ್ಲಿ ಹೆಸರು ಮಾಡಿರುವ ಬಾಬ್ ಫರ್ಲ್‌ನೇ, ಎಡಿ ಜೋರ್ಡಾನ್, ಆಂಥೊನಿ ಹ್ಯಾಮಿಲ್ಟನ್ ಮತ್ತು ನಿಕೊ ಹಲ್ಕನ್ ಬರ್ಗ್‌ ಅವರ ಬಳಿ ಕೆಲಸ ಮಾಡಿದ್ದೂ ಅತಿ ರೋಮಾಂಚನಕಾರಿ ಅನುಭವ ಎಂದು ಹೇಳಿಕೊಳ್ಳುವ ನಿಖಿಲ್‌, ರೇಸಿಂಗ್‌ಗೆ ದುಬಾರಿ ಕ್ರೀಡೆ ಎನ್ನುತ್ತಾರೆ.

‘ಈ ಕ್ರೀಡೆ ತುಂಬಾ ದುಬಾರಿ. ಕಠಿಣ ಕೂಡ. ಇದನ್ನು ಹಚ್ಚಿಕೊಂಡರೆ ಆರ್ಥಿಕವಾಗಿ ತುಂಬಾ ಕಷ್ಟ ಎದುರಾಗುತ್ತದೆ. ಶಾಲಾ–ಕಾಲೇಜು ಶುಲ್ಕ ನನಗಿಲ್ಲವಾದ್ದರಿಂದ ನನ್ನ ಪೋಷಕರು ಉಸಿರಾಡುವಂತಾಯಿತು. ಈ ಕ್ರೀಡೆಯಲ್ಲಿ ನಾನು ಮುಂದುವರೆಯಲು ಅವರು ತುಂಬಾ ಕಷ್ಟಪಟ್ಟು ಹಣ ಉಳಿತಾಯ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನನಗೆ ಜಾಹೀರಾತುದಾರರೂ ಸಿಕ್ಕರು. ಅದಕ್ಕೂ ಮುನ್ನ ಅಪ್ಪನೇ ನನಗೆ ಹಣ ನೀಡಬೇಕಿತ್ತು. ನಾನು ಅದನ್ನು ಯಾವ ರೀತಿಯೂ ಅವರಿಗೆ ಹಿಂದಿರುಗಿಸಲು ಸಾಧ್ಯವಿಲ್ಲ ಎಂಬುದು ತಿಳಿದಿದೆ’ ಎಂದು ಭಾವುಕರಾದರು ನಿಖಿಲ್.

‘ರೇಸಿಂಗ್ ಕ್ರಿಕೆಟ್‌ನಂತಲ್ಲ. ಇದರಲ್ಲಿ ಸಾಕಷ್ಟು ಯೋಜನಾಬದ್ಧವಾಗಿರಬೇಕು. ನಾನು ಸಾಗಬೇಕಾದ ದಾರಿ ಸಾಕಷ್ಟಿದೆ. ನನಗೆ ಇದೇ ಕ್ಷೇತ್ರದಲ್ಲಿ ಮುಂದುವರಿಯುವ ಆಸೆ. ಎಂಜಿನಿಯರಿಂಗ್ ಓದುತ್ತಿದ್ದೇನೆ. ಹಾಗಾಗಿ ಮೋಟಾರ್‌ ಸ್ಪೋರ್ಟ್‌ ಉದ್ಯಮಿ ಆಗುವ ಆಯ್ಕೆಯೂ ನನಗಿದೆ’ ಎಂದು ಮಾತು ಸೇರಿಸಿದರು. ಓದಬೇಕಾದರೆ ಸಂಪೂರ್ಣ ಏಕಾಗ್ರತೆಯಿಂದ ಓದುವುದು, ರೇಸಿಂಗ್‌ನಲ್ಲಿರಬೇಕಾದರೆ ಇನ್ಯಾವುದರ ಬಗ್ಗೆಯೂ ಯೋಚಿಸದಿರುವುದು ನಿಖಿಲ್ ರೂಢಿಸಿಕೊಂಡಿರುವ ಅಭ್ಯಾಸ.
–ವಿದ್ಯಾ ಅಯ್ಯಂಗಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT