ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಿತೆಯರ ಸಿನಿಮಾ ಸಾಹಸ

Last Updated 20 ಜನವರಿ 2013, 19:59 IST
ಅಕ್ಷರ ಗಾತ್ರ

ಪೂನಾದಲ್ಲಿ ಕಲಿತು ಬಂದ ಕನ್ನಡತಿಯೊಬ್ಬರು ಕನ್ನಡ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅವರೇ ಪ್ರಿಯಾ ಬೆಳ್ಳಿಯಪ್ಪ. ನಿಶ್ಚಿತಾರ್ಥವಾದ ಹುಡುಗನನ್ನು ಪ್ರಿಯಕರನೊಂದಿಗೆ ಸೇರಿ ಕೊಲೆಗೈದ ಶುಭಾ ಎಂಬ ಹೆಣ್ಣಿನ ಕತೆಯನ್ನು ಆಧರಿಸಿ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರದ ಹೆಸರು `ರಿಂಗ್‌ರೋಡ್ ಶುಭಾ'.

ಸದ್ಯದಲ್ಲೇ ಚಿತ್ರದ ನಾಯಕಿಯ ಆಯ್ಕೆ ನಡೆಯಲಿದೆ. ಪ್ರತಿಭಾವಂತ, ಸುಂದರ ಹೆಣ್ಣುಮಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ ಪ್ರಿಯಾ, ಆಯ್ಕೆಯಾಗುವ ನಾಯಕಿಗೆ 15 ದಿನಗಳ ಅಭಿನಯ ತರಬೇತಿಯನ್ನೂ ನೀಡಲಿದ್ದಾರಂತೆ. ಬೆಂಗಳೂರು ಮತ್ತು ಹತ್ತಿರದ ಗ್ರಾಮದಲ್ಲಿ ಚಿತ್ರೀಕರಣ ನಡೆಸಲಿರುವ ನಿರ್ದೇಶಕಿ ಇನ್ನು ಐದು ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂಬ ಭರವಸೆ ನೀಡುತ್ತಾರೆ.

`ನನ್ನ ಸಿನಿಮಾಗೆ ಹೊಸ ನಾಯಕಿ ಹುಡುಕುತ್ತಿರುವೆ. ಕಾರಣ ಈಗಾಗಲೇ ಇಮೇಜ್ ಇರುವ ನಾಯಕಿಯರಿದ್ದರೆ ಅವರ ಇಮೇಜ್ ನೋಡಿಕೊಂಡು ಜನ ಬರುತ್ತಾರೆ. ನಮ್ಮ ಕತೆ ನೋಡಿಕೊಂಡು ಜನ ಬರಬೇಕು ಎಂಬುದು ನನ್ನ ಉದ್ದೇಶ. ತಾಜಾ ಮುಖ ಇದ್ದರೆ ಕತೆಗೆ ಸೂಕ್ತ ಎನಿಸಿತು' ಎಂದು ವಿವರ ನೀಡುತ್ತಾರೆ.

`ನಾನು ನನ್ನ ತಂಡ ಕತೆಯನ್ನು ತುಂಬಾ ಅಚ್ಚುಕಟ್ಟಾಗಿ ಬರೆದಿಟ್ಟಿದ್ದೇವೆ. ಶುಭಾ ಪ್ರಕರಣದ ಸ್ಫೂರ್ತಿ ಮಾತ್ರ ಪಡೆದುಕೊಂಡು ನಮ್ಮ ಕ್ರಿಯಾಶೀಲತೆಯನ್ನು ಕತೆಯಲ್ಲಿ ತುಂಬಿದ್ದೇವೆ' ಎನ್ನುವ ಪ್ರಿಯಾಗೆ ಶುಭಾ ಸಂಗತಿಯನ್ನು ಪತ್ರಿಕೆಯಲ್ಲಿ ಓದುತ್ತಿದ್ದಾಗ ಕುತೂಹಲ ಹುಟ್ಟುತ್ತಿತ್ತಂತೆ.

`ಆ ಪ್ರಕರಣದ ನಿಜ ಸ್ವರೂಪವನ್ನು ಯಾರೂ ಇದುವರೆಗೆ ಸರಿಯಾಗಿ ಹೇಳಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಶುಭಾ ಅವರನ್ನು ಭೇಟಿ ಮಾಡುವ ಪ್ರಯತ್ನದಲ್ಲಿದ್ದೇವೆ. ಆದರೆ ಕತೆಯಲ್ಲಿ ನಮ್ಮ ಕಲ್ಪನೆಯದೇ ಮೇಲುಗೈ' ಎನ್ನುತ್ತಾರೆ ಪ್ರಿಯಾ.

ಕೊಡಗಿನ ಬಾಳೆಲೆ ಊರಿನಲ್ಲಿ ಹುಟ್ಟಿದ ಪ್ರಿಯಾ ಊಟಿಯಲ್ಲಿ ಓದಿದವರು. ನಂತರ ಶ್ರೀಲಂಕಾ ಮತ್ತು ಮುಂಬೈನಲ್ಲಿ ಗ್ರಾಫಿಕ್ ವಿನ್ಯಾಸಕಿಯಾಗಿ ಕೆಲಸ ಮಾಡಿದವರು. ಪೂನಾದ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಿರ್ದೇಶನದ ಕೋರ್ಸ್ ಮುಗಿಸಿ ಜಾಹೀರಾತು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

ಆಗ ಪರಿಚಯವಾದ `ಮತ್ತೆ ಬನ್ನಿ ಪ್ರೀತ್ಸೋಣ' ಸಿನಿಮಾದ ನಿರ್ದೇಶಕ ರವೀಂದ್ರ ತಮ್ಮ ಸಿನಿಮಾದ ಸಹಾಯಕ ನಿರ್ದೇಶಕಿಯಾಗಲು ಆಹ್ವಾನಿಸಿದರಂತೆ. ಅದನ್ನು ಒಪ್ಪಿ ಬೆಂಗಳೂರು ಹಾದಿ ಹಿಡಿದ ಪ್ರಿಯಾ ಇದೀಗ ಸ್ವತಂತ್ರ ನಿರ್ದೇಶಕಿಯಾಗುವ ಮನಸ್ಸು ಮಾಡಿದ್ದಾರೆ. ಅಲ್ಲದೆ ತಮ್ಮ ಜೊತೆ ಕಲಿತ ಸಹಪಾಠಿಗಳನ್ನು ಕರೆತಂದು ಯುವತಂಡ ಕಟ್ಟಿದ್ದಾರೆ. ಅದರಲ್ಲಿ ಇರುವವರು ಬಹುತೇಕ ಮಹಿಳೆಯರು ಎಂಬುದು ವಿಶೇಷ.

ನಿರ್ಮಾಪಕಿ ರಂಜನಿ
ಚಿತ್ರದ ನಿರ್ಮಾಪಕಿ ರಂಜನಿ ರವೀಂದ್ರ ದಾಸ್ `ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದ ನಿರ್ದೇಶಕ ರವೀಂದ್ರ ಅವರ ಪತ್ನಿ. ತಮ್ಮ ಪತಿಯ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದ ಪ್ರಿಯಾ ಅವರ ವೃತ್ತಿಪರತೆಯನ್ನು ಮೆಚ್ಚಿ ರಂಜನಿ ಅವರಿಗೆ ನಿರ್ದೇಶಕಿಯಾಗುವ ಅವಕಾಶ ನೀಡಿದ್ದಾರಂತೆ. ಅಲ್ಲದೆ 15 ಮಹಿಳಾ ತಂತ್ರಜ್ಞರನ್ನು ಒಟ್ಟುಸೇರಿಸಿ ಚಿತ್ರ ರೂಪಿಸುತ್ತಿರುವುದು ವಿಶೇಷ.

`ಇದು ಅತಿ ಹೆಚ್ಚು ಬಜೆಟ್‌ನ ಚಿತ್ರವಲ್ಲ. ಪ್ರಮುಖ ತಂತ್ರಜ್ಞರಲ್ಲಿ ಕೆಲವರು ಪ್ರಿಯಾ ಅವರಿಂದ ನಮ್ಮ ಸಂಪರ್ಕಕ್ಕೆ ಬಂದರು. ಮತ್ತೆ ಕೆಲವರನ್ನು ನಾವೇ ಹುಡುಕಿದ್ದೇವೆ. ಮೇಕಪ್ ಮಾಡುವವರು, ವಸ್ತ್ರವಿನ್ಯಾಸಕರಾದಿಯಾಗಿ ಎಲ್ಲರೂ ಮಹಿಳೆಯರೇ. ಛಾಯಾಗ್ರಾಹಕಿ ಸಂಚಾರಿ ದಾಸ್ ಮೊಲಿಕ್, ಸಂಕಲನಕಾರ್ತಿ ಮೌಲ್‌ಶ್ರೀ ಸಿಂಗ್, ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ, ಸಂಭಾಷಣೆಕಾರ್ತಿ ರೇಖಾರಾಣಿ ನಮ್ಮ ಚಿತ್ರಕ್ಕಾಗಿ ದುಡಿಯುತ್ತಿದ್ದಾರೆ' ಎಂದು ಮಾಹಿತಿ ನೀಡಿದರು.

ಸುವರ್ಣ ಸುಂದರಿ
`ರಿಂಗ್ ರೋಡ್ ಶುಭಾ' ಚಿತ್ರದ ನಾಯಕಿಯನ್ನು ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ ಮೂಲಕ ಆಯ್ಕೆ ಮಾಡಲಾಗುತ್ತಿದೆ. ನಾಯಕಿಯಾಗುವ ಇಚ್ಛೆ ಹೊತ್ತುಬಂದ 300 ಅರ್ಜಿಗಳಲ್ಲಿ 10 ಜನರನ್ನು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರ ವಿವರಗಳನ್ನು ಚಾನೆಲ್‌ನಲ್ಲಿ ತೋರಿಸಿ ವೀಕ್ಷಕರು ಮತ ಹಾಕುವಂತೆ ಕೇಳಿಕೊಳ್ಳಲಾಗಿದೆ. ಸದ್ಯದಲ್ಲೇ `ಸುವರ್ಣ ಸುಂದರಿ' ಆಯ್ಕೆಯಾಗಲಿದ್ದಾರೆ. ಅವರೇ ಚಿತ್ರದ ನಾಯಕಿ. ರಿಯಾಲಿಟಿ ಶೋ ಮೂಲಕ ನಾಯಕಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವುದು ಇದೇ ಮೊದಲ ಸಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT