ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಗೆದ್ದವರ ಕನಸು... ಮನಸು

Last Updated 25 ಮೇ 2014, 19:30 IST
ಅಕ್ಷರ ಗಾತ್ರ

ಓಟದ ಸಂಭ್ರಮ ಬೆಂಗಳೂರಿನಲ್ಲಿ ತುಂಬಿತ್ತು. ದೇಶವಷ್ಟೇ ಅಲ್ಲ ಪ್ರಪಂಚದ ನಾನಾ ಭಾಗಗಳಿಂದ ಬಂದ ಅಥ್ಲೀಟ್‌ಗಳು ಜೊತೆಯಾಗಿ ಹೆಜ್ಜೆ ಹಾಕಿ ನಗರಕ್ಕೆ ಹೊಸ ಕಳೆ ಕಟ್ಟಿದರು. ಕೆಲವರು ಆಸಕ್ತಿಯಿಂದ ಓಟದಲ್ಲಿ ಒಂದಾದರೆ, ಇನ್ನು ಕೆಲವರು ವೃತ್ತಿಪರ ಓಟಗಾರರು.

ಸ್ಪರ್ಧೆಯ ಕಿರೀಟ ಧರಿಸಲು 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸ್ಪರ್ಧಿಗಳು ಜಮಾಯಿಸಿ ಓಟದ ಆನಂದ ಉಣಬಡಿಸಿದರು. ವಿವಿಧ ದೇಶದ ಸ್ಪರ್ಧಿಗಳು ಟಿಸಿಎಸ್‌ ಬೆಂಗಳೂರು ವರ್ಲ್ಡ್‌ 10ಕೆ– 2014 ಸ್ಪರ್ಧೆಯಲ್ಲಿ ಟ್ರೋಫಿ ಗೆದ್ದು ಆನಂದಿಸಿದರು. ಆದರೆ ಕೀನ್ಯಾದ ಜಾಫ್ರಿ ಕಿಪ್ಸಾಂಗ್‌ ಕೆಮ್‌ವೋರರ್‌ (2012ರ ವರ್ಲ್ಡ್‌ 10ಕ ವಿಜೇತ) ಪ್ರಥಮ ಸ್ಥಾನ ಗೆದ್ದು ಬೀಗಿದರೆ, ಉಗಾಂಡಾದ ಜೋಶು ಚಪ್ತೇಗಿ ಎರಡನೇ ಸ್ಥಾನ ಪಡೆದರು.

ಜಾಫ್ರಿಗೆ ವಿಶ್ವವನ್ನು ಗೆಲ್ಲುವಾಸೆ!
ಅನೇಕ ಸ್ಪರ್ಧೆಗಳಲ್ಲಿ ಗೆಲುವಿನ ಗರಿ ಮೂಡಿಸಿಕೊಂಡಿರುವ ಜಾಫ್ರಿ ಎಲ್ಲರೂ ಅಂದುಕೊಂಡಂತೆ ಚಿಕ್ಕಂದಿನಿಂದಲೇ ಓಟದ ಅಭ್ಯಾಸದಲ್ಲಿ ತೊಡಗಿಕೊಂಡವರಲ್ಲ. ‘ನಾನು ಪ್ರೌಢಶಾಲೆಯಲ್ಲಿದ್ದೆ. ಅಲ್ಲಿ ನಮ್ಮ ಕ್ರೀಡಾ ಶಿಕ್ಷಕರು ನೀನು ಚೆನ್ನಾಗಿ ಓಡಬಲ್ಲೆ, ಪ್ರಯತ್ನಿಸು ಎಂದು ಪ್ರೋತ್ಸಾಹಿಸಿದರು. ಅವರ ಸಲಹೆ ಮೇರೆಗೆ ಓಟದ ಅಭ್ಯಾಸ ಮಾಡತೊಡಗಿದೆ. ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೂ ಮೊದಲು ಐದು ತಿಂಗಳು ಕಠಿಣ ತರಬೇತಿಯಲ್ಲಿ ನಿರತನಾಗಿದ್ದೆ’ ಎಂದು ಕ್ರೀಡಾ ಪಯಣದ ಬಗ್ಗೆ ವಿವರಿಸುತ್ತಾರೆ ಜಾಫ್ರಿ.

ಗೆಲುವಿನ ಓಟ ಮುಂದುವರಿಸಿದ್ದರೂ ಇವರ ಬದುಕಿನ ಬಹುದೊಡ್ಡ ಕನಸು ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸುವುದು. ಮನದಾಳದ ಈ ಗುರಿ ನಿಜವಾದಾಗಲೇ ಖುಷಿಯಿಂದ, ಹೆಮ್ಮೆಯಿಂದ ಅವರು ಕಣ್ತುಂಬ ನಿದ್ರಿಸಿದರಂತೆ. ಆ ದಿನ ಸಾಕಾರಗೊಂಡಿದ್ದು ಕೋಪನ್‌ಹೇಗ್‌ನಲ್ಲಿಯಾ ಎಂದು ಪ್ರಶ್ನಿಸಿದರೆ ಜಾಫ್ರಿ ಮುಗ್ಧರಾಗಿ ‘ಹೌದು, ಆ ದಿನ ಶನಿವಾರ’ ಎಂದು ನೆನಪಿಸಿಕೊಳ್ಳುತ್ತಾರೆ.

ಟ್ರ್ಯಾಕ್‌ನಲ್ಲಿ ನಿಂತಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಭಾವನೆ ಏನು ಎಂದು ಕೆದಕಿದರೆ, ಜಾಫ್ರಿ ಉತ್ತರಿಸುವುದು ಹೀಗೆ: ‘ಓಟ ಪ್ರಾರಂಭಿಸಿದಾಗ ನನ್ನ ಮನಸ್ಸಿನಲ್ಲಿ ಯಾವ ಯೋಚನೆಗಳೂ ಹರಿದಾಡುವುದಿಲ್ಲ. ಆದರೆ ಏನೊ ಒಂದು ರೀತಿಯ ಖುಷಿ ಮನಸ್ಸನ್ನು ಆವರಿಸಿರುತ್ತದೆ. ಬೇರೆ ಬೇರೆ ದೇಶದ ಸ್ಪರ್ಧಿಗಳೊಂದಿಗೆ ಓಟಕ್ಕೆ ಸ್ಪರ್ಧಿಸುವುದು ಖುಷಿಯೇ. ಹಲವರ ಪರಿಚಯವಾಗುತ್ತದೆ. ಆದರೆ ನನ್ನ ಮನಸ್ಸು ಮಾತ್ರ ಗೆಲುವಿನ ಬಗ್ಗೆಯೇ ಚಿಂತಿಸುತ್ತಿರುತ್ತದೆ‘ ಎಂದು ಮನದ ಮಾತನ್ನು ಬಿಚ್ಚಿಡುತ್ತಾರೆ.

ಅವರ ದೇಹಕ್ಕೆ ಶಕ್ತಿ ನೀಡುವುದು ಕೀನ್ಯಾ ಆಹಾರವಂತೆ. ಊಟೋಪಹಾರದ ವಿಷಯದಲ್ಲಿ ಕಟ್ಟುನಿಟ್ಟೇನಿಲ್ಲ ಎನ್ನುವ ಅವರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ತಪ್ಪದೆ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಾರಂತೆ. ಕುಟುಂಬದ ಸದಸ್ಯರನ್ನು ವಾರದಲ್ಲಿ ಒಂದೇ ಬಾರಿ ಭೇಟಿಯಾಗುವ ಜಾಫ್ರಿಗೆ ಈ ಬಗ್ಗೆ ಬೇಸರವಿಲ್ಲವಂತೆ. ‘ಓಟ, ಸ್ಪರ್ಧೆ, ಗೆಲುವೇ ನನ್ನ ಜಗತ್ತಾಗಿರುವುದರಿಂದ ಕುಟುಂಬದವರ ಜೊತೆ ಸಮಯ ಕಳೆಯಲಾಗುತ್ತಿಲ್ಲ ಎಂಬ ಬೇಸರ ಕಾಡುವುದಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಹೀಗೆ ಕೀರ್ತಿಯ ಉತ್ತುಂಗಕ್ಕೇರುತ್ತಿರುವ ಈ ಓಟಗಾರನ ಬದುಕಿನ ಮೇಲೆಯೇ ‘ದಿ ಅನ್ನೌನ್‌ ರನ್ನರ್‌’ (2012) ಸಾಕ್ಷ್ಯಚಿತ್ರ ಬಂದಿದೆ. ಅದು ಜಾಫ್ರಿ ಖುಷಿಯನ್ನು ಇಮ್ಮಡಿಗೊಳಿಸಿದೆ.

ಬೆಂಗಳೂರಿನ 10ಕೆಯಲ್ಲಿ...
ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸುವ ನಿರ್ಧಾರ ಖುಷಿ ನೀಡಿದೆ ಎನ್ನುವ 21ರ ಹರೆಯದ ಜಾಫ್ರಿ ಅವರಿಗೆ ಈ ನಗರ ತುಂಬಾ ಇಷ್ಟವಾಗಿದೆ. ‘ಇಲ್ಲಿ ಮತ್ತೆ ಬಂದಿರುವುದಕ್ಕೆ ಸಂತೋಷವೆನಿಸಿದೆ. 2012ರಲ್ಲಿ ಇಲ್ಲಿಗೆ ಬಂದಿದ್ದೆ. ಈ ಬಾರಿಯೂ ಆಹ್ವಾನದ ಮೇರೆಗೆ ಬಂದೆ. ಇಲ್ಲಿಯ ವಾತಾವರಣ, ಪ್ರೀತಿಭರಿತ ಸ್ವಾಗತ ಇಷ್ಟವಾಯಿತು’ ಎನ್ನುತ್ತಾರೆ.

ನಮ್ಮಲ್ಲಿ ನಮಗೆ ವಿಶ್ವಾಸವಿದ್ದರೆ ಅಂದುಕೊಂಡಿದ್ದನ್ನು ಸಾಧಿಸುವುದು ಸಾಧ್ಯ. ಅದಕ್ಕೆ ಕಠಿಣ ಪರಿಶ್ರಮವೂ ಅಷ್ಟೇ ಮುಖ್ಯ ಎಂದು ಅವರು ಸಲಹೆ ನೀಡುತ್ತಾರೆ.

ಜೋಶು... ಜೋಶ್
ಜಾಫ್ರಿ ಅವರಂತೆಯೇ ಉಗಾಂಡಾದ ಜೋಶು ಚಪ್ತೇಗಿ ಅವರದ್ದೂ ಆಸಕ್ತಿಕರ ಪಯಣ. ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ಖುಷಿ ಎಲ್ಲೆಮೀರಿತ್ತು. ದಕ್ಕಿದ ಹೊಸ ಪದಕದ ಬಗ್ಗೆ ಇದ್ದ ಅಪಾರ ಪ್ರೀತಿಯೂ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಜೋಶು ಎಂಬ ಹೆಸರೇ ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ಹೊಸತು. ಕಳೆದ ವರ್ಷವಷ್ಟೇ ವೃತ್ತಿಪರ ಕ್ರೀಡಾಕ್ಷೇತ್ರಕ್ಕೆ ಕಾಲಿರಿಸಿದ ಜೋಶು ಅವರಿಗೆ ಸಿಲಿಕಾನ್ ಸಿಟಿಯಲ್ಲಿ ನಡೆದ ವರ್ಲ್ಡ್‌ 10ಕೆ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆ. ಇದಕ್ಕೆಂದೇ ಕಳೆದ ತಿಂಗಳು ಪಾಸ್‌ಪೂರ್ಟ್‌ ಕೈಸೇರಿದ್ದಂತೆ.

‘ಒಮ್ಮೆಲೇ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಸುಲಭವಲ್ಲ. ಅದೂ ಅಲ್ಲದೆ ಸಂದರ್ಭಗಳೂ ಕೆಲವೊಮ್ಮೆ ನಮಗೆ ಪೂರಕವಾಗಿ ಇರುವುದಿಲ್ಲ. ಆದರೆ ಇಂದಲ್ಲ ನಾಳೆ ಒಳ್ಳೆಯ ದಿನ ಬಂದೇ ಬರುತ್ತದೆ ಎಂಬ ನಂಬಿಕೆಯೊಂದಿಗೆ ಮುಂದಡಿಯಿಡಬೇಕು. ಮೊದಲ ಪ್ರಯತ್ನದಲ್ಲೇ ಎರಡನೇ ಸ್ಥಾನ ಸಿಗುತ್ತದೆ ಎಂದುಕೊಂಡಿರಲಿಲ್ಲ. ಇಲ್ಲಿಯ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದು ಅನುಭವಕ್ಕಾಗಿ. ಅಂತರರಾಷ್ಟ್ರೀಯ ಸ್ಪರ್ಧಿಗಳಿಗೆ ನಾನು ಯಾವ ರೀತಿ ಸ್ಪರ್ಧೆ ನೀಡಬಲ್ಲೆ ಎನ್ನುವುದನ್ನು ಅರಿತುಕೊಳ್ಳಬೇಕಿತ್ತು. ಬದುಕಿನಲ್ಲಿ ಹೆಚ್ಚು ನೆನಪಿಟ್ಟುಕೊಳ್ಳಬೇಕಾದ ಸಂದರ್ಭ ಇದು’ ಎಂದು ನೆನೆಯುತ್ತಾರೆ ಜೋಶು.

ಕ್ರೀಡೆಯನ್ನು ವೃತ್ತಿಯಾಗಿಸಿಕೊಳ್ಳಬೇಕು ಎಂದು ಬಯಸುವ ಹೊಸಬರಿಗೆ ಜೋಶು ಬದುಕು ಸ್ಫೂರ್ತಿದಾಯಕ. ಮಾರ್ಚ್‌ನಲ್ಲಿ ಉಗಾಂಡದ ಎನ್ತೆಬ್ಬೆಯಲ್ಲಿ ನಡೆದ ವರ್ಲ್ಡ್‌ ಯುನಿವರ್ಸಿಟಿ ಕ್ರಾಸ್‌ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಜೋಶು ಚಿನ್ನ ಗೆದ್ದುಕೊಂಡರು. ಇದರಿಂದಾಗಿ ಇಂಟರ್‌ನ್ಯಾಷನಲ್‌ ಅಸೋಶಿಯೇಶನ್‌ ಆಫ್‌ ಅಥ್ಲಿಟಿಕ್ಸ್‌ ಫೆಡರೇಶನ್‌ ಮೀಟ್‌ಗೂ ಆಯ್ಕೆಯಾದರು.


‘ಅಥ್ಲೀಟ್‌ ಆಗಬೇಕು ಎನ್ನುವುದು ನನ್ನ ಕನಸಾಗಿತ್ತು. ಆದರೆ ವಿದ್ಯಾರ್ಥಿ ಬದುಕಿನಲ್ಲಿದ್ದಾಗ ಅಭ್ಯಾಸಗಳಲ್ಲಿ ತೊಡಗಿಕೊಳ್ಳಲು ನನಗೆ ಸಾಧ್ಯವಾಗಿರಲಿಲ್ಲ. ಉನ್ನತಾಭ್ಯಾಸದ ನಂತರವೇ ನಾನು ಈ ಬಗ್ಗೆ ಗಂಭೀರವಾಗಿ ಚಿಂತಿಸಿ ತರಬೇತಿಗೆ ಒಡ್ಡಿಕೊಂಡೆ. 2013ರ ಆಗಸ್ಟ್‌ ವೇಳೆಗೆ ವಿಶ್ವವಿದ್ಯಾಲಯ ಸೇರಿಕೊಂಡು ಬಹುಆಸೆಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದೆ. ಮೊದಲು ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿದೆ. ನಂತರ 5ಕೆ ಹಾಗೂ 10ಕೆ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಆಫ್ರಿಕಾ ಕ್ರಾಸ್‌ಕಂಟ್ರಿ ಓಟದಲ್ಲಿ ಭಾಗವಹಿಸಲು ಚಳಿಗಾಲದ ರಜಾ ಸಂದರ್ಭದಲ್ಲಿ ಕಠಿಣ ತರಬೇತಿ ಪಡೆದೆ’ ಎನ್ನುತ್ತಾರೆ ಅವರು.

ಕಾಲೇಜಿನಲ್ಲೂ ಸ್ನೇಹಿತರ ಪ್ರೋತ್ಸಾಹದಿಂದ ಜೋಶು ಹಿಗ್ಗುತ್ತಿದ್ದಾರೆ. ಪ್ರತಿ ಬಾರಿ ಕಾಲೇಜು ಮೆಟ್ಟಿಲೇರಿದಾಗ ಗೆಳೆಯರೆಲ್ಲಾ ಅವರನ್ನು ಸೆಲೆಬ್ರಿಟಿಯಂತೆ ಕಾಣುತ್ತಾರಂತೆ. ಸ್ಪರ್ಧೆಗಿಳಿಯುವಾಗ ಈಗಾಗಲೇ ಸಾಧನೆ ಮಾಡಿದವರ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತಾವು ಚೆನ್ನಾಗಿ ಓಡಬೇಕು ಎನ್ನುವುದಕ್ಕಷ್ಟೇ ಅವರ ಆದ್ಯತೆ. ಜುಲೈನಲ್ಲಿ ಅಮೆರಿಕದಲ್ಲಿ ನಡೆಯಲಿರುವ ವರ್ಲ್ಡ್‌ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿರುವ ಅವರು ಸಾಧನೆ ಮಾಡಿದ ಸ್ಪರ್ಧಿಗಳ ಜೊತೆ ಆಗಾಗ ಮಾತಿಗಿಳಿಯುತ್ತಾರೆ. ಇದೇ ಅವರನ್ನು ಸಾಧನೆಯತ್ತ ಇನ್ನಷ್ಟು ದೃಢವಾಗಲು ಸಹಕರಿಸುತ್ತದೆ. ಇತರರ ಪ್ರಚೋದನಾಕಾರಿ ಮಾತುಗಳನ್ನು ಕೇಳಿದಾಗ ಮನಸ್ಸು ಉಲ್ಲಸಿತವಾಗುತ್ತದೆ ಎನ್ನುವುದು ಅವರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT