ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯರೂಪಗಳ ಸವಿನಯ ಆಲಾಪ

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಸಿತಾರ್ ಮಾಂತ್ರಿಕ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಇತ್ತೀಚೆಗ ಇನ್ಫೋಸಿಸ್ ಸಂಸ್ಥೆ ಆಯೋಚಿಸಿತ್ತು. ಕಾರ್ಯಕ್ರಮದಲ್ಲಿ ಪಂ. ವೆಂಕಟೇಶ ಕುಮಾರ್ ಅವರಿಗೆ ‘ಉಸ್ತಾದ್ ಬಾಲೇಖಾನ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ವೆಂಕಟೇಶ ಕುಮಾರ್ ಗುರುಗಳನ್ನು ನೆನೆದು ಮಿಯಾ ಕೀ ಮಲ್ಹಾರ್ ರಾಗದೊಂದಿಗೆ ಗಾಯನ ಆರಂಭಿಸಿದರು. ಒಂದೆರೆಡು ನಿಮಿಷಗಳ ಸವಿನಯ ಆಲಾಪ ರಾಗದ ಸುಳಿವನ್ನು ಕೊಟ್ಟಿತ್ತು. ‘ಕರೀಮ್ ನಾಮ ತೇರೋ...’ ಎಂಬ ಬಂದಿಶ್‌ನ ಸಹಕಾರದಲ್ಲಿ ವಿಲಂಬಿತ ಏಕ್‌ತಾಳದಲ್ಲಿ ರಾಗ ಮೆಲ್ಲನೆ ವಿಸ್ತಾರಗೊಳ್ಳತೊಡಗಿತು.

ಬಂದಿಶ್‌ನ ಒಂದು ಎಳೆ ಹಿಡಿದುಕೊಂಡು ವೈವಿಧ್ಯರೂಪಗಳೊಂದಿಗೆ ಹಾಡುತ್ತಿದ್ದರೆ ರಾಗದಲ್ಲಿನ ರಸ ಮಳೆಯಂತೆ ಹನಿಯುತ್ತಿತ್ತು. ಪುಟ್ಟರಾಜ ಗವಾಯಿ ಅವರ ಬಳಿ ಸಂಗೀತಾಭ್ಯಾಸ ಮಾಡಿರುವ ವೆಂಕಟೇಶ ಕುಮಾರರ ಶೈಲಿಯಲ್ಲಿ ಕಿರಾಣ ಘರಾಣ ಹಾಗೂ ಗ್ವಾಲಿಯರ್ ಘರಾಣೆಗಳೆರಡರ ಮಿಶ್ರಣವಿದೆ. ರಾಗದ ವಿಸ್ತರಣೆಯಲ್ಲಿ ಮತ್ತೆ ಮತ್ತೆ ರೂಪುಗೊಳ್ಳುತ್ತಿದ್ದ ಅಲಂಕಾರಗಳು ರಾಗವನ್ನು ಮತ್ತಷ್ಟು ರಂಜನೀಯಗೊಳಿಸುತ್ತಿದ್ದವು.

ಕೆಲ ಹೊತ್ತಿನ ನಂತರ ಧೃತ್ ತೀನ್ ತಾಳದಲ್ಲಿ ‘ಮೊಹಮದ್ ಶಾಹ್ ರಂಗೀಲೇ..’ ಎಂಬ ಬಂದಿಶ್‌ ಹಾಡಲಾರಂಭಿಸಿದಾಗ, ಮೆಲ್ಲನೇ ತೆರೆದುಕೊಳ್ಳುತ್ತಿದ್ದ ರಾಗ ಹುರುಪಿನಲ್ಲಿ ಸಾಗತೊಡಗಿತು.

ರವೀಂದ್ರ ಯಾವಗಲ್ ಅವರ ತಬಲಾ ವಾದನದಲ್ಲಿದ್ದ ಕ್ರಿಯಾಶೀಲ ಲಯಗಾರಿಕೆ ಗಾಯನದಲ್ಲಿದ್ದ ಘನತಾಭಾವಕ್ಕೆ ಮತ್ತಷ್ಟು ಹೊಳಪು ಕೊಡುವಂತಿತ್ತು. ಧ್ವನಿ ಹರಿಯುತ್ತಿದ್ದ ಹಾದಿಯನ್ನು ಅರಸುತ್ತಿದ್ದ ವ್ಯಾಸಮೂರ್ತಿ ಕಟ್ಟಿಯವರ ಹಾರ್ಮೋನಿಯಂ ಶೃತಿಯಂತೆ ಉಲಿಯುತ್ತಿತ್ತು.

ಎರಡನೆಯದಾಗಿ ಬಿಹಾಗ್ ರಾಗದಲ್ಲಿ ಸಂಯೋಜನೆಗೊಂಡ ‘ಜಬಸೇ ಶ್ಯಾಮ ಸಿದಾರೇ...’ ಎಂಬ ಠುಮ್ರಿ ಹಾಡಲು ಆರಂಭಿಸಿದರು. ಠುಮ್ರಿಯ ಸಾಲುಗಳು ಆರಂಭವಾಗುವುದಕ್ಕೂ ಮುನ್ನ ಒಂದೆರೆಡು ನಿಮಿಷಗಳ ಕಾಲ ಹಾಡಲಾದ ಆಲಾಪದ ಮಾಧುರ್ಯ ಸಮ್ಮೋಹನಗೊಳಿಸುವಂತಿತ್ತು.

ಬಿಹಾಗ್ ಒಂದು ಸಿಹಿಸಿಹಿ ಎನ್ನಿಸುವ ಮಾಧುರ್ಯಪೂರ್ಣ ರಾಗ. ಎರಡು ಮಧ್ಯಮಗಳನ್ನು ಬಳಸುವ ಈ ರಾಗದ ಸೊಗಸನ್ನು ಪ್ರೇಮ ತುಂಬಿದ ಕಂಠದಿಂದ ಹಾಡುತ್ತಿರುವಂತೆ, ಠುಮ್ರಿಯ ಸಾಲುಗಳೂ ನವಿರಾದ ಸ್ವರಗುಚ್ಛಗಳಂತೆ ಕೇಳಿಸುತ್ತಿದ್ದವು.

ಶ್ಯಾಮನನ್ನು ಹಿಡಿದು, ರಾಗದ ಸಾಧ್ಯತೆಗಳನ್ನೆಲ್ಲ ಹೆಕ್ಕುವಾಗಲಂತೂ ಶ್ಯಾಮನಿಂದ ಬೇರ್ಪಟ್ಟ ಹೃದಯದ ಭಗ್ನಪ್ರೇಮ ಮತ್ತದರ ವಿರಹ ಭಾವವು ಕೇಳುಗರ ಎದೆಯನ್ನು ತಟ್ಟುತ್ತಿದ್ದವು. ನಡುನಡುವೆ ಸುಳಿದು ಬರುತ್ತಿದ್ದ ತಾನ್‌ಗಳು ತಾಂತ್ರಿಕತೆಯಲ್ಲೂ ಸೀಳಿಕೊಂಡು ಭಾವವನ್ನು ಸಿಂಪಡಿಸುತ್ತಿದ್ದವು.

ಠುಮ್ರಿ ಮುಗಿಯುವ ಮುನ್ಸೂಚನೆಯಾಗಿ ಲಯದ ನಡತೆ ತೀವ್ರಗೊಂಡು ಹಾಡಿನ ಮೊದಲನೆಯ ಸಾಲನ್ನು ಮತ್ತೆಮತ್ತೆ ಹಾಡುತ್ತಾ ಹೋದಂತೆ ಶ್ಯಾಮನ ಪ್ರಿಯತಮೆಯ ಎದೆಯ ತಳಮಳವೇ ತಾಳದಲ್ಲಿ ಪ್ರತಿಧ್ವನಿಸುತ್ತಿರುವಂತೆ ಭಾಸವಾಯಿತು.

ಮುಂದಿನ ಪ್ರಸ್ತುತಿಯಾಗಿ ಗಾಯಕರು ಸೋಹನಿ ರಾಗದಲ್ಲಿ ‘ಕಾಹೇ ಕರತ ಮೋಸೆ ರಾರ ಕನ್ಹಯ್ಯಾ...’ ಎಂಬ ಮತ್ತೊಂದು ಠುಮ್ರಿಯನ್ನು ಆರಿಸಿಕೊಂಡಿದ್ದರು. ಬಿಹಾಗ್ ರಾಗದಿಂದ ಸೋಹನಿಯ ವಾತಾವರಣಕ್ಕೆ ಬಂದಾಗ ಗಾಯನ ಗಂಭೀರತೆಯ ಭಾವವನ್ನು ಬಿತ್ತಿತ್ತು.

ಇಲ್ಲಿ ಠುಮ್ರಿಯನ್ನು ನೆಪವಾಗಿಟ್ಟುಕೊಂಡು ಗಾಯಕರು ರಾಗವನ್ನು ವಿಸ್ತರಿಸುತ್ತಾ ಹೋದದ್ದೇ, ಹಿಂದೆ ಕೇಳಿದ್ದ ವಿರಹವು ಈಗ ಗಂಭೀರಗೊಂಡಂಥ ಭಾವವನ್ನು ಸೋಹನಿ ಕೊಡುತ್ತಿತ್ತು.

ಅದಾಗಲೇ ಗಾಯನ ಗಂಭೀರ ಸ್ವರೂಪವನ್ನು ಪಡೆದುಕೊಂಡು ರಾಗದಲ್ಲಿ ಮೀಯುತ್ತಿರುವಂತೇ, ತೀನ್ ತಾಳದಲ್ಲಿ ‘ತರಾನಾ’ ಹಾಡಲಾರಂಭಿಸಿದರು. ಇಲ್ಲಿ ಸ್ವರಸ್ಥಾನದಲ್ಲಿ ‘ಧಿರ್‍ಧಿರ್‍ತನಾನಾ..’ ಎಂಬಂಥ ಶಬ್ದಗಳನ್ನು ಒಂದಕ್ಕೊಂದು ಬೆಸೆಯುತ್ತಾ, ನೀಳವಾದ ಸ್ವರಮಾಲಿಕೆಗಳಾಗಿ ಹಾಡಲಾಗುತ್ತದೆ.

ತರಾನಾ ಹಾಡಲಾರಂಭಿಸಿದ್ದೇ, ವೆಂಕಟೇಶ ಕುಮಾರರ ಧ್ವನಿ ಒಂದೇ ಸಲಕ್ಕೆ ತನ್ನಲ್ಲೇ ಎರಡು-ಮೂರು ಬಾರಿ ಮಾರ್ದನಿಸುತ್ತಿದೆಯೇನೋ ಎಂಬಂಥ ರೀತಿಯಲ್ಲಿ ವೇಗವಾಗಿ ಹರಿಯುತ್ತಿದ್ದರೆ ಶ್ರೋತೃಗಳ ಕೈಕಾಲುಗಳೂ ಅದರ ಲಯಕ್ಕೆ ತಾವಾಗೇ ಒಡ್ಡಿಕೊಂಡಿದ್ದವು. ಅದರಲ್ಲೂ ರಾಗದ ಗಾಂಭೀರ್ಯತೆಯನ್ನು ಹೊದ್ದೇ ಲಾಲಿತ್ಯಪೂರ್ಣವಾಗಿ, ಕ್ರಿಯಾಶೀಲತೆಯಿಂದ ಹರಿಯುತ್ತಿದ್ದ ಗಾಯನವಂತೂ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಭಕ್ತಿ–ವಚನ–ಭಾವ ಸಂಪೂರ್ಣ
ವೆಂಕಟೇಶ ಕುಮಾರರ ಕಾರ್ಯಕ್ರಮಕ್ಕೆ ಬರುವವರಲ್ಲಿ ಶಾಸ್ತ್ರೀಯ ಸಂಗೀತ ಆರಾಧಕರಷ್ಟೇ ಅಲ್ಲ; ದಾಸಪದ-ಭಕ್ತಿ ಸಂಗೀತದ ಕೇಳುಗರೂ ಇರುತ್ತಾರೆ. ಏಕೆಂದರೆ ಒಂದೆರೆಡು ರಾಗಗಳ ನಂತರ ದಾಸರಪದ ಅಥವಾ ವಚನಗಳನ್ನು ಹಾಡುವುದು ಅವರ ರೂಢಿ. ಹಾಗಾಗಿ ಶಾಸ್ತ್ರೀಯ ಸಂಗೀತದ ಸವಿಯನ್ನು ಶ್ರೋತೃಗಳಿಗೆ ಉಣಬಡಿಸಿದ ಮೇಲೆ ‘ಕಲಿಯುಗದೊಳು ಹರಿನಾಮವ ನೆನೆದರೆ’ ಎಂಬ ದಾಸರ  ಪದದದಿಂದ ಕಾರ್ಯಕ್ರಮದ ಮತ್ತೊಂದು ಮಜಲನ್ನು ಆರಂಭಿಸಿದರು.

ಪುರಂದರ ದಾಸರ ಈ ಹಾಡಿನಲ್ಲಿ ಹರಿಯ ಪರಮ ಭಕ್ತ ತನಗೆ ಅರ್ಚಿಸಿ-ಮೆಚ್ಚಿಸುವುದು ಗೊತ್ತಿಲ್ಲದಿದ್ದರೂ, ಅವನಲ್ಲಿಟ್ಟಿರುವ ಭಕ್ತಿಯನ್ನು ಹಾಡಹಾಡುತ್ತ ವಿವರಿಸುವ ರೀತಿ ದೇವನನ್ನು ಮುಟ್ಟುವಂಥಾದ್ದು.

ಹೊಗಳುವಾಗಿನ ದನಿಯಲ್ಲಿರುವ ದೃಢತೆ, ಮೆಚ್ಚಿಸುವ ಪರಿಯೆಲ್ಲವನ್ನೂ ಗೊತ್ತಿಲ್ಲವೆಂದು ಹೇಳುಕೊಳ್ಳುವಲ್ಲಿನ ಸೌಜನ್ಯ ಮತ್ತೂ ಅವನೇ ಗತಿ ಎನ್ನುವಲ್ಲಿನ ಅದಮ್ಯ ಭಕ್ತಿಭಾವ... ಹೀಗೆ ಹಾಡಿನಲ್ಲಿನ ಪ್ರತಿ ಸಾಲುಗಳೂ ಬೇಡುವ ವಿವಿಧ ಭಾವಗಳಿಗೆ ದನಿಯನ್ನು ದುಡಿಸುವ ರೀತಿಗೆ ಶ್ರೋತೃಗಳು ವಾಹ್ ಎನ್ನುತ್ತಿದ್ದರು.

‘ಪ್ರಣತೆಯಿದೆ ಬತ್ತಿಯಿದೆ ಜ್ಯೋತಿ ಬೆಳಗುವೆಡೆ..’ ಎಂಬ ಅಲ್ಲಮಪ್ರಭುವಿನ ವಚನವನ್ನು ಹಾಡಲಾರಂಭಿಸಿದಾಗ ಭಕ್ತಿಯ ಸರೋವರದಿಂದ ಸುಜ್ಞಾನದ ದಡಕ್ಕೆ ಬಂದಿಳಿದ ಭಾವ. ಅದರ ನಂತರ ಹಾಡಿದ ‘ಭಾವದಲೊಬ್ಬ ದೇವನ ಮಾಡಿ...’ ಎಂಬ ಹಾಡು ಭಾವದಲ್ಲಿ ಮೂಡಿದ ದೇವರ ಬಗೆಯನ್ನು ಹೇಳಿತ್ತು.

ಮುಂದಿನ ಹಾಡುಗಾರಿಕೆಗೆ ಅಕ್ಕಮಹಾದೇವಿಯ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ ವಚನ ಅವರ ವೆಂಕಟೇಶ ಕುಮಾರರ ಗಾಯನದಲ್ಲಿ ತೆರೆದುಕೊಳ್ಳತೊಡಗಿದಾಗ ಅಕ್ಕಮಲ್ಲಿಕಾರ್ಜುನನ್ನು ಕನಸಿನಲ್ಲಿಯೂ ಬಿಡದೇ ಹುಡುಕಿದ ಚಿತ್ರಣ ಚಿತ್ತದಲ್ಲಿ ಸುಳಿದಾಡುತ್ತಿತ್ತು. ನಡುವೆ ಮೂಡಿಬಂದ ಆಲಾಪದಲ್ಲಿ ಅಕ್ಕ ಮಲ್ಲಿಕಾರ್ಜುನ ದೇವನನ್ನು ಹುಡುಕುವ ಭಾವ ಉಕ್ಕಿ ಬಂದಿತ್ತು.

‘ತೊರೆದು ಜೀವಿಸಬಹುದೇ..’ ಗೀತೆಯನ್ನು ಅವರ ದನಿಯಲ್ಲಿ ಮತ್ತೆ ಮತ್ತೆ ಕೇಳಬೇಕೆಂಬ ತುಡಿತವಾಗುವುದಕ್ಕೆ ಬಹಳೇ ಕಾರಣಗಳಿಗೆ. ಇಲ್ಲಿ ಹರಿಯಲ್ಲಿ ಭಕ್ತಿಯನ್ನಿಟ್ಟುಕೊಂಡಿರುವ ಭಕ್ತ ತನ್ನ ದೇವನಿಗಾಗಿ ತನ್ನ ಮಾನ-ಪ್ರಾಣಾದಿಗಳೊಂದಿಗೆ ಊರು-ಕೇರಿ, ಮಡದಿ-ಮಕ್ಕಳೆಲ್ಲರನ್ನೂ ಬಿಟ್ಟುಕೊಡಲು ತಯಾರಾದವನು.ಯಾರೆಲ್ಲರನ್ನೂ ಬಿಟುಕೊಟ್ಟರೂ ನಿನ್ನ ಪಾದಗಳನ್ನು ಬಿಡಲಾರೆನೆಂದು ಮತ್ತೆಮತ್ತೆ ಹೇಳುವ ಭಾವದಲ್ಲಿ, ತನ್ನ ದೇವವನ್ನೇ ಕಟ್ಟಿಹಾಕುವ ಭಕ್ತಿಯಿದೆ.

ಕೊನೆಗೆ ‘ಭಜರೇ ಹನುಮಂತಂ ಮಾನಸಾ’ ಎಂಬ ಗೀತೆಯನ್ನು ಹಾಡುವ ದನಿಯಲ್ಲಿದ್ದ ಭಕ್ತಿಭಾವ ಎಲ್ಲರ ಒಳಗೂ ಹೊರಗೂ ತನ್ನದೇ ಛಾಪನ್ನು ಬೀಸಿತ್ತು. ಭೈರವಿ ರಾಗದಲ್ಲಿ ಸಂಯೋಜನೆಗೊಂಡಿದ್ದ ಈ ಹಾಡಿನಲ್ಲಿನ ಭಕ್ತಿಭಾವ ಅತಿರೇಕದ್ದಲ್ಲ. ಶಾಂತ ಮತ್ತು ಗಂಭೀರವಾದದ್ದು. ಸದಾ ಕಾರ್ಯಕ್ರಮದ ಕೊನೆಗೇ ಹಾಡಲಾಗುವ ಭೈರವಿಯ ಸ್ವಭಾವವೇ ಹಾಗೆ. ಎಲ್ಲವೂ ಮುಗಿದ ನಂತರದಲ್ಲಿ ನೆಲೆಗೊಳ್ಳುವ ಶಾಂತ-ಗಂಭೀರ ಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT