ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಣೆ' ಇಲ್ಲದ ಬದುಕು

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

`ಕತ್ರಿ ಸಾಣೆ, ಚಾಕು ಸಾಣೆ... ಮೊಂಡು ಚಾಕು...  ಸಾಣೇಮ್ಮಾ ಸಾಣೆ...' ಅಂತ ಆಚೆ ಬೀದಿಯಲ್ಲೆಲ್ಲೊ ಅಸ್ಪಷ್ಟ ಕೂಗು ಕೇಳುತ್ತಿದ್ದಂತೆ ಅಕ್ಕಪಕ್ಕದ ಬೀದಿಗಳ ಒಳಮನೆಗಳಲ್ಲಿ ತುಕ್ಕು ಹಿಡಿದ, ಹರಿತ ಕಳೆದುಕೊಂಡು ಮೊಂಡಾದ ಚಾಕು, ಕತ್ತರಿ, ಕತ್ತಿಗಳನ್ನು ಜೋಡಿಸಿ ತಮ್ಮ ಬೀದಿಯಲ್ಲಿ ಆ ಕೂಗು ಕೇಳಿಸುವ ಕ್ಷಣಕ್ಕಾಗಿ ಕಾದುಕೂರುವುದು ಹೊಸದೇನಲ್ಲ.

ಸಾಣೆ ಯಂತ್ರವನ್ನು ಸೈಕಲ್ಲಿಗೆ ಕಟ್ಟಿಕೊಂಡು ಬೀದಿ ಬೀದಿ ತಿರುಗುವವರು ಒಂದು ಕಾಲಿನಿಂದ ಪೆಡಲ್ ತುಳಿಯುತ್ತಾ ಎರಡೂ ಕೈಗಳಿಂದ ಕತ್ತರಿಯನ್ನೋ, ಚಾಕುವನ್ನೋ ಹರಿತ ಮಾಡುವುದನ್ನು ನೋಡಲೆಂದು ನಾಲ್ಕಾರು ಮಕ್ಕಳು, ಮಹಿಳೆಯರು ಸುತ್ತುವರಿದು ನಿಲ್ಲುವುದೂ ಹೊಸದೇನಲ್ಲ. ಪೆಡಲ್ ವೇಗ ಹೆಚ್ಚಿದಷ್ಟೂ `ಕಿರ್ರ್‌... ಕಿರ್ರ್‌... ಟರ್ರ್...' ಅನ್ನೋ ಸದ್ದೂ ಹೆಚ್ಚಾಗುತ್ತದೆ. ಸಾಣೆಕಲ್ಲಿನಿಂದ ಹೊರಡುವ ಬೆಂಕಿಕಿಡಿಗಳು ಎತ್ತರೆತ್ತರಕ್ಕೆ ಹಾರುತ್ತಿದ್ದರೆ ನಿಂತು ನೋಡಬೇಕೆನಿಸುತ್ತದೆ. ಆದರೆ ಸಾಣೆ ಕೊಡುವವರ ಬದುಕು ಮಾತ್ರ ಇನ್ನೂ ತುಕ್ಕು ಹಿಡಿದಂತೆ ಉಳಿದಿರುವುದು ವಾಸ್ತವ.

`ಒಂದು ಚಾಕುಗೆ ಎಷ್ಟಪ್ಪಾ' ಎಂದು ಒಳಮನೆಯಿಂದಲೇ ಒಬ್ಬ ಗೃಹಿಣಿ ಕೇಳಿದರೆ, ಆರೇಳು ಚಾಕು, ಕತ್ತರಿಗಳನ್ನು ಸಾಣೆ ಮಾಡಿಸಿ ತೋಚಿದಷ್ಟು ದುಡ್ಡು ಕೊಟ್ಟು ಚೌಕಾಸಿಗಿಳಿಯುವವರೂ ಇದ್ದಾರೆ. ಸಾಣೆಯವರ ಬದುಕು, ಪೆಡಲು ತುಳಿದರೆ ಗಿರ‌್ರನೆ ತಿರುಗುವ ಸಾಣೆಕಲ್ಲಿನಷ್ಟು ಸಲೀಸಲ್ಲ. ದಿನವಿಡೀ ಬೀದಿಬೀದಿ ಅಲೆದಾಡಿದರೂ ಕೆಲವೊಮ್ಮೆ ಅವರ ಬದುಕಿನ ಬಂಡಿಯ ಗಾಲಿಗಳು ಕದಲುವುದಿಲ್ಲ...

ಗಲ್ಲಿಗಳೇ ವ್ಯಾಪಾರ ಕೇಂದ್ರ
ಅಂದಾಜು ಇಪ್ಪತ್ತು ವರ್ಷಗಳಿಂದ ಸಾಣೆ ಪೆಡಲ್ ತುಳಿಯುತ್ತಿರುವ ಎಚ್.ರಹಮತ್ತುಲ್ಲಾ ಶಿವಾಜಿನಗರ ಕಂಟೋನ್ಮೆಂಟ್ ಪ್ಯಾರಲಲ್ ರಸ್ತೆಯ ನಿವಾಸಿ. ದಿನಾ ಬೆಳಿಗ್ಗೆ ಎದ್ದು ಸಾಣೆಯಂತ್ರವನ್ನು ಹೆಗಲಿಗೇರಿಸಿ ಹೊರಟರೆ ನಗರದ ಯಾವುದೋ ಒಂದು ಪ್ರದೇಶದತ್ತ ಪ್ರಯಾಣ. ಮನೆಗೆ ಮರಳುವುದು ಸಂಜೆಗತ್ತಲಲ್ಲಿ.

ಈಜಿಪುರ, ಆರ್.ಟಿ. ನಗರ, ಬಸವನಗುಡಿ ಹೀಗೆ ಎಲ್ಲೆಲ್ಲೋ ಓಡಾಟ. ಗಲ್ಲಿಗಳಿಗಾಗಿ ಹುಡುಕಾಟ. ಯಾಕೆಂದರೆ ಇವರಿಗೆ ನಾಲ್ಕು ಕಾಸು ಗಿಟ್ಟುವುದೇ ಗಲ್ಲಿಗಳಲ್ಲಿ. ಕೆಲವೊಮ್ಮೆ ಎಲ್ಲೂ ಪುಡಿಗಾಸು ಸಿಗದಿರುವುದೂ ಇದೆಯಂತೆ! ಮಣಭಾರದ ಯಂತ್ರವನ್ನು ಹೊತ್ತಿದ್ದೇ ಬಂತು.
`ಈ ಕೆಲಸ ಶುರು ಮಾಡಿದ ಸಂದರ್ಭದಲ್ಲಿ ಒಂದು ಚಾಕು ಸಾಣೆ ಹಿಡಿದರೆ ಎರಡು ರೂಪಾಯಿ ಸಿಗುತ್ತಿತ್ತು. ಈಗ ಅದು ಐದು ರೂಪಾಯಿಗೆ ಏರಿದೆ. ಬಸ್ ಟಿಕೇಟು ದರವೂ ಏರಿರುವುದರಿಂದ ನಮಗೇನೂ ಲಾಭ ಸಿಗುವುದಿಲ್ಲ. ಸಾಣೆ ಮೆಷಿನ್ನು ಆಗಾಗ ಕೈ ಕೊಡುವುದು ಇದ್ದೇಇದೆ. ಬೇರಿಂಗ್ ಮತ್ತು ಸಾಣೆಕಲ್ಲಿನ ಮರದ ತಿರುಗಣಿ ಕೈಕೊಟ್ಟಾಗ ಸ್ವತಃ ರಿಪೇರಿ ಮಾಡಿದರೂ ಒಂದಷ್ಟು ಖರ್ಚು ತಗುಲುತ್ತದೆ' ಎಂದು ಬೇಸರ ವ್ಯಕ್ತಪಡಿಸುವ ರಹಮತ್ತುಲ್ಲಾ, ಇಷ್ಟು ವರ್ಷಗಳ ಪರಿಚಯ ಮತ್ತು ಅನುಭವದ ಹಿನ್ನೆಲೆಯಲ್ಲಿ ಒಂದಷ್ಟು ವ್ಯಾಪಾರ ಗಿಟ್ಟಿಸಿಕೊಳ್ಳುತ್ತಾರಂತೆ.

`ಸಾಣೆ ಜೊತೆ ಹೊಸ ಚಾಕು ಮಾರುತ್ತೇನೆ. ಎರಡೂ ಸೇರಿದಾಗ ದಿನಕ್ಕೆ ಮುನ್ನೂರರಿಂದ ನಾಲ್ಕು ನೂರು ರೂಪಾಯಿ ಸಂಪಾದಿಸುವುದೂ ಉಂಟು. ಆದರೆ ಬಸ್ ದರ, ಊಟ ತಿಂಡಿಗೆ ದಿನಕ್ಕೆ ಇನ್ನೂರು ರೂಪಾಯಿ ಖರ್ಚಾಗುತ್ತದೆ. ವ್ಯಾಪಾರ ಕಡಿಮೆಯಾದ ದಿನವೂ ಖರ್ಚು ಇದ್ದೇ ಇರುತ್ತದಲ್ಲ? ಹಾಗಾದಾಗ ಬೇಜಾರಾಗುತ್ತದೆ. ಯಾವ್ದಾದ್ರು ಗಲ್ಲಿ ಮೂಲೇಲಿ ಕೂತ್ಕಂತೀನಿ. ಹಿಂಗೇ ಆದ್ರೆ ಜೀವ್ನ ಹೆಂಗೆ ಅನ್ನೋ ಚಿಂತೆ ಕಾಡುತ್ತದೆ' ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅವರು.

ರಹಮತ್ತುಲ್ಲಾ ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಾಂಡುವಾರಪಳ್ಳಿಯವರು. ಅಲ್ಲಿ ಸಂಬಂಧಿಕರಿದ್ದರೂ ಸ್ವಂತ ಸೂರಿಲ್ಲ. ಹಾಗಂತ ಬೆಂಗಳೂರಿನಲ್ಲಿ ಈ ವೃತ್ತಿ ನಂಬಿಕೊಂಡು ಸಂಸಾರ ನಡೆಸುವುದು ಕಷ್ಟ. ಆದುದರಿಂದಲೇ ಮಡದಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಊರಿನಲ್ಲಿ ಬಾಡಿಗೆ ಮನೆಯಲ್ಲಿ ಬಿಟ್ಟಿದ್ದಾರೆ. ಅವರ ವಾಸ ಇಲ್ಲಿನ  ದರ್ಗಾವೊಂದರ ಬಾಡಿಗೆ ಮನೆಯಲ್ಲಿ. `ಎರಡೂ ಕಡೆ ತಿಂಗಳ ಬಾಡಿಗೆಗೆ ನಾಲ್ಕು ಸಾವಿರ ರೂಪಾಯಿ ಬೇಕು. ಹೈಸ್ಕೂಲು ಓದುತ್ತಿರುವ ಮಕ್ಕಳ ಖರ್ಚು ವೆಚ್ಚ ನೋಡ್ಕೋಬೇಕು. ಅದಕ್ಕಾಗಿ ಗಲ್ಲಿಗಲ್ಲಿ ತಿರುಗಿ ಸಂಪಾದಿಸಲೇಬೇಕಲ್ವಾ?' ಎನ್ನುತ್ತಾರೆ.

ಎಲ್ಲಾ ಋತುಗಳಲ್ಲೂ ದಿನವಿಡೀ ಊರೂರು ಸುತ್ತಾಡುವ ಕಾರಣ ಏಕಾಏಕಿ ಅನಾರೋಗ್ಯ ಕಾಡುವುದೂ ಇದೆಯಂತೆ. ಕೆಲವು ಸಲ ಬಸ್ಸಿನಲ್ಲಿ ಸಾಣೆಯಂತ್ರಕ್ಕೆ ಲಗೇಜ್ ಚಾರ್ಜ್ ಕೊಡಬೇಕಾಗುತ್ತದಂತೆ. ಇನ್ನು ಕೆಲವು ಪ್ರದೇಶಕ್ಕೆ ಹೋದಾಗ ಆ ಪ್ರದೇಶದ ಮಾಮೂಲಿ ಸಾಣೆಯವರು ಇವರ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದ್ದೂ ಇದೆಯಂತೆ.

ಚಾಕು ಸಾಣೆ ಹಿಡಿಯುವ ಜನರ ಬದುಕು ಎಲ್ಲಾ ರೀತಿಯಿಂದಲೂ ಮೊಂಡಾಗಿದೆ. ಅಂದಿನ ದುಡಿಮೆ ಅಂದಿಗೆ. ಇಂದು ಇಂದಿಗೆ ನಾಳೆ ನಾಳೆಗೆ ಎಂಬುದೇ ಅವರ ಬದುಕಿನ ವಾಸ್ತವ.

`ತಮಿಳುನಾಡಿನ ಕೃಷ್ಣಗಿರಿ, ವೇಲೂರು, ಆಂಧ್ರಪ್ರದೇಶ ಸೇರಿದಂತೆ ಬೇರೆ ಊರುಗಳಿಂದ ಬಂದು ಈ ವೃತ್ತಿ ಮಾಡುತ್ತಿರುವವರಲ್ಲಿ ಎಷ್ಟೋ ಮಂದಿಗೆ ಮನೆಯೇ ಇರುವುದಿಲ್ಲ. ಯಾವುದೇ ದಾಖಲೆಪತ್ರಗಳು ಇಲ್ಲದಿರುವುದರಿಂದ ಇವರಿಗೆ ಬಾಡಿಗೆ ಮನೆ ಸಿಗುವುದೂ ಕಷ್ಟ. ಅಂತಹವರೆಲ್ಲ ಸಿಟಿ ಮಾರುಕಟ್ಟೆಯ ಮೇಲ್ಸೇತುವೆಯ ಕೆಳಗೆ ಸೂರು ಕಂಡುಕೊಳ್ಳುತ್ತಾರೆ' ಎನ್ನುತ್ತಾರೆ ರಹಮತ್ತುಲ್ಲಾ.

ಚಾಕು ಸಾಣೆ ಹಿಡಿಯುವ ಕಸುಬುದಾರರು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಗುಂಪಾಗಿ ವಾಸಿಸುತ್ತಾರೆ. ಗುಂಪಾಗಿದ್ದರೆ ಪರಸ್ಪರ ರಕ್ಷಣೆಗೂ ನೆರವಾಗುತ್ತದೆ ಎಂಬ ಕಾರಣಕ್ಕೆ ಈ ತಂತ್ರ. ಶಿವಾಜಿನಗರದ ಸುತ್ತಮುತ್ತ ಸಾಣೆಯವರ ಕಾಲೊನಿಗಳೇ ಇವೆ. ಗೋರಿಪಾಳ್ಯದ ರಂಗನಾಥ ಕಾಲೊನಿಯಲ್ಲೂ ಇವರು ಕಾಣಸಿಗುತ್ತಾರೆ.

`ನಾನು ಶಾಲೆ ಮೆಟ್ಟಿಲು ಹತ್ತಿಲ್ಲ.  ಬೇರೆ ಕೆಲಸವೂ ಗೊತ್ತಿಲ್ಲ. ಹೊಸಾ ಕೆಲ್ಸ ಮಾಡಾಣ ಅಂದ್ರೆ ಬಂಡವಾಳ ಬೇಕಲ್ಲ? ಆದ್ರೂ ಇದೇ ಕೆಲ್ಸ ನಂಬಿಕೊಂಡು ಬದುಕೋದೂ ಸುಲಭದ ಮಾತಲ್ಲ' ಎಂಬ ರಹಮತ್ತುಲ್ಲಾ ಅವರ ಮಾತಿನಲ್ಲೇ ಭವಿಷ್ಯದ ಬಗೆಗಿನ ಗೊಂದಲ ಕಾಣುತ್ತದೆ. ಇದು, ಸಾಣೆ ಕಸುಬುದಾರರೆಲ್ಲರ ಆತಂಕವೂ ಹೌದು.

ಬದುಕು ನುಂಗಿದ ಚಾಕು!
`ನನ್ನ ತಾತ ಮತ್ತು ತಂದೆ ಮಾಡುತ್ತಿದ್ದ ಚಾಕು ವ್ಯಾಪಾರ ಮತ್ತು ಸಾಣೆ ಕೆಲಸವನ್ನೇ ಕಳೆದ ಇಪ್ಪತ್ತು ವರ್ಷಗಳಿಂದ ಮುಂದುವರೆಸಿಕೊಂಡು ಬರುತ್ತ್ದ್ದಿದೇನೆ. ಆರಂಭದಲ್ಲಿ ಬಡಾವಣೆಗಳಲ್ಲಿ ಹೆಚ್ಚು ವ್ಯಾಪಾರ ಮಾಡುತ್ತ್ದ್ದಿದೆ. ಈಗ ಬಗೆಬಗೆ ವಿನ್ಯಾಸದ ಸ್ಟೇನ್‌ಲೆಸ್ ಸ್ಟೀಲ್‌ನದು ಮತ್ತು ಬ್ರಾಂಡೆಡ್ ಚಾಕುಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುವುದರಿಂದ ಗೃಹಿಣಿಯರು ಹಳೇಕಾಲದ ಚಾಕುಗಳನ್ನು ಬಳಸುವುದೂ ಕಡಿಮೆಯಾಗಿದೆ. ಸಣ್ಣ  ಹೋಟೆಲ್‌ಗಳು ಮತ್ತು ಕೇಟರಿಂಗ್ ವ್ಯವಹಾರ ಮಾಡುವವರು ಮಾತ್ರ ಹಳೆ ಮಾದರಿಯ ಚಾಕುಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಹೆಚ್ಚು ಹೋಟೇಲುಗಳಿರುವ ಮಲ್ಲೇಶ್ವರ, ರಾಜಾಜಿನಗರ, ವಿಶ್ವೇಶ್ವರಪುರಂನಂತಹ ಪ್ರದೇಶಗಳಲ್ಲಿ ಈಗಲೂ ವ್ಯಾಪಾರ ಗಿಟ್ಟುತ್ತದೆ. ಸ್ಟೀಲ್ ಚಾಕುಗಳು ನಮ್ಮ ಬದುಕನ್ನೇ ನುಂಗಿವೆ'.
- ರಫಿ, ಗೋರಿಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT