ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರ ಹೊಸತುಗಳ ಕನವರಿಕೆ

Last Updated 15 ಜನವರಿ 2014, 19:30 IST
ಅಕ್ಷರ ಗಾತ್ರ

ಉಮಾಶಂಕರ್ ಸ್ವಾಮಿ ನಿರ್ದೇಶನದ ‘ಮುನ್ಸೀಫ‘ ಸಿನಿಮಾ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ತ್ಯುತ್ತಮ ಚಿತ್ರ ಪ್ರಶಸ್ತಿ‘ ಪಡೆದದ್ದು ಹಳೆಯ ಸುದ್ದಿ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಪ್ರತಿಭಾವಂತ ಯುವ ನಿರ್ದೇಶಕ ಸಿಕ್ಕಿದ್ದಾರೆ ಎಂಬುದು ಹೊಸ ಸುದ್ದಿ. ‘ಮುನ್ಸಿಫ್’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ, ಕಂಠದಾನ ಕಲಾವಿದನಾಗಿ, ಆ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯ ಮಾಡಿದ ಅರುಣ್ ಆ ಪ್ರತಿಭೆ.

ಸಹಾಯಕ ನಿರ್ದೇಶನ, ಸಹ ನಿರ್ದೇಶನ, ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯ, ಕಂಠದಾನ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಅರುಣ್. ಸದ್ಯ ಉಮಾಶಂಕರ ಸ್ವಾಮಿ ನಿರ್ದೇಶನದ ‘ಯಾರೂ ಅರಿಯದವರು‘ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಇವರು ಮುಂದೆ ಸ್ವತಂತ್ರ ನಿರ್ದೇಶನ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಅದಕ್ಕಾಗಿ 10 ಮಂದಿ ಕ್ರಿಯಾಶೀಲರ ಒಂದು ತಂಡ ಕಟ್ಟಿದ್ದಾರೆ. ಕಥೆ ಸಿದ್ಧಪಡಿಸಿಕೊಂಡು ನಿರ್ಮಾಪಕರಿಗೆ ಹೇಳುತ್ತಿದ್ದಾರೆ. ಸೂಕ್ತ ನಟನ ಹುಡುಕಾಟದಲ್ಲೂ ಇದ್ದಾರೆ. ನಿರ್ಮಾಪಕರು ಸಿಕ್ಕರೆ ಸಿನಿಮಾ ಶುರು ಎನ್ನುವ ಅರುಣ್‌, ಇದರ ಜತೆಗೆ ಇನ್ನೂ ಮೂರು ಕಥೆಯನ್ನು ಹೊಸೆಯುತ್ತಿದ್ದಾರಂತೆ.

‘ಈ ಎಲ್ಲ ಕತೆಗಳಿಗೆ ಸಂಭಾಷಣೆ, ಸಾಹಿತ್ಯ ನನ್ನದೇ’ ಎನ್ನುವ ಅರುಣ್ ತಮ್ಮ ಚಿತ್ರಕ್ಕಾಗಿ ಆರು ಚಿತ್ರಗೀತೆಗಳನ್ನು ಬರೆದಿದ್ದಾರೆ. 
‘ಅದ್ವೈತ’, ‘ನಿಮ್ಹಾನ್ಸ್‌’, ‘ಮೈತ್ರಿ’, ‘ಮುದ್ದು ಮನಸೆ’, ‘ಮದರಂಗಿ’ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ, ‘ಮುನ್ಸೀಫ’ ಮತ್ತು ’ಯಾರು ಅರಿಯದವರು’ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ.

‘ಒಂದು ಸಿನಿಮಾದ ಯಶಸ್ಸಿನ ಹಿಂದೆ ಸಹ ನಿರ್ದೇಶಕನ ಪಾತ್ರ ಗಣನೀಯವಾಗಿರುತ್ತದೆ. ನಮ್ಮದು ತೆರೆಮರೆಯ ಕೆಲಸವಾಗಿರುವುದರಿಂದ ನಮ್ಮನ್ನು ಯಾರು ಗುರುತಿಸುವುದಿಲ್ಲ’ ಎನ್ನುವ ಅರುಣ್‌ಗೆ ಆರು ಚಿತ್ರಗಳ ಅನುಭವದಿಂದ ನಾನು ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯಬಹುದು ಅಂತ ಅನ್ನಿಸಿದೆಯಂತೆ.

ಅಂದಹಾಗೆ, ಅರುಣ್‌ ಹುಟ್ಟಿದ್ದು ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ  ಬೆಳತೂರು ಗ್ರಾಮದಲ್ಲಿ. ಬಣ್ಣದ ಜಗತ್ತಿನ ಬೆನ್ನು ಹತ್ತಿದ ನಂತರ ಅವರ ಕರ್ಮಭೂಮಿ ಬೆಂಗಳೂರಿಗೆ ವರ್ಗಗೊಂಡಿತು. ತಂದೆ ರಾಮಕೃಷ್ಣಪ್ಪ ನಾಟಕ ಕಲಾವಿದರು. ಅರ್ಜುನ, ಕೃಷ್ಣ, ಹನುಮಂತನ ಪಾತ್ರಗಳಿಗೆ ಬಣ್ಣ ಹಚ್ಚಿ ಸುತ್ತ ಮುತ್ತಲ ಗ್ರಾಮಗಳಲ್ಲಿ ಹೆಸರು ಮಾಡಿದವರು. ತಂದೆಯೂ ಕಲಾವಿದರಾದ್ದರಿಂದ ಅರುಣ್ ಅವರು ಬಾಲ್ಯದಿಂದಲೇ ನಾಟಕ, ಸಾಹಿತ್ಯ ಮತ್ತು ಗಾಯನದ ಗೀಳು ಬೆಳಸಿಕೊಂಡರು. ಶಾಲಾ ದಿನಗಳಲ್ಲಿ ಚಲನಚಿತ್ರ ಗೀತೆ, ಭಾವಗೀತೆಗಳನ್ನು ಹಾಡುತ್ತ, ಗೀತರಚನೆಕಾರನಾಗುವ ಕನಸ್ಸು ಕಂಡವರು. ಆದರೆ ಅವರಿಗೆ ದೊರೆತ ಅವಕಾಶ ಅವರನ್ನು ಸಹ ನಿರ್ದೇಶಕರನ್ನಾಗಿ ಮಾಡಿತು.

ಎಂಟು ವರ್ಷಗಳ ಹಿಂದೆ ಗೀತಾರಚನಾಕಾರರಾಗುವ ಆಸೆ ಹೊತ್ತು ಗಾಂಧಿನಗರಕ್ಕೆ ಬಂದರು. ಆಸೆ ಈಡೇರಿಸಿಕೊಳ್ಳಲು ಅವಕಾಶ ಕೇಳಿಕೊಂಡು ಗಾಂಧಿನಗರದಲ್ಲಿ ಎರಡು ವರ್ಷ ಸೈಕಲ್‌ ಹೊಡೆದರು. ಯಾವ ಸಂಗೀತ ನಿರ್ದೇಶಕರಿಂದಲೂ ಅವಕಾಶ ಸಿಗುವ ಭರವಸೆ ಕಾಣಲಿಲ್ಲ. ಆಗ ಅರುಣ್ ‘ಜಟ್ಟ’ ಚಿತ್ರದ ನಿರ್ದೇಶಕ ಬಿ.ಎಂ.ಗಿರಿರಾಜ್ ಅವರ ‘ಅದ್ವೈತ‘ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಇಲ್ಲಿ ಸಿಕ್ಕ ಅವಕಾಶ ಇವರ ಕನಸಿಗೆ ಜೀವ ತುಂಬಿತು. ಇವರ ಆಸಕ್ತಿ, ಸಾಹಿತ್ಯದ ಅಭಿರುಚಿಯನ್ನು ಗಮನಿಸಿದ ಗಿರಿರಾಜ್ ನಟ, ನಿರ್ಮಾಪಕ, ನಿರ್ದೇಶಕ ರಮೇಶ್ ಅವರ ‘ನಿಮ್ಹಾನ್ಸ್’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಕಳುಹಿಸಿಕೊಟ್ಟರಂತೆ. ಈ ಚಿತ್ರದಲ್ಲಿ ರಮೇಶ್ ನಿರ್ದೇಶನದ ಕೌಶಲಗಳನ್ನು ಕಲಿಸಿಕೊಟ್ಟರು ಎಂದು ನೆನೆಯುತ್ತಾರೆ ಅರುಣ್.

ನಿರ್ದೇಶನ ಮಾಡುವ ಮನಸ್ಸು ಮಾಡಿದ್ದೀರಿ. ತಯಾರಿ ಎಂದು ಕೇಳಿದರೆ, ಅರುಣ್ ಹೇಳುವುದು ಹೀಗೆ: ‘ನಾನು ಈಗಾಗಲೇ ಆರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಸಾಕಷ್ಟು ಅನುಭವ ದಕ್ಕಿದೆ. ಇದರ ಜತೆಗೆ ಪರಭಾಷಾ ಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುತ್ತೇನೆ. ಇವೆಲ್ಲದರ ಜತೆಗೆ ನನ್ನ ಗುರು ರಮೇಶ್ ಅವರ ಬಳಿ ಪ್ರತಿ ದಿನ ಒಂದು ಗಂಟೆ ಕಾಲ ನಿರ್ದೇಶನದ ಕೌಶಲಗಳ ಬಗ್ಗೆ ಸಮಾಲೋಚನೆ ಮಾಡುತ್ತೇನೆ’.

‘ಒಂದು ಸಿನಿಮಾ ಮನರಂಜನೆ ಅಥವಾ  ಪ್ರಶಸ್ತಿಗಷ್ಟೇ ಸೀಮಿತವಾಗಬಾರದು, ಸಾಮಾಜಿಕ ಮೌಲ್ಯವುಳ್ಳ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸದಭಿರುಚಿಯ ಸಿನಿಮಾ ಮಾಡಬೇಕು. ಈಗ ನಾನು ನಿರ್ದೇಶನ ಮಾಡ ಹೊರಟಿರುವ ಸಿನಿಮಾದಲ್ಲಿ ಈ ಎರಡೂ ಅಂಶಗಳು ಅಡಕಗೊಂಡಿವೆ’ ಎನ್ನುವ ಅರುಣ್‌ಗೆ ಜನಮೆಚ್ಚುವಂತಹ ಸಿನಿಮಾಗಳನ್ನು ನಿರ್ದೇಶಿಸಬೇಕು ಎಂಬ ತುಡಿತವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT